ಟೆಲಿಕಾಂ ಉತ್ಪನ್ನ ತಯಾರಿಕೆಗೆ .12000 ಕೋಟಿ ಪ್ರೋತ್ಸಾಹಧನ| ಭಾರತವನ್ನು ಜಾಗತಿಕ ಟೆಲಿಕಾಂ ಉತ್ಪನ್ನಗಳ ಹಬ್ ಮಾಡಲು ಯೋಜನೆ| ಚೀನಾದಿಂದ ಆಮದಾಗುವ ಟೆಲಿಕಾಂ ಉಪಕರಣಗಳಿಗೆ ಸಡ್ಡು?
ನವದೆಹಲಿ(ಫೆ.18): ಭಾರತವನ್ನು ಜಾಗತಿಕ ಟೆಲಿಕಾಂ ಉತ್ಪನ್ನಗಳ ತಯಾರಿಕಾ ಹಬ್ ಆಗಿ ರೂಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಅದಕ್ಕಾಗಿ ಟೆಲಿಕಾಂ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಿಗೆ ಮುಂದಿನ 5 ವರ್ಷದ ಅವಧಿಯಲ್ಲಿ 12,195 ಕೋಟಿ ರು. ಪ್ರೋತ್ಸಾಹಧನ ನೀಡುವುದಾಗಿ ಪ್ರಕಟಿಸಿದೆ. ಸದ್ಯ ದೇಶಕ್ಕೆ ಬಹುತೇಕ ಟೆಲಿಕಾಂ ಹಾಗೂ ನೆಟ್‌ವರ್ಕಿಂಗ್ ಉಪಕರಣಗಳು ಚೀನಾದಿಂದ ಆಮದಾಗುತ್ತಿದ್ದು, ಅದನ್ನು ನಿಲ್ಲಿಸಿ ದೇಶದಲ್ಲೇ ಇವುಗಳನ್ನು ತಯಾರಿಸಲು ಪ್ರೋತ್ಸಾಹ ನೀಡುವುದಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಈ ಯೋಜನೆಯಿಂದ ಇದರಿಂದ ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ 2.4 ಲಕ್ಷ ಕೋಟಿ ರು. ಟೆಲಿಕಾಂ ಉತ್ಪನ್ನಗಳ ಉತ್ಪಾದನೆಯಾಗಲಿದ್ದು, ಸುಮಾರು 1.95 ಲಕ್ಷ ಕೋಟಿ ರು. ಟೆಲಿಕಾಂ ಉತ್ಪನ್ನಗಳು ರಫ್ತಾಗಲಿವೆ. 40,000 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
5ಜಿ ಇಂಟರ್ನೆಟ್‌ಗಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು?
ದೇಶದಲ್ಲಿ 5ಜಿ ಮೊಬೈಲ್ ಸೇವೆಗಳು ಆರಂಭವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಹೆಸರಿನ ಈ ಯೋಜನೆಯನ್ನು ಘೋಷಿಸಿದ್ದು, ಈ ವರ್ಷದ ಏ.1ರಿಂದ ಜಾರಿಗೆ ಬರಲಿದೆ. ಈ ಯೋಜನೆಯಡಿ ಗಿಗಾಬಿಟ್ ಪ್ಯಾಸಿವ್ ಆಪ್ಟಿಕಲ್ ನೆಟ್ವರ್ಕ್ಸ್ (ಜಿಪಿಒಎನ್), ಬೇಸ್ ರೌಟರ್‌ಗಳು, ಡೆನ್ಸ್ ವೇವ್‌ಲೆಂಕ್‌್ತ ಡಿವಿಷನ್ ಮಲ್ಟಿಪ್ಲೆಕ್ಸಿಂಗ್ (ಡಿಡಬ್ಲ್ಯುಡಿಎಂ), ಮಲ್ಟಿಪ್ರೋಟೋಕಾಲ್ ಲೇಬಲ್ ಸ್ವಿಚಿಂಗ್ (ಎಂಪಿಎಲ್‌ಎಸ್/ ಐಪಿಎಂಪಿಎಲ್‌ಎಸ್) ಹಾಗೂ 5ಜಿ/4ಜಿ ರೇಡಿಯೋಗಳಂತಹ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳನ್ನು ಸ್ಥಾಪಿಸುವುದಕ್ಕೆ ಸರ್ಕಾರ ಪ್ರೋತ್ಸಾಹ ನೀಡಲಿದೆ.
ಬುಧವಾರ ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಈ ವಿಷಯ ತಿಳಿಸಿದ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಸಚಿವ ರವಿಶಂಕರ ಪ್ರಸಾದ್, ‘ಈ ಯೋಜನೆಯಿಂದ ದೇಶದಲ್ಲಿ ಐದು ವರ್ಷಗಳಲ್ಲಿ 2.44 ಲಕ್ಷ ಕೋಟಿ ರು.ನಷ್ಟುಟೆಲಿಕಾಂ ಉತ್ಪನ್ನಗಳು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಅವುಗಳ ಪೈಕಿ 2 ಲಕ್ಷ ಕೋಟಿ ರು.ನಷ್ಟುಉತ್ಪನ್ನಗಳನ್ನು ರಫ್ತು ಮಾಡಬಹುದು. ದೇಶದ ಸಣ್ಣ ಹಾಗೂ ಮಧ್ಯಮ ಗಾತ್ರದ ಟೆಲಿಕಾಂ ಉದ್ದಿಮೆಗಳಲ್ಲಿ ಈ ಯೋಜನೆಯಿಂದ ಸುಮಾರು 3000 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದ್ದು, ಅದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 40 ಸಾವಿರ ಉದ್ಯೋಗಾವಕಾಶ ಸೃಷ್ಟಿಮತ್ತು 17 ಸಾವಿರ ಕಟಿ ರು. ತೆರಿಗೆ ಸಂಗ್ರಹ ಕೂಡ ಆಗಲಿದೆ’ ಎಂದು ಹೇಳಿದರು.
ಬಿಸ್ಸೆನ್ನೆಲ್‌ನ 599 ರೂ. ಪ್ಲ್ಯಾನ್‌ನಲ್ಲಿ ನಿತ್ಯ 5 ಜಿಬಿ ಡೇಟಾ!
‘ಟೆಲಿಕಾಂ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ಕಲ್ಪನೆಯನ್ನು ಸಾಕಾರಗೊಳಿಸಲು ಈ ಯೋಜನೆ ಸಹಕಾರಿಯಾಗಲಿದೆ. ಜೊತೆಗೆ ಭಾರತವು ಪ್ರತಿ ವರ್ಷ ಆಮದು ಮಾಡಿಕೊಳ್ಳುವ ಸುಮಾರು 50,000 ಕೋಟಿ ರು. ಮೌಲ್ಯದ ಟೆಲಿಕಾಂ ಉತ್ಪನ್ನಗಳನ್ನು ದೇಶದಲ್ಲೇ ತಯಾರಿಸುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಗೂ ಉತ್ತೇಜನ ಸಿಗಲಿದೆ’ ಎಂದು ಪ್ರಸಾದ್ ತಿಳಿಸಿದರು.
ಯೋಜನೆ ಜಾರಿ ಹೇಗೆ?
- ದೇಶದಲ್ಲಿ ಈಗಾಗಲೇ ಇರುವ ಹಾಗೂ ಹೊಸತಾಗಿ ಸ್ಥಾಪನೆಯಾಗಲಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಟೆಲಿಕಾಂ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಒಟ್ಟು 12,195 ಕೋಟಿ ರು. ಪ್ರೋತ್ಸಾಹಧನ ನೀಡಲಿದೆ.
- ಪ್ರತಿ ವರ್ಷ ಕಂಪನಿಗಳು ಎಷ್ಟುಬಂಡವಾಳ ಹೂಡಿಕೆ ಮಾಡುತ್ತವೆ, ಬಂಡವಾಳದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೇಗೆ ವೃದ್ಧಿಯಾಗುತ್ತದೆ ಹಾಗೂ ಉತ್ಪಾದಿಸಿದ ವಸ್ತುಗಳ ಮಾರಾಟ ಹೇಗೆ ಹೆಚ್ಚುತ್ತದೆ ಎಂಬುದರ ಮೇಲೆ ಪ್ರೋತ್ಸಾಹಧನ ನೀಡಲಾಗುತ್ತದೆ.
- ಈ ಯೋಜನೆಯಡಿ ಧನಸಹಾಯ ಪಡೆಯಲು ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಕನಿಷ್ಠ 10 ಕೋಟಿ ರು. ಬಂಡವಾಳ ತೊಡಗಿಸಬೇಕು. ದೊಡ್ಡ ಕಂಪನಿಗಳಿಗೂ ಪ್ರೋತ್ಸಾಹಧನ ದೊರೆಯಲಿದ್ದು, ಅವು ಕನಿಷ್ಠ 100 ಕೋಟಿ ರು. ಬಂಡವಾಳ ತೊಡಗಿಸಿರಬೇಕು.
ನಾವೇನು ತಪ್ಪು ಮಾಡಿದ್ವಿ... ನ್ಯಾಯ ಕೊಡಿಸಿ.. ಕೋರ್ಟ್ ಮೊರೆ ಹೋದ ಜಿಯೋ!
- ಕಂಪನಿಗಳು ತೊಡಗಿಸುವ ಬಂಡವಾಳದ ಶೇ.4ರಿಂದ ಶೇ.7ರವರೆಗೆ ಸರ್ಕಾರ ಪ್ರೋತ್ಸಾಹಧನ ನೀಡಲಿದೆ. ಯೋಜನೆಗೆ 2019-20ನೇ ವರ್ಷವನ್ನು ಮೂಲ ವರ್ಷವಾಗಿ ಪರಿಗಣಿಸಲಾಗಿದೆ.
- ಯೋಜನೆಗೆ ಆಯ್ಕೆಯಾಗುವ ಹೂಡಿಕೆದಾರರಿಗೆ (ಕಂಪನಿಗೆ) ಕನಿಷ್ಠ ಬಂಡವಾಳದ ಮಿತಿಯ 20 ಪಟ್ಟಿನವರೆಗೆ ಪ್ರೋತ್ಸಾಹಧನ ಪಡೆಯುವ ಅವಕಾಶವಿರುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 18, 2021, 11:26 AM IST