Karnataka Bank IBM: Platform ಕರ್ನಾಟಕ ಬ್ಯಾಂಕ್ ತನ್ನ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಆಧುನೀಕರಿಸಲು ಐಬಿಎಂ ಜೊತೆ ಕೈಜೋಡಿಸಿದೆ. ಈ ಸಹಯೋಗದ ಮೂಲಕ, ರೆಡ್ ಹ್ಯಾಟ್ ಓಪನ್ ಶಿಫ್ಟ್ ಮೇಲೆ ಐಬಿಎಂ ಕ್ಲೌಡ್ ಪ್ಯಾಕ್ ಫಾರ್ ಇಂಟಿಗ್ರೇಷನ್ ಬಳಸಿ ಸುರಕ್ಷಿತ ಎಪಿಐ ಪ್ಲಾಟ್‌ಫಾರ್ಮ್.
ಬೆಂಗಳೂರು (ಡಿ.4): ಭಾರತದ ಪ್ರಮುಖ ‘ಎ’ ವರ್ಗದ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕ್ ಲಿಮಿಟೆಡ್ (ಕೆಬಿಎಲ್) ತನ್ನ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆಧುನಿಕಗೊಳಿಸಲು ಐಬಿಎಂ ಜೊತೆಗೆ ಸಹಯೋಗ ಮಾಡಿಕೊಂಡಿದೆ.
ಈ ಆಧುನೀಕರಣ ಪ್ರಕ್ರಿಯೆಯ ಭಾಗವಾಗಿ ರೆಡ್ ಹ್ಯಾಟ್ ಓಪನ್ ಶಿಫ್ಟ್ ಮೇಲೆ ಐಬಿಎಂ ಕ್ಲೌಡ್ ಪ್ಯಾಕ್ ಫಾರ್ ಇಂಟಿಗ್ರೇಷನ್ ಅನ್ನು ಬಳಸಲಾಗಿದೆ. ಐಬಿಎಂನ ಜೊತೆಗಾರ ಸಂಸ್ಥೆ ಫೈರಿ ಹಾಗೂ ಐಬಿಎಂ ಕಸ್ಟಮರ್ ಸಕ್ಸಸ್ ತಂಡದ ಸಹಾಯದಿಂದ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಈ ಮೂಲಕ ಕರ್ನಾಟಕ ಬ್ಯಾಂಕ್ ಗೆ ಸುರಕ್ಷಿತವಾದ, ಅಭಿವೃದ್ಧಿಪಡಿಸಬಹುದಾದ ಮತ್ತು ಹೊಂದಿಕೊಳ್ಳಬಲ್ಲ ಎಪಿಐ (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್) ಪ್ಲಾಟ್‌ಫಾರ್ಮ್ ಸಿದ್ಧಗೊಂಡಿದೆ. ಈ ಪ್ಲಾಟ್ ಫಾರ್ಮ್ ಒಟ್ಟಾರೆ ಖರ್ಚು ವೆಚ್ಚ ಕಡಿಮೆ ಮಾಡಲಿದೆ ಮತ್ತು ಇದರಿಂದ ಬ್ಯಾಂಕ್‌ನ ಡಿಜಿಟಲ್ ವ್ಯವಸ್ಥೆ ಇನ್ನಷ್ಟು ಬಲಗೊಂಡಿದೆ.
ಈ ಸಹಯೋಗದ ಭಾಗವಾಗಿ ಕರ್ನಾಟಕ ಬ್ಯಾಂಕ್ ಆಧುನಿಕ, ಸುರಕ್ಷಿತ ಮತ್ತು ಇನ್ನಷ್ಟು ಅಭಿವೃದ್ಧಿಪಡಿಸಬಹುದಾದ ಎಪಿಐ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸಿಕೊಂಡಿದ್ದು, ಇದು ಬ್ಯಾಂಕ್‌ನ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡಿದೆ. ಈ ಪ್ಲಾಟ್‌ಫಾರ್ಮ್‌ನಿಂದ ಡಿಜಿಟಲ್ ಪಾವತಿ, ಸಾಲ ಪ್ರಕ್ರಿಯೆ, ಥರ್ಡ್-ಪಾರ್ಟಿ ಸಂಯೋಜನೆಗಳಂತಹ ಸೇವೆಗಳನ್ನು ಬಹಳ ವೇಗವಾಗಿ ಒದಗಿಸಬಹುದು. ಜೊತೆಗೆ ಒಳಗಿನ ಮತ್ತು ಹೊರಗಿನ ವ್ಯವಸ್ಥೆಗಳೊಂದಿಗೆ ಸುರಕ್ಷಿತ ಸಂಪರ್ಕವನ್ನೂ ಕಾಯ್ದುಕೊಳ್ಳಬಹುದು.
ಈ ಕುರಿತು ಮಾತನಾಡಿರುವ ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ಮುಖ್ಯ ಮಾಹಿತಿ ಅಧಿಕಾರಿ ಶ್ರೀ ವೆಂಕಟ್ ಕೃಷ್ಣನ್ ಅವರು, “ಇದು ನಮ್ಮ ಡಿಜಿಟಲ್ ಪಯಣದಲ್ಲಿ ಒಂದು ಬಹುದೊಡ್ಡ ಮೈಲುಗಲ್ಲಾಗಿದೆ. ರೆಡ್ ಹ್ಯಾಟ್ ಓಪನ್ ಶಿಫ್ಟ್ ಮೇಲೆ ಐಬಿಎಂ ಕ್ಲೌಡ್ ಪ್ಯಾಕ್ ಫಾರ್ ಇಂಟಿಗ್ರೇಷನ್ ಬಳಕೆಯಿಂದಾಗಿ ಈಗ ನಮಗೆ ಹೊಂದಿಕೊಳ್ಳಬಲ್ಲ ಮತ್ತು ಸುರಕ್ಷಿತ ಪ್ಲಾಟ್‌ಫಾರ್ಮ್ ಸಿಕ್ಕಿದೆ. ಇದರಿಂದ ದೇಶಾದ್ಯಂತ ಕಾರ್ಯಾಚರಣೆಗಳನ್ನು ವಿಸ್ತರಿಸುವುದು, ವ್ಯವಸ್ಥೆ ನಿರ್ವಹಣೆ ಸರಳಗೊಳಿಸುವುದು, ಖರ್ಚು ಉಳಿತಾಯ ಮಾಡುವುದು ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಗ್ರಾಹಕರ ಅನುಭವವನ್ನೂ ಇನ್ನಷ್ಟು ಉತ್ತಮಗೊಳಿಸುತ್ತದೆ” ಎಂದು ಅವರು ಹೇಳಿದರು.
ಹೊಸದಾಗಿ ಅಪ್‌ಗ್ರೇಡ್ ಆದ ಎಪಿಐ ವ್ಯವಸ್ಥೆಯಿಂದ ಉತ್ಕೃಷ್ಟ ಸುರಕ್ಷತೆ ದೊರೆತಿದೆ, ವಿಸ್ತರಣಾ ಸಾಮರ್ಥ್ಯ ಶೇ.50ರಷ್ಟು ಹೆಚ್ಚಾಗಿದೆ ಮತ್ತು ಕಾರ್ಯಾಚರಣೆ ವೆಚ್ಚ ಶೇ.30ರಷ್ಟು ಕಡಿಮೆಯಾಗಿದೆ. ಮೈಕ್ರೋಸರ್ವೀಸ್‌ಗಳಿಗೆ ವಿಶೇಷವಾಗಿ ರೂಪಿತವಾದ ಆಪ್ಟಿಮೈಸ್ಡ್ ಕಂಟೇನರ್ ಆಧಾರಿತ ಪ್ಲಾಟ್‌ಫಾರ್ಮ್‌ಗೆ ಬದಲಾವಣೆ ಹೊಂದಿರುವುದರಿಂದ ಈ ಲಾಭಗಳು ದೊರಕಿವೆ. ಈ ಫ್ರೇಮ್‌ವರ್ಕ್‌ನಿಂದ ಬ್ಯಾಂಕ್ ಎಲ್ಲಾ ಎಪಿಐ ಕಾರ್ಯ ನಿರ್ವಹಣೆಗೆ ಡಿಜಿಟಲ್ ಗೇಟ್‌ವೇಗಳನ್ನು ಜಾರಿಗೆ ತರಬಹುದಾಗಿದೆ. ಹೊರಗಿನ ಪಾಲುದಾರರು ಎಐ ಗೇಟ್‌ವೇ ಮೂಲಕ ಬ್ಯಾಂಕ್‌ನ ಎಐ ಫೌಂಡೇಶನ್ ಮಾಡೆಲ್‌ಗಳನ್ನು ಎಪಿಐ ಆಗಿ ಬಳಸಬಹುದು. UIDAI, CERSAI, GST, Reg-Tech ಮತ್ತು CBDT ಸೇವೆಗಳೊಂದಿಗೆ ಸುಗಮ ಸಂಯೋಜನೆ ಸಾಧ್ಯವಾಗುತ್ತದೆ. ಇಡೀ ಜಾರಿ ಪ್ರಕ್ರಿಯೆ ಸರಳವಾಗಿದ್ದು, ಮಾರುಕಟ್ಟೆ ಮತ್ತು ನಿಯಮಗಳ ಬದಲಾವಣೆಗಳಿಗೆ ತ್ವರಿತವಾಗಿ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.
ಈ ಕುರಿತು ಐಬಿಎಂ ಇಂಡಿಯಾ & ಸೌತ್ ಏಷ್ಯಾದ ತಂತ್ರಜ್ಞಾನ ವಿಭಾಗದ ಉಪಾಧ್ಯಕ್ಷ ಶ್ರೀ ವಿಶ್ವನಾಥ್ ರಾಮಸ್ವಾಮಿ ಅವರು ಮಾತನಾಡಿ, “ಇಂದಿನ ಬ್ಯಾಂಕಿಂಗ್ ಕ್ಷೇತ್ರ ಅತ್ಯಂತ ಸಂಕೀರ್ಣವಾಗಿದೆ. ಅನೇಕ ವ್ಯವಸ್ಥೆಗಳು ಮತ್ತು ಡೇಟಾ ಸೋರ್ಸ್ ಗಳು ನಿರಂತರವಾಗಿ ಬಳಕೆ ಆಗುತ್ತಿರುತ್ತವೆ. ಹೀಗಾಗಿ ಎಲ್ಲರಿಗಿಂತ ಮುಂಚೂಣಿಯಲ್ಲಿರಲು ಬ್ಯಾಂಕ್‌ಗಳಿಗೆ ಸ್ಮಾರ್ಟ್ ಆಟೋಮೇಶನ್ ವ್ಯವಸ್ಥೆ ಬೇಕು. ಅದು ಕೇವಲ ಕಾರ್ಯಗಳನ್ನು ಸರಳಗೊಳಿಸುವುದಷ್ಟೇ ಅಲ್ಲ, ಸಮಸ್ಯೆಗಳು ಬರುವ ಮೊದಲೇ ಊಹಿಸಬೇಕು. ಕರ್ನಾಟಕ ಬ್ಯಾಂಕ್‌ನ ಈ ಆಧುನೀಕರಣವು ಬುದ್ಧಿವಂತ ಆಟೋಮೇಶನ್ ವ್ಯವಸ್ಥೆ ಮತ್ತು ಸಂಯೋಜಿತ ವ್ಯವಸ್ಥೆಗಳು ಹೇಗೆ ಸಂಕೀರ್ಣತೆ ಕಡಿಮೆ ಮಾಡಿ, ಸಾಮರ್ಥ್ಯ ಹೆಚ್ಚಿಸಿ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಡಿಜಿಟಲ್ ಸೇವೆಗಳನ್ನು ವೇಗವಾಗಿ ಒದಗಿಸುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ” ಎಂದು ಹೇಳಿದ್ದಾರೆ.
ಈ ಯೋಜನೆಯನ್ನು ಫೈರಿ ಅನುಷ್ಠಾನ ಮಾಡಿದ್ದು, ಐಬಿಎಂನ ಎಕ್ಸ್ ಪರ್ಟ್ ಲ್ಯಾಬ್ಸ್ ತಂಡವು ಪ್ರಮುಖ ಹಂತಗಳಲ್ಲಿ ಸಹಾಯ ಮಾಡಿದೆ. ಈ ಯೋಜನೆ ಕರ್ನಾಟಕ ಬ್ಯಾಂಕ್‌ನ ವಿಶಾಲ ಡಿಜಿಟಲ್ ಪರಿವರ್ತನೆ ತಂತ್ರವಾದ ‘ಸ್ಟಾರ್ಟಪ್@100’ನ ಒಂದು ಮುಖ್ಯ ಆಧಾರಸ್ತಂಭವಾಗಿದ್ದು, ಈ ಯೋಜನೆಯು ಬ್ಯಾಂಕ್ 100 ವರ್ಷಗಳ ಸೇವೆಯ ಸಂಭ್ರಮಾಚರಣೆ ಮಾಡುತ್ತಿರುವ ಈ ವೇಳೆಯಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿ ಚುರುಕುತನ ಮತ್ತು ಹೊಸತನಕ್ಕೆ ಒತ್ತು ನೀಡುತ್ತದೆ.
ಈ ಸಹಯೋಗದ ಬಗ್ಗೆ ಮಾತನಾಡಿದ ಫೈರಿಯ ಸಹ-ಸಂಸ್ಥಾಪಕಿ ಮತ್ತು ಸಿಇಓ ಶ್ರೀಮತಿ ಪದ್ಮಾ ಸುಬ್ರಮಣಿಯನ್ ಅವರು, “ಐಬಿಎಂನ ಅನುಷ್ಠಾನ ಪಾಲುದಾರರಾಗಿ ನಾವು ನಮ್ಮ ಫೈರಿಯ ಯುನಿಫೈಡ್ ಫಿನ್‌ಟೆಕ್ ಪ್ಲಾಟ್‌ಫಾರ್ಮ್ ಮತ್ತು ಐಬಿಎಂ ಕ್ಲೌಡ್ ಪಾಕ್ ಫಾರ್ ಇಂಟಿಗ್ರೇಷನ್ ಬಳಸಿಕೊಂಡು ಕರ್ನಾಟಕ ಬ್ಯಾಂಕ್‌ನ ಆಧುನೀಕರಣ ಪಯಣಕ್ಕೆ ಬೆಂಬಲ ನೀಡಿದ್ದಕ್ಕೆ ನಮಗೆ ಹೆಮ್ಮೆಯಿದೆ. ಐಬಿಎಂ ಮತ್ತು ಕರ್ನಾಟಕ ಬ್ಯಾಂಕ್ ಜೊತೆಗಿನ ಈ ಸಹಯೋಗವು ನಮ್ಮ ಪ್ಲಾಟ್‌ಫಾರ್ಮ್ ಬಳಸಿಕೊಂಡು ಹೇಗೆ ಹೆಚ್ಚಿನ ಚುರುಕುತನದೊಂದಿಗೆ ಮತ್ತು ಸುರಕ್ಷಿತ ಎಪಿಐ ಸಾಮರ್ಥ್ಯದೊಂದಿಗೆ ಡಿಜಿಟಲ್ ವ್ಯವಸ್ಥೆಯನ್ನು ವೇಗಗೊಳಿಸಬಹುದು ಎಂಬುದನ್ನು ತೋರಿಸುತ್ತದೆ. ಇದು ಬ್ಯಾಂಕ್‌ಗೆ ನಾವೀನ್ಯತೆ ತರಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಗಟ್ಟಿಯಾದ ತಳಪಾಯ ಹಾಕಿಕೊಡಲಿದೆ” ಎಂದು ಹೇಳಿದ್ದಾರೆ.


