Viral News: ಸೇಲ್ ಹೆಚ್ಚಿಸಲು 2 ಸಾವಿರವೇ ಬಂಡವಾಳ.. ಈತನ ಪೋಸ್ಟ್ ನೋಡಿ ಜನ ದಂಗು
ಎರಡು ಸಾವಿರ ರೂಪಾಯಿ ನೋಟು ಬ್ಯಾನ್ ಆಗಿದೆ. ನಿಮ್ಮಲ್ಲಿರುವ ನೋಟನ್ನು ವಿನಿಮಯ ಮಾಡಿಕೊಳ್ಳಲು ಸಾಕಷ್ಟು ಅವಕಾಶವಿದೆ. ಈ ಮಧ್ಯೆ ಕೆಲ ವ್ಯಾಪಾರಸ್ಥರು ಹೊಸ ಟ್ರಿಕ್ಸ್ ಬಳಸಿ ವ್ಯಾಪಾರ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸ್ತಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಕೆಲ ದಿನಗಳ ಹಿಂದಷ್ಟೆ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ಅಧಿಸೂಚನೆ ಹೊರಡಿಸಿದೆ. ಆರ್ಬಿಐನಿಂದ ಆದೇಶ ಹೊರಗೆ ಬರ್ತಿದ್ದಂತೆ ಜನರು ಚಿಂತಿತರಾಗಿದ್ದಾರೆ. ಬ್ಯಾಗ್ ನಲ್ಲಿ, ಸಕ್ಕರೆ ಡಬ್ಬದಲ್ಲಿ ಹೀಗೆ ಮನೆಯ ಅಲ್ಲಿ ಇಲ್ಲಿ ಅಡಗಿಕುಳಿತಿರುವ 2 ಸಾವಿರ ರೂಪಾಯಿಯನ್ನು ಹುಡುಕಿ ತೆಗೆಯುತ್ತಿದ್ದಾರೆ. ಆರ್ ಬಿಐ (RBI) ನೋಟು ಬ್ಯಾನ್ ಮಾಡುವ ಮುನ್ನವೇ ಮಾರುಕಟ್ಟೆಯಲ್ಲಿ 2 ಸಾವಿರ ರೂಪಾಯಿ ನೋಟನ್ನು ತೆಗೆದುಕೊಳ್ಳುವವರ ಸಂಖ್ಯೆ ಬಹಳ ಕಡಿಮೆಯಿತ್ತು. ಚಿಲ್ಲರೆಯಿಲ್ಲ ಎನ್ನುವ ಕಾರಣಕ್ಕೆ ಇದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದರು. ಆರ್ ಬಿಐ ನೋಟಿ (Note) ನ ಮೇಲೆ ನಿಷೇಧ ಹೇರಿದ ಮೇಲಂತೂ 2 ಸಾವಿರ ರೂಪಾಯಿ ನೋಟು ನೋಡಿದ್ರೆ ವ್ಯಾಪಾರಸ್ಥರು ತಲೆ ಅಲ್ಲಾಡಿಸ್ತಾರೆ.
ನಮ್ಮಲ್ಲಿರುವ ನೋಟನ್ನು ಹೇಗಾದ್ರೂ ಸಾಗಿಸಬೇಕೆಂದು ಜನರು, ವ್ಯಾಪಾರಸ್ಥರಿಗೆ ಈ ನೋಟು ನೀಡಲು ಹರಸಾಹಸಪಡ್ತಿದ್ದಾರೆ. ಇನ್ನೊಂದ್ಕಡೆ ಬ್ಯಾಂಕ್ ಮುಂದೆ ದೊಡ್ಡ ಸಾಲನ್ನೇ ನಾವು ನೋಡ್ತಿದ್ದೇವೆ. 2 ಸಾವಿರ ನೋಟಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಅನೇಕ ಜೋಕ್ ಗಳು, ಕಮೆಂಟ್ ಗಳು ಬರ್ತಿರೋದನ್ನು ನೀವು ನೋಡ್ತಿರಬಹುದು. ಈ ಮಧ್ಯೆ ವ್ಯಾಪಾರಸ್ಥರೊಬ್ಬರು ಅಂಗಡಿ ಮುಂದೆ ಹಾಕಿರುವ ಬೋರ್ಡ್ ವೈರಲ್ (Viral) ಆಗಿದೆ. ಇದು ಸಾಮಾಜಿಕ ಜಾಲತಾಣ ಬಳಕೆದಾರರು ಹುಬ್ಬೇರಿಸುವಂತೆ ಮಾಡಿದೆ.
2000 ನೋಟು ಬದಲಾವಣೆ: ಬ್ಯಾಂಕಲ್ಲಿ ಹಣವಿಲ್ಲದೇ ಪರದಾಟ
ಇರೋ ಒಂದೋ ಎರಡೋ ಎರಡು ಸಾವಿರ ನೋಟನ್ನೇ ಬ್ಯಾಂಕ್ (Bank) ಗೆ ಜಮಾ ಮಾಡೋದು ಕಷ್ಟವಾಗಿದೆ. ಅಂಥದ್ರಲ್ಲಿ ಈತ 2 ಸಾವಿರ ನೋಟನ್ನು ನಮಗೆ ನೀಡಿ ಅಂತಾ ಬೋರ್ಡ್ ಹಾಕಿದ್ದಾನೆ. ಟ್ವಿಟರ್ ನಲ್ಲಿ ಆತನ ಬೋರ್ಡ್ ಸಖತ್ ಸುದ್ದಿ ಮಾಡಿದೆ. ಎರಡು ಸಾವಿರ ನೋಟು ನೀಡಿ ಸಾಮಾನು ಖರೀದಿಸಿ : ಕಂಡವರ ಮದುವೆಯಲ್ಲಿ ಉಂಡವನೇ ಜಾಣ ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ಈತನಿಗೆ ಸರಿಯಾಗಿದೆ. 2 ಸಾವಿರ ರೂಪಾಯಿಯನ್ನು ಯಾರಿಗಾದ್ರೂ ನೀಡಿ ಕೈತೊಳೆದುಕೊಳ್ಳಬೇಕೆಂಬ ಜನರು ಈ ಅಂಗಡಿಗೆ ಹೋಗ್ಬಹುದು. ಅದಿರೋದು ದೆಹಲಿಯಲ್ಲಿ.
ಸುಮಿತ್ ಅಗರ್ವಾಲ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಅಂಗಡಿಗೆ ಹಾಕಿರುವ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆರ್ ಬಿಐ ಸ್ಮಾರ್ಟ್ ಎಂದು ನೀವು ಭಾವಿಸಿದ್ದರೆ ಮತ್ತೊಮ್ಮೆ ಇದ್ರ ಬಗ್ಗೆ ಆಲೋಚನೆ ಮಾಡಿ. ದೆಹಲಿ ಜನರು ಮತ್ತಷ್ಟು ಬುದ್ಧಿವಂತರು ಅಂತಾ ಅಗರ್ವಾಲ್ ಶೀರ್ಷಿಕೆ ಹಾಕಿದ್ದಾರೆ. ಇದರಲ್ಲಿ ಅಂಗಡಿಯವರು ನೀಡಿದ ಕೊಡುಗೆಯನ್ನು ಸ್ಪಷ್ಟವಾಗಿ ಓದಬಹುದು. ಅಂಗಡಿ ಮುಂದೆ ಅಂಟಿಸಿರುವ ನೋಟಿಸ್ ನಲ್ಲಿ ಗ್ರಾಹಕರು 2000 ರೂಪಾಯಿ ನೋಟು ನೀಡಿ 2100 ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಬಹುದು ಎಂದು ಬರೆಯಲಾಗಿದೆ. ಜನರಿಗೆ ಈ ಕೊಡುಗೆ ತುಂಬಾ ಇಷ್ಟವಾಗಿದೆ. ದೆಹಲಿಯ ಮಾಂಸದ ಅಂಗಡಿಯ ಹೊರಗೆ ಇದನ್ನು ಹಾಕಲಾಗಿದೆ ಎಂದು ಹೇಳಲಾಗಿದೆ.
2,000ರೂ. ನೋಟು ಹಿಂತೆಗೆತದ ಪರಿಣಾಮ ಠೇವಣಿ, ಬಡ್ಡಿದರಕ್ಕೆ ಹಿತಕಾರಿ: ಎಸ್ ಬಿಐ ಅಧ್ಯಯನ ವರದಿ
ಬಳಕೆದಾರರಿಂದ ಸಿಕ್ಕಿದೆ ಕಮೆಂಟ್ : ಟ್ವಿಟರ್ ಬಳಕೆದಾರರು ವ್ಯಾಪಾರದ ಟ್ರಿಕ್ ಇಷ್ಟಪಟ್ಟಿದ್ದಾರೆ. ಇದು ಉತ್ತಮ ಮಾರಾಟ ತಂತ್ರವೆಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇಕಾನಾಮಿಸ್ಟ್ ಎಂದು ಬರೆದಿದ್ದಾರೆ. ಬರೀ ದೆಹಲಿ ಮಾತ್ರವಲ್ಲ ಎಲ್ಲ ಕಾರ್ಪೋರೇಟ್ ಕಂಪನಿಗಳು ಈ ಸಂದರ್ಭದಲ್ಲಿ 2 ಸಾವಿರ ನೋಟನ್ನು ಬಂಡವಾಳ ಮಾಡಿಕೊಂಡು ಹೆಚ್ಚಿನ ಲಾಭ ಗಳಿಸುವ ಪ್ರಯತ್ನ ನಡೆಸುತ್ತಿವೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಲ್ಲದೆ ಕಂಪನಿಯೊಂದರ ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ. ವಿಪತ್ತಿನ ಅವಕಾಶ ಎಂದು ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದೆಹಲಿಯವರು ಮಾತ್ರ ಬುದ್ಧಿವಂತರಲ್ಲ, ಬೇರೆ ರಾಜ್ಯದಲ್ಲಿಯೂ ಇಂಥ ಪೋಸ್ಟರ್ ಕಾಣಿಸ್ತಿದೆ ಎಂದು ಬರೆದಿದ್ದಾರೆ.