Asianet Suvarna News Asianet Suvarna News

ಹುಬ್ಬಳ್ಳಿ-ದೆಹಲಿ ವಿಮಾನ ಆರಂಭವಾದರೆ ಉದ್ಯಮಕ್ಕೆ ಅನುಕೂಲ

ಹುಬ್ಬಳ್ಳಿ-ದೆಹಲಿ ಆರಂಭವಾದರೆ ಉದ್ಯಮಿಗಳಿಗೆ ಇನ್ನಷ್ಟು ಅನುಕೂಲ, ರಾಜ್ಯದಲ್ಲಿ 3ನೆಯ ಸ್ಥಾನದಲ್ಲಿರುವ ವಿಮಾನ ನಿಲ್ದಾಣ

Benefit the Industry if Hubballi Delhi Flight Starts grg
Author
First Published Oct 7, 2022, 7:02 PM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಅ.07):  ರಾಜ್ಯದಲ್ಲಿ 3ನೇ ಸ್ಥಾನದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ನೇರವಾಗಿ ವಿಮಾನ ಹಾರಾಟ ಶೀಘ್ರವೇ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಮಾತುಕತೆ ನಡೆದಿವೆ. ಅಂದುಕೊಂಡಂತೆ ಎಲ್ಲವೂ ಆದರೆ ಬಹುಶಃ ಇನ್ನೊಂದು ತಿಂಗಳಲ್ಲಿ ವಿಮಾನ ಹಾರಾಟ ಶುರುವಾಗುವ ಲಕ್ಷಣಗಳಿವೆ. ಆದರೆ ಏರ್‌ಬಸ್‌ ಅಥವಾ ದೊಡ್ಡ ಏರ್‌ಕ್ರಾಫ್ಟ್‌ನ್ನೇ ಪ್ರಾರಂಭಿಸಬೇಕು ಎಂಬ ಬೇಡಿಕೆ ಉದ್ಯಮಿಗಳದ್ದು. ರಾಜ್ಯದ 2ನೇ ದೊಡ್ಡ ನಗರ ಎಂದು ಹೆಸರು ಪಡೆದಿರುವ ಹುಬ್ಬಳ್ಳಿಗೆ ಕೈಗಾರಿಕೆಗಳು ಹೆಚ್ಚೆಚ್ಚು ಬರುತ್ತಿವೆ. ಅತ್ಯಂತ ಚಟುವಟಿಕೆಯಿಂದ ಇರುವ ನಗರಗಳ ಪೈಕಿ ಹುಬ್ಬಳ್ಳಿ ಮುಂಚೂಣಿಯಲ್ಲಿದೆ. ಹಾಗೆ ನೋಡಿದರೆ ಇಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿಲ್ಲ. ಆದರೂ ಬೆಂಗಳೂರು, ಮಂಗಳೂರು ನಗರಗಳನ್ನು ಬಿಟ್ಟರೆ ಇಲ್ಲಿನ ವಿಮಾನ ನಿಲ್ದಾಣ ಪ್ರಯಾಣಿಕರ ಸಂಖ್ಯೆಗಳಿಗೆ ಅನುಗುಣವಾಗಿ 3ನೇ ಸ್ಥಾನದಲ್ಲಿದೆ.

ಕೋವಿಡ್‌ನಲ್ಲಿ ಇಳಿಮುಖವಾಗಿದ್ದ ಪ್ರಯಾಣಿಕರ ಸಂಖ್ಯೆ ಇದೀಗ ಮತ್ತೆ ಹೆಚ್ಚಾಗುತ್ತಿದೆ. ಕಳೆದ ಏಪ್ರಿಲ್‌ನಿಂದ ಆಗಸ್ಟ್‌ ವರೆಗೂ 5 ತಿಂಗಳ ಅವಧಿಯಲ್ಲಿ 2237 ವಿಮಾನ ಹಾರಾಟ ನಡೆಸಿದ್ದು 1,15,739 ಜನ ಪ್ರಯಾಣಿಸಿದ್ದಾರೆ. ಹೀಗಾಗಿ ದಟ್ಟಣೆ ದಿನದಿಂದ ಹೆಚ್ಚುತ್ತಿದೆ. ಬೆಂಗಳೂರು, ಹೈದರಾಬಾದ್‌, ಚೈನ್ನೈ, ಮುಂಬೈ, ಹಿಂಡಾನ್‌, ಮೈಸೂರು, ಮಂಗಳೂರಿಗೆ ಇಲ್ಲಿಂದ ವಿಮಾನಗಳಿವೆ. ಬೆಂಗಳೂರು, ಹೈದರಾಬಾದ್‌, ಚೈನ್ನೈ, ಮುಂಬೈಗೆ ನಿತ್ಯ ವಿಮಾನಗಳಿದ್ದರೆ, ಹಿಂಡಾನ್‌ ಹಾಗೂ ಮಂಗಳೂರಿಗೆ ವಾರದಲ್ಲಿ ನಾಲ್ಕು ದಿನ, ಮೈಸೂರಿಗೆ ವಾರದಲ್ಲಿ ನಾಲ್ಕು ದಿನ ವಿಮಾನಗಳು ಹಾರಾಟ ನಡೆಸುತ್ತವೆ.

Dharwad News: ಉದ್ಘಾಟನೆಗೆ ಮೊದಲೇ ಬಿರುಕು ಬಿಟ್ಟ ಶಾಲಾ ಕೊಠಡಿ!

ಸದ್ಯ ದೆಹಲಿಗೆ ಹೋಗುವವರು ಹಿಂಡಾನ್‌ಗೆ ತೆರಳಿ ಅಲ್ಲಿಂದ ರಸ್ತೆ ಮಾರ್ಗವಾಗಿ ಸಂಚರಿಸಬೇಕಾಗಿದೆ. ಇದರಿಂದ ಹೆಚ್ಚುವರಿ ಸಮಯ ಬೇಕಾಗುತ್ತದೆ. ಉದ್ಯಮಿಗಳು, ರಾಜಕಾರಣಿಗಳಿಗೆ ಇದು ಅಷ್ಟೊಂದು ಅನುಕೂಲವಾಗುತ್ತಿಲ್ಲವಾದರೂ ಸದ್ಯ ಈ ವ್ಯವಸ್ಥೆಯಾದರೂ ಇದೆಯೆಲ್ಲ ಎಂಬ ಸಮಾಧಾನವಷ್ಟೇ. ಆದರೆ ನೇರವಾಗಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವಂತಾದರೆ ಹೆಚ್ಚು ಅನುಕೂಲ ಎಂಬುದು ಉದ್ಯಮಿಗಳ ಬೇಡಿಕೆಯಾಗಿತ್ತು.

ಮಾತುಕತೆ:

ಇದೀಗ ಹುಬ್ಬಳ್ಳಿ-ದೆಹಲಿ ಮಧ್ಯೆ ನೇರ ವಿಮಾನ ಹಾರಾಟಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತುಕತೆ ನಡೆದಿದೆ ಎಂದು ತಿಳಿಸಿರುವುದುಂಟು. ಹುಬ್ಬಳ್ಳಿ- ದೆಹಲಿ ವಿಮಾನ ಹಾರಾಟಕ್ಕೆ ಇಂಡಿಗೋ ತನ್ನ ಒಪ್ಪಿಗೆಯನ್ನೂ ಸೂಚಿಸಿದೆ. ಸದ್ಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಇಂಡಿಗೋ ನಡುವೆ ಸಂಚಾರ ವೇಳಾಪಟ್ಟಿಬಗ್ಗೆ ಚರ್ಚೆ ನಡೆದಿದೆ. ಅದು ಈ ವಾರ ಅಂತಿಮವಾಗುವ ಸಾಧ್ಯತೆ ಇದೆ. ಅದಾದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸುವ ಉದ್ಯಮಿಗಳು, ದೊಡ್ಡ ಏರ್‌ಕ್ರಾಫ್ಟ್‌ ಅಥವಾ ಏರ್‌ ಬಸ್‌ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ರಾಜ್ಯದಲ್ಲಿ ಯುಗಾದಿವರೆಗೂ ಹೆಚ್ಚುವ ಸಾವು ನೋವು, ತಪ್ಪಿದ್ದಲ್ಲ ರಾಜಕೀಯ ಅಸ್ಥಿರತೆ; ಮತ್ತೆ ಕೋಡಿಶ್ರೀ ಕರಾಳ ಭವಿಷ್ಯ

3 ವರ್ಷದ ವಿಮಾನ ಹಾರಾಟದ ವಿವರ

ವರ್ಷ ವಿಮಾನಗಳ ಸಂಖ್ಯೆ ಪ್ರಯಾಣಿಕರ ಸಂಖ್ಯೆ

2020-21 2241 1,19,617
2021-22 5294 1,89,153
2022-23(ಏಪ್ರಿಲ್‌- ಆಗಸ್ಟ್‌ವರೆಗೆ) 2237 1,15,739

ಹುಬ್ಬಳ್ಳಿ-ದೆಹಲಿ ವಿಮಾನ ಹಾರಾಟ ಪ್ರಾರಂಭಿಸಲು ಪ್ರಯತ್ನ ನಡೆದಿರುವುದು ಉತ್ತಮ ಬೆಳವಣಿಗೆ. ಜೈಪುರ, ಅಹ್ಮದಬಾದ್‌ ಪ್ರಾರಂಭಿಸಬೇಕು. ದೆಹಲಿಗೆ ಏರ್‌ಬಸ್‌ನ್ನೇ ಪ್ರಾರಂಭಿಸಿದರೆ ದರವೂ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಅಂತ ಹುಬ್ಬಳ್ಳಿ ಕೈಗಾರಿಕೋದ್ಯಮಿ ಸುನಿಲ ನಲವಡೆ ತಿಳಿಸಿದ್ದಾರೆ.  

ಹುಬ್ಬಳ್ಳಿ-ದೆಹಲಿ ವಿಮಾನಯಾನ ಆರಂಭವಾದರೆ ವ್ಯಾಪಾರೋದ್ಯಮಕ್ಕೆ ಅನುಕೂಲವಾಗುತ್ತದೆ. ಇದರಿಂದ ಉದ್ಯಮಗಳನ್ನು ಆಕರ್ಷಿಸಲು ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ. ಏರ್‌ಬಸ್‌ ಸಾಧ್ಯವಾಗದಿದ್ದರೂ ದೊಡ್ಡ ಏರ್‌ಕ್ರಾಫ್ಟ್‌ ಪ್ರಾರಂಭಿಸಬೇಕು ಅಂತ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಹೇಳಿದ್ದಾರೆ. 
 

Follow Us:
Download App:
  • android
  • ios