ಅಡಕೆ ಬೆಳೆಗಾರರ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ಚಾಕೋಲೆಟ್‌, ಗೂಗಲ್‌ನಲ್ಲಿ ಪ್ರಕಟವಾದ ಸಮೀಕ್ಷೆಯಲ್ಲಿ ಭಾರತದ ಟಾಪ್-10 ಚಾಕೋಲೆಟ್‌ ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದಿದೆ. ಈ ಯಶಸ್ಸಿನೊಂದಿಗೆ, ಸಂಸ್ಥೆ ಮಿಲೆಟ್ ಎನರ್ಜಿ ಬಾರ್ ಮತ್ತು ಡಾರ್ಕ್ ಚಾಕೋಲೆಟ್‌ಗಳಂತಹ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗಿದೆ

ಮಂಗಳೂರು: ಇಂಡಸ್ಟ್ರಿಯಲ್‌ ಇಂಟಲಿಜೆನ್ಸ್‌ ಆ್ಯಂಡ್‌ ಮಲ್ಟಿಪುಲ್‌ ಮಾರ್ಕೆಟ್‌ ರಿಸರ್ಚ್‌ ನಡೆಸಿದ ಸಮೀಕ್ಷೆಯಲ್ಲಿ ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಚಾಕೋಲೆಟ್‌, ಟಾಪ್‌-10ರ ಚಾಕೋಲೆಟ್‌ ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದುಕೊಂಡಿದೆ.

Add Asianetnews Kannada as a Preferred SourcegooglePreferred

ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಕ್ಯಾಂಪ್ಕೋ ಬ್ರ್ಯಾಂಡ್‌ ಅಧಿಕೃತವಾಗಿ ಸ್ಥಾನ

ದೇಶ, ವಿದೇಶದ ಪ್ರಸಿದ್ಧ ಚಾಕೋಲೆಟ್‌ ಬ್ರ್ಯಾಂಡ್‌ಗಳ ಬಗ್ಗೆ ಈ ಏಜೆನ್ಸಿ ಸಮೀಕ್ಷೆ ನಡೆಸಿ, ಅದರ ವರದಿಯನ್ನು ಗೂಗಲ್‌ನಲ್ಲಿ ಪ್ರಕಟಿಸಿದೆ. ಟಾಪ್‌-10 ಚಾಕೋಲೆಟ್ ಬ್ರ್ಯಾಂಡ್‌ಗಳನ್ನು ಪಟ್ಟಿ ಮಾಡಿ ಸ್ಥಾನ ನೀಡಿದ್ದು, ಈ ಪಟ್ಟಿಯಲ್ಲಿ ಕ್ಯಾಡ್‌ಬರಿ ಡೈರಿ ಮಿಲ್ಕ್‌ ಮೊದಲ ಸ್ಥಾನದಲ್ಲಿದೆ. ನೆಸ್ಲೆ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಕ್ಯಾಂಪ್ಕೋ ಚಾಕೋಲೆಟ್‌ 8ನೇ ಸ್ಥಾನದಲ್ಲಿದೆ. ಆ ಮೂಲಕ ಭಾರತದ ಟಾಪ್‌ 10 ಚಾಕೋಲೆಟ್‌ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಕ್ಯಾಂಪ್ಕೋ ಬ್ರ್ಯಾಂಡ್‌ ಅಧಿಕೃತವಾಗಿ ಸ್ಥಾನ ಪಡೆದುಕೊಂಡಂತಾಗಿದೆ. 8ನೇ ಸ್ಥಾನ ಹೊಂದಿರುವ ಕ್ಯಾಂಪ್ಕೋ ಚಾಕೋಲೆಟ್‌ಗೆ ಶೇ.1-2 ಅಂಕ ನೀಡಲಾಗಿದೆ.

ಏಷ್ಯಾದ ಅತಿ ದೊಡ್ಡ ಫ್ಯಾಕ್ಟರಿ

1986ರಲ್ಲಿ ಕ್ಯಾಂಪ್ಕೋ ಚಾಕೋಲೆಟ್‌ ಉತ್ಪಾದನೆ ಪ್ರಾರಂಭವಾಗಿದ್ದು, ಪುತ್ತೂರಿನಲ್ಲಿ ಏಷ್ಯಾದ ಅತಿ ದೊಡ್ಡ ಫ್ಯಾಕ್ಟರಿಯನ್ನು ಹೊಂದಿದೆ. ಪ್ರಸ್ತುತ 35 ಬಗೆಯ ಚಾಕೋಲೆಟ್‌ ಉತ್ಪನ್ನಗಳನ್ನು ಹೊರತರುತ್ತಿದೆ. ಈಗ ಗೂಗಲ್‌ನಲ್ಲಿ ಸ್ಥಾನಮಾನ ಲಭಿಸಿರುವುದು ಕ್ಯಾಂಪ್ಕೋ ಬ್ರ್ಯಾಂಡ್‌ ಜಾಗತಿಕವಾಗಿ ಇನ್ನಷ್ಟು ಉತ್ತಂಗಕ್ಕೆ ಪಸರಿಸಲು ಸುಲಭ ಸಾಧ್ಯವಾಗಲಿದೆ.

ಕ್ಯಾಂಪ್ಕೋ ಚಾಕೋಲೆಟ್‌ನ್ನು ಈಗಿನ ಪೀಳಿಗೆ ಆಸ್ವಾದಿಸುವಂತೆ ಉತ್ಪಾದನೆಯಲ್ಲಿ ಮಾರ್ಪಾಟು ಮಾಡಲು ಕ್ಯಾಂಪ್ಕೋ ಗಂಭೀರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮಿಲೆಟ್‌ ಹೊಂದಿರುವ ಎನರ್ಜಿ ಬಾರ್‌ ಚಾಕಲೇಟ್ ಉತ್ಪಾದಿಸಲು ಮುಂದಾಗಿದೆ. ಇದಲ್ಲದೆ ಎರಡು ವಿಧದ ಡಾರ್ಕ್‌ ಚಾಕೋಲೆಟ್‌ನ್ನು ಪರಿಚಯಿಸಲಿದೆ. ಒಂದು ಚಾಕೋಲೆಟ್‌ನಲ್ಲಿ ಶೇ.55ರಷ್ಟು ಕೋಕೋ ಮಿಶ್ರಣ ಇದ್ದರೆ, ಇನ್ನೊಂದರಲ್ಲಿ ಡ್ರೈಫ್ರುಟ್ಸ್‌ ಮಿಕ್ಸ್‌ ಇರಲಿದೆ.

ಇದನ್ನೂ ಓದಿ: ಮೈಸೂರು ಸ್ಯಾಂಡಲ್ 110 ವರ್ಷಗಳಲ್ಲಿ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು, 507 ಕೋಟಿ ಲಾಭ!

ಆನ್‌ಲೈನ್‌ ಮಾರುಕಟ್ಟೆಯಾದ ಇ-ಕಾಮರ್ಸ್‌ನಲ್ಲೂ ಕ್ಯಾಂಪ್ಕೋ ಉತ್ಪನ್ನಗಳು ಸದ್ದು ಮಾಡುತ್ತಿವೆ. ಅಮೆಜಾನ್‌ನಲ್ಲಿ ಕ್ಯಾಂಪ್ಕೋದ 6 ಉತ್ಪನ್ನಗಳು ಹಾಗೂ ಕ್ಯಾಂಪ್ಕೋ ಕಾರ್ಟ್‌ನಲ್ಲಿ ಕ್ಯಾಂಪ್ಕೋದ ಎಲ್ಲ ಉತ್ಪನ್ನಗಳು ಆನ್‌ಲೈನ್‌ ಮೂಲಕ ಗ್ರಾಹಕರನ್ನು ತಲುಪುತ್ತಿವೆ.

ಇದನ್ನೂ ಓದಿ: ಗೂಗಲ್‌ ಹಿಂದಿಕ್ಕಿ ಭಾರತದ ಅತಿದೊಡ್ಡ ಡೇಟಾ ಸೆಂಟರ್ ನಿರ್ಮಿಸಲಿದೆ ರಿಲಯನ್ಸ್: 1.6 ಲಕ್ಷ ಕೋಟಿ ರೂ.ಗಳ ಮಹಾ ಯೋಜನೆ