ಸ್ವಂತ ಉದ್ಯಮ ಪ್ರಾರಂಭಿಸೋರಿಗೆ ಸರ್ಕಾರದ ಈ ಯೋಜನೆಯಡಿ ಸಿಗುತ್ತೆ 10 ಲಕ್ಷ ರೂ. ಸಾಲ
ಕಿರು ಹಾಗೂ ಸಣ್ಣ ಉದ್ಯಮದಾರರಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ 10ಲಕ್ಷ ರೂ. ತನಕ ಸಾಲ ಸೌಲಭ್ಯ ನೀಡುತ್ತದೆ. ಹಾಗಾದ್ರೆ ಯಾರು ಈ ಸಾಲ ಪಡೆಯಬಹುದು? ಹೇಗೆ? ಇಲ್ಲಿದೆ ಮಾಹಿತಿ.
Business Desk: ಇತ್ತೀಚಿನ ದಿನಗಳಲ್ಲಿ ಸ್ವಂತ ಉದ್ಯಮಕ್ಕೆ ಕೈಹಾಕೋರ ಸಂಖ್ಯೆ ಹೆಚ್ಚಿದೆ. ಆದರೆ, ಹೀಗೆ ಸ್ವಂತ ಉದ್ಯಮ ಮಾಡಬೇಕೆಂಬ ಇಚ್ಛೆಯುಳ್ಳವರಿಗೆ ಅನೇಕ ಬಾರಿ ಹಣಕಾಸಿನ ಅಡಚಣೆ ಎದುರಾಗುತ್ತದೆ. ಈ ಹಣಕಾಸಿನ ಸಮಸ್ಯೆಯಿಂದಾಗಿ ಎಷ್ಟೋ ಜನ ಸ್ವಂತ ಉದ್ಯಮದ ಕನಸಿಗೆ ವಿದಾಯ ಕೂಡ ಹೇಳುತ್ತಾರೆ. ಹೀಗಾಗಿ ಇಂಥವರಿಗೆ ನೆರವಾಗುವ ಹಾಗೂ ಕಿರು ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಇಎಂಎಂವೈ) ಪ್ರಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2015ರಲ್ಲಿ ಆರಂಭಿಸಿದ ಈ ಯೋಜನೆಯಡಿಯಲ್ಲಿ ಕೃಷಿ ಹಾಗೂ ಕಾರ್ಪೋರೇಟ್ ವಲಯದ ಹೊರಗಿರುವ ಸಣ್ಣ ಅಥವಾ ಕಿರು ಉದ್ಯಮಗಳಿಗೆ 10ಲಕ್ಷ ರೂ. ತನಕ ಸಾಲ ಸಿಗಲಿದೆ. ಬ್ಯಾಂಕ್ ಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಹಾಗೂ ಮೈಕ್ರೋಫೈನಾನ್ಸ್ ಮೂಲಕ ಮೈಕ್ರೋ ಯುನಿಟ್ಸ್ ಡೆವಲಪ್ ಮೆಂಟ್ ಹಾಗೂ ರಿಫೈನಾನ್ಸ್ ಏಜೆನ್ಸಿ ಲಿಮಿಟೆಡ್ (ಮುದ್ರಾ) ಉದ್ಯಮಗಳಿಗೆ ಹಣ ಪೂರೈಕೆ ಮಾಡುವ ಗುರಿ ಹೊಂದಿದೆ.
ಯಾರು ಇದರ ಪ್ರಯೋಜನ ಪಡೆಯಬಹುದು?
ಸಣ್ಣ ಉತ್ಪಾದನಾ ಘಟಕಗಳು, ಸೇವಾ ಪೂರೈಕೆದಾರರು, ಶಾಪ ಮಾಲೀಕರು, ಹಣ್ಣು ಅಥವಾ ತರಾರಿ ವ್ಯಾಪಾರಿಗಳು, ಟ್ರಕ್ ನಿರ್ವಾಹಕರು, ಆಹಾರ ಪೂರೈಕೆ ಸಂಸ್ಥೆಗಳು, ದುರಸ್ತಿ ಅಂಗಡಿಗಳು, ಮಷಿನ್ ಆಪರೇಟರ್ ಗಳು, ಕಿರು ಕೈಗಾರಿಕೆಗಳು, ಕರಕುಶಲಕರ್ಮಿಗಳು, ಆಹಾರ ಸಂಸ್ಕರಣೆ ಹಾಗೂ ಅದೇ ಮಾದರಿಯ ಉದ್ಯಮ ಸಂಸ್ಥೆಗಳು ಕಾರ್ಪೋರೇಟೇತರ ಕಿರು ಉದ್ಯಮ ವಲಯಕ್ಕೆ (NCSB)ಸೇರುತ್ತವೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಈ ಉದ್ಯಮಗಳು ಮುದ್ರಾದ ಮೂಲಕ ಸಾಲ ಪಡೆಯಲು ಅರ್ಹತೆ ಹೊಂದಿವೆ.
ಖಾತೆ ಒಂದು ಲಾಭ ಹಲವು;ಉದ್ಯೋಗಸ್ಥ ಮಹಿಳೆಯರಿಗೆ ಹೊಸ ಉಳಿತಾಯ ಖಾತೆ ಪರಿಚಯಿಸಿದ ಬ್ಯಾಂಕ್ ಆಫ್ ಇಂಡಿಯಾ
ಅರ್ಹತೆಯೇನು?
*ಅರ್ಜಿದಾರ ಭಾರತೀಯ ನಾಗರಿಕನಾಗಿರಬೇಕು.
*ಈ ಯೋಜನೆಯಡಿಯಲ್ಲಿ ಅರ್ಹ ವ್ಯಕ್ತಿಗಳು ಸೂಕ್ತ ಉದ್ಯಮ ಯೋಜನೆಯೊಂದಿಗೆ ಸಾಲ ಪಡೆಯಬಹುದು. ಉತ್ಪಾದನೆ, ಟ್ರೇಡಿಂಗ್, ಸೇವೆಗಳು ಹಾಗೂ ಕೃಷಿ ಪೂರಕ ವಲಯಗಳಲ್ಲಿ ಆದಾಯ ಸೃಷ್ಟಿಸುವ ಉತ್ಪಾದನೆಗಳಿಗೆ ಈ ಸಾಲ ದೊರೆಯುತ್ತದೆ.
*ಅರ್ಜಿದಾರ ಈ ಹಿಂದೆ ಸಾಲದ ಡಿಫಾಲ್ಟ್ ದಾಖಲೆ ಹೊಂದಿರಬಾರದು.
ಅರ್ಜಿ ಸಲ್ಲಿಕೆ ಹೇಗೆ?
-ಈ ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಛಿಸೋರು ಅಧಿಕೃತ ವೆಬ್ ಸೈಟ್ www.udyamimitra.in ಭೇಟಿ ನೀಡಿ.
-ಹೋಮ್ ಸ್ಕ್ರೀನ್ ನಲ್ಲಿ 'Apply Now'ಆಯ್ಕೆ ಮಾಡಿ.
-'New Entrepreneur,'Existing Entrepreneur'ಹಾಗೂ 'Mobile Number'ಆಯ್ಕೆಗಳಲ್ಲಿ ಒಂದನ್ನು ಆರಿಸಿ.
-OTP ಸೃಷ್ಟಿಸಿ ಹಾಗೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.
ಸಾಲದ ವಿಧಗಳು
ಪಿಎಂಎಂವೈ ಯೋಜನೆ ಮೂರು ವಿಧದ ಸಾಲಗಳನ್ನು ನೀಡುತ್ತದೆ.
1.ಶಿಶು ( ₹50,000 ತನಕ ಸಾಲ)
2.ಕಿಶೋರ ( ₹50,000ನಿಂದ ಮೇಲ್ಪಟ್ಟು ₹5ಲಕ್ಷ ರೂ. ತನಕದ ಸಾಲ)
3.ತರುಣ್ (5 ಲಕ್ಷ ರೂ. ಮೇಲ್ಪಟ್ಟ ಹಾಗೂ 10ಲಕ್ಷ ರೂ. ತನಕದ ಸಾಲ)
ಕ್ರೆಡಿಟ್ ಕಾರ್ಡ್‌ನಿಂದ ಸುಲಭವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡೋದು ಹೇಗೆ ನೋಡಿ..
28.89 ಕೋಟಿಗೂ ಅಧಿಕ ಸಾಲ
ಮುದ್ರಾ ಪೋರ್ಟಲ್ ನಲ್ಲಿರುವ ಮಾಹಿತಿ ಅನ್ವಯ ಕಳೆದ ಐದು ಹಣಕಾಸು ಸಾಲಿನಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 28.89 ಕೋಟಿಗೂ ಅಧಿಕ ಸಾಲಗಳನ್ನು ವಿತರಿಸಲಾಗಿದೆ. ಈ ಸಾಲಗಳಿಗೆ ಒಟ್ಟು 17.77 ಲಕ್ಷ ಕೋಟಿ ರೂ. ಅನುಮೋದನೆ ನೀಡಲಾಗಿದೆ.
ಬಡ್ಡಿ ದರ ಎಷ್ಟಿದೆ?: ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಬದಲಾವಣೆ ಮಾಡುವ ಆಧಾರದಲ್ಲಿಯೇ ಮುದ್ರಾ ಬ್ಯಾಂಕ್ ನಿಂದ ಪಡೆದುಕೊಳ್ಳುವ ಸಾಲದ ಮೇಲಿನ ಬಡ್ಡಿಯೂ ಬದಲಾಗುತ್ತದೆ.
ಮುದ್ರಾ ಕ್ರೆಡಿಟ್ ಕಾರ್ಡ್: ರುಪೆ ಕಾರ್ಡ್ ಮಾದರಿಯಲ್ಲಿ ಮುದ್ರಾ ಕ್ರೆಡಿಟ್ ಕಾರ್ಡ್ ಸಹ ಲಭ್ಯವಾಗುತ್ತಿದೆ. ಹಣ ಡ್ರಾ ಮಾಡುವ ಅವಕಾಶವನ್ನು ಒದಗಿಸುವ ಕ್ರೆಡಿಟ್ ಕಾರ್ಡ್ ಅನ್ನು ಉಳಿದ ಕ್ರೆಡಿಟ್ ಕಾರ್ಡ್ ನಂತೆ ಶಾಪಿಂಗ್ ಗೂ ಬಳಕೆ ಮಾಡಿಕೊಳ್ಳಬಹುದು.
ಹೊಸ ತಲೆಮಾರಿನ ಮಹತ್ವಾಕಾಂಕ್ಷಿ ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ, ಶಿಶು ಪ್ರವರ್ಗದ ಸಾಲಗಳಿಗೆ ತದನಂತರ ಕಿಶೋರ ಮತ್ತು ತರುಣ ಪ್ರವರ್ಗದ ಸಾಲಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ.