ಟಿಕ್‌ಟಾಕ್ ಭಾರತೀಯ ಘಟಕ ಖರೀದಿಗೆ ರಿಲಯನ್ಸ್ ಆಸಕ್ತಿ?
ಅಮೆರಿಕ ಘಟಕ ಖರೀದಿಗೆ ಮೈಕ್ರೋಸಾಫ್ಟ್ ಸಜ್ಜು| ಟಿಕ್‌ಟಾಕ್ ಭಾರತೀಯ ಘಟಕ ಖರೀದಿಗೆ ರಿಲಯನ್ಸ್ ಆಸಕ್ತಿ?| ರಿಲಯನ್ಸ್ ಜೊತೆಗೆ ಕೋಲ್ಕತಾ ಮೂಲದ ಉದ್ಯಮಿ ಸಂಜೀವ್ ಗೋಯಂಕಾ ಕೂಡಾ ಈ ರೇಸ್‌ನಲ್ಲಿ
ನವದೆಹಲಿ(ಆ.03): ಕಿರು ವಿಡಿಯೋ ಸೇವೆಯ ಟಿಕ್‌ಟಾಕ್‌ನ ಅಮೆರಿಕ ಘಟಕ ಖರೀದಿಗೆ ಮೈಕ್ರೋಸಾಫ್ಟ್ ಸಜ್ಜಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಟಿಕ್‌ಟಾಕ್‌ನ ಭಾರತೀಯ ಘಟಕ ಖರೀದಿಗೆ ಭಾರತದ ನಂ.1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಕೂಡಾ ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ರಿಲಯನ್ಸ್ ಜೊತೆಗೆ ಕೋಲ್ಕತಾ ಮೂಲದ ಉದ್ಯಮಿ ಸಂಜೀವ್ ಗೋಯಂಕಾ ಕೂಡಾ ಈ ರೇಸ್‌ನಲ್ಲಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಚೀನಾ ಆ್ಯಪ್ ಆಯ್ತು, ಈಗ ಚೀನೀ ಭಾಷೆಗೂ ಕೇಂದ್ರ ಕೊಕ್
ಟಿಕ್‌ಟಾಕ್‌ನ ಮಾತೃಸಂಸ್ಥೆಯಾದ ಬೈಟ್‌ಡ್ಯಾನ್ಸ್ ಚೀನಾ ಮೂಲದ್ದು. ಈ ಕಂಪನಿ ಭಾರತೀಯ ಗ್ರಾಹಕರ ದತ್ತಾಂಶಗಳನ್ನು ಚೀನಾ ಸರ್ಕಾರಿ ಸಂಸ್ಥೆಗಳಿಗೆ ನೀಡುತ್ತಿದೆ. ಇದು ದೇಶದ ಭದ್ರತೆಗೆ ಧಕ್ಕೆ ತರುವಂಥದ್ದು ಎಂಬ ಕಾರಣ ನೀಡಿ ಇತ್ತೀಚೆಗೆ ಆ್ಯಪ್ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ಅಮೆರಿಕ ಸರ್ಕಾರ ಕೂಡಾ ಇಂಥದ್ದೇ ನಿರ್ಧಾರ ಕೈಗೊಳ್ಳುವ ಸುಳಿವು ನೀಡಿದೆ. ಹೀಗಾಗಿ ಬೈಟ್‌ಡ್ಯಾನ್ಸ್ ತನ್ನ ಒಟ್ಟಾರೆ ಕಂಪನಿಯನ್ನೇ ಇಲ್ಲವೇ ವಿವಾದಕ್ಕೆ ತುತ್ತಾಗಿರುವ ದೇಶಗಳ ಘಟಕಗಳನ್ನು ಮಾರಾಟ ಮಾಡಲು ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಹೇಳಿದ್ದವು. ಈ ಹಿನ್ನೆಲೆಯಲ್ಲಿ ಭಾರತದ ಘಟಕ ಮಾರಲು ಕಂಪನಿ ನಿರ್ಧರಿಸಿದರೆ ಅದರ ಖರೀದಿಗೆ ಮುಕೇಶ್ ಅಂಬಾನಿ ಮತ್ತು ಸಂಜೀವ್ ಗೋಯೆಂಕಾ ಚಿಂತನೆ ನಡೆಸಿದ್ದಾರೆ.
ಟಿಕ್‌ಟಾಕ್ ಹಾಲಿ ಭಾರತದಲ್ಲಿ 20 ಕೋಟಿ ಬಳಕೆದಾರರನ್ನು ಹೊಂದಿದೆಯಾದರೂ, ಆದಾಯ ವಿಷಯದಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರೀ ಕಡಿಮೆ ಇದೆ. ಆದರೆ ಜನಪ್ರಿಯತೆ ವಿಷಯದಲ್ಲಿ ಅದು ನಂ.1 ಆ್ಯಪ್. ಈ ಹಿನ್ನೆಲ್ಲೆಯಲ್ಲಿ ಅದು ತನ್ನ ಬತ್ತಳಿಕೆಗೆ ಸಿಕ್ಕರೆ ಜಿಯೋ ಫ್ಲ್ಯಾಟ್‌ಫಾಮ್‌ರ್‍ಗೆ ಭಾರೀ ನೆರವಾಗಲಿದೆ ಎಂಬುದು ರಿಲಯನ್ಸ್ ಉದ್ದೇಶ ಎನ್ನಲಾಗಿದೆ.
TikTok ಖರೀದಿಗೆ ಮೈಕ್ರೋಸಾಫ್ಟ್ ಯತ್ನ, ಬ್ಯಾನ್ ಮಾಡ್ತೀನಿ, ಖರೀದಿಗೆ ಬಿಡಲ್ಲ ಎಂದ ಟ್ರಂಪ್
ಟಿಕ್‌ಟಾಕ್ ವಿಶ್ವದ 150ಕ್ಕೂ ಹೆಚ್ಚು ದೇಶಗಳಲ್ಲಿ 39 ಭಾಷೆಗಳಲ್ಲಿ ಸೇವೆ ನೀಡುತ್ತಿದೆ. 80 ಕೋಟಿ ಸಕ್ರಿಯ ಗ್ರಾಹಕರು ಅದಕ್ಕೆ ಇದ್ದಾರೆ. ಕಂಪನಿ ಒಟ್ಟು ಮೌಲ್ಯ 3.75 ಲಕ್ಷ ಕೋಟಿ ರು. ಎಂಬ ಅಂದಾಜಿದೆ. ಪ್ರಸಕ್ತ ವರ್ಷ ಕಂಪನಿ 7500 ಕೋಟಿ ರು. ಆದಾಯದ ನಿರೀಕ್ಷೆಯಲ್ಲಿದೆ.