ಲಖನೌ[ಸೆ.07]: ಚಾಕೋಲೇಟ್‌, ತಿಂಡಿ- ತಿನಿಸಿಗಾಗಿ ತಂದೆಯ ಜೇಬಿನಿಂದ ಮಕ್ಕಳು ಹಣ ಕದಿಯುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಬಾಲಕ ಆನ್‌ಲೈನ್‌ ವಿಡಿಯೋ ಗೇಮ್‌ಗಾಗಿ ತಂದೆಯ ಮೊಬೈಲ್‌ ಬಳಸಿ ಅಪ್ಪನಿಗೇ ತಿಳಿಯದಂತೆ ಅಕೌಂಟ್‌ನಿಂದ ಹಣ ಎಗರಿಸುತ್ತಿದ್ದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ಬೆಳಕಿಗೆ ಬಂದಿದೆ.

ಆನ್‌ಲೈನ್‌ ವಿಡಿಯೋ ಗೇಮ್‌ ಗೀಳು ಅಂಟಿಸಿಕೊಂಡಿದ್ದ 4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನೋರ್ವ ತಂದೆಯ ಮೊಬೈಲ್‌ನಲ್ಲಿ ಪೇಟಿಎಂ ಖಾತೆ ತೆರೆದು, ಆನ್‌ಲೈನ್‌ ವಿಡಿಯೋ ಗೇಮ್‌ಗಳನ್ನು ಖರೀದಿಸಿ ಆಟವಾಡುತ್ತಿದ್ದ (ಕೆಲವೊಂದು ವಿಡಿಯೋ ಗೇಮ್‌ಗಳಿಗೆ ಹಣ ಪಾವತಿ ಕಡ್ಡಾಯ). ತನ್ನ ಖಾತೆಯಿಂದ ಹಣ ಕಡಿತವಾಗುತ್ತಿರುವುದು ತಂದೆಯ ಗಮನಕ್ಕೆ ಬಂದಿದೆ. ಈ ಬಗ್ಗೆ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ವೇಳೆ ದೂರು ನೀಡಿದ ವ್ಯಕ್ತಿಯ ಮೊಬೈಲ್‌ ಮೂಲಕವೇ ಹಣ ಕಡಿತಗೊಳ್ಳುತ್ತಿದೆ ಎಂದು ತಿಳಿದಾಗ ಆ ವ್ಯಕ್ತಿಗೆ ಅಚ್ಚರಿ ಉಂಟಾಗಿದೆ.

ಚಿಕನ್‌ ದರ ಮೇಲೆತ್ತಲು 1 ಕೋಟಿ ಕೋಳಿ ಮೊಟ್ಟೆ ನಾಶಕ್ಕೆ ನಿರ್ಧಾರ!

ಇದರಿಂದ ಅವಾಕ್ಕಾದ ಆ ವ್ಯಕ್ತಿ ತನ್ನ ಮೊಬೈಲ್‌ ಅನ್ನು ಬಳಸುತ್ತಿದ್ದ ಮಗನನ್ನು ವಿಚಾರಿಸಿದಾಗ ಆ ಬಾಲಕ ಸತ್ಯ ಬಾಯ್ಬಿಟ್ಟಿದ್ದಾನೆ. ಹೀಗೆ ಆನ್‌ಲೈನ್‌ ವಿಡಿಯೋ ಗೇಮ್‌ಗಾಗಿ ಒಂದು ವರ್ಷದಲ್ಲಿ ಬರೋಬ್ಬರಿ 35 ಸಾವಿರ ರು. ಹಣವನ್ನು ತಂದೆಯ ಖಾತೆಯಿಂದ ಖಾಲಿ ಮಾಡಿದ್ದಾನೆ ಆ ಬಾಲಕ.