ವಿದೇಶಗಳಲ್ಲಿ ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ಸಾಲು ಸಾಳು ರಜೆ ಕೊಟ್ಟಿರುವ ಹಿನ್ನೆಲೆಯಲ್ಲಿ ಎನ್‌ಆರ್‌ಐಗಳು ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಆಗಮಿಸುತ್ತಿದ್ದು, ಬಹುತೇಕ ಹೋಟೆಲ್‌ ರೂಮ್ ಬುಕಿಂಗ್‌ ಭರ್ತಿಯಾಗಿವೆ.

ಬೆಂಗಳೂರು (ಡಿ.21): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವ‍ರ್ಷದ ಸಂಭ್ರಮವನ್ನು ಮಾಡಲು ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಡಿ.20ರಿಂದ ಜ.2ರವರೆಗೆ ಶೇ.80ಕ್ಕೂ ಅಧಿಕ ಹೋಟೆಲ್‌ಗಳ ರೂಮುಗಳು ಬುಕಿಂಗ್ ಆಗಿವೆ. ಆದರೆ, ಈ ಪೈಕಿ ವಿದೇಶಕ್ಕೆ ಹೋಗಿ ವಾಪಸ್ ಬರುವವರು (ಎನ್‌ಆರ್‌ಐ), ಹೊರ ರಾಜ್ಯದವರೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಮತ್ತು ಸಿಬ್ಬಂದಿಗೆ ಕೋವಿಡ್ ಸೋಂಕಿನ ಆತಂಕ ಶುರುವಾಗಿದೆ.

ಕೊರೊನಾ ರೂಪಾಂತರಿ ಜೆಎನ್‌.1 ಆತಂಕದ ನಡುವೆಯೂ ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ್ ಹೋಟೆಲ್‌ಗಳ ಶೇ.80ಕ್ಕೂ ಅಧಿಕ ಕೊಠಡಿಗಳು (Bengaluru Hotel rooms) ಬುಕ್ಕಿಂಗ್​ ಆಗಿವೆ. ಬಾಕಿ ಉಳಿದ ರೂಮುಗಳಿಗೂ ಹೆಚ್ಚಿನ ಬೇಡಿಕೆ ಬಮರುತ್ತಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗೆ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಹೋಟೆಲ್‌ಗೆ ಬಂದು ಉಳಿದುಕೊಂಡು ಮಜಾ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ, ಸಿಲಿಕಾನ್ ಸಿಟಿ ಬೆಂಗಳೂರಿನ 50 ಸಾವಿರಕ್ಕೂ ಅಧಿಕ ಹೋಟೆಲ್‌ಗಳ ರೂಮು​​ಗಳು ಅಡ್ವಾನ್ಸ್​ ಬುಕ್ಕಿಂಗ್​ ಆಗಿವೆ.

ಕೋವಿಡ್ ಮಾರ್ಗಸೂಚಿ: ಹೊಸ ವರ್ಷ, ಕ್ರಿಸ್‌ಮಸ್‌ಗೆ ನಿರ್ಬಂಧವಿಲ್ಲ, 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ!

ಇನ್ನು ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಎನ್​ಆರ್‌ಐಗಳು ತವರಿನತ್ತ ಬರುತ್ತಿದ್ದಾರೆ. ಎನ್‌ಆರ್‌​ಐ ಜೊತೆ ಹೊರ ರಾಜ್ಯದ ಜನರು ಕೂಡ ಆಗಮಿಸುತ್ತಿದ್ದಾರೆ. ಹೊಸ ವರ್ಷದವರೆಗೆ ಹೋಟೆಲ್‌ಗಳ ಅಡ್ವಾನ್ಸ್‌​ ಬುಕ್ಕಿಂಗ್​ ಹೆಚ್ಚಳದ ಬೆನ್ನಲ್ಲಿಯೇ ಗ್ರಾಹಕರಿಗೆ ಸೇವೆ ನೀಡುವ ವೇಳೆ ಹೋಟೆಲ್ ಸಿಬ್ಬಂದಿಗೆ ಸೋಂಕು ತಗುಲಬಹುದೇ ಎಂಬ ಆತಂಕ ಹೋಟೆಲ್ ಮಾಲೀಕರಿಗೆ ಶುರುವಾಗಿದೆ. ಈಗ ಬೆಂಗಳೂರಿನ ಶೇಕಡ 80ರಷ್ಟು ಹೋಟೆಲ್​​ಗಳು ಭರ್ತಿ​ಯಾಗಿವೆ. 

ಬೆಂಗಳೂರು ಸೇರಿ ರಾಜ್ಯದ ಬೇರೆ ಭಾಗಕ್ಕೆ ಜನರು ಆಗಮಿಸುತ್ತಿದ್ದಾರೆ. ವಿಮಾನ, ಬಸ್​ ದರ ಏರಿಕೆಯಾದರೂ ಹೋಟೆಲ್‌ಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲಿಯೂ ಹೊಸ ವರ್ಷದ ಆಚರಣೆಗೆ ಬೆಂಗಳೂರಿಗೆ ಬರುವವರು ಸಂಖ್ಯೆ ಹೆಚ್ಚಾಗಿದೆ. ಇನ್ನು ಬೇರೆ ದೇಶಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ 1 ತಿಂಗಳಿಗೂ ಹೆಚ್ಚು ಕಾಲ ರಜೆಯನ್ನು ನೀಡಲಾಗುತ್ತದೆ. ಆದ್ದರಿಂದ, ವಿದೇಶಗಳಲ್ಲಿ ಕೆಲಸಕ್ಕೆ ಹೋಗಿರುವ ಎನ್‌ಆರ್‌ಐಗಳು ರಜೆಗಾಗಿ ವಾಪಸ್ ಬರುತ್ತಿದ್ದಾರೆ. ಅವರು ನೇರವಾಗಿ ಮನೆಗೆ ಹೋಗದೇ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಮುಂದಾಗಿದ್ದಾರೆ.

ಜನವರಿಯಲ್ಲಿ ಪೀಕ್‌ಗೆ ಏರಲಿದೆ ಕೋವಿಡ್ ಸೋಂಕಿತರ ಸಂಖ್ಯೆ: ಹೊಸ ವರ್ಷಕ್ಕೆ ಕೊರೊನಾ ಕಂಟಕ ಶುರು!

ಹೋಟೆಲ್​ ಮಾಲೀಕರಿಗೆ ಕೊರೊನಾತಂಕ: ಈಗಾಗಲೇ ಹೊಸ ವರ್ಷ ಶೇ 80ರಷ್ಟು ಹೋಟೆಲ್​ ರೂಮ್​ ಬುಕ್​​​ ಆಗಿವೆ. ಜನರು ಮುಂಗಡವಾಗಿ ಹೋಟೆಲ್​ ರೂಮ್​ಗಳಿಗೆ ಹಣ ಪಾವತಿ ಮಾಡಿದ್ದಾರೆ. ಹೋಟೆಲ್‌ಗಳಲ್ಲಿ ಹೊಸ ವರ್ಷದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡರೆ ಹೋಟೆಲ್‌ಗಳಿಗೆ ನಷ್ಟದ ಭೀತಿ ಎದುರಾಗುವ ಸಾಧ್ಯತೆಯಿದೆ. ಈಗ ಸರ್ಕಾರ ಯಾವುದೇ ನಿರ್ಬಂಧ ಹೇರದಿರುವ ಕಾರಣ ಹೋಟೆಲ್‌ ಉದ್ಯಮಕ್ಕೆ ವಾತಾವರಣ ಅನುಕೂಲಕರ ಆಗಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.