ಶೀಘ್ರದಲ್ಲೇ ಕೆಜಿಗೆ 25ರೂ.ದರದಲ್ಲಿ ಅಕ್ಕಿಲಭ್ಯ;ಭಾರತ್ ರೈಸ್ ಪರಿಚಯಿಸಲು ಕೇಂದ್ರ ಸರ್ಕಾರದ ಸಿದ್ಧತೆ
ಗೋಧಿ ಹಿಟ್ಟು ಹಾಗೂ ಬೇಳೆಕಾಳುಗಳ ಮಾದರಿಯಲ್ಲೇ ಅಕ್ಕಿಯನ್ನು ಕೂಡ ರಿಯಾಯ್ತಿ ದರದಲ್ಲಿ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕೆಜಿಗೆ 25ರೂ.ದರದಲ್ಲಿ ಅಕ್ಕಿಯನ್ನು ಒದಗಿಸಲಿದೆ.
ನವದೆಹಲಿ (ಡಿ.27): ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ತಡೆಯೊಡ್ಡಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿಯೇ ಕೆಜಿಗೆ 25ರೂ. ರಿಯಾಯ್ತಿ ದರದಲ್ಲಿ 'ಭಾರತ್ ಅಕ್ಕಿ' ಒದಗಿಸಲು ಮುಂದಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಈಗಾಗಲೇ ಕೇಂದ್ರ ಸರ್ಕಾರ ಗೋಧಿ ಹಿಟ್ಟನ್ನು 'ಭಾರತ್ ಅಟ್ಟಾ' ಹಾಗೂ ಬೇಳೆ ಕಾಳುಗಳನ್ನು 'ಭಾರತ್ ದಾಲ್' ಎಂಬ ಹೆಸರಿನಲ್ಲಿ ರಿಯಾಯ್ತಿ ದರದಲ್ಲಿ ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಈಗ ಅದೇ ಹಾದಿಯಲ್ಲಿ ಅಕ್ಕಿಯನ್ನು ಒದಗಿಸಲು ಮುಂದಾಗಿದೆ. ಇನ್ನು ಭಾರತ್ ಅಕ್ಕಿಯನ್ನು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್), ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ ಸಿಸಿಎಫ್), ಕೇಂದ್ರೀಯ ಭಂಡಾರ್ ಮಳಿಗೆಗಳು ಹಾಗೂ ಮೊಬೈಲ್ ವ್ಯಾನ್ ಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳ ಮೂಲಕ ಒದಗಿಸುವ ಸಾಧ್ಯತೆಯಿದೆ.
ಅಕ್ಕಿಯ ಬೆಲೆಯಲ್ಲಿ ದೇಶಾದ್ಯಂತ ಭಾರೀ ಏರಿಕೆ ಕಂಡುಬಂದಿದೆ. ಅಖಿಲ ಭಾರತ ಮಟ್ಟದಲ್ಲಿ ಅಕ್ಕಿಯ ಸರಾಸರಿ ರಿಟೇಲ್ ಬೆಲೆ ಕೆಜಿಗೆ 43.3ರೂ. ತಲುಪಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.14.1ರಷ್ಟು ದರ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ತಡೆ ಹಾಕೋದು ಹಾಗೂ ಹಣದುಬ್ಬರ ನಿಯಂತ್ರಿಸೋದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಯೊಬ್ಬರು ನೀಡಿದ್ದಾರೆ ಕೂಡ.
ರೈತರ ಹಾಲು ಖರೀದಿ ದರ 4 ರೂ. ತಗ್ಗಿಸಿದ ಕೆಎಂಎಫ್: ಬರದ ನಡುವೆಯೂ ರೈತರಿಗೆ ಬರೆ ಎಳೆದ ಸರ್ಕಾರ!
ಪ್ರಸ್ತುತ ಸರ್ಕಾರ ಭಾರತ್ ಗೋಧಿ ಹಿಟ್ಟನ್ನು ಕೆಜಿಗೆ 27.50ರೂ. ದರದಲ್ಲಿ ಹಾಗೂ ಕಡಲೆ ಬೇಳೆಯನ್ನು ಕೆಜಿಗೆ 60 ರೂ. ದರದಲ್ಲಿ ಒದಗಿಸುತ್ತಿದೆ. ಇನ್ನು ಈ ಉತ್ಪನ್ನಗಳನ್ನು 2,000ಕ್ಕೂ ಅಧಿಕ ರಿಟೇಲ್ ಶಾಪ್ ಗಳಲ್ಲಿ ವಿತರಿಸಲಾಗುತ್ತಿದೆ. ಭಾರತ್ ರೈಸ್ ಮಾರಾಟ ಪ್ರಕ್ರಿಯೆ ಕೂಡ ಭಾರತ್ ದಾಲ್ ಹಾಗೂ ಭಾರತ್ ಅಟ್ಟಾ ಮಾದರಿಯಲ್ಲೇ ನಡೆಯಲಿದೆ.
ಇತ್ತೀಚಿನ ಕೆಲವು ತಿಂಗಳಿಂದ ಕೇಂದ್ರ ಸರ್ಕಾರ ಅಗತ್ಯ ಆಹಾರ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬಾಸ್ಮತಿಯೇತರ ಅಕ್ಕಿ ರಫ್ತಿಗೆ ನಿರ್ಬಂಧ ಹಾಗೂ ಬಾಸ್ಮಮತಿ ಅಕ್ಕಿ ರಫ್ತಿಗೆ ಫ್ಲೋರ್ ಬೆಲೆ ನಿಗದಿ ಸೇರಿದಂತೆ ಅನೇಕ ಕ್ರಮಗಳನ್ನು ಈಗಾಗಲೇ ಸರ್ಕಾರ ಕೈಗೊಂಡಿದೆ. ಇನ್ನು ಭಾರತೀಯ ಆಹಾರ ನಿಗಮ (ಎಫ್ ಸಿಐ) ಕೂಡ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಅಡಿಯಲ್ಲಿ ಅಕ್ಕಿಯನ್ನು ಒದಗಿಸಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯತೆಯನ್ನು ಹೆಚ್ಚಿಸಿದೆ.
ನವೆಂಬರ್ ನಲ್ಲಿ ಧಾನ್ಯಗಳ ಬೆಲೆಯಲ್ಲಿ ಶೇ.10.3ರಷ್ಟು ಏರಿಕೆಯಾಗಿದೆ. ಇದು ಸಮಗ್ರ ಆಹಾರ ಹಣದುಬ್ಬರ ಅಕ್ಟೋಬರ್ ನಲ್ಲಿ ಶೇ.6.61 ರಷ್ಟಿದಿದ್ದು, ನವೆಂಬರ್ ನಲ್ಲಿ ಶೇ.8.7ಕ್ಕೆ ಏರಿಕೆಯಾಗಲು ಕಾರಣವಾಗಿದೆ. ಆಹಾರ ಹಣದುಬ್ಬರದಲ್ಲಿನ ಈ ಏರಿಕೆ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ (ಸಿಪಿಐ) ಭಾರೀ ಏರಿಕೆಯಾಗಲು ಕಾರಣವಾಗಿದೆ.
2022-23ನೇ ಸಾಲಿನ ಬೆಳೆ ವರ್ಷದಲ್ಲಿ (ಜುಲೈ-ಜೂನ್) ಭಾರತದ ಅಕ್ಕಿ ಉತ್ಪಾದನೆ ಅಂದಾಜು 135.54 ಮಿಲಿಯನ್ ಟನ್ ಗಳಿಗೆ ಏರಿಕೆಯಾಗಿದೆ. ಅದಕ್ಕಿಂತ ಹಿಂದಿನ ಸಾಲಿನಲ್ಲಿ ಇದು 129.47 ಮಿಲಿಯನ್ ಟನ್ ಗಳಷ್ಟಿತ್ತು ಎಂದು ಕೃಷಿ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಅಕ್ಕಿ ಉತ್ಪಾದಿಸುವ ಪ್ರಮುಖ ರಾಷ್ಟ್ರಭಾರತ
ಭಾರತ ಕೂಡ ಜಗತ್ತಿನ ಅತೀದೊಡ್ಡ ಅಕ್ಕಿ ರಫ್ತು ರಾಷ್ಟ್ರಗಳಲ್ಲಿ ಒಂದಾಗಿದ್ದು, 2021ರಲ್ಲಿ ಭಾರತದ ಅಕ್ಕಿ ರಫ್ತು 21.5 ಮಿಲಿಯನ್ ಟನ್ ಗೆ ತಲುಪಿತ್ತು. ಇದು ಉಳಿದ ನಾಲ್ಕು ಅತೀದೊಡ್ಡ ಅಕ್ಕಿ ರಫ್ತು ರಾಷ್ಟ್ರಗಳಾದ ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ ಹಾಗೂ ಅಮೆರಿಕದ ಒಟ್ಟು ಶಿಪ್ಪ್ ಮೆಂಟ್ ಗಿಂತ ಹೆಚ್ಚಿದೆ.
ಯುಎಇಗೆ ರೂಪಾಯಿಯಲ್ಲೇ ಪಾವತಿಯಾಯ್ತು ಕಚ್ಚಾ ತೈಲ: ಭಾರತಕ್ಕೆ ಮಹತ್ವದ ಉಳಿತಾಯ, ಸ್ಥಳೀಯ ಕರೆನ್ಸಿಗೆ ಜಾಗತಿಕ ಮೌಲ್ಯ!
ಬತ್ತದ ಬೆಲೆ ಏರಿಕೆ
ಬತ್ತದ ಬೆಲೆ 1 ಕ್ವಿಂಟಾಲ್ ಗೆ 3 ಸಾವಿರ ಧಾರಣೆ ಕಂಡಿದ್ದು ಬತ್ತ ಬೆಳೆಯುವ ರೈತರು ಪುಲ್ ಖುಷಿಯಾಗಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ 1 ಕ್ವಿಂಟಾಲ್ ಬತ್ತದ ಬೆಲೆ 1500 ರಿಂದ 1600 ರು. ಇತ್ತು. ಈ ವರ್ಷ ಆಗಸ್ಟ್ ತಿಂಗಳಿಂದ ಬತ್ತದ ಬೆಲೆ ಏರಿಕೆಯಾಗುತ್ತಾ ಡಿಸೆಂಬರ್ ತಿಂಗಳಲ್ಲಿ 1 ಕ್ವಿಂಟಾಲ್ ಗೆ 3 ಸಾವಿರ ರು. ಏರಿಕೆಯಾಗಿ ದಾಖಲೆ ಸೃಷ್ಠಿಸಿದೆ.