Asianet Suvarna News Asianet Suvarna News

ಸಾಲ ಹಗರಣ: ಐಸಿಐಸಿಐ ಬ್ಯಾಂಕ್‌ ಮಾಜಿ ಮುಖ್ಯಸ್ಥೆ ಚಂದಾ ಕೋಚರ್‌, ಪತಿ ದೀಪಕ್‌ ಸೆರೆ

ಚಂದಾ ಕೋಚರ್‌ ಅವರು ಬ್ಯಾಂಕಿನ ಮುಖ್ಯ​ಸ್ಥೆ​ಯಾ​ಗಿ​ದ್ದಾಗ 2012ರಲ್ಲಿ ವಿಡಿ​ಯೋ​ಕಾನ್‌ ಗ್ರೂಪ್‌ಗೆ ಬ್ಯಾಂಕ್‌ ವತಿಯಿಂದ 3,250 ಕೋಟಿ ರೂ. ಸಾಲ​ ನೀಡಲಾಗಿತ್ತು. ಇದನ್ನು ಮುಂದೆ ವಸೂ​ಲಿ​ಯಾ​ಗದ ಸಾಲ ಎಂದು ಐಸಿ​ಐ​ಸಿಐ ಬ್ಯಾಂಕ್‌ ಘೋಷಿ​ಸಿತ್ತು.

cbi arrests former icici ceo chanda kochhar husband deepak kochhar in videocon loan case ash
Author
First Published Dec 24, 2022, 12:46 PM IST

ನವ​ದೆ​ಹ​ಲಿ: ವಿಡಿ​ಯೋ​ಕಾನ್‌ ಗ್ರೂಪ್‌ಗೆ (Videocon Group) ಸಂಬಂಧಿ​ಸಿ​ದ ಸಾಲ ವಂಚನೆ ಹಗ​ರ​ಣದ ಆರೋ​ಪದ ಮೇಲೆ ಶುಕ್ರ​ವಾರ ಮಾಜಿ ಐಸಿ​ಐ​ಸಿಐ ಬ್ಯಾಂಕ್‌ (ICICI Bank) ಸಿಇಒ ಚಂದಾ ಕೋಚರ್‌ (Chanda Kochhar) ಹಾಗೂ ಅವರ ಪತಿ ದೀಪಕ್‌ ಕೋಚರ್‌ (Deepak Kochhar) ಅವ​ರನ್ನು ಕೇಂದ್ರೀಯ ತನಿಖಾ ದಳ (Central Bureau of Investigation) (ಸಿಬಿಐ) ಬಂಧಿ​ಸಿ​ದೆ. ಏಜೆನ್ಸಿಯ ಪ್ರಧಾನ ಕಚೇರಿಗೆ ಕೋಚಾರ್ ದಂಪತಿಯನ್ನು ಕರೆಸಿಕೊಳ್ಳಲಾಯಿತು,  ಮತ್ತು ಸಂಕ್ಷಿಪ್ತ ವಿಚಾರಣೆಯ ನಂತರ ಸಿಬಿಐ ಅವರನ್ನು ಬಂಧಿಸಿತು. ಈ ಮಧ್ಯೆ, ಇಂದು ಚಂದಾ ಕೋಚರ್‌ ಹಾಗೂ ದೀಪಕ್‌ ಕೋಚರ್‌ ಅವರನ್ನು ಶನಿವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ.

ಕೋಚರ್ ದಂಪತಿ ಸರಿಯಾದ ಉತ್ತರ ನೀಡದೆ ತಪ್ಪಿಸಿಕೊಳ್ಳುತ್ತಿದ್ದರು ಮತ್ತು ತನಿಖೆಗೆ ಸಹಕರಿಸಲಿಲ್ಲ ಎಂದು ಸಿಬಿಐ ಆರೋಪಿಸಿದೆ. ಇನ್ನು, ಅವರ ವೈದ್ಯಕೀಯ ಪರೀಕ್ಷೆಯ ನಂತರ 11 ಅಂತಸ್ತಿನ ಏಜೆನ್ಸಿ ಪ್ರಧಾನ ಕಚೇರಿಯ ನೆಲ ಮಹಡಿಯಲ್ಲಿ ಪ್ರತ್ಯೇಕ ಲಾಕಪ್‌ಗಳಲ್ಲಿ ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಐಸಿಐಸಿಐ ಮಾಜಿ ಸಿಇಒ ಚಂದ್ರ ಕೊಚ್ಚಾರ್ ವಜಾಗೊಳಿಸಿದ್ದು ಸರಿ: ಬಾಂಬೆ ಹೈಕೋರ್ಟ್

ಕ್ರಿಮಿನಲ್ ಪಿತೂರಿ ಮತ್ತು ನಿಬಂಧನೆಗಳಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಸಿಬಿಐ, ಆಕೆಯ ಪತಿ ಚಂದಾ ಕೋಚರ್‌ ಮತ್ತು ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್, ನೂಪುರ್‌ ರಿನ್ಯೂಯೆಬಲ್ಸ್‌  (Nupower Renewables), ಸುಪ್ರೀಮ್ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿ ಆರೋಪಿಯನ್ನಾಗಿ ದಾಖಲಿಸಿದೆ. 

2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಗ್ರೂಪ್ 3,250 ಕೋಟಿ ಸಾಲ ಪಡೆದ ತಿಂಗಳ ನಂತರ ವಿಡಿಯೋಕಾನ್ ಪ್ರವರ್ತಕ ವೇಣುಗೋಪಾಲ್ ಧೂತ್ ನೂಪುರ್‌ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಐಸಿಐಸಿಐ ಬ್ಯಾಂಕ್‌ಗೆ ವಂಚಿಸಲು ಇತರರೊಂದಿಗೆ ಕ್ರಿಮಿನಲ್ ಸಂಚು ರೂಪಿಸಿ ಖಾಸಗಿ ಕಂಪನಿಗಳಿಗೆ ಕೆಲವು ಸಾಲಗಳನ್ನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಸಿಬಿಐ 2019 ರಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಹೇಳಿಕೆಯಲ್ಲಿ ತಿಳಿಸಿದೆ.

ಆಗಸ್ಟ್ 26, 2009 ರಂದು ವಿಡಿಯೋಕಾನ್ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (VIEL) ಗೆ ರೂ 300 ಕೋಟಿ ಮತ್ತು ಅಕ್ಟೋಬರ್ 31, 2011 ರಂದು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ರೂ 750 ಕೋಟಿ - 2 ಸಾಲಗಳನ್ನು ನಿರ್ಧರಿಸುವ ಮಂಜೂರಾತಿ ಸಮಿತಿಯಲ್ಲಿ ಚಂದಾ ಕೋಚರ್‌ ಇದ್ದರು ಎಂದು FIR ಆರೋಪಿಸಿದೆ. ಬ್ಯಾಂಕ್‌ನ ನಿಯಮಗಳನ್ನು ಉಲ್ಲಂಘಿಸಿ ಸಾಲಗಳನ್ನು ನೀಡಲಾಗಿದೆ. ಈ ಸಾಲಗಳಲ್ಲಿ ಹೆಚ್ಚಿನವು ಅನುತ್ಪಾದಕ ಆಸ್ತಿಗಳಾಗಿ ಮಾರ್ಪಟ್ಟಿದ್ದು, ಇದರಿಂದಾಗಿ ಬ್ಯಾಂಕ್‌ಗೆ 1,730 ಕೋಟಿ ರೂಪಾಯಿ ನಷ್ಟವಾಗಿದೆ ಎಂದೂ ಸಿಬಿಐ ಆರೋಪಿಸಿದೆ.

ಇದನ್ನೂ ಓದಿ: ಇಡಿಯಿಂದ ಚಂದಾ ಕೊಚ್ಚಾರ್ ಅವರ ಪತಿ ಉದ್ಯಮಿ ದೀಪಕ್ ಕೊಚ್ಚಾರ್ ಬಂಧನ

ಚಂದಾ ಕೋಚರ್‌ ಅವರು ಬ್ಯಾಂಕಿನ ಮುಖ್ಯ​ಸ್ಥೆ​ಯಾ​ಗಿ​ದ್ದಾಗ 2012ರಲ್ಲಿ ವಿಡಿ​ಯೋ​ಕಾನ್‌ ಗ್ರೂಪ್‌ಗೆ ಬ್ಯಾಂಕ್‌ ವತಿಯಿಂದ 3,250 ಕೋಟಿ ರೂ. ಸಾಲ​ ನೀಡಲಾಗಿತ್ತು. ಇದನ್ನು ಮುಂದೆ ವಸೂ​ಲಿ​ಯಾ​ಗದ ಸಾಲ ಎಂದು ಐಸಿ​ಐ​ಸಿಐ ಬ್ಯಾಂಕ್‌ ಘೋಷಿ​ಸಿತ್ತು. ಇದಕ್ಕೆ ‘ಪ್ರತಿಫಲ’ವಾಗಿ ವಿಡಿಯೋಕಾನ್‌ ಗ್ರೂಪ್‌ನ ವೇಣುಗೋಪಾಲ್‌ ಧೂತ್‌ ಅವರು ಚಂದಾ ಅವರ ಪತಿ ದೀಪಕ್‌ ಕೋಚರ್‌ ಅವರಿಗೆ ಸಂಬಂಧಿಸಿದ ‘ನೂಪುರ್‌ ರಿನ್ಯೂಯೆಬಲ್ಸ್‌’ ಎಂಬ ಕಂಪನಿಯಲ್ಲಿ ಪರೋಕ್ಷವಾಗಿ ಬಂಡವಾಳ ಹೂಡಿಕೆ ಮಾಡಿದ್ದರು. ಇದ​ರಿಂದಾಗಿ ದೀಪಕ್‌ ಕೋಚರ್‌ ಅವರಿಗೆ ಭಾರಿ ಲಾಭವಾಗಿತ್ತು ಎಂದು ಹೇಳಲಾಗಿದೆ.

ಇದೇ ಆರೋ​ಪದ ಮೇಲೆ 2018 ಅಕ್ಟೋ​ಬ​ರ್‌​ನಲ್ಲಿ ಚಂದಾ ಕೋಚರ್‌ ಬ್ಯಾಂಕ್‌ ಸಿಇಒ ಹುದ್ದೆ​ಯಿಂದ ಕೆಳ​ಗಿ​ಳಿ​ದಿ​ದ್ದರು. ಬಳಿಕ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ವಿಚಾರಣೆಗೆ ಒಳಪಡಿಸಲಾಗಿತ್ತು. ಇನ್ನು ಇದೇ ಪ್ರಕರಣದಲ್ಲಿ ಈ ಹಿಂದೆ ದೀಪಕ್‌ ಕೋಚರ್‌ ಒಮ್ಮೆ ಬಂಧನಕ್ಕೆ ಒಳಗಾಗಿದ್ದರು.

Follow Us:
Download App:
  • android
  • ios