'2025ರ ಬರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500' ಪಟ್ಟಿಯ ಪ್ರಕಾರ, ಬೆಂಗಳೂರು ಭಾರತದ ಅತ್ಯಂತ ಕಿರಿಯ ಮತ್ತು ಮೌಲ್ಯಯುತ ನವೋದ್ಯಮಗಳ ಕೇಂದ್ರವಾಗಿ ಹೊರಹೊಮ್ಮಿದೆ. ಸರ್ವಂ ಎಐ ಮತ್ತು ಜೆಪ್ಟೋ ಸೇರಿದಂತೆ 7 ಯುವ ಕಂಪನಿಗಳು ಇಲ್ಲಿ ನೆಲೆಸಿದೆ.

ಬೆಂಗಳೂರು (ಜೂ.25): ಭಾರತದ ಐಟಿ ರಾಜಧಾನಿ, ನಮ್ಮ ಹೆಮ್ಮೆಯ ಬೆಂಗಳೂರು ನಗರವು ದೇಶದ ಹೊಸ ತಲೆಮಾರಿನ ನವೋದ್ಯಮಗಳನ್ನು (Startups) ಸೃಜಿಸುವಲ್ಲಿ ತನ್ನ ಅಧಿಪತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ಬಿಡುಗಡೆಯಾದ '2025ರ ಬರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500' ಪಟ್ಟಿಯ ಪ್ರಕಾರ, ಭಾರತದ ಅತ್ಯಂತ ಕಿರಿಯ ಹಾಗೂ ಅತ್ಯಧಿಕ ಮೌಲ್ಯದ ಟಾಪ್ ಕಂಪನಿಗಳಿಗೆ ಬೆಂಗಳೂರು ಅತಿ ದೊಡ್ಡ ಆಶ್ರಯತಾಣವಾಗಿ ಹೊರಹೊಮ್ಮಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ 7 'ಯುವ' ಉದ್ಯಮಗಳ ಸಾಧನೆ!

ದೇಶದ ಟಾಪ್ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅತ್ಯಂತ ಕಿರಿಯ ಕಂಪನಿಗಳ ಪೈಕಿ ಬರೋಬ್ಬರಿ 7 ಕಂಪನಿಗಳು ಬೆಂಗಳೂರನ್ನು ಪ್ರಧಾನ ಕಚೇರಿಯನ್ನಾಗಿ ಹೊಂದಿವೆ. ಅವುಗಳೆಂದರೆ ಕೃತಕ ಬುದ್ಧಿಮತ್ತೆ (AI)ಯಲ್ಲಿ ಕೆಲಸ ಮಾಡುವ ಸರ್ವಂ ಎಐ (Sarvam AI), ಕ್ವಿಕ್‌ ಕಾಮರ್ಸ್‌ ಕಂಪನಿ ಜೆಪ್ಟೋ (Zepto, ಕನ್ಸ್ಯೂಮರ್ ಇಂಟರ್ನೆಟ್ ಕಂಪನಿ ಗ್ಲಾನ್ಸ್ (Glance), ಫಿನ್‌ಟೆಕ್‌ ಕಂಪನಿ ಕ್ರೆಡ್ (Cred), ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಜೆಟ್‌ವರ್ಕ್ (Zetwerk), ಫಿನ್‌ಟೆಕ್‌ ಕಂಪನಿ ನವಿ (Navi) ಹಾಗೂ ಕ್ರೆಡಿಟ್‌ಬೀ (KreditBee) ಕಂಪನಿ ಈ ಲಿಸ್ಟ್‌ನಲ್ಲಿದೆ. ವರದಿಯ ಪ್ರಕಾರ, ಈ ಇಡೀ ಪಟ್ಟಿಯಲ್ಲಿರುವ ಒಟ್ಟು 19 ಕಂಪನಿಗಳು ಕೇವಲ ಒಂದು ದಶಕಕ್ಕಿಂತಲೂ (10 ವರ್ಷ) ಕಡಿಮೆ ಅವಧಿಯದ್ದಾಗಿವೆ.

2023 ರಲ್ಲಿ ಸ್ಥಾಪನೆಯಾದ 'ಸರ್ವಂ ಎಐ' (Sarvam AI) ಮತ್ತು ಮುಂಬೈ ಮೂಲದ 'ನೇಸಾ' (Neysa) ಈ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಕಂಪನಿಗಳಾಗಿವೆ. ಅದರಲ್ಲಿ ಬೆಂಗಳೂರು ಮೂಲದ 'ಸರ್ವಂ ಎಐ' ಸದ್ಯ 14,220 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ. ಇತ್ತೀಚೆಗಷ್ಟೇ ಈ ಕಂಪನಿಯು ಎಚ್‌ಸಿಎಲ್‌ಟೆಕ್ (HCLTech) ಮತ್ತು ಬೆಸ್ಸೆಮರ್ ವೆಂಚರ್ ಪಾರ್ಟ್‌ನರ್ಸ್ ನೇತೃತ್ವದ ಹೂಡಿಕೆ ಸುತ್ತಿನಲ್ಲಿ 234 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ. ಈ ಮೂಲಕ ಇದರ ಒಟ್ಟು ಮೌಲ್ಯ 1.5 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಭಾರತದ ಅತ್ಯಂತ ಹೊಸ 'ಎಐ ಯೂನಿಕಾರ್ನ್' (AI Unicorn) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2021 ರಲ್ಲಿ ಆರಂಭವಾದ ಅತ್ಯಂತ ಜನಪ್ರಿಯ ಕ್ವಿಕ್ ಕಾಮರ್ಸ್ ಡೆಲಿವರಿ ಸಂಸ್ಥೆಯಾದ 'ಜೆಪ್ಟೋ' (Zepto), ಈ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಕಂಪನಿಗಳ ಪೈಕಿ ಅತ್ಯಂತ ಶ್ರೀಮಂತ ಹಾಗೂ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಜೆಪ್ಟೋದ ಇಂದಿನ ಮೌಲ್ಯ ಬರೋಬ್ಬರಿ 66,360 ಕೋಟಿ ರೂಪಾಯಿಗಳಾಗಿದೆ!

ಕರ್ನಾಟಕದ ಟಾಪ್ 3 ಮೌಲ್ಯಯುತ ನವೋದ್ಯಮಗಳು

ಈ ಶ್ರೇಯಾಂಕದಲ್ಲಿ ಕರ್ನಾಟಕದ ಅತ್ಯಂತ ಮೌಲ್ಯಯುತ ಸ್ಟಾರ್ಟ್‌ಅಪ್‌ಗಳಾಗಿ ಮೂರು ಕಂಪನಿಗಳು ಮುಂಚೂಣಿಯಲ್ಲಿವೆ. ಜೆರೋಧಾ (Zerodha) 86,660 ಕೋಟಿ ಮೌಲ್ಯದ್ದಾಗಿದ್ದರೆ, ರೇಜರ್‌ಪೇ (Razorpay) 71,100 ಕೋಟಿ ಮೌಲ್ಯ ಹೊಂದಿದೆ. ಮೂರನೇ ಸ್ಥಾನದಲ್ಲಿದೆ ಜೆಪ್ಟೋ (Zepto) ಇದ್ದು 66,360 ಕೋಟಿ ಮೌಲ್ಯ ಹೊಂದಿದೆ.

ಮುಂಬೈಗಿಂತ ಬೆಂಗಳೂರೇ ಗ್ರೇಟ್!; ಮೌಲ್ಯದಲ್ಲಿ 11% ಪ್ರಗತಿ

ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಕಂಪನಿಗಳ ಆರ್ಥಿಕ ಮೌಲ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 57 ಕಂಪನಿಗಳು ಪಟ್ಟಿಯಲ್ಲಿದ್ದು, ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 28.2 ಲಕ್ಷ ಕೋಟಿ ರೂಪಾಯಿಗಳಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 11 ರಷ್ಟು ಭಾರಿ ಪ್ರಗತಿ ಕಂಡಿದೆ.

ಮುಂಬೈನ ಕಂಪನಿಗಳ ಒಟ್ಟು ಮೌಲ್ಯ 146 ಲಕ್ಷ ಕೋಟಿ ರೂ.ಗಳಾಗಿದ್ದರೂ, ಈ ಬಾರಿ ನಗರದ ಒಟ್ಟು ಮೌಲ್ಯದಲ್ಲಿ ಶೇ. 6 ರಷ್ಟು ಕುಸಿತ ದಾಖಲಾಗಿದೆ. (ಮುಂಬೈನಲ್ಲಿ ನೇಸಾ, ಧನ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಕಾಯಿನ್‌ಡಿಸಿಎಕ್ಸ್ ಕಂಪನಿಗಳಿವೆ). ಗುರುಗ್ರಾಮ್‌ದಲ್ಲಿನ ಕಂಪನಿಗಳ ಒಟ್ಟು ಮೌಲ್ಯ 19.9 ಲಕ್ಷ ಕೋಟಿ ರೂ. (ಶೇ. 2 ಪ್ರಗತಿ). ಇಲ್ಲಿ ಭಾರತ್‌ಪೇ ಮತ್ತು ಪ್ರಿಸ್ಟಿನ್ ಕೇರ್ ಕಂಪನಿಗಳಿವೆ. ಹೈದರಾಬಾದ್‌ನಲ್ಲಿರೋ ಕಂಪನಿಗಳ ಒಟ್ಟು ಮೌಲ್ಯ 12 ಲಕ್ಷ ಕೋಟಿ ರೂ. (ಶೇ. 16 ಪ್ರಗತಿ). ಇಲ್ಲಿ ಸ್ಕೈರೂಟ್ ಏರೋಸ್ಪೇಸ್ ಕಂಪನಿಯಿದೆ. ಇನ್ನುಳಿದಂತೆ ಚೆನ್ನೈನಲ್ಲಿ 'ಯುಬಿ' (Yubi) ಹಾಗೂ ಪುಣೆಯಲ್ಲಿ 'ಒನ್‌ಕಾರ್ಡ್' (OneCard) ಕಂಪನಿಗಳಿವೆ.

ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ!

ಒಟ್ಟಾರೆ ರಾಜ್ಯ ಮಟ್ಟದ ಪ್ರದರ್ಶನವನ್ನು ನೋಡುವುದಾದರೆ, ಕರ್ನಾಟಕವು ಒಟ್ಟು 59 ಕಂಪನಿಗಳು ಮತ್ತು 28.6 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಮೌಲ್ಯದೊಂದಿಗೆ ದೇಶದಲ್ಲೇ 2ನೇ ಸ್ಥಾನವನ್ನು ಅಲಂಕರಿಸಿದೆ. ವಿಶೇಷವೆಂದರೆ, ಕರ್ನಾಟಕದ ಒಟ್ಟು 28.6 ಲಕ್ಷ ಕೋಟಿ ಮೌಲ್ಯದಲ್ಲಿ ಬೆಂಗಳೂರಿನ ಪಾಲು ಮಾತ್ರವೇ 28.2 ಲಕ್ಷ ಕೋಟಿ ರೂಪಾಯಿಗಳಾಗಿದೆ! ಅಂದರೆ ಇಡೀ ರಾಜ್ಯದ ಕೀರ್ತಿಯನ್ನು ಬೆಂಗಳೂರು ಒಂದೇ ಹೆಗಲ ಮೇಲೆ ಹೊತ್ತಿದೆ. ಈ ಪಟ್ಟಿಯಲ್ಲಿ 170 ಕಂಪನಿಗಳೊಂದಿಗೆ ಮಹಾರಾಷ್ಟ್ರ (ರೂ. 167.1 ಲಕ್ಷ ಕೋಟಿ ಮೌಲ್ಯ) ಮೊದಲ ಸ್ಥಾನದಲ್ಲಿದ್ದರೆ, ಹರಿಯಾಣ, ತಮಿಳುನಾಡು ಮತ್ತು ತೆಲಂಗಾಣ ನಂತರದ ಸ್ಥಾನಗಳಲ್ಲಿವೆ. ಈ ಪಟ್ಟಿಯಲ್ಲಿರುವ ದೇಶದ ಎಲ್ಲಾ 500 ಕಂಪನಿಗಳ ಒಟ್ಟು ಒಟ್ಟಾರೆ ಮೌಲ್ಯ ಬರೋಬ್ಬರಿ 3.4 ಟ್ರಿಲಿಯನ್ ಡಾಲರ್ (ಸುಮಾರು 283 ಲಕ್ಷ ಕೋಟಿ ರೂಪಾಯಿ) ದಾಟಿದೆ!