ವಾಷಿಂಗ್ಟನ್(ಮೇ.07): ಕೊರೋನಾ ಪೆಟ್ಟಿನಿಂದ ಹೊರಬರಲು ಅಮೆರಿಕ ಹರಸಾಹಸ ಪಡುತ್ತಿರುವಾಗಲೇ ಆ ದೇಶಕ್ಕೆ ಇತಿಹಾಸದಲ್ಲೇ ಕಂಡುಕೇಳರಿಯದಂಥ ಮತ್ತೊಂದು ಪೆಟ್ಟು ನೀಡಲು ಚೀನಾ ಸಜ್ಜಾಗಿ ನಿಂತಿದೆ. ಅಮೆರಿಕದ ಪ್ರತಿಷ್ಠೆಯ ಪ್ರತಿಬಿಂಬವಾಗಿರುವ ಡಾಲರ್‌ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಡೆದು ಹಾಕಲು ಚೀನಾ ತನ್ನ ಇ- ಆರ್‌ಎಂಬಿ ಎಂಬ ಕರೆನ್ಸಿ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಒಂದು ವೇಳೆ ಚೀನಾದ ಈ ಅಸ್ತ್ರ ಫಲ ಕೊಟ್ಟಿದ್ದೇ ಆದಲ್ಲಿ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಲಿದೆ. ಮಾತ್ರವಲ್ಲ ಅಮೆರಿಕದ ಪ್ರತಿಷ್ಠೆಗೆ ದೊಡ್ಡ ಪೆಟ್ಟು ಬೀಳಲಿದ್ದು, ವಿಶ್ವದ ದೊಡ್ಡಣ್ಣನಾಗುವ ಚೀನಾದ ಯತ್ನಕ್ಕೆ ದೊಡ್ಡ ಬಲ ಸಿಗಲಿದೆ. ಹಾಗಿದ್ದರೆ ಏನಿದು ಡಿಜಿಟಲ್‌ ಯುವಾನ್‌ ಇಲ್ಲಿದೆ ಓದಿ...

ಡಿಜಿಟಲ್‌ ಕರೆನ್ಸಿ ಎಂದರೇನು?

ಇದು ಕೂಡಾ ಆಯಾ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಿಡುಗಡೆ ಮಾಡುವ ನಾಣ್ಯ, ನೋಟುಗಳ ರೀತಿಯ ಕರೆನ್ಸಿ. ಆದರೆ ಇವುಗಳನ್ನು ಕೈಯಲ್ಲಿ ಹಿಡಿದು ಓಡಾಡಲು ಸಾಧ್ಯವಿಲ್ಲ. ಇವು ಡಿಜಿಟಲ್‌ ರೂಪದಲ್ಲಿರುತ್ತವೆ. ಇವುಗಳನ್ನು ಮೊಬೈಲ್‌, ಅಂತರ್ಜಾಲ ಅಥವಾ ಇನ್ಯಾವುದೇ ಆನ್‌ಲೈನ್‌ ಮಾದರಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸಬಹುದು. ಚೀನಾದಲ್ಲಿ ಇದೀಗ ಬಿಡುಗಡೆ ಮಾಡಿರುವ ಇ- ಆರ್‌ಎಂಬಿ (ಯುವಾನ್‌)ಯನ್ನು ಇಂಟರ್ನೆಟ್‌ನ ಸಹಾಯವಿಲ್ಲದೆಯೂ ಬಳಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಲಾಕ್‌ಡೌನ್ ಎಫೆಕ್ಟ್‌: ಈ ಒಂದು ವಿಚಾರದಲ್ಲಿ ಅಮೆರಿಕವನ್ನೇ ಮೀರಿಸಿದ ಭಾರತ!

4 ನಗರಗಳಲ್ಲಿ ಡಿಜಿಟಲ್‌ ಕರೆನ್ಸಿ

ಮೇ 1ರಿಂದ ಚೀನಾ ಸರ್ಕಾರ ತನ್ನ 4 ಪ್ರಮುಖ ನಗರಗಳಾದ ಶೆನ್‌ಜೆನ್‌, ಸುಝಹೌ, ಚೆಂಗ್ಡು ಮತ್ತು ಬೀಜಿಂಗ್‌ಗೆ ಸೇರಿದ ಕ್ಸಿಯಾಂಗಾನ್‌ ನಗರಗಳಲ್ಲಿ ಇ - ಆರ್‌ಎಂಬಿ ಎಂಬ ಡಿಜಿಟಲ್‌ ಕರೆನ್ಸಿಯನ್ನು ಪ್ರಾಯೋಗಿಕವಾಗಿ ಪರಿಚಯಿಸಿದೆ. ಈ ನಾಲ್ಕೂ ನಗರಗಳ ಸರ್ಕಾರಿ ನೌಕರರಿಗೆ ವೇತನವನ್ನು ಡಿಜಿಟಲ್‌ ಕರೆನ್ಸಿ ರೂಪದಲ್ಲೇ ನೀಡಲಾಗಿದೆ. ಕೆಲವೊಂದು ವ್ಯಾಪಾರ ವಹಿವಾಟು ಹೊರತುಪಡಿಸಿ ಉಳಿದೆಲ್ಲದಕ್ಕೂ ಡಿಜಿಟಲ್‌ ಕರೆನ್ಸಿ ಬಳಸಲು ಸೂಚಿಸಲಾಗಿದೆ. ಈ ಕರೆನ್ಸಿ ಇಟ್ಟುಕೊಳ್ಳಲು ಜನರಿಗೆ ಸರ್ಕಾರವೇ ಬಿಡುಗಡೆದ ಮಾಡಿದ ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಜನರು ಬ್ಯಾಂಕ್‌ಗಳಲ್ಲಿ ಈಗಾಗಲೇ ಇಟ್ಟುಕೊಂಡಿರುವ ಹಣವನ್ನು ಡಿಜಿಟಲ್‌ ಕರ್ಸೆನಿಗೆ ಬದಲಾಯಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ಯೋಜನೆ ಯಶಸ್ವಿಯಾದ ಬಳಿಕ ಇದನ್ನು ದೇಶವ್ಯಾಪಿ ವಿಸ್ತರಿಸುವುದು ಸರ್ಕಾರ ಉದ್ದೇಶ. ಈ ಯೋಜನೆಯಲ್ಲಿ ಭಾಗಿಯಾಗುವಂತೆ ಅಮೆರಿಕ ಮೂಲದ ಸ್ಟಾರ್‌ಬಕ್‌, ಮ್ಯಾಕ್‌ಡೊನಾಲ್ಡ್‌, ಸಬ್‌ವೇ ಸೇರಿದಂತೆ 20ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದೆ.

ಅಮೆರಿಕಕ್ಕೇ ಚೀನಾ ಕರೆನ್ಸಿಯಿಂದ ನಡುಕ

ವಿಶ್ವದಲ್ಲಿ 180ಕ್ಕೂ ಹೆಚ್ಚು ಕರೆನ್ಸಿಗಳಿದ್ದರೂ, ಬಹುತೇಕ ಕರೆನ್ಸಿಗಳು ಆಯಾ ದೇಶಗಳಲ್ಲಿ ಮಾತ್ರ ಬಳಕೆಯಾಗುತ್ತವೆ. ಆದರೆ ವಿಶ್ವದಲ್ಲೇ ಅತ್ಯಂತ ಸದೃಢ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಕರೆನ್ಸಿಯಾದ ಡಾಲರ್‌ ಅನ್ನು ವಿಶ್ವದ ಎಲ್ಲಾ ದೇಶಗಳು ತಮ್ಮ ಅಂತಾರಾಷ್ಟ್ರೀಯ ವಹಿವಾಟಿಗೆ ಬಳಸಿಕೊಳ್ಳುತ್ತವೆ. ತಮ್ಮ ವಿದೇಶಿ ವಿನಿಮಯ ಸಂಗ್ರಹದಲ್ಲಿ ಬಹುಪಾಲನ್ನು ಡಾಲರ್‌ ರೂಪದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳತ್ತವೆ. ಈ ಮೂಲಕ ತಮ್ಮ ಆರ್ಥಿಕತೆ ಯಾವುದೇ ಸಂದರ್ಭದಲ್ಲೂ ಕುಸಿಯದಂತೆ ನೋಡಿಕೊಳ್ಳುತ್ತವೆ. 76 ವರ್ಷಗಳ ಹಿಂದೆ ಜಾರಿಗೆ ಬಂದ ಈ ಡಾಲರ್‌ ಪ್ರಾಬಲ್ಯ ಈಗಲೂ ಜಾರಿಯಲ್ಲಿದೆ. ನಂತರದಲ್ಲಿ ಸ್ಥಾನದಲ್ಲಿ ಯುರೋ ಮತ್ತು ಜಪಾನ್‌ ಯೆನ್‌ ಇದೆ. ಎಲ್ಲಾ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳ ವಿದೇಶಿ ವಿನಿಮಯ ಸಂಗ್ರಹದಲ್ಲಿ ಡಾಲರ್‌ ಪಾಲು ಶೇ.60ರಷ್ಟಿದೆ. ಈ ಪಾಲಿನಲ್ಲಿ ಆಗುವ ಯಾವುದೇ ಏರುಪೇರು, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಗತ್ತಿನ ಬಹುತೇಕ ದೇಶಗಳ ಮೇಲೆ ಅಮೆರಿಕ ಹೊಂದಿರುವ ಪ್ರಭಾವವನ್ನು ಬಹುತೇಕ ಅಳಿಸಿ ಹಾಕಲಿದೆ. ಹೀಗಾಗಿಯೇ ಈ ಡಿಜಿಟಲ್‌ ಕರೆನ್ಸಿ ಅಮೆರಿಕಕ್ಕೆ ನಡುಕ ಹುಟ್ಟಿಸಿದೆ.

ಚೀನಾ ಬಿಟ್ಟು ಬರುವ ಕಂಪನಿಗೆ ಭಾರತದಲ್ಲಿ 4.6 ಲಕ್ಷ ಹೆಕ್ಟೇರ್‌ ಭೂಮಿ ಗುರುತು!

ಅಮೆರಿಕಕ್ಕೆ ಪೆಟ್ಟು ನೀಡಲು ಚೀನಾ ತಂತ್ರ

ಡಾಲರ್‌ನ ಹಿರಿಮೆ ಅಮೆರಿಕಕ್ಕೆ ಪ್ರತಿಷ್ಠೆಯ ಜೊತೆಗೆ ತನಗೆ ಆಗದ ದೇಶಗಳ ಮೇಲೆ ನಿರ್ಬಂಧ ಹೇರುವ ಮೂಲಕ ದೊಡ್ಡಣ್ಣನ ರೀತಿಯಲ್ಲಿ ಆಟವಾಡಲು ಅವಕಾಶ ಕಲ್ಪಿಸಿದೆ. ಅದು ಡಾಲರ್‌ ಅನ್ನು ಬಹಳಷ್ಟುವರ್ಷಗಳಿಂದ ಡಿಜಿಟಲ್‌ ಶಸ್ತಾ್ರಸ್ತ್ರದ ರೀತಿಯಲ್ಲಿ ಬಳಸುತ್ತಿದೆ. ಮತ್ತೊಂದೆಡೆ ದೇಶ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ವಿವಿಧ ದೇಶಗಳ ಕರೆನ್ಸಿಗಳ ಮೌಲ್ಯದ ಮೇಲೆ ಉಂಟಾಗುವ ದೇಶಗಳನ್ನು ಕಂಗೆಡಿಸಿದೆ. ಇಂಥ ಹೊತ್ತಿನಲ್ಲಿ ಡಾಲರ್‌ ಬೆಲೆ ಏರಿ, ಇತರೆ ದೇಶಗಳಿಗೆ ಖರೀದಿ ಮತ್ತು ಪಾವತಿ ಬಲು ದುಬಾರಿಯಾಗುತ್ತದೆ. ಈ ಎಲ್ಲಾ ಸಮಸ್ಯೆ ನಿವಾರಿಸಿ, ಜಾಗತಿಕ ಮಟ್ಟದಲ್ಲಿ ಹೊಸ ಡಿಜಿಡಲ್‌ ಕರೆನ್ಸಿ ರೂಪಿಸುವುದು ಚೀನಾ ಉದ್ದೇಶ.

ಫೆಡರಲ್ ಕೋರ್ಟ್ ಜಡ್ಜ್ ಆಗಿ ಭಾರತೀಯ ಮೂಲದ ಸರಿತಾ ನಾಮನಿರ್ದೇಶನ ಮಾಡಿದ ಟ್ರಂಪ್!

ಇದಕ್ಕಾಗಿ ಅದು ಡಿಜಿಟಲ್‌ ಸ್ವರೂಪದಲ್ಲಿ ಯುವಾನ್‌ ಅನ್ನು ಮೊದಲಿಗೆ ದೇಶೀಯ ಮಟ್ಟದಲ್ಲಿ ಬಳಸಲು ಮುಂದಾಗಿದೆ. ವಿಶ್ವದಲ್ಲಿ ಇಂಥ ಪ್ರಯತ್ನ ಇದೇ ಮೊದಲು. ಅದೇ ರೀತಿ ವಿಶ್ವದ ಇತರೆ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಿಗೂ ನಿಮ್ಮ ನಿಮ್ಮ ಡಿಜಿಟಲ್‌ ಕರೆನ್ಸಿ ಬಳಕೆ ಆರಂಭಿಸಿ ಎಂದು ಹಲವು ಸಮಯದಿಂದ ದುಂಬಾಲು ಬೀಳುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆಗಳು ಕೂಡಾ ನಡೆದಿವೆ. ಒಂದು ವೇಳೆ ಇದು ಯಶಸ್ವಿಯಾಗಿ, ಎಲ್ಲಾ ದೇಶಗಳು ತಮ್ಮ ಜಾಗತಿಕ ವಹಿವಾಟಿಗೆ ಡಿಜಿಟಲ್‌ ಕರೆನ್ಸಿ ಬಳಸಲು ಒಪ್ಪಿದರೆ, ಅಮೆರಿಕದ ಪ್ರತಿಷ್ಠೆಯ ಜೊತೆಗೆ ಅದರ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿದೆ. ಇಂಥದ್ದೊಂದು ಪೆಟ್ಟಿನ ಮೊದಲ ಭಾಗವಾಗಿಯೇ ಇದೀಗ ಚೀನಾ ಇ- ಆರ್‌ಎಂಬಿ ಎಂದೂ ಕರೆಯಲಾಗುವ ಡಿಜಿಟಲ್‌ ಯುವಾನ್‌ ಅನ್ನು ಬಿಡುಗಡೆ ಮಾಡಿದೆ.