* ಭಾರತದ 5 ಲಕ್ಷ ಕೋಟಿ ವಿದೇಶಿ ಆಸ್ತಿ ಜಪ್ತಿಗೆ ಕೇರ್ನ್‌ ಕಂಪನಿ ಯತ್ನ!* 12600 ಕೋಟಿ ರು. ಬಾಕಿ ವಸೂಲಿಗೆ ಅಡ್ಡ ದಾರಿ* ಕಾನೂನು ಹೋರಾಟಕ್ಕೆ ಮುಂದಾದ ಬ್ರಿಟನ್‌ ಕಂಪನಿ

ನವದೆಹಲಿ(ಮೇ.17): ಅಂತಾರಾಷ್ಟ್ರೀಯ ನ್ಯಾಯಾಧಿಕರಣದ ತೀರ್ಪಿಗೆ ಅನುಗುಣವಾಗಿ ತನಗೆ ಬರಬೇಕಾಗಿರುವ 12600 ಕೋಟಿ ರು. ಬಾಕಿ ವಸೂಲಿಗೆ ಅಡ್ಡ ದಾರಿ ತುಳಿದಿರುವ ಬ್ರಿಟನ್‌ ಮೂಲದ ಕೇರ್ನ್‌ ಎನರ್ಜಿ ಕಂಪನಿ, ವಿದೇಶದಲ್ಲಿ ಭಾರತ ಹೊಂದಿರುವ 5 ಲಕ್ಷ ಕೋಟಿ ರು. ಮೊತ್ತದ ಆಸ್ತಿಗಳನ್ನು ಜಪ್ತಿ ಉದ್ದೇಶದಿಂದ ಗುರುತು ಹಾಕಿದೆ.

ಅಮೆರಿಕದಿಂದ ಸಿಂಗಾಪುರದವರೆಗೆ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಆಸ್ತಿಯನ್ನು ಜಪ್ತಿ ಮಾಡುವಂತೆ ಮೊರೆ ಇಡಲು ಪ್ರಯತ್ನ ಆರಂಭಿಸಿದೆ. ಆಸ್ತಿ ಜಪ್ತಿಯಾದರೆ ಅದನ್ನು ಸಹಜವಾಗಿಯೇ ಭಾರತ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತದೆ. ಆಸ್ತಿ ಉಳಿಸಿಕೊಳ್ಳಲು ಅಷ್ಟೇ ಮೊತ್ತದ ಬ್ಯಾಂಕ್‌ ಖಾತ್ರಿ ಒದಗಿಸಬೇಕಾಗುತ್ತದೆ. ಒಂದು ವೇಳೆ, ಕೇರ್ನ್‌ ಕಂಪನಿ ವಿಚಾರದಲ್ಲಿ ಭಾರತವು ನ್ಯಾಯಾಧಿಕರಣದ ಆದೇಶ ಪಾಲಿಸದೇ ಇರುವುದು ದೃಢಪಟ್ಟರೆ ಬ್ಯಾಂಕ್‌ ಖಾತ್ರಿಯನ್ನು ಆ ಕಂಪನಿಗೆ ವರ್ಗಾಯಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಏರಿಂಡಿಯಾದ 12,000 ಕೋಟಿ ವಿದೇಶಿ ಆಸ್ತಿ ಕೇರ್ನ್‌ ಪಾಲು ಸಾಧ್ಯತೆ!

ಕೇರ್ನ್‌ ಕಂಪನಿ ಗುರುತಿಸಿರುವ ಭಾರತೀಯ ಆಸ್ತಿಗಳ ಪಟ್ಟಿಯಲ್ಲಿ ಏರ್‌ ಇಂಡಿಯಾ ವಿಮಾನಗಳು, ಭಾರತದ ಹಡಗುಗಳು, ಬ್ಯಾಂಕುಗಳು ಹೊಂದಿರುವ ಆಸ್ತಿಗಳು ಕೂಡ ಸೇರಿವೆ ಎಂದು ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ನ್ಯಾಯಾಧಿಕರಣ ಕೇರ್ನ್‌ ಕಂಪನಿಗೆ 12600 ಕೋಟಿ ರು. ನೀಡುವಂತೆ ಆದೇಶಿಸಿದೆ. ಆದರೆ ಅದನ್ನು ನ್ಯಾಯಾಧಿಕರಣದಲ್ಲೇ ಪ್ರಶ್ನಿಸಿದ್ದೇವೆ. ಆದೇಶ ರದ್ದಾಗುವ ವಿಶ್ವಾಸವಿದೆ. ಆದಾಗ್ಯೂ ಕೇರ್ನ್‌ ಕಂಪನಿಯ ಆಸ್ತಿ ಜಪ್ತಿ ಕಾನೂನು ಸಮರದಲ್ಲಿ ಕಾನೂನು ತಂಡ ರಾಷ್ಟ್ರದ ಪರ ಸಮರ್ಥ ವಾದ ಮಂಡಿಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?:

1994ರಿಂದ ಭಾರತದಲ್ಲಿ ಕೇರ್ನ್‌ ಕಂಪನಿ ಕಾರ್ಯಾಚರಿಸುತ್ತಿದೆ. ರಾಜಸ್ಥಾನದಲ್ಲಿ ತೈಲ ನಿಕ್ಷೇಪವನ್ನೂ ಪತ್ತೆ ಹಚ್ಚಿದೆ. 2006ರಲ್ಲಿ ಷೇರುಪೇಟೆಗೂ ಪ್ರವೇಶಿಸಿದೆ. ಈ ಕಂಪನಿಗೆ ಭಾರತ ಪೂರ್ವಾನ್ವಯವಾಗುವಂತೆ ತೆರಿಗೆ ವಿಧಿಸಿತ್ತು. 10247 ಕೋಟಿ ರು. ಜತೆಗೆ ಬಡ್ಡಿ ಹಾಗೂ ದಂಡ ಕಟ್ಟಲು ಆದೇಶಿಸಿತ್ತು. ವಿಫಲವಾದಾಗ ಆ ಕಂಪನಿಯ ಷೇರು, ಡಿವಿಡೆಂಡ್‌, ತೆರಿಗೆ ರೀಫಂಡ್‌ ಅನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದರ ವಿರುದ್ಧ ಕೇರ್ನ್‌ ಕಂಪನಿ ದ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಬಡ್ಡಿ ಸೇರಿ 12600 ಕೋಟಿ ರು. ಅನ್ನು ಕೇರ್ನ್‌ಗೆ ಪಾವತಿಸುವಂತೆ ನ್ಯಾಯಾಧಿಕರಣ 2020ರ ಡಿಸೆಂಬರ್‌ನಲ್ಲಿ ಭಾರತಕ್ಕೆ ತಾಕೀತು ಮಾಡಿತ್ತು. ಆದರೆ ಈ ಆದೇಶವನ್ನು ಭಾರತ ಪಾಲನೆ ಮಾಡುತ್ತಿಲ್ಲ ಎಂಬುದು ಕೇರ್ನ್‌ ದೂರು.