‘ಸೆಮಿಕಂಡಕ್ಟರ್ ಕ್ಷೇತ್ರದ ಲಾಭ ಪಡೆಯಲು 2 ಶತಕೋಟಿ ಡಾಲರ್ ಹೂಡಿಕೆ ಅಗತ್ಯ’

* ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
* ಪ್ರಥಮ ಬಾರಿಗೆ ವರ್ಚುಯಲ್ ಮಾದರಿಯಲ್ಲಿ ಇಂದಿನಿಂದ ಮಾ.9ರವರೆಗೆ ನಡೆಯುತ್ತಿರುವ ಸಮಾವೇಶ 
* ವರ್ಚುಯಲ್ ಮೂಲಕ ಭಾರತ ರತ್ನ ಪ್ರೊ. ಸಿ ಎನ್ ಆರ್ ರಾವ್ ಭಾಗಿ

basavaraj bommai inaugurates Bengaluru india nano conference

ಬೆಂಗಳೂರು, (ಮಾ.08): ಸೆಮಿಕಂಡಕ್ಟರ್ ವಲಯದಲ್ಲಿರುವ 2 ಟ್ರಿಲಿಯನ್ ಡಾಲರ್ ಮೌಲ್ಯದ ಅವಕಾಶಗಳನ್ನು ಭಾರತವು ತನ್ನದಾಗಿಸಿಕೊಳ್ಳಲು ಆದ್ಯತೆಯ ಮೇರೆಗೆ 2 ಶತಕೋಟಿ ಡಾಲರ್ ಹಣವನ್ನು ವಿನಿಯೋಗಿಸುವ ಅವಶ್ಯಕತೆಯಿದೆ ಎಂದು ದೆಹಲಿಯ ಐಐಟಿ ಸಂಸ್ಥೆಯ ಪ್ರೊ.ವಿ. ರಾಮಗೋಪಾಲ್ ರಾವ್ ಪ್ರತಿಪಾದಿಸಿದರು.

ಬೆಂಗಳೂರಿನಲ್ಲಿ ಸೋಮವಾರ ಆರಂಭವಾದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ವನ್ನು ( Bengaluru India Nano Conference) ಉದ್ದೇಶಿಸಿ ವರ್ಚುಯಲ್ ರೂಪದಲ್ಲಿ ಮಾತನಾಡಿದ ಅವರು, `ಸೆಮಿಕಂಡಕ್ಟರ್ ಕಾರ್ಯಪರಿಸರದ ಮೂಲಕ ಭಾರತದ ಉತ್ಪಾದನಾ ವಲಯಕ್ಕೆ ಉತ್ತೇಜನ’ ವಿಚಾರ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.

Women's Day 'ಮಹಿಳಾ ದಿನ'ದ ವಿಶೇಷ: `ಅಸ್ಮಿತೆ’ ವ್ಯಾಪಾರ ಮೇಳಕ್ಕೆ ಸಿಎಂ ಚಾಲನೆ

ಭಾರತದಲ್ಲಿ ಸದ್ಯಕ್ಕೆ ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಕಂದಕವಿದೆ. ಇದನ್ನು ಆದಷ್ಟು ಬೇಗ ಮುಚ್ಚಬೇಕು. ನ್ಯಾನೋ ತಂತ್ರಜ್ಞಾನದ ವಲಯದಲ್ಲಿ ಸಾವಿರಾರು ನವೋದ್ಯಮಗಳು ಅಸ್ತಿತ್ವಕ್ಕೆ ಬರುತ್ತಿದ್ದು, ದೇಶದಲ್ಲಿ ಈ ವಲಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಸಂಖ್ಯೆಯಲ್ಲಿ ಉತ್ಕೃಷ್ಟತಾ ಕೇಂದ್ರಗಳು ಬರಬೇಕಾದ ಅಗತ್ಯವಿದ ಎಂದರು.

ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಕೊಡುತ್ತಿರುವಷ್ಟೇ ಒತ್ತನ್ನು ಪೇಟೆಂಟ್ ಸಂಸ್ಕೃತಿಗೂ ಕೊಡಬೇಕು. ಇದರಿಂದಾಗಿ ನ್ಯಾನೋ ತಂತ್ರಜ್ಞಾನದ ಶಕ್ತಿ-ಸಾಮರ್ಥ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸೂಕ್ತ ಕಾರ್ಯಪರಿಸರವನ್ನು ಸೃಷ್ಟಿಸಬಹುದು. ಮಾರುತಿ ಸುಜುಕಿ ಕಂಪನಿಯು ಸೆಮಿಕಂಡಕ್ಟರ್ ವಲಯದಲ್ಲಿ ಮಾಡಿರುವ ಸಾಧನೆ ಗಮನಾರ್ಹವಾಗಿದ್ದು, ಮೇಲ್ಪಂಕ್ತಿಯಂತಿದೆ ಎಂದು ರಾವ್ ಶ್ಲಾಘಿಸಿದರು.

ನ್ಯಾನೋ ವಿದ್ಯುನ್ಮಾನ ಸಂಶೋಧನೆಯಲ್ಲಿ ಭಾರತವು ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದ್ದು, 7 ಸಂಸ್ಥೆಗಳು ಈ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿವೆ. ಕೃಷಿ, ಆರೋಗ್ಯ ಸೇವೆಗಳು ಮತ್ತು ಆಟೋಮೋಟೀವ್ ವಲಯಗಳು ನ್ಯಾನೋ ತಂತ್ರಜ್ಞಾನವನ್ನು ಅಗಾಧ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬಹುದು. ಒಟ್ಟಾರೆಯಾಗಿ ಈ ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ಅಮೆರಿಕ ಮತ್ತು ಚೀನಾಗಳ ನಂತರದಲ್ಲಿ 3ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ನ್ಯಾನೋ ತಂತ್ರಜ್ಞಾನವು 100 ಕೋಟಿ ದೇಶವಾಸಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ವ್ಯಾಪಕವಾಗಲಿದ್ದು, ಪ್ರತಿಯೊಂದು ಕ್ಷೇತ್ರವನ್ನೂ ಆಳಲಿದೆ ಎಂದು  ಆಶಾವಾದ ವ್ಯಕ್ತಪಡಿಸಿದರು.

ಸ್ಯಾಮ್ಸಂಗ್ ಇಂಡಿಯಾದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಬಾಲಾಜಿ ಶೌರಿರಾಜನ್ ಮಾತನಾಡಿ, 3ಡಿ ವಿಡಿಯೋ, ಗೇಮಿಂಗ್ ತಂತ್ರಜ್ಞಾನ ಮತ್ತು 5ಜಿ ತಂತ್ರಜ್ಞಾನಗಳು ಇಂದು ಜಗತ್ತನ್ನು ಬೆಸೆಯುತ್ತಿವೆ. ನ್ಯಾನೋ ತಂತ್ರಜ್ಞಾನದಿಂದಾಗಿ ಮಿಂಚಿನ ಗತಿಯಲ್ಲಿ ಸಂವಹನ ಸಂಭವಿಸುತ್ತಿದೆ. `ಮೇಕ್ ಇನ್ ಇಂಡಿಯಾ’ ಯೋಜನೆಯಿಂದಾಗಿ ಇಂದು ನೂರಾರು ಕಂಪನಿಗಳು ಭಾರತದಲ್ಲೇ ನೆಲೆಯೂರಿವೆ. ಇದರಿಂದಾಗಿ ರಾಷ್ಟ್ರವು ಸಂಶೋಧನೆಯ ಕ್ಷೇತ್ರದಲ್ಲಿ ದೊಡ್ಡಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅಭಿಪ್ರಾಯಪಟ್ಟರು.

 ಖಾಸಗಿ ಹೋಟೆಲ್​​ನಲ್ಲಿ ನಡೆದ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು.‌ ಪ್ರಥಮ ಬಾರಿಗೆ ವರ್ಚುಯಲ್ ಮಾದರಿಯಲ್ಲಿ ಇಂದಿನಿಂದ ಮಾ.9ರವರೆಗೆ ಸಮಾವೇಶ ನಡೆಯಲಿದೆ.

ಗೋಷ್ಠಿಯಲ್ಲಿ ತಂತ್ರಜ್ಞಾನ ಕ್ಷೇತ್ರದ ಪರಿಣತರಾದ ಸುಭಾಷ್ ಚಿಂತಾಮನೇನಿ, ವಿಕಾಸ್ ದಬೀರ್, ಜಿತೇಂದ್ರ ಛಡ್ಡಾ ಪಾಲ್ಗೊಂಡಿದ್ದರು.

4 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ: ಈ ಸಮಾವೇಶದಲ್ಲಿ 25ಕ್ಕೂ ಹೆಚ್ಚು ಪೂರ್ಣ ಪ್ರಮಾಣದ ಗೋಷ್ಠಿಗಳನ್ನು ಏರ್ಪಡಿಸಿದ್ದು, 75ಕ್ಕೂ ಹೆಚ್ಚು ಪರಿಣಿತರು ಮಾತನಾಡಲಿದ್ದಾರೆ. ಜತೆಗೆ 40 ಪ್ರದರ್ಶನ ಮಳಿಗೆಗಳು ಇರಲಿದ್ದು, ಒಟ್ಟಾರೆಯಾಗಿ 4 ಸಾವಿರಕ್ಕೂ ಹೆಚ್ಚು ಮಂದಿ ನೋಂದಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

Latest Videos
Follow Us:
Download App:
  • android
  • ios