ನವದೆಹಲಿ(ನ.03): ಬೆಂಗಳೂರು ಸೇರಿದಂತೆ ದೇಶದ್ಯಾಂತ 11 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹೊಂದಿರುವ ಕೊಲಂಬಿಯಾ ಏಷಿಯಾ ಅಸ್ಪತ್ರೆ ಪ್ರೈ.ಲಿ. ಅನ್ನು 2100 ಕೋಟಿ ರು.ಗೆ ಖರೀದಿಸುವ ಸಂಬಂಧ ಕರ್ನಾಟಕದ ಮಣಿಪಾಲ್‌ ಆಸ್ಪತ್ರೆಗಳ ಸಮೂಹ ಒಪ್ಪಂದ ಮಾಡಿಕೊಂಡಿದೆ.

ಸಕ್ಷಮ ಪ್ರಾಧಿಕಾರದ ಅನುಮೋದನೆ ಸಿಕ್ಕ ಬಳಿಕ ಕೊಲಂಬಿಯಾ ಆಸ್ಪತ್ರೆಯ ಮಾಲಿಕತ್ವವು ಮಣಿಪಾಲ್‌ ವ್ಯಾಪ್ತಿಗೆ ಒಳಪಡಲಿದೆ ಎಂದು ಉಭಯ ಆಸ್ಪತ್ರೆಗಳು ಸೋಮವಾರ ಹೇಳಿಕೆ ಬಿಡುಗಡೆ ಮಾಡಿವೆ.

ಇದರೊಂದಿಗೆ ದೇಶದ ಪ್ರಮುಖ 15 ನಗರಗಳಲ್ಲಿ 7300 ಬೆಡ್‌ಗಳು, 4 ಸಾವಿರ ವೈದ್ಯರು ಹಾಗೂ 10 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನೊಳಗೊಂಡ 27 ಆಸ್ಪತ್ರೆಗಳನ್ನು ಹೊಂದಿದ ಕೀರ್ತಿಗೆ ಮಣಿಪಾಲ್‌ ಭಾಜನವಾಗಲಿದೆ. 2005ರಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಕಾರ್ಯಾರಂಭ ಮಾಡಿದ್ದ ಕೊಲಂಬಿಯಾ ಆಸ್ಪತ್ರೆ ಸದ್ಯ ದೇಶದ 7 ನಗರಗಳಲ್ಲಿ 11 ಆಸ್ಪತ್ರೆಗಳನ್ನು ಹೊಂದಿದೆ. ವಿಶೇಷವೆಂದರೆ ಇದರಲ್ಲಿ 5 ಆಸ್ಪತ್ರೆಗಳು ಬೆಂಗಳೂರಿನಲ್ಲೇ ಇವೆ.