ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾಗೆ ಭಾರತೀಯ ಮೂಲದ ನೂತನ ಸಿಎಫ್ಒ; ಯಾರು ಈ ವೈಭವ್ ತನೇಜಾ?
ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾದ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಒ) ಭಾರತೀಯ ಮೂಲದ ವೈಭವ್ ತನೇಜಾ ನೇಮಕಗೊಂಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ತನೇಜಾ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ (ಆ.9): ವಿಶ್ವದ ಪ್ರಮುಖ ಸಂಸ್ಥೆಗಳ ಆಯಕಟ್ಟಿನ ಹುದ್ದೆಗೇರಿದ ಭಾರತೀಯ ಪಟ್ಟಿಗೆ ಈಗ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಎಲಾನ್ ಮಸ್ಕ್ ಮಾಲೀಕತ್ವದ ಅಮೆರಿಕ ಮೂಲದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆ ಟೆಸ್ಲಾದ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ ಒ) ಭಾರತೀಯ ಮೂಲದ ವೈಭವ್ ತನೇಜಾ ನೇಮಕಗೊಂಡಿದ್ದಾರೆ. ಈ ಹಿಂದಿನ ಸಿಎಫ್ಒ ಆಗಿದ್ದ ಝಚರಿ ಕಿರ್ಕ್ ಹಾರ್ನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ವೈಭವ್ ತನೇಜಾ ಅವರನ್ನು ನೇಮಿಸಲಾಗಿದೆ. ಝಚರಿ ಕಿರ್ಕ್ ಹಾರ್ನ್ ಕಳೆದ ನಾಲ್ಕು ವರ್ಷಗಳಿಂದ ಟೆಸ್ಲಾದ ಸಿಎಫ್ ಒ ಹುದ್ದೆಯನ್ನು ನಿಭಾಯಿಸಿದ್ದಾರೆ. 45 ವರ್ಷ ವಯಸ್ಸಿನ ವೈಭವ್ ಈ ಹೊಸ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಟೆಸ್ಲಾದ ಮುಖ್ಯ ಲೆಕ್ಕಾಧಿಕಾರಿಯಾಗಿ (CAO) ಕಾರ್ಯನಿರ್ವಹಿಸುತ್ತಿದ್ದರು. ಈಗ ಸಿಎಒ ಹುದ್ದೆ ಜೊತೆಗೆ ಸಿಎಫ್ಒ ಜವಾಬ್ದಾರಿಯನ್ನು ಕೂಡ ಅವರಿಗೆ ವಹಿಸಲಾಗಿದೆ. ವೈಭವ್ ಅವರು ಅಕೌಂಟಿಂಗ್ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಅನುಭವ ಹೊಂದಿದ್ದಾರೆ. ಟೆಸ್ಲಾದ ಈ ಮೊದಲಿನ ಸಿಎಫ್ಒಗಳಾದ ದೀಪಕ್ ಅಹುಜಾ ಮತ್ತು ಝಚರಿ ಕಿರ್ಕ್ ಹಾರ್ನ್ ಜೊತೆಗೆ ಕಾರ್ಯನಿರ್ವಹಿಸಿದ ಅನುಭವ ಕೂಡ ವೈಭವ್ ಅವರಿಗಿದೆ.
ಯಾರು ಈ ವೈಭವ್ ತನೇಜಾ?
ಭಾರತೀಯ ಮೂಲದ ವೈಭವ್ ತನೇಜಾ ದೆಹಲಿ ವಿಶ್ವವಿದ್ಯಾಲಯದಿಂದ ಕಾಮರ್ಸ್ ಪದವಿ ಪಡೆದಿದ್ದಾರೆ. 2000ರಲ್ಲಿ ತನೇಜಾ ಚಾರ್ಟೆಡ್ ಅಕೌಂಟೆಂಟ್ (ಸಿಎ) ಪೂರ್ಣಗೊಳಿಸಿದರು. ಪ್ರೈಸ್ವಾಟರ್ಹೌಸ್ಕೂಪರ್ಸ್ (PwC) ಸಂಸ್ಥೆಯಲ್ಲಿ ತನೇಜಾ ಅವರು 1999ರ ಜುಲೈಯಿಂದ 2016ರ ಮಾರ್ಚ್ ತನಕ ಕಾರ್ಯನಿರ್ವಹಿಸಿದ್ದರು. ಪ್ರೈಸ್ವಾಟರ್ಹೌಸ್ಕೂಪರ್ಸ್ ಸಂಸ್ಥೆಯ ಭಾರತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಆ ಬಳಿಕ ಅಮೆರಿಕದ ಕಚೇರಿಗೆ ವರ್ಗಾವಣೆಗೊಂಡಿದ್ದರು. ಒಟ್ಟಾರೆ ಆ ಸಂಸ್ಥೆಯಲ್ಲಿ ತನೇಜಾ ಒಟ್ಟು 17 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಆ ಬಳಿಕ 2016ರಲ್ಲಿ ಅವರು ಕ್ಯಾಲಿಫೋರ್ನಿಯಾದ ಸೋಲಾರ್ ಸಿಟಿ ಎಂಬ ಸಂಸ್ಥೆ ಸೇರಿದರು. ಅದೇ ವರ್ಷ ಟೆಸ್ಲಾ ಆ ಸಂಸ್ಥೆಯನ್ನು 2.5 ಬಿಲಿಯನ್ ಡಾಲರ್ ಗೆ ಸ್ವಾಧೀನಪಡಿಸಿಕೊಂಡಿತು. ಈ ಸಂಸ್ಥೆಯಲ್ಲಿ ಕೇವಲ ಒಂದು ವರ್ಷದ ಅವಧಿಯೊಳಗೆ ಅವರು ಉಪಾಧ್ಯಕ್ಷ, ಅಕೌಂಟಿಂಗ್ ಆಪರೇಷನ್ ಹಾಗೂ ಕಾರ್ಪೋರೇಟ್ ಕಂಟ್ರೋಲರ್ ಉಪಾಧ್ಯಕ್ಷ ಹುದ್ದೆಗಳನ್ನು ನಿಭಾಯಿಸಿದರು.
ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ: ಕಾರಿನ ಬೆಲೆ 20 ಲಕ್ಷ ರೂ. ಅಷ್ಟೇ..!
2017ರ ಫೆಬ್ರವರಿಯಲ್ಲಿ ತನೇಜಾ ಅಸಿಸ್ಟೆಂಟ್ ಕಾರ್ಪೋರೇಟ್ ಕಂಟ್ರೋಲರ್ ಆಗಿ ಟೆಸ್ಲಾ ಇಂಕ್ ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. 2 018ರ ಮೇನಲ್ಲಿ ತನೇಜಾ ಅವರಿಗೆ ಕಾರ್ಪೋರೇಟ್ ಕಂಟ್ರೋಲರ್ ಹುದ್ದೆಗೆ ಬಡ್ತಿ ನೀಡಲಾಯಿತು. ಈಗಿನ ಸಿಎಫ್ಒ ಹುದ್ದೆ ವಹಿಸಿಕೊಳ್ಳುವ ಮುನ್ನ ಅವರನ್ನು ಟೆಸ್ಲಾದ ಭಾರತೀಯ ಶಾಖೆ ಟೆಸ್ಲಾ ಇಂಡಿಯಾ ಮೋಟಾರ್ಸ್ ಹಾಗೂ ಎನರ್ಜಿ ಪ್ರೈವೇಟ್ ಲಿಮಿಟೆಡ್ ಗೆ ನಿರ್ದೇಶಕರನ್ನಾಗಿ ಕೂಡ ನೇಮಕ ಮಾಡಲಾಗಿತ್ತು. 2021ರ ಜನವರಿಯಲ್ಲಿ ಈ ಹುದ್ದೆಗೆ ನೇಮಕ ಮಾಡಲಾಗಿತ್ತು.
ತನೇಜಾ ಟೆಸ್ಲಾ ಸೇರಿದ ಸಮಯದಲ್ಲಿ ಕಂಪನಿ ಲಾಭ ಗಳಿಕೆಗಿಂತ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿತ್ತು. ಇನ್ನು ತನೇಜಾ ಅವರಿಗೆ ತಂತ್ರಜ್ಞಾನ, ಹಣಕಾಸು, ರಿಟೇಲಿಂಗ್ ಹಾಗೂ ಟೆಲಿ ಕಮ್ಯೂನಿಕೇಷನ್ ವಲಯದಲ್ಲಿ ಸಾಕಷ್ಟು ಅನುಭವವಿರುವ ಕಾರಣ ಝಚರಿ ಕಿರ್ಕ್ ಹಾರ್ನ್ ಅವರ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಲಿಂಕ್ಡ್ ಇನ್ ನಲ್ಲಿ ತನೇಜಾ ಅವರು ಹಣಕಾಸು ಸಂಬಂಧಿ ಕೈಗಾರಿಕೆಗಳಲ್ಲಿ 17 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿರೋದಾಗಿ ಬರೆದುಕೊಂಡಿದ್ದಾರೆ.
ಮೂರ್ಮೂರು ಮದ್ವೆಯಾದ ಎಲಾನ್ ಮಸ್ಕ್ ನೆಟ್ ವರ್ಥ್ ಎಷ್ಟಿದೆ ಗೊತ್ತಾ?
ಇನ್ನು ವೈಭವ್ ತನೇಜಾ ಟೆಸ್ಲಾದ ನೂತನ ಸಿಎಫ್ಒ ಆಗಿ ನೇಮಕಗೊಂಡಿರುವ ಬಗ್ಗೆ ಝಚರಿ ಕಿರ್ಕ್ ಹಾರ್ನ್ ತಮ್ಮ ಲಿಂಕ್ಡ್ ಇನ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. 'ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ ಒ) ಹುದ್ದೆಯಿಂದ ಇಂದು ನಾನು ಕೆಳಗಿಳಿಯುತ್ತಿರೋದಾಗಿ ಹಾಗೂ ನನ್ನ ಸ್ಥಾನಕ್ಕೆ ನಮ್ಮ ಮುಖ್ಯ ಲೆಕ್ಕಾಧಿಕಾರಿ ವೈಭವ್ ತನೇಜಾ ನೇಮಕಗೊಂಡಿರುವ ಬಗ್ಗೆ ಇಂದು ಬೆಳಗ್ಗೆ ಟೆಸ್ಲಾ ಘೋಷಣೆ ಮಾಡಿದೆ' ಎಂದು ಕಿರ್ಕ್ ಹಾರ್ನ್ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.