ನವದೆಹಲಿ(ಫೆ.02): ಈ ಬಾರಿ ಬಜೆಟ್‌ನಲ್ಲಿ ಮೂಲಸೌಕರ‍್ಯ ಅಭಿವೃದ್ಧಿಗಾಗಿ ಸಾಕಷ್ಟುಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ ಅದಕ್ಕಾಗಿ ಅವಶ್ಯಕವಿರುವ ಹಣವನ್ನು ಸಂಗ್ರಹಿಸಲು ಮೊರೆ ಹೋಗಿರುವುದು ಈ ಜೀರೋ ಕೂಪನ್‌ ಬಾಂಡ್‌ನತ್ತ. ಈ ಬಾಂಡ್‌ಗಳು ಅಮೆರಿಕದಲ್ಲಿ ಹೆಚ್ಚು ಪ್ರಚಲಿತ. ಈ ಯೋಜನೆಯಡಿ ಸರ್ಕಾರ ಪಡೆದ ಸಾಲಕ್ಕೆ ನಿರ್ದಿಷ್ಟದರದ ಬಡ್ಡಿಯನ್ನು ಘೋಷಿಸುವುದಿಲ್ಲ.

ಒಂದು ಯೋಜನೆಗೆ ಅವಶ್ಯವಿರುವ ಮೊತ್ತಕ್ಕೆ ಸಮನಾಗಿ ಬಂಡವಾಳವನ್ನು ಸಂಗ್ರಹಿಸುತ್ತಾರೆ. ನಿರ್ದಿಷ್ಟ ಅವಧಿ ನಂತರ ಅದನ್ನು ಅದರ ಲಾಭದ ಜೊತೆಯಲ್ಲಿ ಹಿಂದಿರುಗಿಸುತ್ತಾರೆ ಮತ್ತು ಲಾಭಕ್ಕೆ ತೆರಿಗೆ ವಿನಾಯಿತಿ ನೀಡುತ್ತಾರೆ.

ಉದಾಹರಣೆಗೆ- ಬೆಂಗಳೂರು ಮತ್ತು ಮುಂಬೈ ನಡುವೆ ರಸ್ತೆ ನಿರ್ಮಾಣದ ಯೋಜನೆ ಎಂದುಕೊಳ್ಳೋಣ. ಈ ಯೋಜನೆಗೆ ಸುಮಾರು 5000 ಕೋಟಿ ರು. ಅವಶ್ಯಕತೆ ಇದ್ದರೆ, ನಿರ್ದಿಷ್ಟಮೊತ್ತದ ಅಂದರೆ 1000 ರು. ಮುಖಬೆಲೆಯ ಬಾಂಡ್‌ಗಳನ್ನು ವಿತರಿಸುತ್ತಾರೆ. 5 ವರ್ಷದ ನಂತರ ಟೋಲ್‌ ಮೂಲಕ ಸಂಗ್ರಹಿಸುವ ಒಟ್ಟು ಮೊತ್ತವನ್ನು ಹೂಡಿಕೆದಾರರಿಗೆ ಹಂಚುತ್ತಾರೆ. ಸಾವಿರ ರು. ನ ಬಾಂಡ್‌ಗೆ ನಿಮಗೆ ಸುಮಾರು 300 ರು.ಗಳ ಲಾಭವಾಗುತ್ತದೆ. ಈ ಲಾಭಕ್ಕೆ ತೆರಿಗೆ ಇರುವುದಿಲ್ಲ.

ಇದರಿಂದ ಸರ್ಕಾರಕ್ಕೆ ನಿಗದಿತ ಬಡ್ಡಿ ಕೊಡುವ ಮತ್ತು ಅದಕ್ಕಾಗಿ ಸಂಪನ್ಮೂಲ ಕ್ರೋಡೀಕರಿಸುವ ಜವಾಬ್ದಾರಿ ಇರುವುದಿಲ್ಲ. ಆದರೆ ಬಂಡವಾಳ ಹರಿದು ಬರುತ್ತದೆ.