ನವದೆಹಲಿ(ನ.03): ಹಬ್ಬದ ದಿನಗಳು ಆರಂಭವಾಗಿರುವ ಹೊತ್ತಿನಲ್ಲೇ ಸರ್ಕಾರಿ ಮತ್ತು ಖಾಸಗಿ ವಲಯದ ಕೆಲ ದೊಡ್ಡ ಬ್ಯಾಂಕ್‌ಗಳು ಗ್ರಾಹಕರಿಗೆ ಭರ್ಜರಿ ಶಾಕ್‌ ನೀಡಿವೆ. ನ.1ರಿಂದಲೇ ಜಾರಿಯಾಗುವಂತೆ ಬ್ಯಾಂಕ್‌ಗಳಲ್ಲಿ ನಿಗದಿತ ಸಂಖ್ಯೆ ಬಳಿಕದ ಪ್ರತಿ ಠೇವಣಿ ಮತ್ತು ವಿತ್‌ಡ್ರಾವಲ್‌ (ಹಣ ಹಿಂಪಡೆತ)ಕ್ಕೂ ಭಾರೀ ಶುಲ್ಕ ವಿಧಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ ನಿರ್ಧರಿಸಿದೆ. ಇನ್ನು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಕೂಡಾ, ಬ್ಯಾಂಕ್‌ ರಜೆ ದಿನಗಳು ಮತ್ತು ಬ್ಯಾಂಕ್‌ ಶಾಖೆಗಳ ಕರ್ತವ್ಯದ ಅವಧಿ ಮುಗಿದ ಬಳಿಕ ಎಟಿಎಂನಲ್ಲಿ ಹಣ ಜಮೆ ಮಾಡುವುದರ ಮೇಲೂ ಶುಲ್ಕ ವಿಧಿಸುವ ದುಬಾರಿ ನಿರ್ಧಾರ ಕೈಗೊಂಡಿದೆ.

ಈ ಎರಡು ಬ್ಯಾಂಕ್‌ಗಳು ಜಾರಿಗೆ ತಂದಿರುವ ನಿಯಮವನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಎಕ್ಸಿಸ್‌ ಮತ್ತು ಸೆಂಟ್ರಲ್‌ ಬ್ಯಾಂಕ್‌ಗಳು ಕೂಡಾ ಜಾರಿಗೆ ಚಿಂತನೆ ನಡೆಸಿವೆ ಎನ್ನಲಾಗಿದೆ. ಈ ನಡುವೆ ಬ್ಯಾಂಕ್‌ಗಳ ಈ ನಿರ್ಧಾರವನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದೆ. ಇದು ಜನಸಾಮಾನ್ಯರಿಗೆ ನರೇಂದ್ರ ಮೋದಿ ಸರ್ಕಾರದಿಂದ ಬೆನ್ನು ಮುರಿಯುವ ಉಡುಗೊರೆ ಎಂದು ಕಿಡಿಕಾರಿದೆ.

ಠೇವಣಿಗೂ ಶುಲ್ಕ:

ಸರ್ಕಾರಿ ಸ್ವಾಮ್ಯದ ‘ಬ್ಯಾಂಕ್‌ ಆಫ್‌ ಬರೋಡಾ’ ಶಾಖೆಗಳಲ್ಲಿ ಇದುವರೆಗೆ ಗ್ರಾಹಕರು ಯಾವುದೇ ಶುಲ್ಕವಿಲ್ಲದೇ ತಿಂಗಳಲ್ಲಿ 5 ಬಾರಿ ಹಣ ಠೇವಣಿ ಮಾಡಬಹುದಿತ್ತು. ನಂತರದ ಪ್ರತಿ ಠೇವಣಿಗೆ ವಿವಿಧ ಖಾತೆಗಳಿಗೆ ಅನ್ಯವಾಗುವಂತೆ ಕನಿಷ್ಠ 10 ರು.ನಿಂದ ಗರಿಷ್ಠ 10000 ರು.ವರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಠೇವಣಿ ಮಾಡುವ ಪ್ರಮಾಣವನ್ನು ತಿಂಗಳಿಗೆ ಕೇವಲ 3ಕ್ಕೆ ಇಳಿಸಲಾಗಿದೆ. ನಂತರದ ಪ್ರತಿ ವ್ಯವಹಾರಕ್ಕೂ 50 ರು.ನಂತೆ ಶುಲ್ಕ ವಿಧಿಸಲಾಗುವುದು. ಈ ದರ ಮೆಟ್ರೋ ಅರ್ಬನ್‌ ಪ್ರದೇಶಗಳಿಗೆ ಅನ್ವಯವಾಗಲಿದೆ. ಇತರೆ ಪ್ರದೇಶಗಳಲ್ಲಿ ಹಿರಿಯ ನಾಗರಿಕರು, ಪಿಂಚಣಿದಾರರು, ಉಳಿತಾಯ ಖಾತೆದಾರರಿಗೆ 40 ರು. ಶುಲ್ಕ ವಿಧಿಸಲಾಗುವುದು. ಆದರೆ ಜನಧನ ಖಾತೆ ಗ್ರಾಹಕರನ್ನು ಈ ಶುಲ್ಕದಿಂದ ಹೊರಗಿಡಲಾಗಿದೆ.

ಸಿಸಿ/ ಓಡಿ ಖಾತೆ: ಸಿಸಿ/ ಓಡಿ ಮತ್ತು ಚಾಲ್ತಿ ಖಾತೆ ಹೊಂದಿರುವವರು ದಿನವೊಂದರಲ್ಲಿ 1 ಲಕ್ಷ ರು.ಗಿಂತ ಹೆಚ್ಚಿನ ಹಣ ಠೇವಣಿ ಇಟ್ಟರೆ, ಪ್ರತಿ 1000 ರು.ಗೆ 1 ರು.ನಂತೆ ಶುಲ್ಕ ವಿಧಿಸಲಾಗುವುದು. ಇಂಥ ಶುಲ್ಕ ಕನಿಷ್ಠ 50 ರು.ಗಳಾಗಿದ್ದು, ಗರಿಷ್ಠ 20000 ರು.ಗಳಾಗಿರುತ್ತದೆ.

ಹಿಂಪಡೆತ ಶುಲ್ಕ:

ಮಾಸಿಕ 3 ಬಾರಿ ವಿತ್‌ಡ್ರಾವಲ್‌ ಉಚಿತ (ಎಟಿಎಂ ವಿತ್‌ಡ್ರಾವಲ್‌ ಹೊರತುಪಡಿಸಿ) ನಂತರದ ಪ್ರತಿ ವಿತ್‌ಡ್ರಾವಲ್‌ಗೆ ಮೆಟ್ರೋ ಸಿಟಿಗಳಲ್ಲಿ 125 ರು. ಮತ್ತು ಇತರೆ ಪ್ರದೇಶಗಳಲ್ಲಿ 100 ರು. ಶುಲ್ಕ ವಿಧಿಸಲಾಗುವುದು. ಸಿಸಿ/ ಓಡಿ/ಚಾಲ್ತಿ ಖಾತೆದಾರರು ಮಾಸಿಕ 3ಕ್ಕಿಂತ ಹೆಚ್ಚು ಬಾರಿ ಹಣ ಹಿಂಪಡೆದರೆ, ಪ್ರತಿ ವ್ಯವಹಾರಕ್ಕೆ 150 ರು. ಶುಲ್ಕ ವಿಧಿಸಲಾಗುವುದು.

ಐಸಿಐಸಿಐ ಬ್ಯಾಂಕ್‌ ಶಾಕ್‌:

ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌, ಬ್ಯಾಂಕ್‌ ರಜೆ ದಿನ ಮತ್ತು ಬ್ಯಾಂಕ್‌ ಅವಧಿ ಮುಗಿದ ನಂತರ ಎಟಿಎಂ ಯಂತ್ರಗಳಲ್ಲಿ 10000 ರು.ಗಿಂತ ಹೆಚ್ಚಿನ ಠೇವಣಿಗೆ 50 ರು. ಶುಲ್ಕ ವಿಧಿಸಲು ನಿರ್ಧರಿಸಿದೆ. ಅಂದರೆ ಸಂಜೆ 6ರಿಂದ ಮುಂಜಾನೆ 8 ಗಂಟೆಯವರೆಗಿನ ಠೇವಣಿಗೆ ಈ ಶುಲ್ಕ ಅನ್ವಯವಾಗಲಿದೆ. ಈ ಶುಲ್ಕ ಹಿರಿಯ ನಾಗರಿಕರು, ಜನಧನ ಖಾತೆ, ಅಂಧರು, ವಿದ್ಯಾರ್ಥಿಗಳ ಖಾತೆಗಳಿಗೆ ಅನ್ವಯವಾಗದು.