ಜಾಗತಿಕ ತಂತ್ರಜ್ಞಾನ ಸೇವಾ ಸಂಸ್ಥೆಯಾದ 'ಬಿಎಲ್‌ಎಸ್ ಇಂಟರ್‌ನ್ಯಾಷನಲ್' ತನ್ನ ಸೇವಾ ಜಾಲವನ್ನು 100ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದೆ. ಈ ಮಹತ್ವದ ಮೈಲಿಗಲ್ಲನ ಜೊತೆಗೆ, ಕಂಪನಿಯು 2,998 ಕೋಟಿ ರೂ. ಆದಾಯ ಮತ್ತು 724 ಕೋಟಿ ರೂ. ನಿವ್ವಳ ಲಾಭದೊಂದಿಗೆ ಭರ್ಜರಿ ಆರ್ಥಿಕ ಸಾಧನೆ ಮಾಡಿದೆ.

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸರ್ಕಾರಗಳು ಮತ್ತು ನಾಗರಿಕರಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಐ ಆಧಾರಿತ ಸೇವೆಗಳನ್ನು ಒದಗಿಸುವ 'ಬಿಎಲ್‌ಎಸ್ ಇಂಟರ್‌ನ್ಯಾಷನಲ್' ಇದೀಗ ತನ್ನ ಸೇವಾ ಜಾಲವನ್ನು ವಿಶ್ವದ 100ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದೆ. ಈ ಮೂಲಕ ಪ್ರಪಂಚದ 46ಕ್ಕೂ ಅಧಿಕ ಸರ್ಕಾರಗಳಿಗೆ ವೀಸಾ, ಕಾನ್ಸುಲರ್ ಮತ್ತು ನಾಗರಿಕ ಸೇವೆಗಳನ್ನು ಯಶಸ್ವಿಯಾಗಿ ಪೂರೈಸುತ್ತಾ ಬಂದಿರುವ ಸಂಸ್ಥೆಯು ಹೊಸ ಶಕೆಯನ್ನು ಆರಂಭಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಎರಡು ದಶಕಗಳಿಂದ ಈ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು 100 ದೇಶಗಳ ಗಡಿ ದಾಟಿರುವುದು ಮಹತ್ವದ ಮೈಲಿಗಲ್ಲಾಗಿದೆ. ಹೊಸ ಮಾರುಕಟ್ಟೆಗಳ ಪ್ರವೇಶ, ವಿವಿಧ ಸರ್ಕಾರಗಳೊಂದಿಗಿನ ದೃಢವಾದ ಪಾಲುದಾರಿಕೆ, ಕಾರ್ಯತಂತ್ರದ ಸ್ವಾಧೀನಗಳು ಹಾಗೂ ತಂತ್ರಜ್ಞಾನ ಆಧಾರಿತ ನಾವೀನ್ಯತೆಯೇ ಈ ಬೃಹತ್ ಬೆಳವಣಿಗೆಗೆ ಕಾರಣವಾಗಿದೆ.

ಆರ್ಥಿಕ ವರ್ಷದಲ್ಲಿ ಭರ್ಜರಿ ಲಾಭ ಗಳಿಕೆ

ಕಾರ್ಯಾಚರಣೆಯ ವಿಸ್ತರಣೆಯ ಜೊತೆಗೆ, 2026ನೇ ಆರ್ಥಿಕ ವರ್ಷದಲ್ಲಿ ಕಂಪನಿಯು ಅತ್ಯುತ್ತಮ ಆರ್ಥಿಕ ಸಾಧನೆ ಮಾಡಿದೆ. ಕಂಪನಿಯ ವಾರ್ಷಿಕ ಆದಾಯವು ಬರೋಬ್ಬರಿ 2,998 ಕೋಟಿ ರೂ.ಗೆ ತಲುಪಿದ್ದು, ಶೇ. 36.7ರಷ್ಟು ಭಾರೀ ಏರಿಕೆ ಕಂಡಿದೆ.

ಅಂತೆಯೇ ನಿವ್ವಳ ಲಾಭವು ಶೇ. 34.1ರಷ್ಟು ಹೆಚ್ಚಾಗಿದ್ದು 724 ಕೋಟಿ ರೂ.ಗೆ ಮುಟ್ಟಿದೆ. ಇನ್ನು ಎಬಿಟ್ಡಾ ಕೂಡ ಶೇ. 30.1ರಷ್ಟು ಏರಿಕೆ ಕಂಡು 819 ಕೋಟಿ ರೂ. ದಾಖಲಾಗಿದೆ.

ʼನಮ್ಮ ಮೇಲಿಟ್ಟಿರುವ ನಂಬಿಕೆಗೆ ಇದು ಸಾಕ್ಷಿʼ

ಈ ಐತಿಹಾಸಿಕ ಮೈಲಿಗಲ್ಲಿನ ಕುರಿತು ಮಾತನಾಡಿರುವ ಬಿಎಲ್‌ಎಸ್ ಇಂಟರ್‌ನ್ಯಾಷನಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶಿಖರ್ ಅಗರ್ವಾಲ್, "100 ದೇಶಗಳಿಗೆ ಬಿಎಲ್‌ಎಸ್‌ ಸೇವೆ ವಿಸ್ತರಣೆಯಾಗಿರುವುದು ನಮ್ಮ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣ. ಕಳೆದ ಎರಡು ದಶಕಗಳಿಂದ ಪ್ರಪಂಚದಾದ್ಯಂತ ಸರ್ಕಾರಗಳು ಮತ್ತು ನಾಗರಿಕರು ನಮ್ಮ ಮೇಲಿಟ್ಟಿರುವ ಅಪಾರ ನಂಬಿಕೆಗೆ ಇದು ಸಾಕ್ಷಿ. ಅತ್ಯುತ್ತಮ ಕಾರ್ಯಾಚರಣೆ, ದತ್ತಾಂಶ ಭದ್ರತೆ ಮತ್ತು ಉನ್ನತ ಗುಣಮಟ್ಟದ ಸೇವೆಗಳ ಮೂಲಕ ನಾವು ಈ ಸಾಧನೆ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಸೇವೆಗಳನ್ನು ಜನರಿಗೆ ಮತ್ತಷ್ಟು ಸುಲಭವಾಗಿ ಮತ್ತು ಭವಿಷ್ಯಕ್ಕೆ ತಕ್ಕಂತೆ ಒದಗಿಸಲು ನಾವು ಹೊಸ ತಂತ್ರಜ್ಞಾನಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುವುದನ್ನು ಮುಂದುವರಿಸಲಿದ್ದೇವೆ" ಎಂದು ಹೇಳಿದರು.

2005ರಲ್ಲಿ ಆರಂಭವಾದ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ವೀಸಾ, ಪಾಸ್‌ಪೋರ್ಟ್, ಕಾನ್ಸುಲರ್ ಸೇವೆ, ಇ-ಗವರ್ನೆನ್ಸ್, ದೃಢೀಕರಣ, ಬಯೋಮೆಟ್ರಿಕ್ ಮತ್ತು ಇ-ವೀಸಾ ಸೇವೆಗಳನ್ನು ಜಾಗತಿಕ ಮಟ್ಟದಲ್ಲಿ ಒದಗಿಸುತ್ತಿದೆ.

ರಾಜತಾಂತ್ರಿಕ ರಾಯಭಾರ ಕಚೇರಿಗಳು ಸೇರಿದಂತೆ 46ಕ್ಕೂ ಹೆಚ್ಚು ಕ್ಲೈಂಟ್ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿರುವ ಸಂಸ್ಥೆ, ಪ್ರಸ್ತುತ ವಿಶ್ವಾದ್ಯಂತ 50,000ಕ್ಕೂ ಹೆಚ್ಚು ಕೇಂದ್ರಗಳನ್ನು ಮತ್ತು 60,000ಕ್ಕೂ ಅಧಿಕ ಸಿಬ್ಬಂದಿಗಳನ್ನು ಹೊಂದಿದೆ.