*ಕಚ್ಚಾ ತೈಲದ ಮೇಲಿನ ತೆರಿಗೆ ಕೂಡ ಹೆಚ್ಚಳ*ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಈ ನಿರ್ಧಾರ* ಡೀಸೆಲ್ ರಫ್ತಿನ ಮೇಲಿನ ವಿಂಡ್ ಫಾಲ್ ಪ್ರಾಫಿಟ್ 13.5ರೂ.ಗೆ ಹೆಚ್ಚಳ* ಎಟಿಎಫ್ ರಫ್ತಿನ ಮೇಲಿನ ವಿಂಡ್ ಫಾಲ್ ತೆರಿಗೆ ಪ್ರತಿ ಲೀಟರ್ ಗೆ 9ರೂ.ಗೆ ಏರಿಕೆ

ನವದೆಹಲಿ (ಸೆ.1): ಡೀಸೆಲ್ ಹಾಗೂ ಜೆಟ್ ಇಂಧನ (ಎಟಿಎಫ್) ರಫ್ತಿನ ಮೇಲಿನ ವಿಂಡ್ ಫಾಲ್ ಪ್ರಾಫಿಟ್ ತೆರಿಗೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಡೀಸೆಲ್ ರಫ್ತಿನ ಮೇಲಿನ ವಿಂಡ್ ಫಾಲ್ ಪ್ರಾಫಿಟ್ ತೆರಿಗೆಯನ್ನು ಪ್ರತಿ ಲೀಟರ್ ಗೆ 7ರೂ.ನಿಂದ 13.5ರೂ.ಗೆ ಹೆಚ್ಚಳ ಮಾಡಲಾಗಿದೆ. ಇನ್ನು ಎಟಿಎಫ್ ರಫ್ತಿನ ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಪ್ರತಿ ಲೀಟರ್ ಗೆ 2ರೂ.ನಿಂದ 9ರೂ.ಗೆ ಹೆಚ್ಚಿಸಲಾಗಿದೆ. ದೇಶೀಯವಾಗಿ ಉತ್ಪಾದಿಸಿದ ಕಚ್ಚಾ ತೈಲದ ರಫ್ತಿನ ಮೇಲಿನ ವಿಂಡ್ ಫಾಲ್ ಪ್ರಾಫಿಟ್ ತೆರಿಗೆಯನ್ನು ಟನ್ ಗೆ 300ರೂ. ಹೆಚ್ಚಳ ಮಾಡಿ 13,300ರೂ.ಗೆ ಏರಿಕೆ ಮಾಡಲಾಗಿದೆ. ಈ ಪರಿಷ್ಕೃತ ದರ ಸೆಪ್ಟೆಂಬರ್ 1ರಿಂದಲೇ ಜಾರಿಗೆ ಬರಲಿದೆ. ಜು.1ರಂದು ಕೇಂದ್ರ ಸರ್ಕಾರ ದೇಶೀಯ ಸಂಸ್ಥೆಗಳು ವಿದೇಶಕ್ಕೆ ರಫ್ತು ಮಾಡುವ ಪೆಟ್ರೋಲ್ , ಡೀಸೆಲ್ ಹಾಗೂ ಜೆಟ್ ಇಂಧನ (ಎಟಿಎಫ್) ಮೇಲೆ ವಿಂಡ್ ಫಾಲ್ ಅಥವಾ ಅನಿರೀಕ್ಷಿತ ತೆರಿಗೆ ವಿಧಿಸಿತ್ತು.ಪೆಟ್ರೋಲ್ ಹಾಗೂ ಎಟಿಎಫ್ ಮೇಲೆ ಪ್ರತಿ ಲೀಟರ್ ಗೆ 6ರೂ. ರಫ್ತು ಸುಂಕ ವಿಧಿಸಿತ್ತು. ಹಾಗೆಯೇ ಡೀಸೆಲ್ ರಫ್ತಿನ ಮೇಲೆ ಪ್ರತಿ ಲೀಟರ್ ಗೆ 13ರೂ. ತೆರಿಗೆ ವಿಧಿಸಿತ್ತು. ಇನ್ನು ದೇಶೀಯ ಕಚ್ಚಾ ತೈಲದ ಮಾರಾಟದ ಮೇಲೆ ಪ್ರತಿ ಟನ್ ಗೆ 23,250ರೂ. ವಿಂಡ್ ಫಾಲ್ ತೆರಿಗೆ ವಿಧಿಸಿತ್ತು. ಆದರೆ,ಆಗಸ್ಟ್ 19ರಂದು ದೇಶೀಯವಾಗಿ ಉತ್ಪಾದಿಸಲ್ಪಟ್ಟ ಕಚ್ಚಾತೈಲದ ಮೇಲಿನ ತೆರಿಗೆಯನ್ನು ಪ್ರತಿ ಟನ್ ಗೆ 17,750ರೂ.ನಿಂದ 13,000ರೂ.ಗೆ ಇಳಿಕೆ ಮಾಡಿತ್ತು.

'ಕಚ್ಚಾ ತೈಲದ ಬೆಲೆ, ವಿದೇಶಿ ವಿನಿಮಯ ದರ ಹಾಗೂ ಮಾರುಕಟ್ಟೆ ಪರಿಸ್ಥಿತಿಗಳನ್ನು ಅವಲೋಕಿಸಿ ಪ್ರತಿ 15 ದಿನಗಳಿಗೊಮ್ಮೆ ವಿಂಡ್ ಫಾಲ್ ತೆರಿಗೆ ಪರಿಷ್ಕರಿಸೋದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಎಟಿಎಫ್ ಹಾಗೂ ಡೀಸೆಲ್ ರಫ್ತಿನ ಮೇಲಿನ ತೆರಿಗೆಯನ್ನು ಸರ್ಕಾರ ಮತ್ತೊಮ್ಮೆ ಪರಿಷ್ಕರಿಸಿದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು ಈ ವಾರ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಇಳಿಕೆ ದಾಖಲಿಸಿರೋದು ಹಾಗೂ ಇನ್ನೊಂದು ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ. ಇತ್ತೀಚಿನ ಕೆಲವು ದಿನಗಳಿಂದ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದರೂ ಡಾಲರ್ ಮೌಲ್ಯದ ಬಲವರ್ಧನೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಖರೀದಿ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತೆರಿಗೆ ಹೆಚ್ಚಳ ಮಾಡಲೇಬೇಕಾಗಿದೆ' ಎನ್ನುತ್ತಾರೆ ಟ್ರೇಡ್ ಬುಲ್ಸ್ ಸೆಕ್ಯುರಿಟೀಸ್ ಸರಕು/ಕರೆನ್ಸಿ ಸಂಶೋಧನಾ ವಿಶ್ಲೇಷಕ ಭವಿಕ್ ಪಟೇಲ್.

Cryptocurrency: ಮಹಿಳೆಯ ಖಾತೆಗೆ ಆಕಸ್ಮಿಕವಾಗಿ ₹ 83 ಕೋಟಿ ವರ್ಗಾಯಿಸಿದ ಕ್ರಿಪ್ಟೋ ಸಂಸ್ಥೆ..!

ವಿಂಡ್ ಫಾಲ್ ತೆರಿಗೆ ಅಂದ್ರೆ?
ಯಾವುದೇ ಕೈಗಾರಿಕೆಗಳು ಅನಿರೀಕ್ಷಿತ ಮಟ್ಟದ ಲಾಭ ಗಳಿಸಿದಾಗ ಸರ್ಕಾರ ಅವುಗಳ ಮೇಲೆ ವಿಧಿಸುವ ಒಂದು ವಿಧದ ತೆರಿಗೆಯೇ ವಿಂಡ್ ಫಾಲ್ ತೆರಿಗೆ (windfall tax).ಉಕ್ರೇನ್ ಜೊತೆಗಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಕಚ್ಚಾ ತೈಲ ಅತ್ಯಂತ ಹೆಚ್ಚಿನ ಡಿಸ್ಕೌಂಟ್ (Discount) ಮೂಲಕ ಸಿಗುತ್ತಿರುವ ಕಾರಣ ರಿಫೈನರಿಗಳು ಅತ್ತ ಮುಖ ಮಾಡಿವೆ. ಮೇನಲ್ಲಿ ಭಾರತದ ರಿಫೈನರಿಗಳು 25 ಮಿಲಿಯನ್ ಬ್ಯಾರೆಲ್ಸ್ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿವೆ. ಈ ಮೂಲಕ ಭಾರತದ ರಿಫೈನರಿಗಳು ಸಾಕಷ್ಟು ಲಾಭ ಗಳಿಸಿವೆ ಎಂದು ಹೇಳಲಾಗಿದೆ. ಹೀಗಾಗಿಯೇ ಸರ್ಕಾರ ವಿಂಡ್ ಫಾಲ್ ತೆರಿಗೆ ವಿಧಿಸಿದೆ ಎನ್ನಲಾಗಿದೆ.

GDP Growth Rate: ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 13.5 ವೇಗವಾಗಿ ಬೆಳೆದ ಭಾರತದ ಜಿಡಿಪಿ: ಚೀನಾದ್ದು 0.4 ಅಷ್ಟೇ..!

ಜೆಟ್ ಇಂಧನ ದರ ಇಳಿಕೆ
ಜೆಟ್ ಇಂಧನ ರಫ್ತಿನ ಮೇಲೆ ಕೇಂದ್ರ ಸರ್ಕಾರ ವಿಂಡ್ ಫಾಲ್ ಪ್ರಾಫಿಟ್ ತೆರಿಗೆ ಹೆಚ್ಚಿಸಿದ ಬಳಿಕ ನವದೆಹಲಿಯಲ್ಲಿ ಗುರುವಾರ ಎಟಿಎಫ್ ದರದಲ್ಲಿಇಳಿಕೆಯಾಗಿದೆ.