ವಾರಕ್ಕೆ 5 ದಿನದ ಕೆಲಸಕ್ಕೆ ಆಗ್ರಹಿಸಿ ಸೆ.28ರಿಂದ 30ರವರೆಗೆ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಿರಲು ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ಶುಲ್ಕವನ್ನು ಮನ್ನಾ ಮಾಡಿವೆ
ನವದೆಹಲಿ (ಸೆ.26): ವಾರಕ್ಕೆ 5 ದಿನ ಕೆಲಸದ ಅವಧಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಸೆ.28ರಿಂದ 30 ರ ತನಕ 3 ದಿನ ಮುಷ್ಕರಕ್ಕೆ ಕರೆ ನೀಡಿರುವ ಕಾರಣ, ಈ 3 ದಿನ ಇಂಡಿಯನ್ ಬ್ಯಾಂಕ್, ಎಸ್‌ಬಿಐ, ಯೂನಿಯನ್ ಬ್ಯಾಂಕ್ ಸೇರಿ ಹಲವು ಬ್ಯಾಂಕುಗಳು ಎಟಿಎಂ ಶುಲ್ಕ ಮನ್ನಾ ಮಾಡಿವೆ. ಗ್ರಾಹಕರಿಗೆ ಈ ಅವಧಿಯಲ್ಲಿ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಅವು ಈ ಕ್ರಮ ಕೈಗೊಂಡಿವೆ. ಹೀಗಾಗಿ ಈ ಮುಷ್ಕರದ ಅವಧಿಯಲ್ಲಿ ಗ್ರಾಹಕರು ಎಷ್ಟು ಬೇಕಿದ್ದರೂ ಅಷ್ಟು ಸಲ ಹಣ ಡ್ರಾ ಮಾಡಿಕೊಳ್ಳಬಹುದು.ನಿಗದಿತ ಮಿತಿ ಮೀರಿದರೂ ಆ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದಿವೆ. ಸದ್ಯ ಶುಲ್ಕ ರಹಿತವಾಗಿ ಹಣ ವಿತ್ ಡ್ರಾಗೆ (ತಿಂಗಳಿಗೆ) ಅದೇ ಬ್ಯಾಂಕಿನ ಎಟಿಎಂ ಆದರೆ 3, ಅನ್ವ ಬ್ಯಾಂಕಿನ ಎಟಿಎಂ ಆದರೆ 2 ಮಿತಿ ಇದೆ. ಆದರೆ ಈ 3 ದಿನ ಈ ನಿಯಮ ಅನ್ವಯಿಸುವುದಿಲ್ಲ.
ವಾರಕ್ಕೆ 5 ದಿನ ಕೆಲಸದ ಭರವಸೆ ನೀಡಿರಲಿಲ್ಲ: ಹಣಕಾಸು ಇಲಾಖೆ
ವಾರಕ್ಕೆ 5 ದಿನ ಮಾತ್ರ ಕೆಲಸ ಎಂಬ ನಿಯಮ ಜಾರಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಮುಷ್ಕರಕ್ಕೆ ಮುಂದಾಗಿರುವುಕ್ಕೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಇಲಾಖೆ, 'ಬ್ಯಾಂಕ್ ನೌಕರರ ಸಂಘಗಳಿಗೆ ವಾರಕ್ಕೆ 5 ದಿನ ಕೆಲಸದ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ. ಈ ಹಿಂದೆ ಸರ್ಕಾರ ಭರವಸೆ ನೀಡಿತ್ತು ಎಂದು ಬ್ಯಾಂಕ್ ಸಂಘಗಳು ಹೇಳುತ್ತಿರುವುದು ಸುಳ್ಳು' ಎಂದು ಸ್ಪಷ್ಟನೆ ನೀಡಿದೆ. ವಾರಕ್ಕೆ 5 ದಿನ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘ ಸೆ.28ರಿಂದ 3 ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿದೆ.
ಎಲ್ಲಾ 11 ದೇಶಗಳಿಗೆ ಯುಪಿಐ ಫೀ ಅನ್ವಯ
ಅ.15ರಿಂದ ಯುಪಿಐ ಮೂಲಕ ಮಾಡಲಾಗುವ 2 ಸಾವಿರ ರು. ಮೇಲ್ಪಟ್ಟ ವ್ಯವಹಾರಗಳಿಗೆ ಎಂಡಿಆರ್ ವಿಧಿಸುವ ಕ್ರಮವು ಭಾರತಕ್ಕಷ್ಟೇ ಸೀಮಿತವಾಗಿರದೆ, ಡಿಜಿಟಲ್ ಪಾವತಿಗಾಗಿ ಆ ವೇದಿಕೆಯನ್ನು ಬಳಸುವ ಎಲ್ಲಾ 11 ದೇಶಗಳಿಗೆ ಅನ್ವಯಿಸಲಿದೆ ಎಂದು ಎತ್ತ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ಅರ್ಥಾತ್, ಭಾರತ ಹೊರತುಪಡಿಸಿ ಯುಪಿಐ ಬಳಸುತ್ತಿರುವ ಯುಎಇ, ಫ್ರಾನ್ಸ್, ಭೂತಾನ್, ಶ್ರೀಲಂಕಾ, ನೇಪಾಳ, ಸಿಂಗಾಪುರ, ಮಾರಿಷಸ್, ಕತಾರ್, ಕಾಂಬೋಡಿಯಾ, ಗ್ರೀಸ್ ಮತ್ತು ಮಾಡ್ತೀವ್ರಗೂ ಇದು ಅನ್ವಯವಾಗಲಿದೆ.


