*ಮಳಿಗೆ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ನೀಡಿದ್ದ ರಿಮಾ ಚಾವ್ಲಾ ಎಂಬ ಗ್ರಾಹಕಿ *ಗ್ರಾಹಕರಿಗೆ ಜಾಹೀರಾತು ಹೊಂದಿರುವ ಕ್ಯಾರಿ ಬ್ಯಾಗಿನ ಮೇಲೆ 20 ರೂ. ಶುಲ್ಕ ವಿಧಿಸಿದ ESBEDA *13,000 ರೂ. ದಂಡ ಹಾಗೂ ಗ್ರಾಹಕರ ಕಲ್ಯಾಣ ನಿಧಿಯಲ್ಲಿ 25,000ರೂ. ಠೇವಣಿ ಇಡಲು ಆಯೋಗದ ಆದೇಶ 

ಮುಂಬೈ (ಮೇ 7): ಗ್ರಾಹಕರಿಗೆ (customer) ಉಚಿತವಾಗಿ ಕ್ಯಾರಿ ಬ್ಯಾಗ್ (carry bag) ನೀಡದ ಮಳಿಗೆಯೊಂದಕ್ಕೆ ಮುಂಬೈ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (District Consumer Dispute Redressal Commission) 35,೦೦೦ ರೂಪಾಯಿಗೂ ಅಧಿಕ ದಂಡ ವಿಧಿಸಿದೆ. ದುಬಾರಿ ಬ್ಯಾಗುಗಳ ತಯಾರಿಕಾ ಸಂಸ್ಥೆESBEDA ಗ್ರಾಹಕರಿಗೆ ಜಾಹೀರಾತು ಹೊಂದಿರುವ ಕ್ಯಾರಿ ಬ್ಯಾಗಿನ ಮೇಲೆ 20 ರೂ. ಶುಲ್ಕ ವಿಧಿಸುತ್ತಿತ್ತು. ಇದರ ವಿರುದ್ಧ ಗ್ರಾಹಕರೊಬ್ಬರು ಆಯೋಗದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗ, 13,000 ರೂ. ದಂಡ ಪಾವತಿಸುವಂತೆ ಹಾಗೂ ಗ್ರಾಹಕರ ವೇದಿಕೆಯ ಗ್ರಾಹಕರ ಕಲ್ಯಾಣ ನಿಧಿಯಲ್ಲಿ 25,000ರೂ. ಠೇವಣಿ ವಿಧಿಸುವಂತೆ ಆದೇಶಿಸಿದೆ.

ಮುಂಬೈಯ ಫೋನಿಕ್ಸ್ ಮಾರ್ಕೆಟ್ ಸಿಟಿಯ ESBEDA ಶೋರೂಮ್ ನಲ್ಲಿ ರಿಮಾ ಚಾವ್ಲಾ (Reema Chawla) 1,690 ರೂ. ಮೌಲ್ಯದ ಬ್ಯಾಗ್ ಖರೀದಿಸಿದ್ದರು. ಬಿಲ್ ಪಾವತಿ ಮಾಡುವ ಸಮಯದಲ್ಲಿ ಬಿಲ್ ಕೌಂಟರ್ ನಲ್ಲಿದ್ದ ಸಿಬ್ಬಂದಿ ಜಾಹೀರಾತಿಗಾಗಿ ಕಂಪನಿಯ ಲೋಗೋ ಹೊಂದಿರುವ ಕ್ಯಾರಿ ಬ್ಯಾಗ್ ಮೇಲೆ ನಿಯಮಬಾಹಿರವಾಗಿ 20ರೂ. ಶುಲ್ಕ ವಿಧಿಸಿದ್ದರು. ಈ ಬಗ್ಗೆ ಸಿಬ್ಬಂದಿಗೆ ಚಾವ್ಲಾ ತಿಳಿ ಹೇಳಿದ್ದರು. ಅವರ ಮಳಿಗೆಯಿಂದ ಖರೀದಿಸಿದ ವಸ್ತುವನ್ನು ಕೊಂಡೊಯ್ಯಲು ಗ್ರಾಹಕರಿಗೆ ಕ್ಯಾರಿ ಬ್ಯಾಗ್ ಒದಗಿಸುವಾಗ ಅದಕ್ಕೆ ಶುಲ್ಕ ವಿಧಿಸುವುದು ನ್ಯಾಯಸಮ್ಮತವಲ್ಲದ ವ್ಯವಹಾರವಾಗಿದೆ ಎಂದು ತಿಳಿಸಿದ್ದರು. ಆದರೂ ಸಿಬ್ಬಂದಿ ಉಚಿತವಾಗಿ ಕ್ಯಾರಿ ಬ್ಯಾಗ್ ನೀಡಲು ನಿರಾಕರಿಸಿದ್ದರು. 

Home Loan Rate Hike: ಗೃಹಸಾಲದ ತಿಂಗಳ ಇಎಂಐ ಹೊರೆ ತಗ್ಗಿಸಲು ಇರುವ ಮಾರ್ಗಗಳೇನು?ಇಲ್ಲಿದೆ ಮಾಹಿತಿ

ಈ ಹಿನ್ನೆಲೆಯಲ್ಲಿ ಚಾವ್ಲಾ, ಕ್ಯಾರಿ ಬ್ಯಾಗ್ ಗೆ ವಿಧಿಸಿದ್ದ ಶುಲ್ಕ ಹಿಂತಿರುಗಿಸುವಂತೆ Esbeda ಮಳಿಗೆಗೆ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂಪನಿ, ಖರೀದಿ ಮಾಹಿತಿ ಹಾಗೂ ಇನ್ ವಾಯ್ಸ್ ಬಿಲ್ ನೀಡುವಂತೆ ಕೋರಿತ್ತು. ಈ ಎಲ್ಲ ಮಾಹಿತಿಗಳನ್ನು ಚಾವ್ಲಾ ಒದಗಿಸಿದ್ದರೂ ಆ ಬಳಿಕ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಕಾರಣದಿಂದ ಚಾವ್ಲಾ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಬಾಂದ್ರಾ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಮಳಿಗೆಯಲ್ಲಿ ವಸ್ತು ಖರೀದಿಸಿದ ಬಳಿಕ ಅದನ್ನು ಕೊಂಡೊಯ್ಯಲು ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್ ಒದಗಿಸುವುದು ಕಂಪನಿಯ ಕರ್ತವ್ಯ ಎಂದು ದೂರಿನಲ್ಲಿ ಅವರು ತಿಳಿಸಿದ್ದರು. ಅಲ್ಲದೆ, ಸೇವೆಯಲ್ಲಿ ಲೋಪ, ಮಾನಸಿಕ ಹಿಂಸೆಗೆ ಪರಿಹಾರ, ಕಾನೂನು ಹೋರಾಟಕ್ಕೆ ತಗುಲಿದ ವೆಚ್ಚ ಹಾಗೂ ಕ್ಯಾರಿ ಬ್ಯಾಗ್ ಗೆ ನೀಡಿದ ಹಣದ ಮರುಪಾವತಿ ಸೇರಿದಂತೆ 1,50,020ರೂ. ಒಟ್ಟು ಪರಿಹಾರ ನೀಡುವಂತೆ ಕ್ಲೈಮ್ ಮಾಡಿದ್ದರು. 

Investment Plans : ಕೋಟ್ಯಧಿಪತಿಯಾಗಲು ಇಲ್ಲಿದೆ ಫಾರ್ಮುಲಾ

ನೋಟಿಸ್ ನೀಡಿದ್ದರೂ ಕೂಡ ESBEDA ಮಳಿಗೆಯ ಮ್ಯಾನೇಜರ್ ವೇದಿಕೆಯ ಮುಂದೆ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು. ಅಷ್ಟೇ ಅಲ್ಲ, ತಮ್ಮ ಪ್ರತಿನಿಧಿಯನ್ನು ಕಳುಹಿಸಲು ಕೂಡ ಒಪ್ಪಿರಲಿಲ್ಲ. ಹೀಗಾಗಿ ಆಯೋಗದ ಮುಖ್ಯಸ್ಥರಾದ ಆರ್ ಜಿ ವಾಂಖಡೆ ಹಾಗೂ ಸದಸ್ಯ ಎಸ್ ವಿ ಕಲಾಲ್ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡರು. ಕ್ಯಾರಿ ಬ್ಯಾಗ್ ನಲ್ಲಿ ಕಂಪನಿಯ ಜಾಹೀರಾತು ಇದ್ದರೂ ಅದರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವುದು ನ್ಯಾಯಸಮ್ಮತವಾದ ವ್ಯವಹಾರ ನೀತಿಯಲ್ಲ ಎಂಬುದನ್ನು ಗಮನಿಸಿದ ಆಯೋಗ ಮಳಿಗೆಗೆ ಒಟ್ಟು 38, 020ರೂ. ಪಾವತಿಸುವಂತೆ ತಿಳಿಸಿದೆ. ಇದರಲ್ಲಿ 20 ರೂ. ಕ್ಯಾರಿ ಬ್ಯಾಗ್ ಗೆ ಪಾವತಿಸಿದ ಹಣದ ಮರುಪಾವತಿ, ಕಾನೂನು ಹೋರಾಟದ ವೆಚ್ಚ 3,000 ರೂ. ಹಾಗೂ ಪರಿಹಾರವಾಗಿ 10,000ರೂ. ಹೀಗೆ ಒಟ್ಟು 13,020ರೂ. ಚಾವ್ಲಾ ಅವರಿಗೆ ಪಾವತಿಸುವಂತೆ ಆದೇಶಿಸಿದೆ. ಇನ್ನು 25,000ರೂ. ಗ್ರಾಹಕರ ಕಲ್ಯಾಣ ನಿಧಿಯಲ್ಲಿ ಠೇವಣಿಯಿಡಲು ತಿಳಿಸಿದೆ.