ಬೆಲೆಯೇರಿಕೆಯಿಂದ ಬೇಸತ್ತ ಗ್ರಾಹಕರಿಗೆ ಶುಭಸುದ್ದಿ, ದೇಶಾದ್ಯಂತ ಬಾಸ್ಮತಿ ಅಕ್ಕಿ ದರದಲ್ಲಿ ಭಾರೀ ಇಳಿಕೆ
ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ಬಂಡುಕೋರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತದ ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಇಳಿಕೆ ಕಂಡುಬಂದಿದೆ.ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯಲ್ಲಿ ಶೇ.5-10ರಷ್ಟು ಇಳಿಕೆಯಾಗಿದೆ.
ನವದೆಹಲಿ (ಡಿ.28): ಏರಿಕೆಯ ಹಾದಿಯಲ್ಲಿರುವ ಅಕ್ಕಿ ಬೆಲೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ 25ರೂ. ರಿಯಾಯ್ತಿ ದರದಲ್ಲಿ'ಭಾರತ್ ಅಕ್ಕಿ' ಪರಿಚಯಿಸುವ ನಿರ್ಧಾರ ಕೈಗೊಂಡಿರುವ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಇದರ ಬೆನ್ನಲ್ಲೇ ಈಗ ದೇಶೀಯ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿ ಬೆಲೆಯಲ್ಲಿ ಶೇ.5-10ರಷ್ಟು ಇಳಿಕೆಯಾಗಿದೆ. ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗಿನ ಮೇಲೆ ಬಂಡುಕೋರರ ದಾಳಿ ಹಿನ್ನೆಲೆಯಲ್ಲಿ ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಇಳಿಕೆಯಾಗಿರೋದೆ ಇದಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಯೆಮನ್ ಹೌಥೀಸ್ ನಡೆಸಿದ ಈ ದಾಳಿಯಿಂದ ಹಡಗುಗಳು ಸೂಯೆಜ್ ಕಾಲುವೆ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗದ ಮೂಲಕ ಚಲಿಸಲು ಆದ್ಯತೆ ನೀಡುತ್ತಿವೆ. ಇದು ರಷ್ಯಾ ಹಾಗೂ ಉಕ್ರೇನ್ ನಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆಯ ಆಮದಿನ ಮೇಲೆ ಕೂಡ ವ್ಯತಿರಿಕ್ತ ಪರಿಣಾಮವುಂಟು ಮಾಡಿದೆ. ಇದರಿಂದ ಭಾರತದಲ್ಲಿ ಸೂರ್ಯಕಾಂತಿ ಎಣ್ಣೆ ಬೆಲೆಯಲ್ಲಿ ಶೇ.3-4ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ಬೆಲೆಯಲ್ಲಿ ಪ್ರತಿ ಟನ್ ಗೆ ಕಳೆದ ಒಂದು ವಾರದಲ್ಲಿ 30 ಡಾಲರ್ ಏರಿಕೆಯಾಗಿದೆ. ಇದರಿಂದ ಸೂರ್ಯಕಾಂತಿ ಎಣ್ಣೆ ಬೆಲೆ ಈಗ ಟನ್ ಗೆ 940 ಡಾಲರ್ ಏರಿಕೆಯಾಗಿದೆ.
ಭಾರತ ಪ್ರತಿ ವರ್ಷ 4-4.5 ಮಿಲಿಯನ್ ಟನ್ ಗಳಷ್ಟು ಬಾಸ್ಮತಿ ಅಕ್ಕಿಯನ್ನು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಇದು ಭಾರತದ ಒಟ್ಟು ಬಾಸ್ಮತಿ ಅಕ್ಕಿ ರಫ್ತಿನ ಶೇ.80ರಷ್ಟು ಭಾಗವಾಗಿದೆ. ಈ ವರ್ಷ ಕೇಂದ್ರ ಸರ್ಕಾರ ಆಹಾರ ಧಾನ್ಯಗಳ ಬೆಲೆ ಹೆಚ್ಚಳ ಹಾಗೂ ರಫ್ತಿನಲ್ಲಿ ಏರಿಕೆ ಹಿನ್ನೆಲೆಯಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು.
ಶೀಘ್ರದಲ್ಲೇ ಕೆಜಿಗೆ 25ರೂ.ದರದಲ್ಲಿ ಅಕ್ಕಿಲಭ್ಯ;ಭಾರತ್ ರೈಸ್ ಪರಿಚಯಿಸಲು ಕೇಂದ್ರ ಸರ್ಕಾರದ ಸಿದ್ಧತೆ
2022-23ನೇ ಸಾಲಿನ ಬೆಳೆ ವರ್ಷದಲ್ಲಿ (ಜುಲೈ-ಜೂನ್) ಭಾರತದ ಅಕ್ಕಿ ಉತ್ಪಾದನೆ ಅಂದಾಜು 135.54 ಮಿಲಿಯನ್ ಟನ್ ಗಳಿಗೆ ಏರಿಕೆಯಾಗಿದೆ. ಅದಕ್ಕಿಂತ ಹಿಂದಿನ ಸಾಲಿನಲ್ಲಿ ಇದು 129.47 ಮಿಲಿಯನ್ ಟನ್ ಗಳಷ್ಟಿತ್ತು ಎಂದು ಕೃಷಿ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಭಾರತ ಕೂಡ ಜಗತ್ತಿನ ಅತೀದೊಡ್ಡ ಅಕ್ಕಿ ರಫ್ತು ರಾಷ್ಟ್ರಗಳಲ್ಲಿ ಒಂದಾಗಿದ್ದು, 2021ರಲ್ಲಿ ಭಾರತದ ಅಕ್ಕಿ ರಫ್ತು 21.5 ಮಿಲಿಯನ್ ಟನ್ ಗೆ ತಲುಪಿತ್ತು. ಇದು ಉಳಿದ ನಾಲ್ಕು ಅತೀದೊಡ್ಡ ಅಕ್ಕಿ ರಫ್ತು ರಾಷ್ಟ್ರಗಳಾದ ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ ಹಾಗೂ ಅಮೆರಿಕದ ಒಟ್ಟು ಶಿಪ್ಪ್ ಮೆಂಟ್ ಗಿಂತ ಹೆಚ್ಚಿದೆ.
ಕೆಜಿಗೆ 25ರೂ. ರಿಯಾಯ್ತಿ ದರದಲ್ಲಿ ಭಾರತ್ ಅಕ್ಕಿ
ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ತಡೆಯೊಡ್ಡಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿಯೇ ಕೆಜಿಗೆ 25ರೂ. ರಿಯಾಯ್ತಿ ದರದಲ್ಲಿ 'ಭಾರತ್ ಅಕ್ಕಿ' ಒದಗಿಸಲು ಮುಂದಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಅಕ್ಕಿಯ ಬೆಲೆಯಲ್ಲಿ ದೇಶಾದ್ಯಂತ ಭಾರೀ ಏರಿಕೆ ಕಂಡುಬಂದಿದೆ. ಅಖಿಲ ಭಾರತ ಮಟ್ಟದಲ್ಲಿ ಅಕ್ಕಿಯ ಸರಾಸರಿ ರಿಟೇಲ್ ಬೆಲೆ ಕೆಜಿಗೆ 43.3ರೂ. ತಲುಪಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.14.1ರಷ್ಟು ದರ ಏರಿಕೆಯಾಗಿದೆ.
ತೆಂಗು ಬೆಳೆಗಾರರಿಗೆ ಬಿಗ್ ನ್ಯೂಸ್, ಕೊಬ್ಬರಿ ಕನಿಷ್ಠ ಬೆಂಬಲ ಬೆಲೆ ಏರಿಸಿದ ಕೇಂದ್ರ ಸರ್ಕಾರ
ಬತ್ತದ ಬೆಲೆ ಏರಿಕೆ
ಬತ್ತದ ಬೆಲೆ 1 ಕ್ವಿಂಟಾಲ್ ಗೆ 3 ಸಾವಿರ ಧಾರಣೆ ಕಂಡಿದ್ದು ಬತ್ತ ಬೆಳೆಯುವ ರೈತರು ಪುಲ್ ಖುಷಿಯಾಗಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ 1 ಕ್ವಿಂಟಾಲ್ ಬತ್ತದ ಬೆಲೆ 1500 ರಿಂದ 1600 ರು. ಇತ್ತು. ಈ ವರ್ಷ ಆಗಸ್ಟ್ ತಿಂಗಳಿಂದ ಬತ್ತದ ಬೆಲೆ ಏರಿಕೆಯಾಗುತ್ತಾ ಡಿಸೆಂಬರ್ ತಿಂಗಳಲ್ಲಿ 1 ಕ್ವಿಂಟಾಲ್ ಗೆ 3 ಸಾವಿರ ರು. ಏರಿಕೆಯಾಗಿ ದಾಖಲೆ ಸೃಷ್ಠಿಸಿದೆ.