ಬಟ್ಟೆ, ಶೂಗಳಿಂದ ಹಿಡಿದು ಆನ್‌ಲೈನ್ ಶಾಪಿಂಗ್‌ವರೆಗೆ ಎಲ್ಲದರ ಮೇಲೂ GST ಪರಿಣಾಮ ಬೀರುತ್ತದೆ. ಬೆಲೆ ಮತ್ತು ವಸ್ತುವಿನ ಆಧಾರದ ಮೇಲೆ GST ಶೇಕಡಾವಾರು ಬದಲಾಗುತ್ತದೆ. ಈ ಲೆಕ್ಕಾಚಾರ ತಿಳಿದುಕೊಂಡರೆ ಶಾಪಿಂಗ್‌ನಲ್ಲಿ ಹಣ ಉಳಿಸಬಹುದು.

ಬೆಂಗಳೂರು: ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ ಭಾರತದಲ್ಲಿ ಎಲ್ಲ ಸಮಯದಲ್ಲಿಯೂ ಚರ್ಚೆಯಲ್ಲಿರುತ್ತದೆ. ಈ ಸಂಬಂಧ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುತ್ತವೆ. ಜಿಎಸ್‌ಟಿ ಪ್ರಮಾಣ ಕಡಿತಗೊಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಲೇ ಇರುತ್ತದೆ. ಈ ಜಿಎಸ್‌ಟಿ ನಿಮ್ಮ ಜೇಬಿನ ಮೇಲೆ ಎಷ್ಟು ಹೊರೆಯಾಗಿದೆ ಎಂಬ ಲೆಕ್ಕ ಗೊತ್ತಿದೆಯಾ? ನೀವು ಪದೇ ಪದೇ ಶಾಪಿಂಗ್ ಮಾಡುತ್ತಿದ್ರೆ ಈ ಜಿಎಸ್‌ಟಿ ಲೆಕ್ಕಾಚಾರ ತಿಳಿದುಕೊಳ್ಳಬೇಕಾಗುತ್ತದೆ. ಇಲ್ಲವಾದ್ರೆ ನಿಮ್ಮ ಬಜೆಟ್ ಲೆಕ್ಕಾಚಾರವೆಲ್ಲಾ ತಲೆಕೆಳಗಾಗುತ್ತದೆ. ನಿಮಿಷ್ಟದ ಡ್ರೆಸ್, ಸ್ಟೈಲಿಶ್ ಸ್ನೀಕರ್ಸ್‌ನಿಂದ ಹಿಡಿದು ಮನೆಯಲ್ಲಿ ಧರಿಸುವ ಚಪ್ಪಲಿ ಬೆಲೆಯೂ ಜಿಎಸ್‌ಟಿಯಿಂದ ಹೆಚ್ಚಳವಾಗುತ್ತದೆ.

ನಿಮ್ಮ ಶಾಪಿಂಗ್ ಕೇವಲ ರಿಯಾಯ್ತಿ ಮತ್ತು ಎಂಆರ್‌ಪಿ ಮೇಲೆ ಮಾತ್ರ ನಿಗದಿಯಾಗಿಲ್ಲ. ಈ ಎರಡರ ಜೊತೆಯಲ್ಲಿ ಮೋದಿ ಸರ್ಕಾರದ ಜಿಎಸ್‌ಟಿಯೂ ನೀವು ಖರೀದಿಸುವ ವಸ್ತುವಿನ ಬೆಲೆಯನ್ನು ನಿರ್ಧರಿಸುತ್ತದೆ. ಇನ್ಮುಂದೆ ಮಾಲ್‌ಗೆ ಹೋಗಿ ಶಾಪಿಂಗ್ ಮಾಡುವ ಮುನ್ನ, ಆನ್‌ಲೈನ್ ಶಾಪಿಂಗ್ ಮುನ್ನ ನೀವು ಖರೀದಿಸುತ್ತಿರುವ ವಸ್ತುವಿಗೆ ಎಷ್ಟು ಜಿಎಸ್‌ಟಿ ಪಾವತಿಸುತ್ತಿದ್ದೀರಿ ಎಂದು ಲೆಕ್ಕ ಹಾಕಿಕೊಳ್ಳಿ. ಇದರಿಂದ ಎಲ್ಲಿ ಹಣ ಉಳಿಸಬಹುದು ಎಂಬ ಅಂದಾಜು ಲೆಕ್ಕಾಚಾರ ಸಿಗುತ್ತದೆ.

ಬಟ್ಟೆ ಮೇಲೆ ಜಿಎಸ್‌ಟಿ

ರೆಡಿಮೇಡ್ ಬಟ್ಟೆ ಬೆಲೆಯೂ ಜಿಎಸ್‌ಟಿಯನ್ನು ಹೊಂದಿರುತ್ತದೆ. ಉದಾಹರಣೆಗೆ ನೀವು ಖರೀದಿಸುತ್ತಿರುವ ಶರ್ಟ್ ಬೆಲೆ 999 ರೂ. ಇದೆ. ಈ ಶರ್ಟ್ ಮೇಲೆ ಶೇ.5 ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಆದ್ರೆ ಶರ್ಟ್ ಬೆಲೆ 1,000 ರೂ. ಗಡಿ ದಾಟಿದ್ರೆ ಜಿಎಸ್‌ಟಿ 5 ರಿಂದ ಶೇ.12ಕ್ಕೆ ಏರಿಕೆಯಾಗುತ್ತದೆ. ಆಂದ್ರೆ ಬರೋಬ್ಬರಿನ ಶೇ.7ರಷ್ಟು ಹೆಚ್ಚಳವಾಗುತ್ತದೆ. 1,001 ರೂ. ಶರ್ಟ್‌ಗೆ ಶೇ.12 ಮತ್ತು 999 ರೂ. ಶರ್ಟ್‌ಗೆ ಶೇ.5 ಜಿಎಸ್‌ಟಿ ಅಪ್ಲೈ ಆಗುತ್ತದೆ.

ಒಂದು ವೇಳೆ ನೀವು ಬಟ್ಟೆ ಖರೀದಿಸಿ ನಂತರ ದರ್ಜಿಯಿಂದ ಸ್ಟಿಚ್ ಮಾಡಲು ಬಯಸಿದ್ರೆ ಹಣ ಉಳಿಸಬಹುದು. ಕಾಟನ್, ಸಿಲ್ಕ್ ಅಥವಾ ಜಾರ್ಜೆಟ್ ಸೇರಿದಂತೆ ಯಾವುದೇ ಬಗೆಯ ಬಟ್ಟೆ ಖರೀದಿಸಿದ್ರೆ ಜಿಎಸ್‌ಟಿ ಶೇ.5ರಷ್ಟು ಅನ್ವಯವಾಗುತ್ತದೆ. ನೀವು ಎಷ್ಟೇ ಮೌಲ್ಯದ ಬಟ್ಟೆ ಖರೀದಿಸಿದ್ರೆ ಜಿಎಸ್‌ಟಿ ಕೇವಲ ಶೇ.5ರೆಷ್ಟು ಮಾತ್ರವ ಅನ್ವಯವಾಗುತ್ತದೆ.

ಶೂ, ಚಪ್ಪಲಿಗಳ ಮೇಲೆ ಜಿಎಸ್‌ಟಿ

1000 ರೂ. ಕಡಿಮೆ ಬೆಲೆಯ ಶೂ, ಚಪ್ಪಲಿ ಮೇಲೆ ಶೇ.5 ಮತ್ತು 1,000 ರೂ.ಗಿಂತ ಹೆಚ್ಚಿನ ಮೌಲ್ಯದ ಶೂ, ಚಪ್ಪಲಿಗಳ ಮೇಲೆ ಶೇ.12ರಷ್ಟು ಜಿಎಸ್‌ಟಿ ಅಪ್ಲೈ ಆಗುತ್ತದೆ. ಒಂದು ವೇಳೆ ನೀವು ಖರೀದಿಸುವ ಶೂಗಳು ಸಿಂಥೆಂಟಿಕ್, ರಬ್ಬರ್, ಪ್ಲಾಸ್ಟಿಕ್ ಅಥವಾ ಇವಾ ಫೋಮ್‌ನಿಂದ ಮಾಡಲ್ಪಟ್ಟಿದ್ರೆ ನೇರವಾಗಿ ಶೇ.12ರಷ್ಟು ಜಿಎಸ್‌ಟಿ ಅನ್ವಯವಾಗುತ್ತದೆ.

ಸೀರೆ ಮತ್ತು ಇನ್ನಿತರ ವಸ್ತುಗಳ ಮೇಲೆ ಜಿಎಸ್‌ಟಿ

ಸೀರೆ ಖರೀದಿಗೆ ಪ್ಲಾನ್ ಮಾಡಿಕೊಂಡಿದ್ರೆ ಇವುಗಳ ಮೇಲೆಯೂ ನೀವು ಮೋದಿ ಸರ್ಕಾರದ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಕಾಟನ್ ಅಥವಾ ಸಿಲ್ಕ್ ಮಾದರಿಯ ಸಿಂಪಲ್ ಸೀರೆಗಳ ಬೆಲೆಯ ಮೇಲೆ ಶೇ.5ರಷ್ಟು ಜಿಎಸ್‌ಟಿ ಅಪ್ಲೈ ಆಗುತ್ತದೆ. ನೀವು ಜಾರ್ಜೆಟ್‌, ಸಿಕ್ವೀನ್, ಕಢಾಯಿ ಅಥವಾ ಹೆವಿ ವರ್ಕ್ ಹೊಂದಿರುವ ಡಿಸೈನರ್ ಸೀರೆ ಖರೀದಿ ಮೇಲೆ ನೀವು ಶೇ.12ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಮಕ್ಕಳ ಬಟ್ಟೆ ಮೇಲೆಯೂ ಜಿಎಸ್‌ಟಿ ಅನ್ವಯ

ಮಕ್ಕಳ ಬಟ್ಟೆ ಎಂದು ಸರ್ಕಾರ ಯಾವುದೇ ರಿಯಾಯ್ತಿಯನ್ನು ನೀಡಿಲ್ಲ. ಚಿಕ್ಕ ಮಕ್ಕಳ ಫ್ರಾಕ್‌ನಿಂದ ಹಿಡಿದು ಟೀನೇಜರ್ಸ್ ಧರಿಸುವ ಜೀನ್ಸ್ ಮೇಲೆ ಶೇ.5 ಅಥವಾ ಶೇ.12 ಜಿಎಸ್‌ಟಿ ಅನ್ವಯವಾಗುತ್ತದೆ. ಇಲ್ಲಿಯೂ 999 ರೂ. ಕಡಿಮೆ ಮೌಲ್ಯದ ಮೇಲೆ ಶೇ.5 ಮತ್ತು 1000 ರೂ, ಮೌಲ್ಯದ ಬಟ್ಟೆ ಮೇಲೆ ಶೇ.12ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಆನ್‌ಲೈನ್ ಶಾಪಿಂಗ್ ಮೇಲೆ ಜಿಎಸ್‌ಟಿ

ಆನ್‌ಲೈನ್ ಶಾಪಿಂಗ್‌ನಲ್ಲಿಯೂ ಜಿಎಸ್‌ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ನೀವು ಡೆಲಿವರಿ ಫೀಸ್ ಮತ್ತು ಫ್ಲಾಟ್‌ಫಾರಂ ಸರ್ವಿಸ್‌ ಮೇಲೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ನೀವು ಆನ್‌ಲೈನ್‌ನಲ್ಲಿ 999 ರೂಪಾಯಿ ಶರ್ಟ್ ಆರ್ಡರ್ ಮಾಡಿದ್ದೀರಿ ಎಂದು ಭಾವಿಸೋಣ. 999 ರೂಪಾಯಿ ಶರ್ಟ್‌ಗೆ 100 ರೂ. ಡೆಲಿವರಿ ಶುಲ್ಕ ವಿಧಿಸಲಾಗುತ್ತದೆ. ಇಲ್ಲಿ ಶರ್ಟ್‌ ಬೆಲೆಗೆ ಶೇ.5 ಮತ್ತು ಡೆಲಿವರಿ ಶುಲ್ಕ 100 ರೂ. ಮೇಲೆ ಶೇ.18 ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಆನ್‌ಲೈನ್ ಖರೀದಿ ಅಂದ್ರೆ ಹೆಚ್ಚುವರಿ ಹಣ ಪಾವತಿಸಿದಂತಾಗುತ್ತದೆ ಎಂದರ್ಥ.