ಫಿಕ್ಸೆಡ್ ಡೆಪಾಸಿಟ್ ಹಣದಲ್ಲಿ ಟ್ಯಾಕ್ಸ್ ಕಟ್, ಬ್ಯಾಂಕ್‌ಗೆ ತೆರಳಿ ಮ್ಯಾನೇಜರ್‌ಗೆ ಕಜ್ಜಾಯ ಕೊಟ್ಟ ಗ್ರಾಹಕ!
ಫಿಕ್ಸೆಡ್ ಡೆಪಾಸಿಟ್ ಬಡ್ಡಿಯಲ್ಲಿ ಹೆಚ್ಚುವರಿಯಾಗಿ ತೆರಿಗೆ ಕಡಿತ ಮಾಡಲಾಗಿದೆ ಎಂದು ಆರೋಪಿಸಿದ ಗ್ರಾಹಕ ನೇರವಾಗಿ ಬ್ಯಾಂಕ್‌ಗೆ ತೆರಳಿ ಮ್ಯಾನೇಜರ್‌ಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟ ಘಟನೆ ನಡೆದಿದೆ. ಇದೀಗ ಗ್ರಾಹಕ ಎಲ್ಲಿದ್ದಾನೆ?
ಅಹಮ್ಮದಾಬಾದ್(ಡಿ.09) ಬ್ಯಾಂಕ್‌ಗಳು ಗ್ರಾಹಕರಿಗೆ ಕಾರ್ಡ್ ಶುಲ್ಕ, ಎಸ್ಎಂಎಸ್ ಶುಲ್ಕ, ಪ್ರೊಸೆಸಿಂಗ್ ಶುಲ್ಕ ಸೇರಿದಂತೆ ಹಲವು ರೀತಿಯಲ್ಲಿ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತದೆ ಅನ್ನೋ ಆರೋಪ ಹೊಸದೇನಲ್ಲ. ಇದರ ವಿರುದ್ದ ಹಲವು ಗ್ರಾಹಕರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಮೊದಲೇ ಹೆಚ್ಚುವರಿ ಸುಲಿಗೆಯಿಂದ ರೋಸಿ ಹೋಗಿದ್ದ ಯೂನಿಯನ್ ಬ್ಯಾಂಕ್ ಗ್ರಾಹಕ, ತಾನು ಇಟ್ಟ ಫಿಕ್ಸೆಡ್ ಡೆಪಾಸಿಟ್ ಹಣದ ಬಡ್ಡಿಯಲ್ಲಿ ಹೆಚ್ಚುವರಿಯಾಗಿ ತೆರಿಗೆ ಕಡಿತ ಮಾಡಲಾಗಿದೆ ಎಂದು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಹಿಂದೂ ಮುಂದು ನೋಡದೆ ನೇರವಾಗಿ ಬ್ಯಾಂಕ್ ಶಾಖೆಗೆ ತೆರಳಿ ಮ್ಯಾನೇಜರ್ ಕಾಲರ್ ಪಟ್ಟಿ ಹಿಡಿದು ಜಟಾಪಟಿ ನಡೆಸಿದ ಘಟನೆ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದಿದೆ.
ವಸ್ತ್ರಾಪುರ್ ಶಾಖೆಯಲ್ಲಿ ಗ್ರಾಹಕ ಒಂದಿಷ್ಟು ಮೊತ್ತವನ್ನು ಫಿಕ್ಸೆಡ್ ಡಾಪಾಸಿಟ್ ಆಗಿ ಇಟ್ಟಿದ್ದಾನೆ. ಪ್ರತಿ ವರ್ಷ ಇಂತಿಷ್ಟು ಬಡ್ಡಿಯನ್ನು ಬ್ಯಾಂಕ್‌ಗಳು ನೀಡುತ್ತದೆ. ಫಿಕ್ಸೆಡ್ ಡೆಪಾಸಿಟ್ ಇಡುವಾಗ ಹೇಳಿದ ನಿಯಮಕ್ಕೂ ಇದೀಗ ಬ್ಯಾಂಕ್ ಕಡಿತಗೊಳಿಸುತ್ತಿರುವ ತೆರಿಗೆಗೂ ವ್ಯತ್ಯಾಸವಿತ್ತು. ಇದು ಗ್ರಾಹಕನ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕಾರಣ ತಾನು ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕ್‌ನಲ್ಲಿಟ್ಟರೆ ಟಿಡಿಎಸ್ ಹೆಸರಿನಲ್ಲಿ ಹೆಚ್ಚುವರಿ ತೆರಿಗೆ ಕಡಿತ ಮಾಡಲಾಗಿದೆ ಅನ್ನೋದು ಗ್ರಾಹಕನ ಆರೋಪವಾಗಿದೆ.
ಪೋಸ್ಟ್ ಆಫೀಸ್ ಎಫ್‌ಡಿ ಯೋಜನೆ, 1,000 ರೂ ಹೂಡಿಕೆ ಮಾಡಿದರೆ ರಿಟರ್ನ್ಸ್ ಎಷ್ಟು?
ಪತ್ನಿ ಜೊತೆ ಡಿಸೆಂಬರ್ 5 ರಂದು ವಸ್ತ್ರಾಪುರ್ ಯೂನಿಯನ್ ಬ್ಯಾಂಕ್ ಶಾಖೆಗೆ ತೆರಳಿದ ಗ್ರಾಹಕ, ನೇರವಾಗಿ ಮ್ಯಾನೇಜರ್ ಕೊಠಡಿಗೆ ತೆರಳಿ ಹೆಚ್ಚುವರಿ ತೆರಿಗೆ ಕಡಿತವನ್ನು ಪ್ರಶ್ನಿಸಿದ್ದಾನೆ. ಮ್ಯಾನೇಜರ್ ತೆರಿಗೆ ಕಡಿತದ ನಿಯಮಗಳನ್ನುವಿವರಿಸಲು ಮುಂದಾಗಿದ್ದಾನೆ. ಆದರೆ ಆಕ್ರೋಶಗೊಂಡಿದ್ದ ಗ್ರಾಹಕ ಮತ್ತಷ್ಟು ಗರಂ ಆಗಿದ್ದಾನೆ. ಎದ್ದು ನಿಂತು ಮ್ಯಾನೇಜರ್ ಕಾಲರ್ ಪಟ್ಟಿ ಹಿಡಿದು ಮಾರಾಮಾರಿ ನಡೆಸಿದ್ದಾನೆ. ಇಬ್ಬರು ಕೆಲ ಹೊತ್ತು ಬ್ಯಾಂಕ್ ಶಾಖೆಯಲ್ಲಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಹಲವರು ನಿಂತು ವಿಡಿಯೋ ಮಾಡಿದ್ದಾರೆ.
ಬಿಡಿಸಲು ಬಂದ ಇತರ ಉದ್ಯೋಗಿಗಳ ಮೇಲೂ ಗ್ರಾಹಕನ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ಗ್ರಾಹಕನ ಪತ್ನಿ ಇಬ್ಬರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಆದರೆ ಪರಿಸ್ಥಿತ ಕೈಮೀರಿದ ಕಾರಣ ಮಹಿಳೆಗೆ ಏನೂ ಮಾಡಲು ಸಾಧ್ಯವಾಗಿಲ್ಲ. ಘಟನೆ ಬೆನ್ನಲ್ಲೇ ಬ್ಯಾಂಕ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸಲು ಗ್ರಾಹನ ವಶಕ್ಕೆ ಪಡೆದಿದ್ದಾರೆ.
ಇತ್ತ ಬ್ಯಾಂಕ್ ಮ್ಯಾನೇಜರ್ ದೂರು ನೀಡಿದ್ದಾರೆ. ಆರ್‌ಬಿಐ ನಿಯಮಕ್ಕೆ ಅನುಸಾರ ಟಿಡಿಎಸ್ ತೆರಿಗೆ ಕಡಿತಗೊಂಡಿದೆ. ಇದರಲ್ಲಿ ಬ್ಯಾಂಕ್ ಹೆಚ್ಚುವರಿಯಾಗಿ ಮಾಡಲು ಸಾಧ್ಯವಿಲ್ಲ. ಆದರೆ ಗ್ರಾಹಕ ಶಾಖೆಗೆ ಆಗಮಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕೈಕೈ ಮಿಲಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಗ್ರಾಹಕನಿಗೆ ಟಿಡಿಎಸ್ ಕುರಿತು ವಿವರಿಸಲಾಗಿದೆ. ಕಡಿತಗೊಂಡಿರುವ ತೆರಿಗೆಯನ್ನು ಇನ್‌ಕಮ್ ಟ್ಯಾಕ್ಸ್ ರಿಟರ್ನ್ ವೇಳೆ ಹಿಂಪಡೆಯಲು ಸಾಧ್ಯವಿದೆ ಎಂದು ವಿವರಿಸಲಾಗಿದೆ. ಆದರೆ ಗ್ರಾಹಕ ಉದ್ದೇಶಪೂರ್ಕವಾಗಿ ಕೈಕೈಮಿಲಾಯಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಬ್ಯಾಂಕ್ ಸಿಸಿಟಿವಿ ದಶ್ಯಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಗ್ರಾಹನ ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತ 115-2, 221, 296 ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಇದೀಗ ಬ್ಯಾಂಕ್ ಬಡ್ಡಿಹಾಗೂ ತೆರಿಗೆ ಕುರಿತು ಚರ್ಚೆಯಾಗುತ್ತಿದೆ. ಬ್ಯಾಂಕ್‌ಗಳು ಪ್ರತಿ ಬಾರಿ ಗ್ರಾಹಕರಿಗೆ ಕೆಲ ವಿಚಾರಗಳ ಕುರಿತು ಸರಿಯಾಗಿ ಮಾಹಿತಿ ತಿಳಿಸುವುದಿಲ್ಲ ಅನ್ನೋ ಆರೋಪೂ ಕೇಳಿಬಂದಿದೆ. ಪ್ರಯೋಜನಗಳ ಕುರಿತು ಮೊದಲು ಹೇಳುತ್ತಾರೆ. ಇನ್ನುಳಿದ ವಿಚಾರ ಮುಚ್ಚಿಡುತ್ತಾರೆ. ಏನೇ ಪ್ರಶ್ನಿಸಿದರೂ ನೀವು ಷರತ್ತುಗಳಿಗೆ ಸಹಿ ಹಾಕಿದ್ದೀರಿ ಅನ್ನೋ ಉತ್ತರ ನೀಡುತ್ತಾರೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
ನೀವು ಬ್ಯಾಂಕ್‌ನಲ್ಲಿ 5 ಲಕ್ಷ ರೂಗಿಂತ ಜಾಸ್ತಿ ಎಫ್‌ಡಿ ಇಟ್ಟಿದ್ದೀರಾ? ಮೊದಲು RBI ನಿಮಯ ಓದಿ!