ತೆಂಗು ಬೆಳೆಗಾರರಿಗೆ ಬಿಗ್ ನ್ಯೂಸ್, ಕೊಬ್ಬರಿ ಕನಿಷ್ಠ ಬೆಂಬಲ ಬೆಲೆ ಏರಿಸಿದ ಕೇಂದ್ರ ಸರ್ಕಾರ
ಕರ್ನಾಟಕದ ತೆಂಗು ಬೆಳೆಗಾರರ ಬಹುದಿನದ ಬೇಡಿಕೆಯಾಗಿದ್ದ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಕೇಂದ್ರ ಕ್ಯಾಬಿನೆಟ್ ಬುಧವಾರ ಒಪ್ಪಿಗೆ ನೀಡಿದೆ. 2023-24ರ ಋತುವಿನಲ್ಲಿ ಕೊಬ್ಬರಿ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸಿದೆ.
ನವದೆಹಲಿ (ಡಿ.27): ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತಂತೆ ರಾಜ್ಯ ವಿಧಾನಸಭೆಯಲ್ಲೂ ಸಾಕಷ್ಟು ಬಾರಿ ಚರ್ಚೆ ನಡೆದಿತ್ತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕೂಡ ಈ ಬಗ್ಗೆ ಮನವಿ ಮಾಡಿದ್ದರು. ಅದರಂತೆ ಕೇಂದ್ರ ಸರ್ಕಾರ, 2023-24 ಮಾರುಕಟ್ಟೆ ಋತುವಿನಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಮಿಲ್ಲಿಂಗ್ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 300 ರೂಪಾಯಿ ಏರಿಕೆ ಮಾಡಲಾಗಿದ್ದು, ಈಗ ಪ್ರತಿ ಕ್ವಿಂಟಾಲ್‌ಗೆ 11,160 ರೂಪಾಯಿ ಆಗಿದೆ. ಅದೇ ರೀತಿ ಪೂರ್ಣ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 250 ರೂಪಾಯಿ ಏರಿಕೆ ಮಾಡಲಾಗಿದ್ದು, ಈಗ 12 ಸಾವಿರ ರೂಪಾಯಿ ಆಗಿದೆ. ಕೇಂದ್ರ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಈ ನಿರ್ಧಾರವು ಭಾರತೀಯ ತೆಂಗು ಬೆಳೆಗಾರರಿಗೆ ಉತ್ತಮ ಪ್ರತಿಫಲವನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಇತರವುಗಳಲ್ಲಿ, ಬಿಹಾರದ ದಿಘಾ ಮತ್ತು ಸೋನೆಪುರವನ್ನು ಸಂಪರ್ಕಿಸುವ ಗಂಗಾನದಿಯ ಮೇಲೆ ಹೊಸ 4.56-ಕಿಲೋಮೀಟರ್ ಉದ್ದದ ಆರು ಪಥದ ಸೇತುವೆಯನ್ನು ನಿರ್ಮಿಸಲು ಕೇಂದ್ರ ಸಚಿವ ಸಂಪುಟವು ತನ್ನ ಅನುಮೋದನೆಯನ್ನು ನೀಡಿತು. ಸೇತುವೆ ಪೂರ್ಣಗೊಂಡ ನಂತರ ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಇದು ಸಂಪರ್ಕಿಸುತ್ತದೆ.
ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ 2024 ರ ಮಾರುಕಟ್ಟೆ ಋತುವಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಗರಿ ಅಥವಾ ಗೋಲಾ ಎಂದೂ ಕರೆಯಲ್ಪಡುವ ಕೊಬ್ಬರಿ, ತೆಂಗಿನಕಾಯಿಯ ಒಣ ಭಾಗವನ್ನು ಸೂಚಿಸುತ್ತದೆ.
ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಬೆಲೆ ಬೆಂಬಲ ಯೋಜನೆ (PSS) ಅಡಿಯಲ್ಲಿ ಕೊಬ್ಬರಿ ಮತ್ತು ಒಣಗಿದ ತೆಂಗಿನಕಾಯಿಯನ್ನು ಸಂಗ್ರಹಿಸಲು ಕೇಂದ್ರೀಯ ನೋಡಲ್ ಏಜೆನ್ಸಿಗಳಾಗಿ (CNAs) ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ.
ತೆಂಗು, ಕೊಬ್ಬರಿಗೆ ಹೆಚ್ಚುವರಿ ದರ ನಿಗದಿಪಡಿಸಿ: ಶೋಭಾಗೆ ದೇವೇಗೌಡ ಮನವಿ
ಕನಿಷ್ಠ ಬೆಂಬಲ ಬೆಲೆ (MSP) ಎಂಬುದು ಲಾಭದಾಯಕ ಬೆಲೆಯಾಗಿದ್ದು, ರೈತರಿಗೆ ಅವರ ಉತ್ಪನ್ನಗಳಿಗೆ ಸಾಕಷ್ಟು ಆದಾಯವನ್ನು ನೀಡುತ್ತದೆ. ಸರಳವಾಗಿ ಹೇಳುವುದಾದರೆ, ಎಂಎಸ್‌ಪಿ ಬೆಲೆಯಲ್ಲಿನ ಹಠಾತ್ ಕುಸಿತದಿಂದ ರೈತರನ್ನು ರಕ್ಷಿಸುವ ಅಸ್ತ್ರವಾಗಿದೆ. ಹೀಗಾಗಿ, ಇದು ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳಲು ಅನುಕೂಲಕರವಾಗಿದೆ ಮತ್ತು ಮಾರುಕಟ್ಟೆಯಲ್ಲಿ ಬೆಲೆ ಅನ್ವೇಷಣೆಗೆ ಆಧಾರವನ್ನು ಒದಗಿಸುತ್ತದೆ. ಇದು ಕೃಷಿ ವ್ಯವಸ್ಥೆಗೆ ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ ಮತ್ತು ಉತ್ತಮ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆದರೆ, ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ಕೆಲವೇ ರೈತರು ಮಾತ್ರ ಇದರ ಲಾಭ ಪಡೆಯಲು ಸಾಧ್ಯವಾಗುತ್ತಿದೆ. ಖರೀದಿ ಕೇಂದ್ರಗಳಲ್ಲಿ ಕೆಲಸ ಮಾಡುವ ನೌಕರರು ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿರುವುದು ಕಂಡು ಬರುತ್ತಿದೆ.
ಕೊಬ್ಬರಿ ಬೆಂಬಲ ಬೆಲೆಗೆ ಕೇಂದ್ರ ಸಚಿವರಿಗೆ ಶಾಸಕ ಸುರೇಶಗೌಡ ಮನವಿ
ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (CACP) ಪ್ರತಿ ವರ್ಷ ಬಿತ್ತನೆ ಅವಧಿಯ ಮೊದಲು 22 ಬೆಳೆಗಳಿಗೆ ಎಂಎಸ್‌ಪಿಅನ್ನು ಶಿಫಾರಸು ಮಾಡಿದೆ. 14 ಖಾರಿಫ್ ಬೆಳೆಗಳು ಮತ್ತು ಏಳು ರಾಬಿ ಬೆಳೆಗಳು ಎಂಎಸ್‌ಪಿ ವ್ಯಾಪ್ತಿಗೆ ಬರುತ್ತವೆ. ಕೊಬ್ಬರಿ, ಸಿಪ್ಪೆ ಸುಲಿದ ತೆಂಗಿನಕಾಯಿ, ಸೆಣಬು ಮತ್ತು ಕಬ್ಬು (ಎಫ್‌ಆರ್‌ಪಿ) ನಾಲ್ಕು ಕ್ಯಾಲೆಂಡರ್ ವರ್ಷದ ಬೆಳೆಗಳು. ಸಕ್ಕರೆಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗಳನ್ನು ಸಹ ಘೋಷಿಸಲಾಗಿದೆ.