ಬೆಂಗಳೂರಿನಲ್ಲಿ ಚಿಲ್ಲರೆ ವ್ಯಾಪಾರಿಗಳು UPI ಪಾವತಿ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. GST ನೋಟಿಸ್‌ಗಳ ಭಯ ಮತ್ತು ತೆರಿಗೆ ಹೊರೆಯ ಆತಂಕ ವ್ಯಾಪಾರಿಗಳನ್ನು ನಗದು ವ್ಯವಹಾರದತ್ತ ಮರಳುವಂತೆ ಪ್ರೇರೇಪಿಸುತ್ತಿದೆ. 

ಬೆಂಗಳೂರು: ಡಿಜಿಟಲ್ ಪಾವತಿಯ ಭದ್ರಕೋಟೆ ಎಂದು ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರಿನಲ್ಲಿ "No UPI, Only Cash" ಎಂಬ ಮಾತು ಕೇಳಿ ಬರುತ್ತಿದೆ. ಚಿಲ್ಲರೆ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದಿರುವ UPI ಕ್ಯೂ ಆರ್ ಕೋಡ್ ಇರುವ ಸ್ಟಿಕ್ಕರ್ ತೆಗೆಯಲು ಮುಂದಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕ್ಯೂ ಆರ್ ಕೋಡ್ ಸ್ಟಿಕರ್ ತೆಗೆಯುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಬೆಂಗಳೂರು ಭಾಗದಲ್ಲಿನ ಅಂಗಡಿಗಳ ಮುಂದೆ ನಗದು ಮಾತ್ರ ಸ್ವೀಕರಿಸಲಾಗುವ ಎಂಬ ಬರಹದ ಬೋರ್ಡ್‌ಗಳು ಕಾಣಿಸುತ್ತಿವೆ.

ET ವರದಿ ಪ್ರಕಾರ, ಈ ಹಿಂದೆ ಏಕೀಕೃತ ಪಾವತಿ ಇಂಟರ್‌ಫೇಸ್ (UPI) ಆದ್ಯತೆ ನೀಡಿ ಮಾರಾಟಗಾರರು ಡಿಜಿಟಲ್ ವ್ಯವಹಾರಗಳತ್ತ ಮುಖ ಮಾಡಿದ್ದರು. ಸಣ್ಣ ಸಣ್ಣ ವ್ಯಾಪಾರಿಗಳು ಅಂಗಡಿಗಳ ಮುಂದೆ UPI ಸ್ಟಿಕರ್ ಅಂಟಿಸಿಕೊಂಡಿದ್ದಾರೆ. ನಿಂಬೆ ಹಣ್ಣು ಖರೀದಿಸಿದ 2 ರೂಪಾಯಿಯನ್ನು ಸಹ ಜನರು ಪೇಮೆಂಟ್ ಮಾಡುತ್ತಿದ್ದಾರೆ. ಡಿಜಿಟಲ್ ಪೇಮೆಂಟ್‌ನಿಂದಾಗಿ ಚಿಲ್ಲರೆ ಸಮಸ್ಯೆ ನಿವಾರಣೆಯಾಗಿತ್ತು.

ವರ್ತಕರ ಮಾತು ಏನು?

ನಾನು ದಿನನಿತ್ಯ 3,000 ರೂಪಾಯಿಗಳಷ್ಟು ವ್ಯವಹಾರ ಮಾಡುತ್ತೇನೆ. ಈ ವ್ಯವಹಾರದಿಂದ ಸಿಗುವ ಅಲ್ಪ ಲಾಭದಲ್ಲಿಯೇ ನಾನು ಜೀವನ ನಡೆಸಬೇಕು. ಆದ್ರೆ ಇನ್ಮುಂದೆ ಯುಪಿಐ ಪಾವತಿಗಳನ್ನು ಸ್ವೀಕರಿಸಲ್ಲ ಎಂದು ಹೊರಮಾವು ಅಂಗಡಿ ಮಾಲೀಕ ಶಂಕರ್ ಹೇಳುತ್ತಾರೆ.

ಡಿಜಿಟಲ್ ಪಾವತಿ ಸ್ವೀಕರಿಸಲು ಹಿಂದೇಟು ಯಾಕೆ?

ಬೆಂಗಳೂರಿನಲ್ಲಿ ನೋಂದಣಿ ಮಾಡಿಕೊಳ್ಳದ ಸಾವಿರಾರು ವ್ಯಾಪಾರಿಗಳಿದ್ದಾರೆ. ಇದರಲ್ಲಿ ರಸ್ತೆ ಬದಿ ಆಹಾರ, ತರಕಾರಿ ಮಾರಾಟಗಾರರು ಸೇರಿದ್ದಾರೆ. ಇವರೆಲ್ಲರೂ ಸಣ್ಣ ಪ್ರಮಾಣದ ವ್ಯಾಪಾರಿಗಳಾಗಿದ್ದು, GST ನೋಟಿಸ್ ಪಡೆದುಕೊಳ್ಳಲು ಇಷ್ಟಪಡಲ್ಲ. ಕೆಲವು ನೋಟಿಸ್‌ಗಳು ತೆರಿಗೆ ಪಾವತಿಸುವಂತೆ ಸೂಚಿಸುತ್ತವೆ. ಇದರಿಂದ ವ್ಯಾಪಾರಿಗಳು ಡಿಜಿಟಲ್ ಪಾವತಿಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ.

ಬೆಂಗಳೂರು ಬೀದಿ ವ್ಯಾಪಾರಿ ಸಂಘಗಳ ಒಕ್ಕೂಟದ ಜಂಟಿ ಕಾರ್ಯದರ್ಶಿ, ವಕೀಲ ವಿನಯ್ ಕೆ ಶ್ರೀನಿವಾಸ್ ಮಾತನಾಡಿ, ನಮ್ಮ ವರ್ತಕರು ಜಿಎಸ್‌ಟಿ ಅಧಿಕಾರಿಗಳಿಂದ ಕಿರುಕಳಕ್ಕೊಳಗಾಗುವ ಆತಂಕದಲ್ಲಿದ್ದಾರೆ. ಜಿಎಸ್‌ಟಿ ನೋಟಿಸ್ ಸೇರಿದಂತೆ ಇತರೆ ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕೋದನ್ನು ತಪ್ಪಿಸಿಕೊಳ್ಳಲು ವರ್ತಕರು ಯುಪಿಐ ಪಾವತಿಗಳನ್ನು ಸ್ವೀಕರಿಸೋದನ್ನು ನಿಲ್ಲುತ್ತಿದ್ದಾರೆ ಎಂದು ಹೇಳುತ್ತಾರೆ.

ಜಿಎಸ್‌ಟಿ ನಿಯಮ ಏನು ಹೇಳುತ್ತೆ?

ಜಿಎಸ್‌ಟಿ ನಿಯಮಗಳ ಪ್ರಕಾರ, ಸರಕುಗಳನ್ನು ಪೂರೈಕೆಯಲ್ಲಿ ತೊಡಗಿರುವ ವ್ಯವಹಾರ ವಾರ್ಷಿಕ ವಹಿವಾಟು 40 ಲಕ್ಷ ರೂ. ಮತ್ತು ಸೇವಾ ಪೂರೈಕೆದಾರು ವಹಿವಾಟು 20 ಲಕ್ಷ ರೂ.ಗಳಿಗಿಂತವ ಅಧಿಕವಾದ್ರೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. 2021-22ರಿಂದ ಯುಪಿಐ ವಹಿವಾಟು ಪ್ರಕಾರ, ಮಿತಿಗಿಂತ ಹೆಚ್ಚಿನ ವ್ಯವಹಾರ ನಡೆಸಿದ ವರ್ತಕರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸುವ ವರ್ತಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ತೆರಿಗೆ ವಿಧಿಸಬಹುದಾದ ವಹಿವಾಟಿನ ಮಾಹಿತಿಯನ್ನು ಬಹಿರಂಗಪಡಿಸಬೇಕು ಮತ್ತು ಅನ್ವಯವಾಗುವ ತೆರಿಗೆಯನ್ನು ಪಾವತಿಸಬೇಕು ಎಂದು ಜಿಎಸ್‌ಟಿ ಇಲಾಖೆ ಮಾಹಿತಿ ನೀಡಿದೆ.

ಡಿಜಿಟಲ್ ಕ್ರೆಡಿಟ್‌, ಆದಾಯ ಆಗಲ್ಲ

ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಎಸ್. ಸುರೇಶ್‌ ಕುಮಾರ್, ಆರ್ಥಿಕ ಒತ್ತಡ, ಜಿಎಸ್‌ಟಿ ನೋಟಿಸ್ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಡಿಜಿಟಲ್ ವ್ಯವಹಾರ ವ್ಯಕ್ತಿಯ ಆದಾಯವನ್ನು ನಿಖರಪಡಿಸಲ್ಲ. ಡಿಜಿಟಲ್ ಕ್ರೆಡಿಟ್‌ನಿಂದ ಆತನ ಆದಾಯ ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಜಿಎಸ್‌ಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ. ಡಿಜಿಟಲ್ ಕ್ರೆಡಿಟ್‌ ಕೆಲವೊಮ್ಮೆ ಅನೌಪಚಾರಿಕ ಸಾಲಗಳು ಅಥವಾ ಕುಟುಂಬ ಮತ್ತು ಸ್ನೇಹಿತರಿಂದ ವರ್ಗಾವಣೆಯಾಗಿರುತ್ತವೆ ಎಂದು ಮಾಜಿ ಅಧಿಕಾರಿ ಹೇಳುತ್ತಾರೆ.

ತೆರಿಗೆ ಸಂಗ್ರಹದ ಒತ್ತಡ

ವರದಿಗಳ ಪ್ರಕಾರ, ಕರ್ನಾಟಕದ ತೆರಿಗೆ ಅಧಿಕಾರಿಗಳು 2025-26ಕ್ಕೆ ₹1.20 ಲಕ್ಷ ಕೋಟಿ ಸಂಗ್ರಹ ಗುರಿಯನ್ನು ತಲುಪಲು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ₹52,000 ಕೋಟಿ ಮೌಲ್ಯದ ಕಲ್ಯಾಣ ಖಾತರಿಗಳಿಗೆ ಹಣಕಾಸು ಒದಗಿಸುವ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಹಣವನ್ನು ಕೋರಿ ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಸ್ಪಂದಿಸುವ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎದುರಿಸುತ್ತಿದ್ದಾರೆ.