ದೊಡ್ಡ ಪ್ರಮಾಣದ ಸಂಪತ್ತಿಗಿಂತ ಸಾಮಾಜಿಕ ಬದಲಾವಣೆ ಮುಖ್ಯ ಎಂದು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಜನರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆ ಎನ್ನುವುದರ ಮೇಲೆ ವ್ಯವಹಾರದ ಯಶಸ್ಸು ಅಡಗಿದೆ ಎಂದಿದ್ದಾರೆ. ಜಿಯೋ ಆರಂಭದ ಹಿಂದಿನ ಉದ್ದೇಶ ಮತ್ತು ಅದರ ಯಶಸ್ಸಿನ ಕುರಿತು ವಿವರಿಸಿದ್ದಾರೆ.
ಮುಂಬೈ (ಜೂ.26): ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬಿಲಿಯನೇರ್ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ, ದೇಶದ ಯುವ ಉದ್ಯಮಿಗಳಿಗೆ ದೊಡ್ಡ ಕಿವಿಮಾತು ಹೇಳಿದ್ದಾರೆ. ದೊಡ್ಡ ಪ್ರಮಾಣದ ವೈಯಕ್ತಿಕ ಸಂಪತ್ತನ್ನು ಬೆನ್ನಟ್ಟುವುದು ಬಿಟ್ಟು, ದೊಡ್ಡ ಪ್ರಮಾಣದ ಸಾಮಾಜಿಕ ಬದಲಾವಣೆಯತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಮೆಕಿನ್ಸೆ & ಕಂಪನಿಯ ಲೀಡಿಂಗ್ ಏಷ್ಯಾ ಸೀರೀಸ್‌ಗಾಗಿ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮುಕೇಶ್ ಅಂಬಾನಿ, ವ್ಯವಹಾರವೊಂದರ ಯಶಸ್ಸಿನ ಹಾದಿಯು ನಿಮ್ಮ ಬ್ಯಾಂಕ್ ಖಾತೆಗಳಿಂದ ನಿರ್ಣಯವಾಗೋದಿಲ್ಲ. ಬದಲಿಗೆ ಜನರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆ ಅನ್ನೋದರ ಮೇಲೆ ಯಶಸ್ಸು ಅಡಗಿದೆ ಎಂದಿದ್ದಾರೆ.
ಮುಕೇಶ್ ಅಂಬಾನಿ ಈ ವೇಳೆ ತಮ್ಮ ತಂದೆ ಮತ್ತು ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಹೇಳಿದ್ದ ಮಾತನ್ನು ನೆನಪಿಸಿಕೊಂಡರು. 'ಕೋಟ್ಯಧಿಪತಿಯಾಗಬೇಕು ಎನ್ನುವ ನಿಟ್ಟಿನಲ್ಲಿ ನೀನು ವ್ಯವಹಾರ ಆರಂಭಿಸಲು ಬಯಸಿದರೆ, ಇನ್ನಷ್ಟು ಮೂರ್ಖ ಮತ್ತೊಬ್ಬನ್ನಿಲ್ಲ. ಆದರೆ, ನೀನು ಒಂದು ಶತಕೋಟಿ ಜನರ ಮೇಲೆ ಪರಿಣಾಮ ಬೀರುವ ವ್ಯವಹಾರ ಆರಂಭ ಮಾಡಲು ಬಯಸಿದರೆ ನಿಮಗೆ ಯಶಸ್ಸಿನ ಉತ್ತಮ ಅವಕಾಶವಿದೆ. ಯಾಕೆಂದರೆ, ಆಗ ಯಶಸ್ಸು ಉಪ ಉತ್ಪನ್ನವಾಗಿರುತ್ತಿದೆ. ಒಂದಷ್ಟು ಮಟ್ಟಿಗೆ ನೀನು ಹಣ ಕೂಡ ಗಳಿಸಬಹುದು' ಎಂದಿದ್ದರು.
ನನ್ನ ತಂದೆ ಹೇಳಿದ ಇದೇ ಮಂತ್ರವೇ ರಿಲಯನ್ಸ್ ಇಂಡಸ್ಟ್ರೀಸ್‌ನ ಯಶಸ್ಸಿಗೆ ಕಾರಣ. ಇದೇ ಮಂತ್ರದೊಂದಿಗೆ ನಾನು 2016ರಲ್ಲಿ ರಿಲಯನ್ಸ್ ಜಿಯೋವನ್ನು ಆರಂಭ ಮಾಡಿದ್ದೆವು. ಈಗಲೂ ಹೇಳುತ್ತೇನೆ. ಇದು ನಾನು ತೆಗೆದುಕೊಂಡ ಜೀವನದ ಅತಿದೊಡ್ಡ ರಿಸ್ಕ್. ಆ ಸಮಯದಲ್ಲಿ ಉದ್ಯಮದ ವಿಶ್ಲೇಷಕರು, ಟೆಲಿಕಾಮ್ ಕ್ಷೇತ್ರದಲ್ಲಿ ಮಾಡುವ ಈ ಗ್ಯಾಂಬಲ್ ಖಂಡಿತಾಗಿ ಫೇಲ್ ಆಗಲಿದೆ ಎಂದಿದ್ದರು. ಆದರೆ, ಭಾರತವನ್ನು ಡಿಜಿಟಲ್ ಮಾಡುವ ಏಕೈಕ ಗುರಿಯಲ್ಲಿ ನಾವು ನಿಂತಿದ್ದೆವು. ದೊಡ್ಡ ಸಮುದಾಯದಲ್ಲಿ ಇಂಟರ್ನೆಟ್‌ಅನ್ನು ಅತಿ ಕಡಿಮೆ ಬೆಲೆಗೆ ತಲುಪಿಸುವ ಉದ್ದೇಶ ನಮ್ಮದಾಗಿತ್ತು ಎಂದಿದ್ದಾರೆ.
'ನಾವು ಜಿಯೋ ಅನಾವರಣ ಮಾಡಿದಾಗ, ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದೇವೆ ಅನಿಸಿತ್ತು. ಆದರೆ, ಹಾಗೇನಾದರೂ ಯಶಸ್ಸು ಕಂಡದಲ್ಲಿ ಖಂಡಿತವಾಗಿ ನಾವು ಭಾರತದ ಚಹರೆಯನ್ನೇ ಬದಲಿಸಲಿದ್ದೇವೆ ಎಂದು ಅನಿಸಿತ್ತು' ಎಂದಿದ್ದಾರೆ.
ಜಿಯೋಗೆ ಸಂಪೂರ್ಣವಾಗಿ ಹಣ ಹೂಡಿದ್ದು ರಿಲಯನ್ಸ್. ಇದರಿಂದಾಗಿ ಜಿಯೋ ಉಚಿತ ಧ್ವನಿ ಕರೆಗಳು, ಅತೀ ಕಡಿಮೆ ಬೆಲೆಯ ಡೇಟಾ ಪ್ಯಾಕ್‌ಗಳನ್ನು ನೀಡಲು ಸಾಧ್ಯವಾಯಿತು. ಇದು ಇಡೀ ಟೆಲಿಕಾಂ ಕ್ಷೇತ್ರವನ್ನೇ ಒಂದು ಸಮಯದವರೆಗೆ ಅಲ್ಲೋಲ ಕಲ್ಲೋಲ ಮಾಡಿತು. ಅದರೊಂದಿಗೆ ದೇಶದ ಬಹುತೇಕ ಜನರಿಗೆ ಇಂಟರ್ನೆಟ್ ಕೈಗೆಟುಕುವಂತಾಯಿತು. ಇದರ ಫಲಿತಾಂಶ ಎನ್ನುವಂತೆ 800 ಮಿಲಿಯನ್ ಭಾರತೀಯರು ಆನ್‌ಲೈನ್‌ಗೆ ಬಂದರು. ಗ್ರಾಮ, ಕುಗ್ರಾಮಗಳಿಗೆ ಡಿಜಿಟಲ್ ಮುಟ್ಟಿತು. ಡಿಜಿಟಲ್ ಶಿಕ್ಷ, ಇ-ಕಾಮರ್ಸ್, ಫಿನ್‌ಟೆಕ್ ಮತ್ತು ಎಂಟರ್‌ಟೇನ್‌ಮೆಂಟ್ ಎಲ್ಲವೂ ಕೈಗೆ ಸಿಗುವಂತಾಯಿತು ಎಂದಿದ್ದಾರೆ.
ನಮ್ಮ ದೊಡ್ಡ ಸಾಮಾಜಿಕ ಕಾರ್ಯ ಎಂದುಕೊಳ್ಳುತ್ತಿದ್ದೆ
ಹಾಗೇನಾದರೂ ಜಿಯೋ ಯಶಸ್ಸು ಕಾಣದೇ ಇದ್ದಲ್ಲಿ ಇದು ರಿಲಯನ್ಸ್ ಕಂಪನಿ ಮಾಡಿದ ದೊಡ್ಡ ಸಾಮಾಜಿಕ ಕಾರ್ಯ ಎಂದುಕೊಳ್ಳುತ್ತಿದ್ದೆ ಎಂದು ಅಂಬಾನಿ ಹೇಳಿದ್ದಾರೆ. 'ಒಂದು ವೇಳೆ ಜಿಯೋ ಆರ್ಥಿಕವಾಗಿ ಯಶಸ್ವಿಯಾಗದಿದ್ದರೆ, ಅದು ರಿಲಯನ್ಸ್ ಇದುವರೆಗೆ ಮಾಡಿದ ಅತ್ಯಂತ ದೊಡ್ಡ ಲೋಕೋಪಕಾರ ಕಾರ್ಯವಾಗುತ್ತಿತ್ತು" ಎಂದು ಅಂಬಾನಿ ಹೇಳಿದ್ದಾರೆ.
ಇಂದು, ಜಿಯೋ 470 ಮಿಲಿಯನ್‌ಗಿಂತಲೂ ಹೆಚ್ಚು ಯೂಸರ್‌ಗಳನ್ನು ಹೊಂದಿದೆ ಮತ್ತು 5G, AI ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ಮುಂದಿನ ಪೀಳಿಗೆಯ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿದೆ. ರಿಲಯನ್ಸ್ ಜಿಯೋದ 80% ಮೂಲಸೌಕರ್ಯವನ್ನು ಆಂತರಿಕವಾಗಿ ನಿರ್ಮಿಸಿದೆ, ಕೇವಲ ವ್ಯಾಲಿಡೇಷನ್ ಉದ್ದೇಶಗಳಿಗಾಗಿ ನೋಕಿಯಾ ಮತ್ತು ಎರಿಕ್ಸನ್‌ನಂತಹ ಜಾಗತಿಕ ಕಂಪನಿಗಳನ್ನು ಅವಲಂಬಿಸಿದೆ ಎಂದು ಅಂಬಾನಿ ಹೆಮ್ಮೆಯಿಂದ ಹೇಳಿದ್ದಾರೆ.
ಉದ್ಯಮಿಗಳಿಗೆ ಅಂಬಾನಿಯವರ ಸಂದೇಶವು ದೂರಸಂಪರ್ಕವನ್ನು ಮೀರಿದ್ದಾಗಿದೆ. ಸ್ಪಷ್ಟ, ಅಚಲ ಗುರಿಯನ್ನು ಹೊಂದಿಸುವಲ್ಲಿ ಮತ್ತು ಆ ದೃಷ್ಟಿಕೋನವು ಪ್ರತಿಯೊಂದು ವ್ಯವಹಾರ ನಿರ್ಧಾರವನ್ನು ಮಾರ್ಗದರ್ಶನ ಮಾಡುವಂತೆ ನೋಡಿಕೊಳ್ಳುವಲ್ಲಿ ಅವರು ನಂಬಿಕೆ ಇಡುತ್ತಾರೆ. "ನನಗೆ ಇಷ್ಟವಾದ ಒಂದು ಮಾತಿದೆ. ನೀವು ಅಡೆತಡೆಗಳ ಮೇಲೆ ಗಮನ ಕೇಂದ್ರೀಕರಿಸಿದರೆ, ನೀವು ಎಂದಿಗೂ ನಿಮ್ಮ ಗುರಿಗಳನ್ನು ತಲುಪುವುದಿಲ್ಲ; ಆದರೆ ನೀವು ನಿಮ್ಮ ಗುರಿಯ ಮೇಲೆ ಕೇಂದ್ರೀಕರಿಸಿದರೆ, ನೀವು ಎಲ್ಲಾ ಅಡೆತಡೆಗಳನ್ನು ದಾಟಿ ಹೋಗುತ್ತೀರಿ' ಎನ್ನುವುದು. ಉದ್ದೇಶದ ಈ ಸ್ಪಷ್ಟತೆಯೇ ರಿಲಯನ್ಸ್ ಪ್ರತಿ 3–5 ವರ್ಷಗಳಿಗೊಮ್ಮೆ ತನ್ನನ್ನು ತಾನು ಮರುಶೋಧಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ರಾಷ್ಟ್ರೀಯ ಪರಿವರ್ತನೆಯ ತನ್ನ ಧ್ಯೇಯಕ್ಕೆ ನಿಜವಾಗಿ ಉಳಿಯುವಾಗ ಬದಲಾವಣೆಯೊಂದಿಗೆ ವೇಗವನ್ನು ಕಾಯ್ದುಕೊಳ್ಳುತ್ತದೆ.
ರಿಲಯನ್ಸ್‌ನ ಮುಂದಿನ ದೊಡ್ಡ ರೂಪಾಂತರವು ಆಳವಾದ ತಂತ್ರಜ್ಞಾನ ಮತ್ತು ಮುಂದುವರಿದ ಉತ್ಪಾದನಾ ಕಂಪನಿಯಾಗಲಿದೆ ಎಂದು ಅಂಬಾನಿ ಹೇಳಿದರು. ಭಾರತಕ್ಕೆ ನಾವೀನ್ಯತೆಯನ್ನು ಆಮದು ಮಾಡಿಕೊಳ್ಳುವ ಯುಗ ಮುಗಿದಿದೆ ಎಂದು ಅವರು ನಂಬುತ್ತಾರೆ. "ನನ್ನ ಆರಂಭಿಕ ವರ್ಷಗಳಲ್ಲಿ, ಭಾರತವು ತಂತ್ರಜ್ಞಾನಕ್ಕೆ ಪರವಾನಗಿ ನೀಡಿತು ಮತ್ತು ನಿಯಂತ್ರಣದ ಭಯದಲ್ಲಿ ಬದುಕುತ್ತಿತ್ತು. ಈಗ, ನಾವು ತಂತ್ರಜ್ಞಾನದ ಮಾಲೀಕರಾಗಬೇಕು. ನಾವು ನಾವೀನ್ಯಕಾರರಾಗಿರಬೇಕು." ಅವರ ದೃಷ್ಟಿಕೋನವು ಮುಂದಿನ ಪೀಳಿಗೆಯ ರಿಲಯನ್ಸ್ ಲೀಡರ್‌ಗಳಿಗೆ ದಿಟ್ಟ ಹೆಜ್ಜೆಗಳನ್ನು ಇಡಲು ಮತ್ತು ಜಾಗತಿಕ ಮಾನದಂಡಗಳಿಗೆ ಸರಿಹೊಂದುವ ಮತ್ತು ಮೀರುವ ಸ್ಥಳೀಯ ಸಾಮರ್ಥ್ಯಗಳನ್ನು ನಿರ್ಮಿಸಲು ಅಧಿಕಾರ ನೀಡುವುದನ್ನು ಒಳಗೊಂಡಿದೆ.
