ಎದುರಾಳಿಗಳನ್ನ ಮಣಿಸಲು ಅಂಬಾನಿ ತಂತ್ರ, ಜಿಯೋ ಸಿನಿಮಾದಲ್ಲಿ ಐಪಿಎಲ್ ಉಚಿತವಾಗಿ ಪ್ರಸಾರ!
ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮುಂದಿನ ಐದು ವರ್ಷದ ಐಪಿಎಲ್ ನೇರಪ್ರಸಾರದ ಹಕ್ಕು ಖರೀದಿ ಮಾಡಿರುವ ರಿಯಲನ್ಸ್‌ನ ವಯಾಕಾಮ್ 18 ಗ್ರೂಪ್, ಆನ್‌ಲೈನ್‌ನಲ್ಲಿ ಉಚಿತವಾಗಿ ಐಪಿಎಲ್ ನೋಡುವ ಅವಕಾಶವನ್ನು ಅಭಿಮಾನಿಗಳಿಗೆ ನೀಡಲಿದೆ. ಜಾಹೀರಾತುಗಳ ಮೂಲಕ ಲಾಭ ಮಾಡಿಕೊಳ್ಳುವ ಇರಾದೆಯನ್ನು ಕಂಪನಿ ಹೊಂದಿದೆ.
ಮುಂಬೈ (ಫೆ.23): ಇಲ್ಲಿಯವರೆಗೂ ಐಪಿಎಲ್ ನೇರಪ್ರಸಾರಕ್ಕಾಗಿ ಸ್ಟಾರ್ ಇಂಡಿಯಾದ ಚಾನೆಲ್‌ಗಳಿಗೆ ಹಾಗೂ ಡಿಸ್ನಿ ಹಾಟ್‌ಸ್ಟಾರ್‌ಗೆ ಜನರು ಹಣ ಪಾವತಿ ಮಾಡಬೇಕಿತ್ತು. ಆದರೆ, ಮುಂದಿನ ಐದು ವರ್ಷಗಳ ಐಪಿಎಲ್ ನೇರಪ್ರಸಾರ ಹಕ್ಕು ಪಡೆದುಕೊಂಡಿರುವ ವಯಾಕಾಮ್ 18 ಗ್ರೂಪ್, ಈ ಬಾರಿ ಉಚಿತವಾಗಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಮುಖೇಶ್ ಅಂಬಾನಿ ನೇತೃತ್ವದ ಗ್ರೂಪ್ ತನ್ನ ಜಿಯೋ ಸಿನಿಮಾ ಚಾನೆಲ್‌ನ ಮೂಲಕ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ನೇರಪ್ರಸಾರ ಮಾಡಲಿದೆ. ಆ ಮೂಲಕ ಭಾರತದಲ್ಲಿ ಐಪಿಎಲ್‌ನ ಭಿನ್ನ ವಿಭಾಗದ ಪ್ರಸಾರ ಹಕ್ಕುಗಳನ್ನು ಹೊಂದಿರುವ ವಾಲ್ಟ್ ಡಿಸ್ನಿ ಕಂಪನಿಯ ಡಿಸ್ನಿ ಹಾಟ್‌ಸ್ಟಾರ್ ಹಾಗೂ ಅಮೇಜಾನ್ ಪ್ರೈಮ್ ವಿಡಿಯೋದ ಅಧಿಪತ್ಯಕ್ಕೆ ಸವಾಲೆಸೆಯಲು ಸಿದ್ಧವಾಗಿದೆ. ಕಂಪನಿಯ ಆಪ್ತ ಮೂಲಗಳು ಕೂಡ ಇದನ್ನು ಖಚಿತಪಡಿಸಿದ್ದು, ಭಾರತದಲ್ಲಿ ಮೊಬೈಲ್ ಮೂಲಕ ಪಂದ್ಯ ವೀಕ್ಷಿಸುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಾಟ್‌ಸ್ಟಾರ್ ಹಾಗೂ ಅಮೇಜಾನ್ ಬಳಿ ಇರುವ ವೀಕ್ಷಕರನ್ನು ತನ್ನತ್ತ ಸೆಳೆಯುವುದರೊಂದಿಗೆ ಹೊಸ ಪ್ರೇಕ್ಷಕರನ್ನು ಹೊಂದುವ ನಿಟ್ಟನಲ್ಲಿ ರಿಲಯನ್ಸ್ ದೊಡ್ಡ ಪ್ಲ್ಯಾನ್ ಮಾಡಿದೆ.
ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್, ಪ್ಯಾರಾಮೌಂಟ್ ಗ್ಲೋಬಲ್ ಹಾಗೂ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಜಂಟಿ ಉದ್ಯಮವಾಗಿದೆ. ಬರೋಬ್ಬರಿ 20,500 ಕೋಟಿ ರೂಪಾಯಿಗೆ ಭಾರತೀಯ ಉಪಖಂಡದಲ್ಲಿ ಐಪಿಎಲ್‌ನ ಡಿಜಿಟಲ್ ನೇರಪ್ರಸಾರದ ಹಕ್ಕನ್ನು ಖರೀದಿ ಮಾಡಿದೆ. ಈ ಹಾದಿಯಲ್ಲಿ ಡಿಸ್ನಿ ಹಾಟ್ ಸ್ಟಾರ್ ಹಾಗೂ ಸೋನಿ ಕಾರ್ಪೋರೇಷನ್‌ನ ಸವಾಲನ್ನು ಸೋಲಿಸಿತ್ತು. ಇದಕ್ಕೂ ಮುನ್ನ ಐಪಿಎಲ್ ಡಿಜಿಟಲ್ ಹಕ್ಕು ಹೊಂದಿದ್ದ ವಾಲ್ಟ್ ಡಿಸ್ನಿ ತನ್ನ ಡಿಸ್ನಿ ಹಾಟ್‌ಸ್ಟಾರ್ ಅಪ್ಲಿಕೇಶನ್‌ಗೆ ಐಪಿಎಲ್ ಮೂಲಕವೇ ಕೋಟ್ಯಂತರ ವೀಕ್ಷಕರನ್ನು ಸಂಪಾದನೆ ಮಾಡಿತ್ತು.
ಐಪಿಎಲ್ ಮಾಧ್ಯಮ ಹಕ್ಕು ಖರೀದಿಯಿಂದ ಲಾಭ ಮಾಡಿಕೊಳ್ಳುವ ದೃಷ್ಟಿಯಲ್ಲಿ ರಿಯಲನ್ಸ್ ಭಿನ್ನ ತಂತ್ರವನ್ನು ಮಾಡುತ್ತಿದೆ. ಸಾಧ್ಯವಾದಷ್ಟು ಜನರಿಗೆ ಉಚಿತವಾಗಿ ಕ್ರಿಕೆಟ್ ಪಂದ್ಯವನ್ನು ತಲುಪಿಸುವ ಮೂಲಕ, ಜಾಹೀರಾತು ಆದಾಯದ ಮೂಲಕ ಲಾಭ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಆದರೆ, ಈ ನಿರ್ಧಾರ ಇನ್ನೂ ಸ್ಪಷ್ಟವಾಗಿ ಪ್ರಕಟವಾದ ಹಿನ್ನಲೆಯಲ್ಲಿ ತಮ್ಮ ಹೆಸರನ್ನು ಹೇಳಲು ಅಧಿಕಾರಿ ನಿರಾಕರಿಸಿದ್ದಾರೆ. ಗೂಗಲ್ ಮತ್ತು ಫೇಸ್‌ಬುಕ್‌ನಂತಹ ಉಚಿತ ಮಾಧ್ಯಮ ಸೇವೆಗಳು ದೇಶದಲ್ಲಿ ಜಾಹೀರಾತು ಮಾರಾಟದಲ್ಲಿ ಶತಕೋಟಿ ಡಾಲರ್‌ಗಳನ್ನು ಸಂಪಾದನೆ ಮಾಡುತ್ತಿವೆ. ಇನ್ನೊಂದೆಡೆ ನೆಟ್‌ಫ್ಲಿಕ್ಸ್‌ನಂತಹ ಪಾವತಿಸಿದ ಪ್ರೀಮಿಯಂ ದೇಶದಲ್ಲಿ ಲಾಭದ ಮುಖ ನೋಡಲು ಇನ್ನೂ ಪ್ರಯಾಸಪಡುತ್ತಿವೆ. ಆ ಕಾರಣಕ್ಕಾಗಿ ಐಪಿಎಲ್ ಪ್ರಸಾರವನ್ನು ಉಚಿತ ಮಾಡಿ ಜಾಹೀರಾತು ಮೂಲಕ ಅದಾಯ ಗಳಿಸೋದು ಕಂಪನಿಯ ತಂತ್ರ ಎಂದು ಹೇಳಲಾಗಿದೆ.
ಈ ಬಾರಿಯ ಐಪಿಎಲ್ ಪಂದ್ಯಗಳನ್ನು 55 ಕೋಟಿಗೂ ಹೆಚ್ಚಿನ ಸಂಖ್ಯೆಯ ಜನರು ವೀಕ್ಷಣೆ ಮಾಡಲಿದ್ದಾರೆ ಎಂದು ವಯಾಕಾಮ್ 18 ಅಧಿಕಾರಿಗಳು ನಿರೀಕ್ಷೆ ಮಾಡಿದ್ದಾರೆ. ಇದು ಆನ್‌ಲೈನ್‌ನಲ್ಲಿ ಕಂಪನಿಯ ದೊಡ್ಡ ಮಟ್ಟದ ಮಹತ್ವಾಕಾಂಕ್ಷೆಯನ್ನು ಪೂರೈಸಲು ಸಹಾಯ ಮಾಡಲಿದೆ.
ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕುಸಿದ ಅದಾನಿ,ಅಂಬಾನಿ ಸ್ಥಾನ; ಮುಗಿಯಿತಾ ಭಾರತದ ಶ್ರೀಮಂತರ ದರ್ಬಾರ್
ಈ ವರ್ಷದ ಐಪಿಎಲ್ ಪಂದ್ಯಗಳು ಮಾರ್ಚ್ 31ರಿಂದ ಆರಂಭವಾಗಲಿದ್ದು, ಸುಮಾರು ಎಂಟು ವಾರಗಳ ಕಾಲ ನಡೆಯಲಿದೆ. ಇಂಟರ್ನೆಟ್ ಹೊಂದಿದ್ದರೆ ಸಾಕು, ಯಾವುದೇ ಸಮಯದಲ್ಲಿ ಎಷ್ಟು ಪಂದ್ಯಗಳನ್ನಾದರೂ ನೋಡುವ ಅವಕಾಶವನ್ನು ಜಿಯೋ ಸಿನಿಮಾ ನೀಡಲಿದೆ ಎನ್ನಲಾಗಿದೆ. ಈ ಹಿಂದೆ ಜಿಯೋ ಸೇವೆ ಆರಂಭ ಮಾಡಿದಾಗಲೂ ರಿಯಲನ್ಸ್ ಇದೇ ತಂತ್ರ ಅನುಸರಿಸಿತ್ತು. ಜಿಯೋ ಬಂದ ಕೆಲ ವರ್ಷದಲ್ಲಿಯೇ ಇತರ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರನ್ನು ಕಳೆದುಕೊಂಡಿದ್ದರು.
IPL Bad Luck: ಉದ್ಯಮಿಗಳ ಪಾಲಿಗೆ ಐಪಿಎಲ್ ಐರನ್ ಲೆಗ್ ಅನ್ನೋ ಮಾತು ನಿಜವಾಗ್ತಿದ್ಯಾ?
ಅದೇ ರೀತಿ ಐಪಿಎಲ್‌ಗೆ ವೆಚ್ಚ ಮಾಡಿದ ಹಣವನ್ನು ಆರಂಭಿಕ ವರ್ಷಗಳಲ್ಲಿಯೇ ವಾಪಾಸ್ ಪಡೆದುಕೊಳ್ಳುವ ಗುರಿಯಲ್ಲಿ, ಉಚಿತವಾಗಿ ಪಂದ್ಯಗಳನ್ನು ಪ್ರಸಾರ ಮಾಡುವ ಗುರಿ ಇರಿಸಿಕೊಂಡಿದೆ. ಹಿಂದಿನ ಒಪ್ಪಂದದಲ್ಲಿ ಡಿಸ್ನಿ ಪಾವತಿ ಮಾಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚಿನ ಮೊತ್ತವನ್ನು ಪಾವತಿಸಿ ಈ ಬಾರಿ ಡಿಜಿಟಲ್ ಹಕ್ಕುಗಳನ್ನು ಅಂಬಾನಿ ಕಂಪನಿ ಖರೀದಿಸಿತ್ತು. ಇನ್ನೊಂದೆಡೆ ಡಿಸ್ನಿ ಸಾಂಪ್ರದಾಯಿಕ ಟಿವಿ ಪ್ಯಾಕೇಜ್‌ಅನ್ನು 23, 575 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.