ಕಳೆದ ಐದು ತಿಂಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿಲ್ಲರೆ ಹಣದುಬ್ಬರ ಜೂನ್ ತಿಂಗಳಲ್ಲಿ ಏರಿಕೆ ಕಂಡಿದೆ. ಟೊಮ್ಯಾಟೋ ಸೇರಿದಂತೆ ತರಕಾರಿಗಳು ಹಾಗೂ ಆಹಾರ ಧಾನ್ಯಗಳ ಬೆಲೆಯಲ್ಲಿ ಹೆಚ್ಚಳವಾಗಿರೋದೆ ಈ ಏರಿಕೆ ಕಾರಣ ಎಂದು ಹೇಳಲಾಗಿದೆ. ಜೂನ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.4.81ಕ್ಕೆ ಏರಿಕೆಯಾಗಿದ್ದು, ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. 

ನವದೆಹಲಿ (ಜು.13): ಟೊಮ್ಯಾಟೋ ಸೇರಿದಂತೆ ತರಕಾರಿಗಳು ಹಾಗೂ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿರೋದು ಜೂನ್ ತಿಂಗಳ ಚಿಲ್ಲರೆ ಹಣದುಬ್ಬರದ ಮೇಲೆ ಪರಿಣಾಮ ಬೀರಿದೆ. ಜೂನ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.4.81ಕ್ಕೆ ಏರಿಕೆಯಾಗಿದ್ದು, ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ಐದು ತಿಂಗಳಲ್ಲಿ ಇಳಿಕೆಯ ಹಾದಿಯಲ್ಲಿದ್ದ ಚಿಲ್ಲರೆ ಹಣದುಬ್ಬರ ಈಗ ಹೆಚ್ಚಳದ ಹಾದಿ ಹಿಡಿದಿದೆ. ಆದರೂ ಚಿಲ್ಲರೆ ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸಹನೆಯ ಮಿತಿಯೊಳಗೆ ಇದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಮೇ ತಿಂಗಳಲ್ಲಿ ಶೇ.4.31ರಷ್ಟಿತ್ತು. ಇನ್ನು ದೇಶದ ಕೈಗಾರಿಕಾ ಉತ್ಪಾದನೆ 2022ರ ಮೇನಲ್ಲಿ ಶೇ.5.2ಕ್ಕೆ ಏರಿಕೆಯಾಗಿತ್ತು. ಇನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಇತ್ತೀಚಿನ ಮಾಹಿತಿ ಅನ್ವಯ ಆಹಾರ ಹಣದುಬ್ಬರ ಜೂನ್ ನಲ್ಲಿ ಶೇ.4.63ಕ್ಕೆ ಏರಿಕೆಯಾಗಿದೆ. ಇದು ಮೇ ತಿಂಗಳಲ್ಲಿ ಶೇ.2.91ರಷ್ಟಿತ್ತು. ಇನ್ನು 2022ರ ಜೂನ್ ನಲ್ಲಿ ಸಿಪಿಐ ಆಧಾರಿತ ಹಣದುಬ್ಬರ ಶೇ.7ರಷ್ಟಿತ್ತು. ಆದರೆ, 2023ರ ಮೇನಲ್ಲಿ 25 ತಿಂಗಳ ಕನಿಷ್ಠ ಮಟ್ಟವಾದ ಶೇ.4.5ಕ್ಕೆ ಇಳಿಕೆಯಾಗಿತ್ತು. 

ಇದೇ ವರ್ಷದ ಏಪ್ರಿಲ್ ನಲ್ಲಿ ಶೇ.4.7 , ಮಾರ್ಚ್ ನಲ್ಲಿ ಶೇ. 5.66, ಫೆಬ್ರವರಿಯಲ್ಲಿ ಶೇ.6.44 ಹಾಗೂ ಜನವರಿಯಲ್ಲಿ ಶೇ.6.52 ರಷ್ಟಿತ್ತು. ಚಿಲ್ಲರೆ ಹಣದುಬ್ಬರಕ್ಕೆ ಆರ್ ಬಿಐ ಶೇ.4ರಿಂದ ಶೇ.6ರ ಸಹನ ಮಿತಿಯನ್ನು ನಿಗದಿಪಡಿಸಿದೆ. ಈ ವರ್ಷದ ಫೆಬ್ರವರಿಯಿಂದ ಚಿಲ್ಲರೆ ಹಣದುಬ್ಬರ ಶೇ.6ರ ಗಡಿ ಮೀರಿಲ್ಲ. ಜೂನ್ ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಗೆ ಆಹಾರ ಪದಾರ್ಥಗಳ ಬೆಲೆಯೇರಿಕೆಯೇ ಕಾರಣ ಎಂದು ಹೇಳಲಾಗಿದೆ. ಆಹಾರ ಹಣದುಬ್ಬರ ಕೂಡ ಭಾರೀ ಏರಿಕೆ ಕಂಡಿದೆ. ಮೇ ತಿಂಗಳಲ್ಲಿ ಶೇ.2.91ರಷ್ಟಿದ್ದ ಆಹಾರ ಹಣದುಬ್ಬರ ಜೂನ್ ನಲ್ಲಿ ಶೇ.4.63ಕ್ಕೆ ಏರಿಕೆಯಾಗಿದೆ. ಟೊಮ್ಯಾಟೋ ಸೇರಿದಂತೆ ತರಕಾರಿಗಳು, ಬೇಳೆಕಾಳುಗಳು ಹಾಗೂ ಆಹಾರ ಧಾನ್ಯಗಳ ಬೆಲೆಯಲ್ಲಿ ಏರಿಕೆಯಾಗಿರೋದೆ ಆಹಾರ ಹಣದುಬ್ಬರ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ತರಕಾರಿಗಳ ದರದಲ್ಲಿ ಜೂನ್ ಹಾಗೂ ಜುಲೈಯಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಿಲ್ಲರೆ ಹಣದುಬ್ಬರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

ಚೀನಾಕ್ಕೆ ಶುರುವಾಯ್ತು ಹಿಮ್ಮುಖ ಹಣದುಬ್ಬರದ ಭೀತಿ, ಹಾಗೆಂದರೇನು?

ಸುಮಾರು ಒಂದು ವರ್ಷಗಳಿಂದ ಚಿಲ್ಲರೆ ಹಣದುಬ್ಬರ ಏರುಗತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಹಣದುಬ್ಬರಕ್ಕೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಸತತ ಏರಿಕೆ ಮಾಡಿತ್ತು. ಇದರಿಂದ ಹಣದುಬ್ಬರ ಇಳಿಕೆ ಕೂಡ ಆಗಿತ್ತು. ಕಳೆದ ತಿಂಗಳು ನಡೆದ ಆರ್ ಬಿಐ ಹಣಕಾಸು ನೀತಿ ಸಮಿತಿ ದ್ವೈಮಾಸಿಕ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ರೆಪೋ ದರ ಈ ಹಿಂದಿನ ಶೇ.6.5ಎಷ್ಟೇ ಇದೆ. ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆ ಮುಂದಿನ ತಿಂಗಳ ಪ್ರಾರಂಭದಲ್ಲಿ ನಡೆಯಲಿದೆ. ಇನ್ನು ಆರ್ ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ.5.1ರಲ್ಲೇ ಇರುವಂತೆ ನೋಡಿಕೊಳ್ಳುವ ಗುರಿ ಹೊಂದಿದೆ. 

ಹೂಡಿಕೆಗೆ ಭಾರತವೇ ನಂ.1 ಪ್ರಶಸ್ತ ಸ್ಥಳ: ಚೀನಾವನ್ನು ಹಿಂದಿಕ್ಕಿದ ಭಾರತ

ಕೈಗಾರಿಕಾ ಉತ್ಪಾದನೆ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ
ಭಾರತದ ಕೈಗಾರಿಕಾ ಉತ್ಪಾದನೆ ಮೇ ತಿಂಗಳಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ ಎಸ್ ಒ) ಬಿಡುಗಡೆ ಮಾಡಿರುವ ಮಾಹಿತಿ ಅನ್ವಯ ಉತ್ಪಾದನಾ ವಲಯದ ಉತ್ಪಾದನೆಯಲ್ಲಿ ಕೂಡ 2023ರ ಮೇನಲ್ಲಿ ಶೇ.5.7 ಏರಿಕೆ ಕಂಡುಬಂದಿದೆ. ಇನ್ನು ಮೇ ತಿಂಗಳಲ್ಲಿ ಗಣಿಗಾರಿಕೆ ಉತ್ಪಾದನೆಯಲ್ಲಿ ಕೂಡ ಶೇ.6.4ರಷ್ಟು ಹೆಚ್ಚಳವಾಗಿದೆ. ವಿದ್ಯುತ್ ಉತ್ಪಾದನೆ ಕೂಡ ಶೇ.0.9ರಷ್ಟು ಬೆಳವಣಿಗೆ ದಾಖಲಿಸಿದೆ.