3 ಕೋಟಿ ಎಫ್‌ಡಿ ಹಣ ಕದ್ದ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ, ಆರ್‌ಬಿಐಗೆ ನೋಟಿಸ್ ಕಳಿಸಿದ ಕೋರ್ಟ್!
ಗ್ರಾಹಕರ ₹3 ಕೋಟಿ ಠೇವಣಿ ವಂಚಿಸಿದ ಆರೋಪದ ಮೇಲೆ HDFC ಬ್ಯಾಂಕ್ ಉದ್ಯೋಗಿಯನ್ನು ಬಂಧಿಸಲಾಗಿದೆ. ಬಾಂಬೆ ಹೈಕೋರ್ಟ್ HDFC ಬ್ಯಾಂಕ್ ಮತ್ತು RBIಗೆ ನೋಟಿಸ್ ಜಾರಿ ಮಾಡಿದೆ.
ಮುಂಬೈ (ಡಿ.5): ಗ್ರಾಹಕನ ಸ್ಥಿರ ಠೇವಣಿಗಳಿಂದ ₹ 3 ಕೋಟಿ ಕದ್ದ ಆರೋಪದ ಮೇಲೆ ಬ್ಯಾಂಕ್ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದ ನಂತರ ಬಾಂಬೆ ಹೈಕೋರ್ಟ್ ಡಿಸೆಂಬರ್ 3 ರಂದು HDFC ಬ್ಯಾಂಕ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ನೋಟಿಸ್ ಜಾರಿ ಮಾಡಿದೆ. 'ಕಟ್ಟಕಡೆಯದಾಗಿ ಜನರ ನಂಬಿಕೆ ಇರುವುದು ಆಯಾ ಬ್ಯಾಂಕ್‌ನ ಮೇಲೆ. ಬ್ಯಾಂಕ್‌ನ ರಿಲೇಷನ್‌ಷಿಪ್ ಮ್ಯಾನೇಜರ್ ತನಗೆ ಬೇಕಾದ ಹಾಗೆ ಮಾಡೋದಾದರೆ, ಜನರಲ್ಲಿ ನಂಬಿಕೆ ಬರೋಕೆ ಹೇಗೆ ಸಾಧ್ಯ. ಅಂಥ ವ್ಯಕ್ತಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಯಾಕಿರಬೇಕು' ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಹಾಗೂ ಪೃಥ್ವಿರಾಜ್ ಚೌಹಾನ್ ಹೇಳಿದ್ದಾರೆ.
53 ವರ್ಷದ ಮೀನಾಕ್ಷಿ ಕಪೂರಿಯಾ ಎಂಬುವರು ಸಲ್ಲಿಸಿರುವ ದೂರಿನಲ್ಲಿ ಆಕೆಯ ರಿಲೇಶನ್ ಶಿಪ್ ಮ್ಯಾನೇಜರ್ 27 ವರ್ಷದ ಪಾಯಲ್ ಕೊಠಾರಿ ತನ್ನ ₹ 3 ಕೋಟಿ ಮೌಲ್ಯದ ಸ್ಥಿರ ಠೇವಣಿಗಳನ್ನು ಮುರಿದು ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಅಲ್ಲಿಂದ ಕೊಠಾರಿ ಅವರ ಸ್ವಂತ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ವಹಿವಾಟುಗಳ ಬಗ್ಗೆ ತಾನು ಯಾವುದೇ SMS ಅಥವಾ ಇಮೇಲ್ ಅಲರ್ಟ್‌ಗಳನ್ನು ಸ್ವೀಕರಿಸಿಲ್ಲ ಎಂದು ಕಪೂರಿಯಾ ಹೇಳಿದ್ದಾರೆ.
ಕಪೂರಿಯಾ ಅವರ ವಕೀಲ ರಿಜ್ವಾನ್ ಸಿದ್ದಿಕಿ, ಕೊಠಾರಿ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ತೆಗೆದುಕೊಳ್ಳುವ ಮೂಲಕ ಅವರ ನಂಬಿಕೆಯನ್ನು ಗಳಿಸಿದರು ಎಂದು ವಿವರಿಸಿದರು. ಹಣವನ್ನು ಮ್ಯೂಚುವಲ್ ಫಂಡ್‌ಗಳು, ಚಿನ್ನದ ಬಾಂಡ್‌ಗಳು ಮತ್ತು ಸ್ಥಿರ ಠೇವಣಿಗಳಿಗಿಂತ ಹೆಚ್ಚು ಹಣ ಗಳಿಸುವ ಇತರ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಕೊಠಾರಿ, ಕಪೂರಿಯಾಗೆ ಭರವಸೆ ನೀಡಿದ್ದರು ಎಂದಿದ್ದಾರೆ. ಇದಲ್ಲದೆ, ಕೊಠಾರಿಯೊಂದಿಗೆ ಸಮಸ್ಯೆಯನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಿಕೊಳ್ಳುವಂತೆ ವರ್ಸೋವಾ ಪೊಲೀಸರು ಕಪೂರಿಯಾ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸಿದ್ದಿಕಿ ತಿಳಿಸಿದರು.
677 ಕೋಟಿಗೆ ರಾಜಸ್ಥಾನದ ಕಂಪನಿಯ ಪಾಲಾಗಲಿದೆ ಬೆಂಗಳೂರಿನ ಪ್ರಖ್ಯಾತ ಸ್ಟಾರ್ಟ್‌ಅಪ್!
ಕೊಠಾರಿ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಅದರಲ್ಲಿ ಕೇವಲ 30 ಸಾವಿರ ರೂಪಾಯಿ ಮಾತ್ರ ಇದೆ ಎಂದು ಪ್ರಾಸಿಕ್ಯೂಟರ್ ಕ್ರಾಂತಿ ಹಿವ್ರಾಲೆ ನ್ಯಾಯಾಲಯಕ್ಕೆ ತಿಳಿಸಿದರು. ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾಯಾಧೀಶರು ವಲಯ ಡಿಸಿಪಿ ದೀಕ್ಷಿತ್ ಗೆಡಮ್‌ಗೆ ಸೂಚನೆ ನೀಡಿದ್ದರು. ಮಂಗಳವಾರ, ಕೊಠಾರಿಯನ್ನು "ಇಂದು ಬೆಳಿಗ್ಗೆ" ಬಂಧಿಸಲಾಗಿದೆ ಎಂದು ಹಿವ್ರಾಲೆ ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಮೂರ್ತಿ ಮೊಹಿತೆ-ದೇರೆ, “ದೂರುದಾರರು ನ್ಯಾಯಾಲಯಕ್ಕೆ ಬಂದಾಗ ಮಾತ್ರವೇ ಏಕೆಈ ಬಂಧನದ ಸುದ್ದಿಗಳು ಬರುತ್ತವೆ. ಅದಕ್ಕೂ ಮುಂಚೆ ಯಾಕೆ ಸಾಧ್ಯವಿಲ್ಲ. ನೀವು (ಪೊಲೀಸರು) ವಿಷಯವನ್ನು ಇತ್ಯರ್ಥಗೊಳಿಸಲು ಇಬ್ಬರಿಗೂ ಒತ್ತಡ ಹೇರುತ್ತಿದ್ದೀರಾ?' ಎಂದು ಪ್ರಶ್ನೆ ಮಾಡಿದರು.
Bengaluru: 2160 ಕೋಟಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪಾಲು ಖರೀದಿಸಿದ ಕೆನಡಾ ಕೋಟ್ಯಧಿಪತಿ!
ಶೀಘ್ರದಲ್ಲೇ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗುತ್ತದೆ ಎಂದು ಗೆಡಮ್ ಕೋರ್ಟ್‌ಗೆ ತಿಳಿಸಿದ್ದಾರೆ. ತನಿಖೆಯನ್ನು ಪಿಐ ಅಮೋಲ್ ಧೋಲೆ ಅವರಿಂದ ಹಿರಿಯ ಪಿಐ ಗಜಾನನ ಪವಾರ್ ಅವರಿಗೆ ಹಸ್ತಾಂತರಿಸಲಾಗಿದ್ದು, ಅವರು ಪ್ರಕರಣದ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಅವರು ಹೇಳಿದರು. ಧೋಲೆ ವಿರುದ್ಧ ಕ್ರಮದ ಕುರಿತು ಕೇಳಿದಾಗ, ಗೆಡಮ್ ನಿರ್ಲಕ್ಷ್ಯಕ್ಕಾಗಿ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕಪೂರಿಯಾ ಅವರಿಗೆ ತಮ್ಮ ಖಾತೆಯಲ್ಲಾದ ವ್ಯವಹಾರಗಳ ಅಲರ್ಟ್‌ಗಳು ಯಾಕೆ ಬಂದಿಲ್ಲ ಎಂದು ನ್ಯಾಯಮೂರ್ತಿ ಪ್ರಶ್ನೆ ಮಾಡಿದ್ದಾರೆ.. ಕೊಠಾರಿ ಅವರು ಕಪೂರಿಯಾ ಅವರ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಬ್ಯಾಂಕಿನ ದಾಖಲೆಗಳಲ್ಲಿ ಬದಲಾಯಿಸಿದ್ದಾರೆ ಎಂದು ಗೆಡಮ್ ವಿವರಿಸಿದರು. ಇದೇ ಕಾರಣಕ್ಕಾಗಿ ಕಪೂರಿಯಾ ಅವರಿಗೆ ಯಾವುದೇ ಅಲರ್ಟ್‌ಗಳು ಹೋಗುತ್ತಿರಲಿಲ್ಲ ಎಂದಿದ್ದಾರೆ.
ಇದು ಅತ್ಯಂತ ಗಂಭೀರ ವಿಚಾರ ಎಂದು ನ್ಯಾಯಾಧೀಶರು, ಇದರಲ್ಲಿ ಬ್ಯಾಂಕ್‌ನ ಪಾತ್ರದ ಬಗ್ಗೆ ತನಿಖೆ ಮಾಡಿದ್ದೀರಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದರು. ಬ್ಯಾಂಕ್ ಈ ವಿಚಾರದಲ್ಲಿ ತನಿಖೆಯಿಂದ ಪಾರಾಗುವಂತಿಲ್ಲ. ಅವರಿ ಮೂಗಿನ ಕೆಳಗೆ ಹಣ ನಾಪತ್ತೆಯಾಗಿದೆ. ಇದಕ್ಕೆ ಅವರನ್ನೂ ಹೊಣೆಗಾರರನ್ನಾಗಿ ಮಾಡಬೇಕಲ್ಲವೇ? ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.
ಇಂತಹ ಪ್ರಕರಣಗಳ ಕುರಿತು ಆರ್‌ಬಿಐ ಸುತ್ತೋಲೆಯನ್ನು ಸಿದ್ದಿಕಿ ಉಲ್ಲೇಖಿಸಿದ್ದಾರೆ. ನ್ಯಾಯಮೂರ್ತಿ ಮೋಹಿತೆ-ಡೆರೆ ಅವರು, "ಅರ್ಜಿದಾರರು ವಂಚನೆಗೊಳಗಾದ ವಿಧಾನವನ್ನು ಪರಿಗಣಿಸಿ," ಮತ್ತು ಲೋಖಂಡವಾಲಾ ಶಾಖೆಯ HDFC ಬ್ಯಾಂಕ್‌ನ ಹಿರಿಯ ಮ್ಯಾನೇಜರ್ ಅಥವಾ ಆರ್‌ಬಿಐನ ಮುಂಬೈ ಪ್ರಾದೇಶಿಕ ವ್ಯವಸ್ಥಾಪಕರ ಹೆಸರನ್ನು ಈ ಕೇಸ್‌ಗೆ ಸೇರಿಸಿ ಎಂದು ಹೇಳಿದ್ದಾರೆ.
ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಈ ಕೇಸ್ ಮಾತ್ರ ನಮ್ಮ ಮುಂದಿದೆ. ಸಾಕಷ್ಟು ಹಿರಿಯ ವ್ಯಕ್ತಿಗಳು ಕೊನೆಗಾಲದ ಆರ್ಥಿಕ ಭದ್ರತೆಗಾಗಿ ತಮ್ಮ ಹಣವನ್ನು ಎಫ್‌ಡಿಯಲ್ಲಿ ಇಟ್ಟಿರುತ್ತಾರೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿಸೆಂಬರ್ 13 ಕ್ಕೆ ನಿಗದಿಪಡಿಸಿದ್ದು, ಅಕ್ಟೋಬರ್ 30 ರಂದು ಎಫ್‌ಐಆರ್ ದಾಖಲಿಸುವ ಮೊದಲು ಮತ್ತು ನಂತರ ಕಪೂರಿಯಾ ಅವರ ಖಾತೆಯ ಬ್ಯಾಲೆನ್ಸ್ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ ತಿಳಿಸಿದೆ.