462 ಕೋಟಿ ಕಟ್ಟಿತಮ್ಮ ಅನಿಲ್ ಜೈಲು ಶಿಕ್ಷೆ ತಪ್ಪಿಸಿದ ಮುಕೇಶ್!| ಸುಪ್ರೀಂ ನಿಗದಿಪಡಿಸಿದ್ದ ಗಡುವಿನ ಮುನ್ನಾ ದಿನ ಪಾವತಿ| ಹೌದು ರಿಲಯನ್ಸ್ ಹಣ ಕೊಟ್ಟಿದೆ: ಎರಿಕ್ಸನ್ ಕಂಪನಿ
ಮುಂಬೈ[ಮಾ.19]: ಸುಪ್ರೀಂಕೋರ್ಟ್ ನಿಗದಿಪಡಿಸಿದ್ದ ಗಡುವು ಮುಗಿಯುವ ಒಂದು ದಿನ ಮುನ್ನ ಸ್ವೀಡನ್ ಮೂಲದ ಎರಿಕ್ಸನ್ ಕಂಪನಿಗೆ ಉದ್ಯಮಿ ಅನಿಲ್ ಅಂಬಾನಿ 462 ಕೋಟಿ ರು. ಬಾಕಿ ಪಾವತಿಸಿದ್ದಾರೆ. ತನ್ಮೂಲಕ 3 ತಿಂಗಳ ಜೈಲು ಶಿಕ್ಷೆಯಿಂದ ಅವರು ಪಾರಾಗಿದ್ದಾರೆ. ವಿಶೇಷವೆಂದರೆ ಹೀಗೆ ಅನಿಲ್ ಅಂಬಾನಿ ಜೈಲು ಪಾಲಾಗುವುದನ್ನು ತಪ್ಪಿಸಿದ್ದು ಅವರ ಹಿರಿಯ ಸೋದರ, ದೇಶದ ನಂ.1 ಶ್ರೀಮಂತ ಮುಕೇಶ್ ಅಂಬಾನಿ.
ಸುಮಾರು 40 ಸಾವಿರ ಕೋಟಿ ರು. ಸಾಲದಲ್ಲಿರುವ ಒಂದು ಕಾಲದ ಶ್ರೀಮಂತ ಉದ್ಯಮಿ ಅನಿಲ್, ಮಂಗಳವಾರದೊಳಗೆ 462 ಕೋಟಿ ರು.ಗಳನ್ನು ಪಾವತಿಸಬೇಕಿತ್ತು. ಇದನ್ನು ಕಟ್ಟಲು ವಿಫಲವಾದರೆ 3 ತಿಂಗಳು ಜೈಲು ಶಿಕ್ಷೆ ವಿಧಿಸುವುದಾಗಿ ಸುಪ್ರೀಂಕೋರ್ಟ್ ಕಳೆದ ತಿಂಗಳು ಎಚ್ಚರಿಕೆ ನೀಡಿತ್ತು. ಆರ್ಥಿಕ ಸಂಕಷ್ಟದಲ್ಲಿದ್ದರೂ ಹೇಗೋ ಹಣ ಹೊಂದಿಸಿ ಅನಿಲ್ ಅಂಬಾನಿ ಬಾಕಿ ಪಾವತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಿಲಯನ್ಸ್ ಕಮ್ಯುನಿಕೇಷನ್ ತನಗೆ ಹಣ ಪಾವತಿಸಿದೆ ಎಂದು ಎರಿಕ್ಸನ್ ಕಂಪನಿಯ ವಕೀಲರು ಖಚಿತಪಡಿಸಿದ್ದಾರೆ.
ಈ ಹಿಂದೆ ಮುಕೇಶ್ ಅಂಬಾನಿ, ಅನಿಲ್‌ರ ಆರ್‌ಕಾಂ ವಯರ್‌ಲೆಸ್‌ನ 3000 ಕೋಟಿ ರು.ಮೊತ್ತದ ಆಸ್ತಿ ಖರೀದಿಸುವ ಮೂಲಕ ಸೋದರನಿಗೆ ನೆರವಾಗಿದ್ದರು.
ಏನಿದು ಪ್ರಕರಣ?:
ದೂರಸಂಪರ್ಕ ಉಪಕರಣ ತಯಾರಿಕೆಯಲ್ಲಿ ಎರಿಕ್ಸನ್ ತೊಡಗಿಸಿಕೊಂಡಿದೆ. ಅದರ ಸೇವೆ ಬಳಸಿಕೊಂಡಿದ್ದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ ಬಡ್ಡಿ ಸೇರಿ 571 ಕೋಟಿ ರು. ಪಾವತಿಸಬೇಕಿತ್ತು. ಹಣಕಾಸು ಮುಗ್ಗಟ್ಟು ಎದುರಿಸುತ್ತಿದ್ದ ರಿಲಯನ್ಸ್ ಹಣ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಎರಿಕ್ಸನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಸೂಚನೆಯಂತೆ 118 ಕೋಟಿ ರು.ಗಳನ್ನು ಅನಿಲ್ ಅಂಬಾನಿ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿದ್ದರು. ಬಡ್ಡಿ ಸೇರಿ 462 ಕೋಟಿ ರು. ಬಾಕಿ ಉಳಿದಿತ್ತು. ಇದರ ಪಾವತಿಗೆ ನ್ಯಾಯಾಲಯ ಗಡುವು ನೀಡಿದರೂ ಅಂಬಾನಿ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾ.19ರಂದು 4 ವಾರ ಗಡುವು ನೀಡಿದ್ದ ಸುಪ್ರೀಂಕೋರ್ಟ್, 3 ತಿಂಗಳ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿತ್ತು.
2008ರಲ್ಲಿ 3.8 ಲಕ್ಷ ಕೋಟಿ ರು. ಇದ್ದ ಅನಿಲ್ ಅಂಬಾನಿಯ ಆಸ್ತಿ ಈಗ 210 ಕೋಟಿ ರು.ಗೆ ಕುಸಿದಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 19, 2019, 8:25 AM IST