ಜನವರಿಯಲ್ಲಿ ಪೀಕ್‌ಗೆ ಏರಲಿದೆ ಕೋವಿಡ್ ಸೋಂಕಿತರ ಸಂಖ್ಯೆ: ಹೊಸ ವರ್ಷಕ್ಕೆ ಕೊರೊನಾ ಕಂಟಕ ಶುರು!
ಕರ್ನಾಟಕದಲ್ಲಿ ಕೊರನಾ ಸೋಂಕಿತ ಸಂಖ್ಯೆ ಜನವರಿಯಲ್ಲಿ ಅತ್ಯಂತ ಹೆಚ್ಚಾಗಲಿದ್ದು, ಫೆಬ್ರವರಿಯ ಅಂತ್ಯದವರೆಗೂ ಮುಂದುವರೆಯಲಿದೆ.
ಬೆಂಗಳೂರು (ಡಿ.21): ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ರಣಕೇಕೆಯನ್ನು ಆರಂಭಿಸಿದ್ದು, ಎಲ್ಲಡೆ ಅನಾರೋಗ್ಯ ತಾಂಡವಾಡುತ್ತಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಕೋವಿಡ್ ಸೋಂಕು ಕಂಟಕವಾಗಿ ಕಾಡುವುದು ಫಿಕ್ಸ್ ಆಗಿದೆ. ಇನ್ನು ಜನವರಿ ತಿಂಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಅತ್ಯಂತ ಹೆಚ್ಚಾಗಲಿದ್ದು, ಫೆಬ್ರವರಿ ಅಂತ್ಯಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಚಳಿಗಾಲ ಋತುಮಾನವಾದ್ದರಿಂದ ಕೋವಿಡ್ ವೈರಸ್ ಜೀವತಾವಧಿಯೂ ಹೆಚ್ಚಾಗಿದ್ದು, ಮನುಷ್ಯನ ದುರ್ಬಲ ಜೀವಕೋಶಗಳ ಮೇಲೆ ಬಹುಬೇಗನೇ ವೈರಸ್ ಪರಿಣಾಮ ಬೀಡುತ್ತಿದೆ. ಇನ್ನು ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರಿಗೆ ಸೋಂಕಿನ ತೀವ್ರತೆ ಹೆಚ್ಚಾಗಿ ಕಾಡಲಿದೆ. ಆದ್ದರಿಂದ ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದವರಿಗೆ ಕೊರೊನಾ ವೈರಸ್ ಶಾಕ್ ನೀಡಿದೆ. ಈ ಮೂಲಕ ಹೊಸ ವರ್ಷಕ್ಕೆ ಕೋವಿಡ್ ಕಂಟಕವಾಗುತ್ತಿದೆ.
ಕೋವಿಡ್ 4ನೇ ಅಲೆ ಕಟ್ಟಿಹಾಕಲು ಆರೋಗ್ಯ ಇಲಾಖೆ ಪ್ಲ್ಯಾನ್ ರಿವೀಲ್ ಮಾಡಿದ ಸಚಿವ ದಿನೇಶ್ ಗುಂಡೂರಾವ್!
ಮತ್ತೊಂದೆಡೆ, ಕೋವಿಡ್ ಸೋಂಕು ನಿಯಂತ್ರಣದ ಕ್ರಮಗಳಾದ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡದ ಹಿನ್ನೆಲೆಯಲ್ಲಿ ಕ್ರಿಸ್‌ಮಸ್, 2024ರ ಹೊಸ ವರ್ಷದ ಆಗಮನದ ಸಂಭ್ರಮಾಚರಣೆ, ಶಬರಿ ಮಲೆ ಸ್ವಾಮಿ ಅಯ್ಯಪ್ಪ ವ್ರತಾಚರಣೆ ಮತ್ತು ದರ್ಶನದಲ್ಲಿ ಹೆಚ್ಚಿನ ಸಂಖ್ಯೆಯ ಜನರ ಸೇರ್ಪಡೆ, ರಾಜ್ಯದಲ್ಲಿ ಜಾತ್ರೆಗಳಿಗೆ ಜನರು ಸೇರುವುದು ಇತ್ಯಾದಿ ಆಚರಣೆಗಳಿಂದ ಜನವರಿ ತಿಂಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ಜನವರಿ ಮೊದಲ ವಾರದಲ್ಲಿ ಕೋವಿಡ್ ಪ್ರಕರಣಗಳು ಈ ವರ್ಷದ ಅತ್ಯಂತ ಹೆಚ್ಚಳವಾಗುವ ಸಾಧ್ಯತೆಯಿದೆ.
ಜನವರಿ ಮೊದಲ ವಾರದಲ್ಲಿ ಅತಿ ಹೆಚ್ಚು ಕೋವಿಡ್ ಕೇಸ್ ದಾಖಲಾಗುವ ನಿರೀಕ್ಷೆಯಿದ್ದು, ಇದನ್ನು ಕೋವಿಡ್ ಭಾಷೆಯಲ್ಲಿ ಡೇಂಜರ್ ಎಂತಲೇ ಹೇಳಬಹುದು. ಈ ಬಗ್ಗೆ ಆರೋಗ್ಯಾಧಿಕಾರಿಗಳು, ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಜನವರಿ ಮೊದಲ ವಾರದಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗಿ ನಂತರ ಫೆಬ್ರವರಿ ತಿಂಗಳಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಫೆಬ್ರವರಿ ಕೊನೆ ವಾರದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆ ಕಾಣಲಿದೆ. ಹೀಗಾಗಿ, ಇದೇ ಅವಧಿಯಲ್ಲಿ ಅತಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
ಬೆಂಗಳೂರಿನಲ್ಲಿ ಪ್ರತಿ ದಿನ 1500 ಕೋವಿಡ್ ಟೆಸ್ಟ್ ಮಾಡಲು ನಿರ್ಧಾರ ಮಾಡಲಾಗಿದ್ದು, ರಾಜ್ಯಾದ್ಯಂತ ಜಿಲ್ಲಾವಾರು ಪತ್ತೆಯಾಗುವ ಶೇಕಡಾವಾರು ಪಾಸಿಟಿವಿಟಿ ಆಧಾರದಲ್ಲಿ ಸೋಂಕು ಪರೀಕ್ಷೆಯನ್ನು ನಿಗದಿ ಮಾಡಲಾಗುತ್ತಿದೆ. ಬಿಬಿಎಂಪಿ ವತಿಯಿಂದ 1,050 ಆರ್‌ಟಿಪಿಸಿಆರ್ ಕೋವಿಡ್ ಪರೀಕ್ಷೆ ಹಾಗೂ 450 ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಅದರಲ್ಲಿಯೂ ಮುಖ್ಯವಾಗಿ ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುವವರು(ILI) ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುವವರು (SARI) ರೋಗಿಗಳಿಗೆ ಕಡ್ಡಾಯವಾಗಿ ಟೆಸ್ಟ ಮಾಡಲು ಸೂಚನೆ ನೀಡಲಾಗಿದೆ.
ಕೋವಿಡ್ ಹೊಸ ವೈರಸ್‌ಗೆ 2 ಬಲಿ: ಶತಕದ ಗಡಿ ತಲುಪಿದ ಸೋಂಕಿತರ ಸಂಖ್ಯೆ!
ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೈ ಅರ್ಲಟ್ ಸೂಚನೆ ನೀಡಲಾಗಿದೆ. ಎಲ್ಲ ಪ್ರಾರ್ಥಮಿಕ ಆರೋಗ್ಯಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಲಾಗುತ್ತಿದೆ. ಟೆಸ್ಟಿಂಗ್ ಪ್ರಮಾಣ ಹೆಚ್ಚಿಸುವ ಮೂಲಕ ಸೋಂಕಿನ ಹೆಚ್ಚಳದ ಬಗ್ಗೆ ತಿಳಿಯಲು ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರಿನ ಎಲ್ಲ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಿಗೆ ಟೆಸ್ಟಿಂಗ್ ಕಿಟ್ ರವಾನೆ ಮಾಡಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ 2000 ಕಟ್ ರವಾನಿಸಲಾಗಿದೆ. ನಿನ್ನೆ ರಾತ್ರಿ ಬೆಂಗಳೂರಿನ ಎಲ್ಲ ಪಿಹೆಚ್ ಸಿ ಗಳಿಗೆ ಕೊರೋನಾ ಟೆಸ್ಟಿಂಗ್ ಕಿಟ್ ಅನ್ನು ಬಿಬಿಎಂಪಿ ಆರೋಗ್ಯ ವಿಭಾಗ ರವಾನಿಸಲಾಗಿದೆ.