ನವದೆಹಲಿ(ಆ.31):  ಆದಾಯ ತೆರಿಗೆ ಇಲಾಖೆ ಬ್ಯಾಂಕ್‌ಗಳಿಗೆ ಮಹಹತ್ವದ ಆದೇಶವೊಂದನ್ನು ನೀಡಿದ್ದು, ಇದು ಬ್ಯಾಂಕ್ ಗ್ರಾಹಕರ ಮುಖದಲ್ಲಿ ನಗು ಮೂಡಿಸಿದೆ. ಹೌದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ರುಪೇ ಕಾರ್ಡ್ ಅಥವಾ ಭೀಮಾ, ಯುಪಿಐ ಮೂಲಕ ಮಾಡಿದ ವ್ಯವಹಾರಕ್ಕೆ 2020ರ ಜನವರಿ 1ರ ಬಳಿಕ ವಿಧಿಸಲಾದ ಶುಲ್ಕವನ್ನು ಮರುಪಾವತಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದೆ. 

ಆನ್‌ಲೈನ್ ವಂಚಕರಿಂದ ನಿಮ್ಮ ಬ್ಯಾಂಕ್ ಖಾತೆ ರಕ್ಷಿಸುವುದು ಹೇಗೆ? ಸರ್ಕಾರ ನೀಡಿದ ಸರಳ ಸಲಹೆ!

ಆದಾಯ ತೆರಿಗೆಯ ಸೆಕ್ಷನ್ -269 ಎಸ್‌ಯು ಅಡಿಯಲ್ಲಿ ನಿಗದಿಪಡಿಸಿದ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್‌ಗಳಿಗೆ ಶುಲ್ಕ ವಿಧಿಸುವ ಸುತ್ತೋಲೆಯಲ್ಲಿ CBDT, ಈ ಪ್ಲ್ಯಾಟ್‌ಫಾರ್ಮ್‌ಗಳಿಂದ ನಡೆಸಲಾಗುವ ವಹಿವಾಟಿನ ಮೇಲೆ ಮುಂದಿನ ದಿನಗಳಲ್ಲಿ ಯಾವುದೇ ಶುಲ್ಕ ವಿಧಿಸದಂತೆ ಬ್ಯಾಂಕುಗಳಿಗೆ ಆದೇಶಿಸಿದೆ. ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಮತ್ತು ಕಡಿಮೆ-ನಗದು ಆರ್ಥಿಕತೆಯತ್ತ ಸಾಗಲು ಸರ್ಕಾರ ಹಣಕಾಸು ಕಾಯ್ದೆ 2019ರಲ್ಲಿ ಸೆಕ್ಷನ್ 269 ಎಸ್‌ ಎಂಬ ಹೊಸ ನಿಬಂಧನೆಯನ್ನು ಸೇರಿಸಿದೆ. 

2019ರ ಡಿಸೆಂಬರ್‌ನಲ್ಲಿ ರುಪೇ ಡೆಬಿಟ್ ಕಾರ್ಡ್ (DEBIT CARD), ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ / ಭೀಮ್-ಯುಪಿಐ) ಮತ್ತು ಯುಪಿಐ ಕ್ವಿಕ್ ರೆಸ್ಪಾನ್ಸ್ ಕೋಡ್ (ಕ್ಯೂಆರ್ ಕೋಡ್) ನ ಸ್ಥಿರ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್ ಅನ್ನು ಸರ್ಕಾರ ಪರಿಚಯಿಸಿತು. ಆದರೆ ಈ ಸೇವೆಗಳಿಗೆ ನಿಗದಿತ ಶುಲ್ಕ ವಿಧಿಸಲಾಗುತ್ತಿತ್ತು. 

SBI ಬ್ಯಾಂಕ್ ಗ್ರಾಹಕರು ನೆಟ್ ಬ್ಯಾಂಕಿಂಗ್ ರಿಜಿಸ್ಟ್ರೇಶನ್ ಮಾಡುವುದು ಹೇಗೆ?

ಆದರೀಗ 2020ರ ಜನವರಿ 1 ರಂದು ಅಥವಾ ನಂತರ ನಿಗದಿಪಡಿಸಿದ ಎಲೆಕ್ಟ್ರಾನಿಕ್ ಮೋಡ್ ಬಳಸಿ ಮಾಡಿದ ವಹಿವಾಟಿನ ಮೇಲೆ ಯಾವುದೇ ರೀತಿಯ ಶುಲ್ಕವನ್ನು ಸಂಗ್ರಹಿಸಿದ್ದರೆ ಅದನ್ನು ಕೂಡಲೇ ಮರುಪಾವತಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಸಿಬಿಡಿಟಿ ಸುತ್ತೋಲೆಯಲ್ಲಿ ತಿಳಿಸಿದೆ. ಈ ವಹಿವಾಟಿನ ಮೇಲೆ ಯಾವುದೇ ಶುಲ್ಕ ತೆಗೆದುಕೊಳ್ಳಬೇಡಿ ಎಂದು ಸಿಬಿಡಿಟಿ ಹೇಳಿದೆ.