ಇದೀಗ ಟಿಕ್‌ಟಾಕ್‌ ಖರೀದಿಗೆ ರಿಲಯನ್ಸ್‌ ಜಿಯೋ ಮುಂದಾಗಿರುವ ಸುದ್ದಿ ಹೊರಬಿದ್ದಿದೆ. ಟಿಕ್‌ಟಾಕ್‌ನ ಭಾರತೀಯ ಘಟಕದ ಮೌಲ್ಯ 22500 ಕೋಟಿ ರು. ಎಂದು ಅಂದಾಜಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಆ.14): ಭಾರತದಲ್ಲಿ ನಿಷೇಧಕ್ಕೆ ಒಳಗಾಗಿ ಅತಂತ್ರವಾಗಿರುವ ಚೀನಾ ಮೂಲದ ಜನಪ್ರಿಯ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ ತನ್ನ ಭಾರತೀಯ ಘಟಕವನ್ನು ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋಗೆ ಮಾರಾಟ ಮಾಡುವ ಕುರಿತು ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಒಂದು ವೇಳೆ ಮಾತುಕತೆ ಕುದುರಿದರೆ ಜಿಯೋ ಕಂಪನಿಗೆ ದೊಡ್ಡ ಪ್ರಮಾಣದಲ್ಲಿ ಹೊಸ ಗ್ರಾಹಕರು ಸಿಗಲಿದ್ದಾರೆ.

ಟಿಕ್‌ಟಾಕ್‌ ಕಂಪನಿಯು ಭಾರತೀಯ ಗ್ರಾಹಕರ ಮಾಹಿತಿಯನ್ನು ಚೀನಾ ಸರ್ಕಾರಕ್ಕೆ ನೀಡುತ್ತಿದೆ, ಇದು ದೇಶದ ಭದ್ರತೆಗೆ ಧಕ್ಕೆ ತರುತ್ತದೆ ಎನ್ನುವ ಕಾರಣ ನೀಡಿ ಕಳೆದ ತಿಂಗಳು ಭಾರತ ಸರ್ಕಾರ ಟಿಕ್‌ಟಾಕ್‌ ಸೇರಿದಂತೆ 59 ಆ್ಯಪ್‌ಗಳ ಮೇಲೆ ನಿಷೇಧ ಹೇರಿತ್ತು. ಇತ್ತೀಚೆಗೆ ಅಮೆರಿಕ ಸೇರಿದಂತೆ ಇತರೆ ಹಲವು ದೇಶಗಳು ಕೂಡ ಇದೇ ರೀತಿಯ ನಿಷೇಧ ಹೇರಿದ್ದವು.

ಅದರ ಬೆನ್ನಲ್ಲೇ ಇದೀಗ ಟಿಕ್‌ಟಾಕ್‌ ಖರೀದಿಗೆ ರಿಲಯನ್ಸ್‌ ಜಿಯೋ ಮುಂದಾಗಿರುವ ಸುದ್ದಿ ಹೊರಬಿದ್ದಿದೆ. ಟಿಕ್‌ಟಾಕ್‌ನ ಭಾರತೀಯ ಘಟಕದ ಮೌಲ್ಯ 22500 ಕೋಟಿ ರು. ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಅಂದಾಜು 12 ಕೋಟಿ ಟಿಕ್‌ಟಾಕ್‌ ಬಳಸುತ್ತಿದ್ದರು. ಆದರೆ ನಿಷೇಧದ ಬಳಿಕ ಟಿಕ್‌ಟಾಕ್‌ ಮಾದರಿಯ ಇತರೆ ಆ್ಯಪ್‌ಗಳು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿವೆ. ಅಲ್ಲದೆ ಭಾರತದಲ್ಲಿನ ಟಿಕ್‌ಟಾಕ್‌ನ 2000 ಸಿಬ್ಬಂದಿ ಪೈಕಿ ಬಹಳಷ್ಟುಜನ ಹೊಸ ಅವಕಾಶಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಜನಪ್ರಿಯತೆ ಇರುವಾಗಲೇ ಕಂಪನಿಯನ್ನು ಒಳ್ಳೆಯ ಮೌಲ್ಯಕ್ಕೆ ಮಾರುವ ಉದ್ದೇಶವನ್ನು ಬೈಟ್‌ಡ್ಯಾನ್ಸ್‌ ಹೊಂದಿದೆ ಎನ್ನಲಾಗಿದೆ.

ಟಿಕ್‌ಟಾಕ್‌ ಭಾರತೀಯ ಘಟಕ ಖರೀದಿಗೆ ರಿಲಯನ್ಸ್‌ ಆಸಕ್ತಿ?

ಟಿಕ್‌ಟಾಕ್‌ನ ಮಾತೃಸಂಸ್ಥೆಯಾದ ಬೈಟ್‌ಡ್ಯಾನ್ಸ್‌ ಆಯ್ದ ದೇಶಗಳ ಇಲ್ಲವೇ ಇಡೀ ಪೂರ್ಣ ಟಿಕ್‌ಟಾಕ್‌ ಅನ್ನೇ ಮಾರಾಟ ಮಾಡಲು ಚಿಂತಿಸುತ್ತಿದೆ ಎನ್ನಲಾಗಿತ್ತು. ಅದರ ಬೆನ್ನಲ್ಲೇ ಅಮೆರಿಕ ಮೂಲದ ಮೈಕ್ರೋಸಾಫ್ಟ್‌ ಕೂಡಾ ಮಾತುಕತೆಯಲ್ಲಿ ತೊಡಗಿರುವುದು ಖಚಿತಪಡಿಸಿತ್ತು. ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಟ್ರಂಪ್‌, 45 ದಿನಗಳ ಒಳಗೆ ಟಿಕ್‌ಟಾಕ್‌ ಅನ್ನು ಅಮೆರಿಕ ಕಂಪನಿ ಖರೀದಿಸದೇ ಹೋದಲ್ಲಿ ನಿಷೇಧ ಜಾರಿ ಮಾಡುವುದಾಗಿ ಘೋಷಿಸಿದ್ದರು.

ಟಿಕ್‌ಟಾಕ್‌ ವಿಶ್ವದ 155 ದೇಶಗಳಲ್ಲಿ 75 ಭಾಷೆಗಳಲ್ಲಿ ಸೇವೆ ನೀಡುತ್ತಿದೆ. ಅದಕ್ಕೆ 80 ಕೋಟಿ ಸಕ್ರಿಯ ಗ್ರಾಹಕರಿದ್ದಾರೆ. ಕಳೆದ ವರ್ಷ 1.27 ಲಕ್ಷ ಕೋಟಿ ರು. ಆದಾಯ ಗಳಿಸಿತ್ತು. ಜೊತೆಗೆ 22500 ಕೋಟಿ ರು. ಲಾಭಗಳಿಸಿತ್ತು.