Asianet Suvarna News Asianet Suvarna News

ಫಿಕ್ಸೆಡ್ ಡೆಪಾಸಿಟ್ ಉಳಿತಾಯ ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡುತ್ತಾ?

ಆರ್ಥಿಕ ಸಂಕಷ್ಟದ ಸಮಯದಲ್ಲಿ ಹಣಕಾಸಿನ ಸ್ಥಿರತೆ ಕಾಪಾಡಿಕೊಳ್ಳಲು ಫಿಕ್ಸೆಡ್ ಡೆಪಾಸಿಟ್ ಸಹಾಯ ಮಾಡುತ್ತದೆಯೇ ಎಂಬುದನ್ನು ತಿಳಿಯಿರಿ. ಈ ಲೇಖನದಲ್ಲಿ ಎಫ್‌ಡಿಗಳ ಪ್ರಯೋಜನಗಳು, ಅನಾನುಕೂಲಗಳು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ತಿಳಿಯಿರಿ.

Can Fixed Deposits Save You from a Financial Crisis san
Author
First Published Sep 27, 2024, 1:47 PM IST | Last Updated Sep 27, 2024, 1:47 PM IST

ವೇತನ, ಉದ್ಯಮ, ಆದಾಯ ಏನೇ ಇದ್ದರೂ ಆರ್ಥಿಕ ಸಂಕಷ್ಟ, ಅನಿಶ್ಚಿತತೆ ಎದುರಾದಾಗ ಆರ್ಥಿಕವಾಗಿ ಎದುರಿಸುವುದು ಅತೀ ದೊಡ್ಡ ಸವಾಲು. ಬಹುತೇಕರು ತಮ್ಮ ಆದಾಯದಲ್ಲಿ ಸಣ್ಣ ಉಳಿತಾಯ ಸೇರಿದಂತೆ ಹಲವು ರೀತಿಯ ಹೂಡಿಕೆ ಮೂಲಕ ತಮ್ಮ ಆದಾಯ, ಹಾಗೂ ಬದುಕಿನಲ್ಲಿ ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಇದರಿಂದ ಸುಭದ್ರ ಆದಾಯ ಕೈಸೇರುವಂತೆ ಮಾಡುತ್ತಾರೆ. ಈ ರೀತಿಯ ಆದಾಯ ಸುರಕ್ಷತೆಗೆ ಸಂಪ್ರಾದಾಯಿಕ ಹಾಗೂ ಜನಪ್ರಿಯ ಮಾರ್ಗ ಫಿಕ್ಸೆಡ್ ಡೆಪಾಸಿಟ್ ಅಥವಾ ಸ್ಠಿರ ಠೇವಣಿ((FDs). ಆದರೆ ಈ ಫಿಕ್ಸೆಡ್ ಡೆಪಾಸಿಟ್ ನಿಮ್ಮನ್ನು ಆರ್ಥಿಕ ಸಮಸ್ಯೆಯಿಂದ ಪಾರುಮಾಡುತ್ತಾ? ಈ ಫಿಕ್ಸೆಡ್ ಡೆಪಾಸಿಟ್ ಹೇಗೆ ಕಾರ್ಯನಿರ್ವಹಿಸುತ್ತದೆ? ಪ್ರಯೋಜನಗಳೇನು? ಸಂಕಷ್ಟದ ಸಮಯದಲ್ಲಿ ಈ ಎಫ್‌ಡಿ ನಿಮ್ಮ ಜೀವನದ ಆರ್ಥಿಕ ಸಮಸ್ಯೆಗೆ ಹೇಗೆ ಉತ್ತರವಾಗುತ್ತದೆ ಅನ್ನೋದು ತಿಳಿಯೋಣ.

ಫಿಕ್ಸೆಡ್ ಡೆಪಾಸಿಟ್ ಎಂದರೇನು?
ಫಿಕ್ಸೆಡ್ ಡೆಪಾಸಿಟ್ ಸರಳ ಮಾತಿನಲ್ಲೇ ಹೇಳುವುದಾದರೆ ಶುರಕ್ಷತೆಯ ಉಳಿತಾಯ ಯೋಜನೆ. ಬ್ಯಾಂಕ್, ಹಣಕಾಸು ಸಂಸ್ಥೆಗಳು ನೀಡುವ ಉಳಿತಾಯ ಖಾತೆ ಇದಾಗಿದೆ. ದೊಡ್ಡ ಮೊತ್ತವನ್ನು ನಿಗದಿತ ಅವಧಿಗೆ, ನಿಗದಿತ ಬಡ್ಡಿದರಕ್ಕೆ ಠೇವಣಿ ಇಡುವುದು. ನಿಶ್ಚಿತ ಬಡ್ಡಿ, ನಿಶ್ಚಿತ ಅವಧಿಯಲ್ಲಿ ನಿಮ್ಮ ಠೇವಣಿ ಹಣಕ್ಕೆ ಬಡ್ಡಿ ಸಹಿತ ದೊಡ್ಡ ಮೊತ್ತವಾಗಿ ಬೆಳೆಯಲಿದೆ. ಉಳಿತಾಯ ಖಾತೆಗಳಲ್ಲಿ ಬಡ್ಡಿದರ ವ್ಯತ್ಯಾಸವಾಗುತ್ತದೆ. ಆದರೆ ಇಲ್ಲಿ ಬಡ್ಡಿದರ ಮೊದಲೇ ನಿಗದಿಪಡಿಸಲಾಗಿರುತ್ತದೆ. ಈ ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಮಾರುಕಟ್ಟೆಯಲ್ಲಿ ಅದೆಂತಾ ಬಿರುಗಾಳಿಯೇ ಎದ್ದರೂ ಮೊದಲೆ ನಿರ್ಧರಿಸಿರುವ ಬಡ್ಡಿ ಹಾಗೂ ರಿಟರ್ಸ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೀಗಾಗಿ ಫಿಕ್ಸೆಡ್ ಡೆಪಾಸಿಟ್ ಸುರಕ್ಷಿತ ಹೂಡಿಕೆ ಎಂದೇ ಜನಜನಿತವಾಗಿದೆ.

ಫಿಕ್ಸೆಡ್ ಡೆಪಾಸಿಟ್ ಪ್ರಯೋಜನವೇನು?

1.ಗ್ಯಾರೆಂಟಿ ರಿಟರ್ನ್: ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಪ್ರಮುಖ ಹಾಗೂ ಅತ್ಯಂತ ಮುಖ್ಯ ಅಂಶ ಎಂದರೆ ನೀವು ಠೇವಣಿ ಇಟ್ಟ ಮೊತ್ತಕ್ಕೆ ಯಾವುದೇ ಅಪಾಯ ಇರುವುದಿಲ್ಲ. ನಿಗದಿತ ಅವಧಿ ಮುಗಿದ ಬೆನ್ನಲ್ಲೇ ಬಡ್ಡಿ ಸಮೇತ ಈ ಮೊತ್ತ ನಿಮ್ಮ ಕೈಸೇರಲಿದೆ. ಹೂಡಿಕೆ ಮಾಡುವಾಗಲೇ ನಿಮಗೆ ಅವಧಿ ಮುಗಿಯುವಾಗ ಎಷ್ಟು ಮೊತ್ತ ಕೈಸೇರಲಿದೆ ಅನ್ನೋದು ತಿಳಿದಿರುತ್ತದೆ. ಮಾರುಕಟ್ಟೆ, ಆರ್ಥಿಕ ಹಿಂಜರಿತ ಸೇರಿದಂತೆ ಯಾವುದೇ ಸವಾಲು ಎದುರಾದರೆ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಯಾವುದೇ ವ್ಯತ್ಯಾಸವಾಗಲ್ಲ. ಇದು ಸ್ಥಿರ ಆದಾಯದ ಭರವಸೆ ನೀಡುತ್ತದೆ.

2.ಹೂಡಿಕೆಯಲ್ಲಿ ಇಲ್ಲ ಯಾವುದೇ ರಿಸ್ಕ್: ಷೇರು ಮಾರುಕಟ್ಟೆ ಹೂಡಿಕೆ, ಮ್ಯೂಚ್ಯುವಲ್ ಫಂಡ್ ಹೂಡಿಕೆಗಳಲ್ಲಿ ಮಾರುಕಟ್ಟೆಯ ಅಪಾಯ, ತಲ್ಲಣಗಳು ಹೂಡಿಕೆ ಮೇಲೂ ಪರಿಣಾಮ ಬೀರುತ್ತದೆ. ಆದರೆ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಈ ರೀತಿಯ ಯಾವುದೇ ಅಪಾಯವಿಲ್ಲ. ಮಾರುಕಟ್ಟೆಯಲ್ಲಿ ಯಾವುದೇ ಏರಿಳಿತವಾದರೂ ಸ್ಛಿರ ಠೇವಣಿಗೆ ಸಮಸ್ಯೆ ಇಲ್ಲ. ಹೇಗೆಂದರೆ ನೀವು ಹಾಕಿಡ ಅಸಲಿ ಮೊತ್ತ ಹಾಗೂ ಅದಕ್ಕೆ ಸಿಗಬೇಕಾದ ಬಡ್ಡಿಯಲ್ಲಿ ಒಂದು ಪೈಸೆಯೂ ಕಡಿಮೆಯಾಗಲ್ಲ. ದೇಶ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಆರ್ಥಿಕ ಹಿಂಜರಿತ, ಹಣಕಾಸುವ ಸವಾಲುಗಳ ನಡುವೆಯೂ ರಿಸ್ಕ್ ಫ್ರೀ ಹೂಡಿಕೆಯಿಂದಲೆ ಫಿಕ್ಸೆಡ್ ಡೆಪಾಸಿಟ್ ಬಹುತೇಕರ ಮೊದಲ ಆಯ್ಕೆಯಾಗಿರುತ್ತದೆ.

3. ಹೂಡಿಕೆ ಅವಧಿಯಲ್ಲಿ ಫ್ಲೆಕ್ಸಿಬಿಲಿಟಿ: ಫಿಕ್ಸೆಡ್ ಡೆಪಾಸಿಟ್‌ ಹೂಡಿಕೆ ಹೆಚ್ಚು ಸರಳ ಹಾಗೂ ಸುಲಭ. ಹೂಡಿಕೆಯ ಅವಧಿ ಅಂದರೆ ಕೆಲ ತಿಂಗಳಿನಿಂದ ಹಿಡಿದು ಸುದೀರ್ಘ ವರ್ಷಗಳ ಅವಧಿ ವರೆಗೆ ಹೂಡಿಕೆ ಮಾಡಲು ಅನುಮತಿಸುತ್ತದೆ. ಇದರಿಂದ ನಿಮ್ಮ ಆರ್ಥಿಕ ಬೇಡಿಕೆ, ರಿಟರ್ನ್ಸ್‌ಗೆ ಅನುಗುಣವಾಗಿ ಹೂಡಿಕೆ ಮಾಡಿ ರಿಟರ್ಸ್ ಪಡೆದುಕೊಳ್ಳಲು ಈ ಯೋಜನೆಯಡಿಯಲ್ಲಿ ಸಾಧ್ಯ. ಆರ್ಥಿಕ ಸಮಸ್ಯೆಗಳು, ಸವಾಲುಗಳಿದ್ದರೆ ಕಡಿಮೆ ಅವಧಿಯ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮಾಡಿ, ನಗದು ಹಣ ನಿಮ್ಮ ಕೈಯಲ್ಲಿರುವಂತೆ ನೋಡಿಕೊಳ್ಳಬಹುದು.

4. ಎಫ್‌ಡಿ ಖಾತೆ ತೆರೆಯುವುದು ನಿರ್ವಹಿಸುವುದು ಸುಲಭ: ಎಫ್‌ಡಿ ಖಾತೆ ತೆರೆಯುವುದು ಹಾಗೂ ನಿರ್ವಹಿಸುವುದು ಅತ್ಯಂತ ಸುಲಭ. ಬಹುತೇಕ ಬ್ಯಾಂಕ್‌ಗಳು ಫಿಕ್ಸೆಡ್ ಡೆಪಾಸಿಟ್ ಯೋಜನೆ ಒದಗಿಸುತ್ತದೆ. ಆನ್‌ಲೈನ್ ಮೂಲಕವೇ ಖಾತೆ ತೆರೆದು ಹೂಜಿಕೆ ಮಾಡಬಹುದು. ಇದಕ್ಕಾಗಿ ಬ್ಯಾಂಕ್ ತೆರಳುವ ಯಾವುದೇ ಅವಶ್ಯಕತೆ ಇರುವುದಿಲ್ಲ. ಆನ್‌ಲೈನ್ ಮೂಲಕವೇ ಖಾತೆ ನಿರ್ವಹಿಸಲು ಸಾಧ್ಯ. ಈ ರೀತಿಯ ಸುಲಭ ನಿರ್ವಹಣೆಯಿಂದ ನಿಮ್ಮ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಇದು ನೆರವಾಗಲಿದೆ.

5. ಹಿರಿಯ ನಾಗರೀಕರಿಗೆ ಹಲವು ಪ್ರಯೋಜನ: ಫಿಕ್ಸೆಡ್ ಡೆಪಾಸಿಟ್ ಕೂಡ ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿದರ ನೀಡಲಿದೆ. ಎಫ್‌ಡಿ ಯೋಜನೆಯಡಿ ಠೇವಣಿ ಇಡುವ ಹಿರಿಯ ನಾಗರೀಕರು ಹೆಚ್ಚುವರಿ ಬಡ್ಡಿದರ ಸೇರಿದಂತೆ ಇತರ ಪ್ರಯೋಜನ ಪಡೆಯಲಿದ್ದಾರೆ. ಇದು ಆರ್ಥಿಕ ಸವಾಲು ಎದುರಿಸಲು ಹಾಗೂ ಕಡಿಮೆ ಠೇವಣಿಯಲ್ಲಿ ಗರಿಷ್ಠ ಮೊತ್ತ ರಿಟರ್ಸ್ ಪಡೆಯಲು ಸಾಧ್ಯವಾಗಲಿದೆ.

ನಿಮ್ಮ ಆರ್ಥಿಕ ಬಿಕ್ಕಟ್ಟು ಪರಿಹರಿಸಲು ಫಿಕ್ಸೆಡ್ ಡೆಪಾಸಿಟ್ ಹೇಗೆ ನೆರವಾಗುತ್ತದೆ?

1.ಆರ್ಥಿಕ ಸ್ಥಿರತೆ: ಎಫ್‌ಡಿ ಸ್ಥಿರ ಆದಾಯದ ಮೂಲ. ಇದರಲ್ಲಿ ಯಾವುದೇ ಚಿಂತೆ ಇಲ್ಲ. ಈ ಸ್ಥಿರ ಆದಾಯ ನಿಮ್ಮ ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ ನೆರವಾಗಲಿದೆ. ತಿಂಗಳ ಸ್ಯಾಲರಿ ನಿಂತುಹೋದಾಗ,ಕೆಲಸ ಕಳೆದುಕೊಂಡಾಗ, ಉದ್ಯಮ ನಷ್ಟಕ್ಕೆ ಬಿದ್ದಾಗ ಸೇರಿದಂತೆ ಅನಿರೀಕ್ಷಿತ ಆರ್ಥಿಕ ಬಿಕ್ಕಟ್ಟು ಎದುರಿಸಲು ಈ ಸ್ಥಿರ ಠೇವಣಿ ಆದಾಯವಾಗಲಿದೆ. ಎಫ್‌ಡಿ ಗ್ಯಾರೆಂಟಿ ರಿಟರ್ನ್ಸ್‌ನಿಂದ ಮೂಲಭೂತ ಅಗತ್ಯತೆಗಳನ್ನು ನಿರ್ವಹಿಸಲು ಸಾಧ್ಯವಿದೆ.

2.ತುರ್ತು ನಿಧಿ: ಆರ್ಥಿಕ ಹಿಂಜರಿತ, ಮಾರುಕಟ್ಟೆಯಲ್ಲಿನ ಏರಿಳಿತ ಸಂದರ್ಭದಲ್ಲಿ ಇತರ ಹೂಡಿಕೆಗಳ ಬಡ್ಡಿ ಹಾಗೂ ರಿಟರ್ನ್ಸ್‌ನಲ್ಲಿ ವ್ಯತ್ಯಾಸವಾಗಲಿದೆ. ಆದರೆ ಎಫ್‌ಡಿಯಲ್ಲಿ ಸ್ಥಿರ ಆದಾಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ನಿಧಿಯ ರೂಪದಲ್ಲಿ ಬಳಕೆಯಾಗುತ್ತದೆ. ಎಫ್‌ಡಿಯಲ್ಲಿನ ಅಸಲು ಮೊತ್ತವನ್ನು ಬದಿಗಿಟ್ಟು ಅವಶ್ಯಕತೆ ಇದ್ದಾಗ ಎಪ್‌ಡಿ ಕೈಹಿಡಯಲಿದೆ.

3.ಮಾರುಕಟ್ಟೆ ಅಪಾಯವಿಲ್ಲ: ಹಣಕಾಸು ಬಿಕ್ಕಟ್ಟು, ಆರ್ಥಿಕ ಹಿಂಜರಿತ ಸಂದರ್ಭದಲ್ಲಿ ಷೇರು ಹೂಡಿಕೆ, ಮ್ಯೂಚ್ಯುವಲ್ ಫಂಡ್‌ಗಳಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಆದರೆ ಎಫ್‌ಡಿ ಖಚಿತ ಆದಾಯ ನೀಡುತ್ತದೆ. ಇದು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ರಕ್ಷಿಸುತ್ತದೆ. ಇತರ ಹೂಡಿಕೆ ಯೋಜನೆಗಳು ನಷ್ಟದಲ್ಲಿದ್ದರೆ, ಎಫ್‌ಡಿ ನಿಮ್ಮ ಠೇವಣಿ ಹಾಗೂ ಸಂಪತ್ತಿಗೆ ಯಾವುದೇ ಧಕ್ಕೆ ತರುವುದಿಲ್ಲ.

4.ಹಣಕಾಸಿನ ಅವಕಾಶ: ಹಲವು ಫಿಕ್ಸೆಡ್ ಡೆಪಾಸಿಟ್ ಯೋಜನೆಗಳು ನಿಗದಿತ ಅವಧಿಗಿಂತ ಮೊದಲೇ ಹಣ ಹಿಂಪಡೆಯಲು ಅವಕಾಶ ನೀಡುತ್ತದೆ. ಆದರೆ ಸಣ್ಣ ಪ್ರಮಾಣದ ಪೆನಾಲ್ಟಿ ಅನ್ವಯಿಸುತ್ತದೆ. ತುರ್ತು ಹಣದ ಅವಶ್ಯಕತೆ ಇದ್ದಾಗಿ ಅವಧಿಗೂ ಮೊದಲೇ ಫಿಕ್ಸೆಡ್ ಡೆಪಾಸಿಟ್ ಹಣ ಪಡೆಯಲು ಸಾಧ್ಯವಿದೆ. ಫಿಕ್ಸೆಡ್ ಡೆಪಾಸಿಟ್ ಯೋಜನೆ ಆಯ್ಕೆ ಮಾಡುವಾಗ ಷರತ್ತುಗಳ ಕೂಲಂಕುಷವಾಗಿ ಪರಿಶೀಲಿಸಬೇಕು. ಸ್ಥಿರ ಆದಾಯದ ಸೌಲಭ್ಯ ಪಡೆಯುವ ಜೊತೆಗೆ ತುರ್ತು ಸಂದರ್ಭದಲ್ಲಿ ಲಿಕ್ವಿಟಿಡಿ ಕಾಪಾಡಿಕೊಳ್ಳಲು ಈ ಯೋಜನೆ ಅನುವು ಮಾಡುತ್ತದೆ.

5.ಆರ್ಥಿಕ ಶಿಸ್ತು: ಹಣಕಾಸು ಶಿಸ್ತು ಅತೀ ಅಗತ್ಯ. ಫಿಕ್ಸೆಡ್ ಡೆಪಾಸಿಟ್‌ನಲ್ಲಿ ನಿಗದಿತ ಅವಧಿಗೆ ನಿಮ್ಮ ಸ್ಠಿರ ಠೇವಣಿಯನ್ನು ಲಾಕ್ ಮಾಡಿಕೊಳ್ಳುವುದು ಉತ್ತಮ. ದಿಢೀರ್ ಬೆಳವಣಿಗೆಯಿಂದ ಸ್ಥಿರ ಠೇವಣಿ ಖರ್ಚಾಗದಂತೆ ಈ ಶಿಸ್ತು ತಡೆಯಲಿದೆ. ಶಿಸ್ತುಬದ್ಧ ಹಣಕಾಸು ಯೋಜನೆ ಖರ್ಚು ವೆಚ್ಚ ನಿರ್ವಹಿಸುವುದರ ಜೊತೆ ಅನಗತ್ಯ ಸಾಲ ತಪ್ಪಿಸಲಿದೆ.

ಫಿಕ್ಸೆಡ್ ಡೆಪಾಸಿಟ್ ಮಿತಿಗಳು

ಫಿಕ್ಸೆಡ್ ಡೆಪಾಸಿಟ್ ಹಲವು ಪ್ರಯೋಜನ ಹಾಗೂ ಸಮಸ್ಯೆಗಳಿಂದ ನಿಮ್ಮನ್ನು ಮುಕ್ತಿಗೊಳಿಸಲಿದೆ ನಿಜ. ಆದರೆ ಈ ಯೋಜನೆಗೂ ಕೆಲ ಮಿತಿಗಳಿವೆ ಅನ್ನೋದು ಮನಗಾಣಬೇಕು.

1. ಹಣದುಬ್ಬರ ಪರಿಣಾಮ: ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಥವಾ ಮಿತಿಗಳಲ್ಲಿ ಗುರುತಿಸಿಕೊಂಡಿರುವ ವಿಚಾರ ಎಂದರೆ, ಎಫ್‌ಡಿ ರಿಟರ್ನ್ಸ್ ಹಣದುಬ್ಬರ ವೇಗದ ಜೊತೆಗೆ ಹೊಂದಿಕೆಯಾಗುವುದಿಲ್ಲ. ಹಣದುಬ್ಬರ ದರ ಏರಿಕೆಯಾದರೆ ಎಪ್‌ಡಿ ರಿಟರ್ನ್ಸ್ ಮೌಲ್ಯ ಕಾಲಾನಂತರ ಕಡಿಮೆಯಾಗಲಿದೆ. ಇದರ್ಥ ನಿಮ್ಮ ರಿಟರ್ನ್ಸ್ ಸ್ಥಿರವಾಗಿದ್ದರೂ, ಹಣದುಬ್ಬರದಿಂದ ಕೈಗೆ ಸಿಗುವ ವೇಳೆ ಮೌಲ್ಯವೂ ಕಡಿಮೆಯಾಗಬಹುದು.

2. ಇತರ ಹೂಡಿಕೆ ಯೋಜನೆಗೆ ಹೋಲಿಸಿದರೆ ಆದಾಯ ಕಡಿಮೆ: ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಆದಾಯ ಸ್ಥಿರ, ಆದರೆ ಕಡಿಮೆ. ಮ್ಯೂಚ್ಯುವಲ್ ಫಂಡ್, ಷೇರು ಹೂಡಿಕೆಯಲ್ಲಿ ಬರುವ ರೀತಿಯ ಆದಾಯ ಇಲ್ಲಿಲ್ಲ. ಪ್ರಮುಖವಾಗಿ ನಿಮ್ಮಲ್ಲಿರುವ ಸಂಪತ್ತು ವೃದ್ಧಿಸುವ ಆಲೋಚನೆಯಲ್ಲಿ ನೀವಿದ್ದರೆ, ಎಫ್‌ಡಿ ಇತರ ಹೂಡಿಕೆ ನೀಡುವಂತೆ ಹೆಚ್ಚಿನ ಆದಾಯ ನೀಡುವುದಿಲ್ಲ.

3.ಲಾಕ್ ಅವಧಿ: ಎಫ್‌ಡಿಯಲ್ಲಿ ನಿಗದಿತ ಅವಧಿಗೆ ಹಣ ಹೂಡಿಕೆ ಮಾಡಲಾಗುತ್ತದೆ. ಇದರ ನಡುವೆ ಹಣದ ಅವಶ್ಯಕತೆ ಇದ್ದರೆ ಕೆಲ ಯೋಜನೆಗಳು ಹಿಂಪಡೆಯಲು ಅವಕಾಶ ನೀಡುತ್ತದೆ. ಆದರೆ ಪೆನಾಲ್ಟಿ ವಿಧಿಸುತ್ತದೆ. ಹೀಗಾಗಿ ಲಾಕ್ ಕಾರಣದಿಂದ ತುರ್ತು ಸಂದರ್ಭದಲ್ಲಿ ಪೆನಾಲ್ಟಿ ಪಾವತಿಸಿ ಹಣ ಪಡೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಕೊನೆಯ ಮಾತು

ಫಿಕ್ಸೆಡ್ ಡೆಪಾಸಿಟ್ ಹಣಕಾಸು ಸುರಕ್ಷತೆ ನೀಡುವುದರಲ್ಲಿ ಎರಡು ಮಾತಿಲ್ಲ. ಖಚಿತ ಆದಾಯ, ಅತ್ಯಂತ ಕಡಿಮೆ ಅಪಾಯ, ಫ್ಲೆಕ್ಸಿಬಿಲಿಟಿ ಸೇರಿದಂತೆ ಹಲವು ಸೌಲಭ್ಯಗಳನ್ನು ಈ ಯೋಜನೆ ಒದಗಿಸುತ್ತದೆ. ಎಫ್‌ಡಿ ದೊಡ್ಡ ಆದಾಯ ನೀಡುವುದಿಲ್ಲ ನಿಜ, ಜೊತೆಗೆ ಹಣದುಬ್ಬರ ಪರಿಣಾಮಕಾರಿಯಾಗಿ ಎದುರಿಸದಿದ್ದರೂ ಸುರಕ್ಷತಿಕ ಹೂಡಿಕೆ ಹಾಗೂ ಆದಾಯ ನೀಡಲಿದೆ ಅನ್ನೋದು ಸತ್ಯ.

ಫಿಕ್ಸೆಡ್ ಡೆಪಾಸಿಡ್ ಎಲ್ಲಾ ಆರ್ಥಿಕ ಸವಾಲುಗಳಿಗೆ ಪರಿಹಾರವಾಗದಿರಬುಹುದು. ಆದರೆ ಸ್ಛಿರತೆ, ಸುರಕ್ಷತೆ ಒದಗಿಸುತ್ತದೆ. ಒಂದು ವಿಶ್ವಾಸಾರ್ಹ ಮೂಲದದಿಂದ ಆದಾಯ ನಿರೀಕ್ಷಿಸಲು ಸಾಧ್ಯವಿದೆ. ಬಂಡವಾಳ ಹೂಡಿಕೆ, ಸ್ಥಿರ ಆದಾಯದ ಪ್ರಯೋಜನ ನಿಮ್ಮದಾಗಲಿದೆ. ಆರ್ಥಿಕ ಸ್ಥಿರತೆ ಪ್ರತಿಯೊಬ್ಬರ ಪ್ರಮುಖ ಆದ್ಯತೆಯಾಗಿದೆ.
 

Latest Videos
Follow Us:
Download App:
  • android
  • ios