Hubballi: ಉತ್ತಮ ದಿನಗಳ ನಿರೀಕ್ಷೆಯಲ್ಲಿ ಹುಬ್ಬಳ್ಳಿ ವಾಣಿಜ್ಯ ಮಾರುಕಟ್ಟೆ
* ಸಗಟು ಮಾರುಕಟ್ಟೆಯಲ್ಲಿ ದರ ದಿನದಿಂದ ದಿನಕ್ಕೆ ಏರುಪೇರು
* ಅನಿಶ್ಚಿತತೆ ಎದುರಿಸುತ್ತಿವೆ ಜವಳಿ, ಆಟೊಮೊಬೈಲ್ ಕ್ಷೇತ್ರ
* ಉತ್ತರ ಕರ್ನಾಟಕದ ಪ್ರಮುಖ ಜವಳಿ ವ್ಯಾಪಾರ ಕೇಂದ್ರ ಹುಬ್ಬಳ್ಳಿ
ಮಯೂರ ಹೆಗಡೆ
ಹುಬ್ಬಳ್ಳಿ(ಫೆ.08): ಕೊರೋನಾ(Coronavirus) ಮೂರನೇ ಅಲೆ ಬಳಿಕ ಹುಬ್ಬಳ್ಳಿಯ(Hubballi) ಚಿಲ್ಲರೆ ಮಾರುಕಟ್ಟೆ ಚೇತರಿಕೆ ಹಾದಿಯಲ್ಲಿದ್ದರೆ, ಆಟೋಮೊಬೈಲ್, ಜವಳಿ, ಇಂಡಸ್ಟ್ರಿಯಲ್ ಕ್ಷೇತ್ರಗಳು ಉತ್ತಮ ದಿನಗಳ ನಿರೀಕ್ಷೆಯಲ್ಲಿವೆ. ತಜ್ಞರ ಅಭಿಪ್ರಾಯದಂತೆ ಕೋವಿಡ್ 3ನೇ ಅಲೆ ಅಂದುಕೊಂಡಂತೆ ವೇಗವಾಗಿ ಇಳಿಯುತ್ತಿದೆ. ಕಳೆದ ತಿಂಗಳು ನೈಟ್, ವೀಕೆಂಡ್ ಕರ್ಫ್ಯೂ(Night and Weekend Curfew) ಕಾರಣದಿಂದ ಚಿಲ್ಲರೆ, ಸಗಟು ಮಾರುಕಟ್ಟೆ ಕುಸಿದಿತ್ತು. ಇದೀಗ ವಹಿವಾಟು ನಿಧಾನಕ್ಕೆ ನವೆಂಬರ್ ಡಿಸೆಂಬರ್ ತಿಂಗಳಲ್ಲಿದ್ದ ಗ್ರಾಫ್‌ಗೆ ಏರಿಕೆಯಾಗುತ್ತಿದೆ. ಮುಂಬರುವ ಮದುವೆ, ಹಬ್ಬ ಹರಿದಿನಗಳನ್ನು ನೆಚ್ಚಿಕೊಂಡು ಇತರೆ ಕ್ಷೇತ್ರಗಳು ಕುಳಿತಿವೆ.
ಸಗಟು ಮಾರುಕಟ್ಟೆಯಲ್ಲಿ(Wholesale Market) ಸರಕುಗಳ ಬೆಲೆ ದಿನದಿಂದ ದಿನಕ್ಕೆ ಸಾಕಷ್ಟು ವ್ಯತ್ಯಾಸ ಆಗುತ್ತಿದೆ. ಚಿಲ್ಲರೆ ವ್ಯಾಪಾರಸ್ಥರಾಗಿ ಹೆಚ್ಚೆಂದರೆ ಮೂರು ದಿನಗಳ ವರೆಗೆ ಮಾತ್ರ ಒಂದಿಷ್ಟು ಕಿರಾಣಿ, ಹಣ್ಣು ಇತರೆ ವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡುವ ಪರಿಸ್ಥಿತಿ ಇದೆ. ಹೆಚ್ಚು ದಾಸ್ತಾನು ಮಾಡಿಕೊಂಡರೆ ನಷ್ಟವಾಗುವ ಭೀತಿಯೂ ಇದೆ. ಮಾರುಕಟ್ಟೆಅನಿಶ್ಚಿತತೆಯಿಂದ ಕೂಡಿದ್ದು , ವ್ಯಾಪಾರ ಕಷ್ಟವಾಗಿದೆ ಎಂದು ಟಿಎಂಸಿ ಕಮಿಟಿ ಇಸ್ಮಾಯಿಲ್ ಬಿಳೆಪಸಾರ್ ಹೇಳುತ್ತಾರೆ.
Flexible Work Culture: ಇಂಡಿಯಾ ಮಾರ್ಟ್‌ನಲ್ಲಿ ಇನ್ನು ವಾರಕ್ಕೊಮ್ಮೆ ಸಂಬಳ!
ಹಣ್ಣು ಸಗಟು ವ್ಯಾಪಾರಿ ಎಂ.ಕೆ. ಜಾಫರ್ ಮಾತನಾಡಿ, ಈ ವರೆಗೂ ಹುಬ್ಬಳ್ಳಿಗೆ ಹೊರ ಜಿಲ್ಲೆಗಳ ವ್ಯಾಪಾರಿಗಳು ಖರೀದಿಗಾಗಿ ಬರುತ್ತಿಲ್ಲ. ದಾವಣಗೆರೆ, ಹಾವೇರಿ, ಉತ್ತರಕನ್ನಡದಿಂದ ಹೆಚ್ಚಿನ ಬೇಡಿಕೆಯೂ ಇಲ್ಲ. ನಾವು ಪ್ರತಿದಿನ 4ರಿಂದ 5 ಕ್ವಿಂಟಲ್ ಬಾಳೆಹಣ್ಣು ಮಾರುತ್ತಿದ್ದೆವು. ಈಗ 1ರಿಂದ 2 ಕ್ವಿಂಟಲ್ ಮಾರಾಟ ಆಗುತ್ತಿದೆ. ಒಂದು ಮಟ್ಟಿಗೆ ವ್ಯಾಪಾರ ಚೇತರಿಕೆ ಕಾಣುತ್ತಿದೆ ಎನ್ನಬಹುದಾದರೂ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದರು.
ಹುಬ್ಬಳ್ಳಿ ಎಂದರೆ ಉತ್ತರ ಕರ್ನಾಟಕದ(North Karnataka) ಪ್ರಮುಖ ಜವಳಿ ವ್ಯಾಪಾರ ಕೇಂದ್ರ. ಇಲ್ಲಿ ಮಧ್ಯಮ, ದೊಡ್ಡ ಮಳಿಗೆ ಸೇರಿ 300ಕ್ಕೂ ಹೆಚ್ಚು ಬಟ್ಟೆ ವ್ಯಾಪಾರಿಗಳಿದ್ದಾರೆ. ಕೊರೋನಾ 2ನೇ ಅಲೆ ನಂತರ ಕಳೆದ ವರ್ಷಾಂತ್ಯದಲ್ಲಿ ಉತ್ತಮ ವಹಿವಾಟು ನೋಡಿದ್ದೇವೆ. ಈಗಲೂ ಹೊಲ್‌ಸೆಲ್ ವ್ಯಾಪಾರ ಉತ್ತಮವಾಗೇ ಇದೆ. ಆದರೆ, ತಳಮಟ್ಟದಲ್ಲಿ ವ್ಯಾಪಾರ ನಡೆಯದ ಕಾರಣ ನಮಗೆ ವ್ಯಾಪಾರಿಗಳಿಂದ ಹಣ ಬರುತ್ತಿಲ್ಲ ಎಂದು ಜವಳಿ ವ್ಯಾಪಾರಸ್ಥರ ಸಂಘದ ಮುಕೇಶ ಹಿಂಗರ್ ಹೇಳುತ್ತಾರೆ.
ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಶೇ. 25-30 ವಹಿವಾಟು ಹೆಚ್ಚಾಗಿದೆ. ಮುಂಬೈ, ಕೊಲ್ಕತ್ತಾದಿಂದ ಬರುವ ಬಟ್ಟೆಗಳ ದರದಲ್ಲಿ ತುಸು ಏರಿಕೆಯಾಗಿದೆ. ಇದು ಕೂಡ ವ್ಯಾಪಾರದ(Business) ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.
Save Money: ಖರ್ಚು ಮಾಡೋದೆ ಆಯ್ತು, ಸೇವಿಂಗ್ ಮಾಡೋಕಾಗ್ತಿಲ್ಲ ಅನ್ನೋ ಚಿಂತೇನಾ ? ಇಷ್ಟು ಮಾಡಿ ಸಾಕು
ನಗರದಲ್ಲಿನ ಆಟೋಮೊಬೈಲ್ ಕ್ಷೇತ್ರದ(Automobile Sector) ವಹಿವಾಟು ಸದ್ಯಕ್ಕಂತೂ ಚೇತರಿಕೆ ಕಾಣುತ್ತಿಲ್ಲ ಎನ್ನುತ್ತಾರೆ ಕೆಸಿಸಿಐ ಕಾರ್ಯದರ್ಶಿ ಪ್ರವೀಣ ಎಸ್. ಅಗಡಿ. ದ್ವಿಚಕ್ರ ವಾಹನಗಳ ವಹಿವಾಟು ಸಾಮಾನ್ಯವಾಗಿ ಕುಸಿತ ಕಂಡಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಅದು ಕೂಡ ಇಳಿಕೆಯಾಗಿದೆ. ಕಾರು ಸೇರಿ ಇತರೆ ವಾಹನಗಳ ವ್ಯಾಪಾರ ತಕ್ಕಮಟ್ಟಿಗಿದೆ. ಡಿಸೆಂಬರ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ(Electric Vehicles) ಹೆಚ್ಚಿನ ಬೇಡಿಕೆ ಕಂಡುಬಂದಿತ್ತು. ಆದರೆ, ಹೊಸ ವರ್ಷದಲ್ಲಿ ಅದಕ್ಕೂ ಹೆಚ್ಚಿನ ಬೇಡಿಕೆ ಇಲ್ಲ. ಇದೀಗ ಕೊರೋನಾ 3ನೇ ಅಲೆ(Corona 3rd Wave) ಇಳಿಕೆ ಆಗಿರುವ ಕಾರಣ ಮುಂದಿನ ದಿನಗಳಲ್ಲಿ ಪುನಃ ಬೇಡಿಕೆ ಬರಬಹುದು ಎಂದು ತಿಳಿಸಿದರು.
ಒಟ್ಟಾರೆ ಎಲ್ಲ ಕ್ಷೇತ್ರಗಳ ವಹಿವಾಟು ಸರಾಸರಿ ಹಂತದಲ್ಲಿ ಸಾಗಿದೆ. ಹೇಳಿಕೊಳ್ಳುವಷ್ಟು ಯಾವವೂ ಚೇತರಿಕೆ ಕಂಡಿಲ್ಲ. ಆದರೆ, ಇದೇ ವಾತಾವರಣ ಮುಂದುವರಿದರೆ ಮಾರುಕಟ್ಟೆಉತ್ತಮ ಸ್ಥಿತಿ ಕಾಣಬಹುದು ಅಂತ ಹುಬ್ಬಳ್ಳಿ ಕೆಸಿಸಿಐ ಅಧ್ಯಕ್ಷ ವಿನಯ ಜೆ. ಜವಳಿ ತಿಳಿಸಿದ್ದಾರೆ.
ಶೇ. 20-30ರಷ್ಟು ವ್ಯಾಪಾರ ಚೇತರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಉತ್ತಮ ವ್ಯಾಪಾರ ಆಗುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡು ಕುಳಿತಿದ್ದೇವೆ ಅಂತ ಹು-ಧಾ ಜವಳಿ ವ್ಯಾಪಾರಸ್ಥರ ಸಂಘ ಮುಕೇಶ ಹಿಂಗರ್ ಹೇಳಿದ್ದಾರೆ.