Asianet Suvarna News Asianet Suvarna News

Karnataka Budget 2022-23: ಚೊಚ್ಚಲ ಬಜೆಟ್‌ಗೆ ಬೊಮ್ಮಾಯಿ ಸಿದ್ಧತೆ ಆರಂಭ

*  ಚುನಾವಣೆ ದೃಷ್ಟಿಯ ಜನಪ್ರಿಯ ಬಜೆಟ್‌ ಮಂಡನೆ ಸಾಧ್ಯತೆ
*  ಮುಂದಿನ ವಾರದಿಂದ ಪೂರ್ವಸಿದ್ಧತಾ ಸಭೆ
*  2 ಪೂರಕ ಅಂದಾಜು ಮಂಡಿಸಿರುವ ಸಿಎಂ
 

CM Basavaraj Bommai Preparation for the First Budget grg
Author
Bengaluru, First Published Jan 24, 2022, 10:29 AM IST

ಬೆಂಗಳೂರು(ಜ.24):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಮ್ಮ ಚೊಚ್ಚಲ ಬಜೆಟ್‌(Budget) ಮಂಡನೆಗೆ ಸಿದ್ಧತೆ ಆರಂಭಿಸಿದ್ದು ಮುಂದಿನ ವಾರದಿಂದ ವಿವಿಧ ಇಲಾಖೆಗಳ ಇಲಾಖಾವಾರು ಬಜೆಟ್‌ ಪೂರ್ವಸಿದ್ಧತೆ ಸಭೆ ಹಮ್ಮಿಕೊಂಡಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರ ಪದತ್ಯಾಗದ ಬಳಿಕ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಸ್ವತಃ ಹಣಕಾಸು(Finance) ವಿಷಯಗಳಲ್ಲಿ ಉತ್ತಮ ಜ್ಞಾನವುಳ್ಳವರು. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರ ಅವಧಿಯಲ್ಲೂ ಜಿಎಸ್‌ಟಿ ಕೌನ್ಸಿಲ್‌ಗೆ(GST Council) ರಾಜ್ಯದ(Karnataka) ಪ್ರತಿನಿಧಿಯನ್ನಾಗಿ ನೇಮಿಸಲಾಗಿತ್ತು. ಇದೀಗ ಅವರಿಗೆ ತಮ್ಮ ಮೊದಲ ಬಜೆಟ್‌ ಮಂಡಿಸುವ ಕಾಲ ಒದಗಿ ಬಂದಿದ್ದು, ಕೊರೋನಾ(Coronavirus) ಸಂಕಷ್ಟದಿಂದ ನಲುಗಿರುವ ಜನರಿಗೆ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್‌ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

Home Loan EMIs:ಗೃಹ ಸಾಲ ಮರುಪಾವತಿ ತಡವಾದ್ರೆ ಈ ತೊಂದ್ರೆ ತಪ್ಪದು!

ಹೀಗಾಗಿ ಸರ್ಕಾರಕ್ಕೆ ಆದಾಯದ ಹರಿವು ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಮುಂದಿನ ಮಾರ್ಚ್‌-ಏಪ್ರಿಲ್‌ನಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆ(BBMP Election), ಸಾರ್ವತ್ರಿಕ ಚುನಾವಣೆಯನ್ನು(General Election) ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಮೆಚ್ಚಿಸುವ ಬಜೆಟ್‌ ನೀಡಬೇಕಾದ ಒತ್ತಡದಲ್ಲಿ ಬಸವರಾಜ ಬೊಮ್ಮಾಯಿ ಇದ್ದಾರೆ. ಹೀಗಾಗಿ ಬೊಮ್ಮಾಯಿ ಅವರ ಬಜೆಟ್‌ ಕುತೂಹಲ ಮೂಡಿಸಿದೆ.

ಮುಂದಿನ ವಾರದಿಂದ ಸಿದ್ಧತೆ:

ಕೊರೋನಾದಿಂದಾಗಿ ಸರ್ಕಾರದ ಆರ್ಥಿಕ ಮೂಲಗಳು ಅರ್ಧಕ್ಕೆ ಅರ್ಧ ಕುಸಿದಿವೆ. ಜತೆಗೆ ಕೊರೋನಾ ಮೂರನೇ ಅಲೆ ಕಾಡುತ್ತಿದೆ. ಹೀಗಾಗಿ ಯಾವ್ಯಾವ ಇಲಾಖೆಗಳಲ್ಲಿ ಯಾವ ರೀತಿಯ ಕಾರ್ಯಕ್ರಮ ಕೈಗೊಳ್ಳಬಹುದು, ಹಿಂದಿನ ಬಜೆಟ್‌ನ ಕಾರ್ಯಕ್ರಮಗಳ ಪ್ರಗತಿ ಏನು ಎಂಬ ಬಗ್ಗೆ ಪ್ರತಿ ದಿನ 3-4 ಇಲಾಖೆಗಳ ಅಧಿಕಾರಿಗಳೊಂದಿಗೆ ಶಕ್ತಿ ಭವನದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ.

ಬಿಬಿಎಂಪಿ ಚುನಾವಣೆ ದೃಷ್ಟಿಯಿಟ್ಟುಕೊಂಡು ಬೆಂಗಳೂರಿಗೆ(Bengaluru) ಭರಪೂರ ಕೊಡುಗೆ ನೀಡುವ ನಿರೀಕ್ಷೆ ಇದೆ. ಜತೆಗೆ ಮುಖ್ಯಮಂತ್ರಿಯಾದ ಬಳಿಕ ಘೋಷಿಸಿದ ಮುಖ್ಯಮಂತ್ರಿಗಳ ವಿದ್ಯಾರ್ಥಿವೇತನ(Scholarship) ಯೋಜನೆ, ಮನೆ-ಮನೆಗೂ ಸರ್ಕಾರಿ ಸೇವೆಗಳನ್ನು ತಲುಪಿಸುವಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಘೋಷಿಸುವ ಸಾಧ್ಯತೆ ಇದೆ. ವಿತ್ತೀಯ ಶಿಸ್ತು ಕಾಪಾಡಿಕೊಂಡು ಸಾಲದ ಹೊರೆ ಬೀಳದೆ ಮುಂದಿನ ಚುನಾವಣೆಗೆ ಜನಪ್ರಿಯ ಬಜೆಟ್‌ ಘೋಷಿಸಲು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2 ಪೂರಕ ಅಂದಾಜು ಮಂಡಿಸಿರುವ ಸಿಎಂ

ಎರಡು ಪೂರಕ ಅಂದಾಜು ಮಂಡಿಸಿರುವ ಬೊಮ್ಮಾಯಿಗೆ ಮೊದಲ ಪೂರ್ಣ ಬಜೆಟ್‌ ಮಂಡಿಸುವ ಅವಕಾಶ ಒದಗಿ ಬಂದಿದೆ. ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ(Department of Health) ಹೆಚ್ಚು ಒತ್ತು ನೀಡಲಿದ್ದಾರೆ. ಜತೆಗೆ ಹಣಕಾಸು ನೆರವಿಲ್ಲದೆ ಕುಂಟುತ್ತಿರುವ ನರೇಗಾ, ವಸತಿ ಯೋಜನೆ, ಗಂಗಾ ಕಲ್ಯಾಣದಂತಹ ಯೋಜನೆಗಳಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡುವುದು. ಜನಪ್ರಿಯ ಘೋಷಣೆಗಳ ಮೂಲಕ ಜನರ ಗಮನ ಸೆಳೆಯುವುದು ಬೊಮ್ಮಾಯಿ ಅವರ ಉದ್ದೇಶ ಎಂದು ತಿಳಿದು ಬಂದಿದೆ.

Reasons for inflation: ದಿನದಿಂದ ದಿನಕ್ಕೆ ಜೀವನ ನಿರ್ವಹಣಾ ವೆಚ್ಚ ದುಬಾರಿ; ಜಾಗತಿಕ ಹಣದುಬ್ಬರಕ್ಕೆ ಏಳು ಕಾರಣಗಳು!

ಉಪ್ಪು, ಹುಳಿ, ಖಾರವಿಲ್ಲದ ಬಜೆಟ್‌: ಶರವಣ

ಬೆಂಗಳೂರು: ಕಳೆದ ವರ್ಷ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸಿದ್ದ 2021-22ನೇ ಸಾಲಿನ ರಾಜ್ಯದ ಬಜೆಟ್‌ ಉಪ್ಪು, ಹುಳಿ ಮತ್ತು ಖಾರವಿಲ್ಲದ ಸಪ್ಪೆ ಬಜೆಟ್‌ ಆಗಿದೆ ಎಂದು ಜೆಡಿಎಸ್‌ ಮುಖಂಡ ಟಿ.ಎ.ಶರವಣ(TS Saravana) ಪ್ರತಿಕ್ರಿಯಿಸಿದ್ದರು.

ಈ ಬಜೆಟ್‌ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಟ್ಟಿಲ್ಲ. ಹಿಂದಿನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅಧಿಕಾರವಿದ್ದಾಗ ಘೋಷಣೆ ಮಾಡಲಾದ ಯೋಜನೆಗಳನ್ನು ಈಗ ಇವರು ಮುಂದುವರಿಸಿದ್ದಾರೆ. ಕೋವಿಡ್‌ ನಂತರ ಮಂಡಿಸಿದ ಈ ಬಜೆಟ್‌ ನಮ್ಮೆಲ್ಲರಿಗೂ ನಿರಾಸೆ ತಂದಿದೆ. ಜನ ಸಂಕಷ್ಟದಲ್ಲಿರುವಾಗ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಹಾಗೂ ದಿನ ನಿತ್ಯ ಬಳಕೆ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆಯಿತ್ತು. ಅದು ಹುಸಿಯಾಗಿದೆ ಎಂದು ತಿಳಿಸಿದ್ದರು.

Follow Us:
Download App:
  • android
  • ios