ಸದ್ದಿಲ್ಲದೇ ಕಾರು, ವೈಯಕ್ತಿಕ ಸಾಲ ಬಡ್ಡಿ ದರ ಏರಿಸಿದ ಬ್ಯಾಂಕ್‌ಗಳು : ಗೃಹ ಸಾಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ
ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ಮುಗಿಯುತ್ತಿದ್ದಂತೆ ದೇಶದ ಬ್ಯಾಂಕುಗಳು ವಾಹನ ಹಾಗೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ಸದ್ದಿಲ್ಲದೆ ಏರಿಕೆ ಮಾಡಿವೆ
ಮುಂಬೈ: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ಮುಗಿಯುತ್ತಿದ್ದಂತೆ ದೇಶದ ಬ್ಯಾಂಕುಗಳು ವಾಹನ ಹಾಗೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ಸದ್ದಿಲ್ಲದೆ ಏರಿಕೆ ಮಾಡಿವೆ. ಆದರೆ ಗೃಹ ಸಾಲದ ಬಡ್ಡಿ ದರವನ್ನು ಹೆಚ್ಚಳ ಮಾಡುವ ಉಸಾಬರಿಗೆ ಹೋಗಿಲ್ಲ. ಇತ್ತೀಚೆಗೆ ಬ್ಯಾಂಕುಗಳು ಠೇವಣಿ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದ್ದವು. ಅದರ ಬೆನ್ನಲ್ಲೇ ವಾಹನ, ವೈಯಕ್ತಿಕ ಸಾಲದ ಬಡ್ಡಿಯಲ್ಲಿ ಹೆಚ್ಚಳ ಮಾಡಿವೆ. ಆದರೆ ಗೃಹ ಸಾಲದ ಬಡ್ಡಿ ದರವನ್ನು ರೆಪೋ ದರದ ಜತೆ ಜೋಡಣೆ ಮಾಡಲಾಗಿದೆ. ರೆಪೋ ದರ ಏರಿಕೆಯಾಗಿಲ್ಲದ ಕಾರಣ ಗೃಹ ಸಾಲದಲ್ಲೂ ವ್ಯತ್ಯಾಸವಾಗಿಲ್ಲ
ಎಷ್ಟು ಏರಿಕೆ?
ಎಸ್‌ಬಿಐನಲ್ಲಿ ಡಿಸೆಂಬರ್ ನಲ್ಲಿ ಶೇ.8.65 ಬಡ್ಡಿಗೆ ವಾಹನ ಸಾಲ ಸಿಗುತ್ತಿತ್ತು. ಆದರೆ ಇದೀಗ ಅದನ್ನು ಹೆಚ್ಚಿನ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಶೇ.8.85ಕ್ಕೆ ಏರಿಕೆ ಮಾಡಲಾಗಿದೆ. ಕಡಿಮೆ ಸ್ಕೋರ್ ಇದ್ದವರಿಗೆ ಬಡ್ಡಿ ಇನ್ನೂ ಹೆಚ್ಚಾಗಲಿದೆ. ಮತ್ತೊಂದೆಡೆ ಬ್ಯಾಂಕ್ ಆಫ್ ಬರೋಡಾದಲ್ಲಿ ಕಳೆದ ತಿಂಗಳು ಶೇ.8.7ರಷ್ಟಿದ್ದ ವಾಹನ ಸಾಲ ಈಗ ಶೇ. 8.8ಕ್ಕೆ ಏರಿಕೆಯಾಗಿದೆ. ಹಬ್ಬದ ಋತು ವಿನಲ್ಲಿ ರದ್ದುಪಡಿಸಲಾಗಿದ್ದ ಸಂಸ್ಕರಣಾ ಶುಲ್ಕವನ್ನು ಆ ಬ್ಯಾಂಕು ಮರು ಜಾರಿಗೊಳಿಸಿದೆ.
ಯೂನಿಯನ್ ಬ್ಯಾಂಕ್‌ನಲ್ಲಿ ವಾಹನ ಸಾಲ ಬಡ್ಡಿ ದರವನ್ನು ಶೇ.8.75 ರಿಂದ ಶೇ.9.15ಕ್ಕೆ ಏರಿಕೆ ಮಾಡಲಾಗಿದೆ. ಮತ್ತೊಂದೆಡೆ, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ಐಡಿಎಫ್‌ಸಿ ಬ್ಯಾಂಕ್ ಶೇ. 10.49ರಿಂದ ಶೇ .10.75ಕ್ಕೆ ಏರಿಕೆ ಮಾಡಿದೆ. ಕರ್ನಾಟಕ ಬ್ಯಾಂಕ್‌ನಲ್ಲಿ ವೈಯಕ್ತಿಕ ಸಾಲದ ಬಡ್ಡಿ ದರ ಶೇ. 14. 21ರಿಂದ ಶೇ.14.28ಕ್ಕೆ ಹೆಚ್ಚಳವಾಗಿದೆ.
ಗೃಹ, ವಾಣಿಜ್ಯ ಸಾಲದ ಬಡ್ಡಿ ಬಳಿಕ ಠೇವಣಿ ದರ ಹೆಚ್ಚಳ ಮಾಡಿದ ಎಸ್‌ಬಿಐ
ಬಡ್ಡಿ ದರ ಏರಿಕೆ ಮಾಡಲು ಬ್ಯಾಂಕು ಗಳು ಹಬ್ಬದ ಋತು ಮುಗಿಯಲು ಕಾಯುತ್ತಿದ್ದವು. ಠೇವಣಿ ಬಡ್ಡಿದರ ಹೆಚ್ಚಳದಿಂದಾಗಿ ಬ್ಯಾಂಕುಗಳಿಗೆ ಸಂಪನ್ಮೂಲದ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಸಾಲದ ಬಡ್ಡಿ ದರವನ್ನು ಏರಿಕೆ ಮಾಡಿವೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವಂತ ಉದ್ಯಮ ಪ್ರಾರಂಭಿಸೋರಿಗೆ ಸರ್ಕಾರದ ಈ ಯೋಜನೆಯಡಿ ಸಿಗುತ್ತೆ 10 ಲಕ್ಷ ರೂ. ಸಾಲ