ಎಸ್ ಬಿಐ, ಎಚ್ ಡಿಎಫ್ ಸಿ ಬ್ಯಾಂಕಿಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತೆ ಈ ಬ್ಯಾಂಕ್!
ಗೃಹಸಾಲದ ಬಡ್ಡಿದರವನ್ನು ಬ್ಯಾಂಕ್ ಆಫ್ ಬರೋಡಾ 25 ಬೇಸಿಸ್ ಪಾಯಿಂಟ್ಸ್ ಕಡಿತಗೊಳಿಸಿದೆ. ಇದ್ರಿಂದ ಬ್ಯಾಂಕ್ ಆಫ್ ಬರೋಡಾದ ಗೃಹಸಾಲದ ಬಡ್ಡಿದರ ಶೇ.8.25ಕ್ಕೆ ಇಳಿಕೆಯಾಗಿದೆ.
ನವದೆಹಲಿ (ನ.12): ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಗೃಹ ಸಾಲದ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್ಸ್ ತಗ್ಗಿಸಿ ಶೇ.8.25ಕ್ಕೆ ಇಳಿಕೆ ಮಾಡಿದೆ. ಹಾಗೆಯೇ ಸೀಮಿತ ಅವಧಿ ಆಫರ್ ಅಡಿಯಲ್ಲಿ ಪ್ರೊಸೆಸಿಂಗ್ ಶುಲ್ಕವನ್ನು ಕೂಡ ರದ್ದುಗೊಳಿಸಿದೆ. ಸರ್ಕಾರಿ ಸ್ವಾಮ್ಯದ ಇತರ ಬ್ಯಾಂಕ್ ಗಳಾದ ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ಗಿಂತ ಬ್ಯಾಂಕ್ ಆಫ್ ಬರೋಡಾದ ಗೃಹಸಾಲದ ಮೇಲಿನ ಬಡ್ಡಿದರ ಕಡಿಮೆಯಿದೆ. ಈ ಬ್ಯಾಂಕ್ ಗಳು ದೀಪಾವಳಿಗೂ ಮುನ್ನ ಹಾಗೂ ಡಿಸೆಂಬರ್ ಗೆ ಕೊನೆಯಾಗುವಂತೆ ಘೋಷಿಸಿದ್ದ ಹೊಸ ಬಡ್ಡಿದರ ಶೇ.8.40ರಷ್ಟಿದೆ. ಹೊಸ ಬಡ್ಡಿದರ ಮುಂದಿನ ಸೋಮವಾರದಿಂದ (ನ.14) ಅನ್ವಯಿಸಲಿದ್ದು, ಡಿಸೆಂಬರ್ ಕನೆಯ ತನಕ ಜಾರಿಯಲ್ಲಿರುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ. 'ನಮ್ಮದು ಕಡಿಮೆ ಹಾಗೂ ಅತ್ಯಂತ ಸ್ಪರ್ಧಾತ್ಮಕ ಗೃಹ ಸಾಲಗಳ ಬಡ್ಡಿದರಗಳಲ್ಲಿ ಒಂದಾಗಿದೆ. ಬಡ್ಡಿದರದ ಮೇಲೆ 25ಬಿಪಿಎಸ್ ಡಿಸ್ಕೌಂಟ್ ಜೊತೆಗೆ ಪ್ರೊಸೆಸಿಂಗ್ ಶುಲ್ಕಗಳನ್ನು ಕೂಡ ನಾವು ಸಂಪೂರ್ಣವಾಗಿ ರದ್ದುಗೊಳಿಸಲಿದ್ದೇವೆ' ಎಂದು ಬ್ಯಾಂಕ್ ಆಫ್ ಬರೋಡಾದ ಸಾಲ ಹಾಗೂ ರಿಟೇಲ್ ಆಸ್ತಿಗಳ ಜನರಲ್ ಮ್ಯಾನೇಜರ್ ಎಚ್ ಟಿ ಸೋಲಂಕಿ ತಿಳಿಸಿದ್ದಾರೆ.
ಹೊಸ ದರವು ಬ್ಯಾಲೆನ್ಸ್ ವರ್ಗಾವಣೆ ಕೋರುವವರಿಗೆ ಅನ್ವಯಿಸಲಿದೆ. ಹಾಗೆಯೇ ವಿಶೇಷ ದರ ಸಾಲಗಾರರ ಕ್ರೆಡಿಟ್ ಪ್ರೊಫೈಲ್ ಗೆ ಲಿಂಕ್ ಆಗಿರಲಿದೆ ಎಂದು ಸೋಲಂಕಿ ತಿಳಿಸಿದ್ದಾರೆ. ಆರ್ ಬಿಐ ಈ ವರ್ಷದ ಪ್ರಾರಂಭದಿಂದ ಇಲ್ಲಿಯ ತನಕ ಸತತ ನಾಲ್ಕು ಬಾರಿ ರೆಪೋ ದರ ಹೆಚ್ಚಳ ಮಾಡಿದೆ. ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೆಪೋ ದರ ಏರಿಕೆ ಮಾಡೋದು ಆರ್ ಬಿಐಗೆ ಅನಿವಾರ್ಯವಾಗಿತ್ತು. ರೆಪೋ ದರ ಏರಿಕೆ ಪರಿಣಾಮ ಬ್ಯಾಂಕ್ ಗಳು ಗೃಹ ಹಾಗೂ ಇತರ ಸಾಲಗಳ ಮೇಲಿನ ಬಡ್ಡಿದರದಲ್ಲಿ ಹೆಚ್ಚಳ ಮಾಡಿವೆ. ಗೃಹಸಾಲಗಳ ಮೇಲಿನ ಬಡ್ಡಿದರ ಹೆಚ್ಚಳದಿಂದ ಸಾಲದ ಬೇಡಿಕೆ ತಗ್ಗುತ್ತದೆ ಎಂಬ ಭಯವೂ ಬ್ಯಾಂಕ್ ಗಳನ್ನು ಕಾಡುತ್ತಿದೆ. ಗ್ರಾಹಕರು ಕಡಿಮೆ ಬಡ್ಡಿದರವಿರುವ ಬ್ಯಾಂಕ್ ಗಳಿಗೆ ಪ್ರಸ್ತುತ ಸಾಲವಿರುವ ಬ್ಯಾಂಕ್ ನಿಂದ ಬ್ಯಾಲೆನ್ಸ್ ವರ್ಗಾವಣೆ ಮಾಡೋದು ಕೂಡ ನಡೆದಿದೆ.
ಸಂಬಳ ಸಿಕ್ಕಿದ ತಕ್ಷಣ ಖರ್ಚಾಗುತ್ತಾ? ಡೋಂಟ್ ವರಿ, ಈ ಟಿಪ್ಸ್ ಫಾಲೋ ಮಾಡಿ ಹಣ ಉಳಿಸಿ
ಬ್ಯಾಂಕ್ ಆಫ್ ಬರೋಡಾದ ಗೃಹಸಾಲ ಪಡೆದ್ರೆ ಈ ಪ್ರಯೋಜನ
*ನಿಯಮಿತ ಅವಧಿಗೆ ವಾರ್ಷಿಕ ಶೇ.8.25 ಬಡ್ಡಿದರದಿಂದ ಗೃಹ ಸಾಲಗಳು ಲಭ್ಯ.
*ಶೂನ್ಯ ಪ್ರೊಸೆಸಿಂಗ್ ಶುಲ್ಕಗಳು
*ಕನಿಷ್ಠ ದಾಖಲೆಗಳೊಂದಿಗೆ ಗೃಹಸಾಲ ಪಡೆಯಬಹುದು.
*360 ತಿಂಗಳುಗಳ ಅವಧಿ
*ಪೂರ್ವ ಪಾವತಿ ಅಥವಾ ಅರೆಪಾವತಿ ಶುಲ್ಕಗಳಿಲ್ಲ.
*ಪ್ರಮುಖ ಕೇಂದ್ರಗಳಲ್ಲಿ ಮನೆ ಬಾಗಿಲಿಗೇ ಸೇವೆ.
*ಕೆಲವೇ ಕೆಲವು ಹಂತಗಳಲ್ಲಿ ಡಿಜಿಟಲ್ ಗೃಹ ಸಾಲಕ್ಕೆ ತ್ವರಿತ ಅನುಮೋದನೆ
ದುಬಾರಿಯಾಗುತ್ತೆ ರೋಟಿ, ಚಪಾತಿ; ಗಗನಕ್ಕೇರಿದ ಗೋಧಿ ಬೆಲೆ!
ಬ್ಯಾಂಕ್ ಆಫ್ ಬರೋಡಾದ ಯಾವುದೇ ಶಾಖೆಗೆ ಭೇಟಿ ನೀಡಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇನ್ನು ಗ್ರಾಹಕರು https://www.bankofbaroda.in/personal-banking/loans/home-loan ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಕೆಲವೇ ಸೆಕೆಂಡ್ ಗಳಲ್ಲಿ ಆ ಅರ್ಜಿಗೆ ಅನುಮೋದನೆ ಕೂಡ ಪಡೆಯಬಹುದು. 'ನಾವು ಗರಿಷ್ಠ 30 ವರ್ಷಗಳ ಅವಧಿಗೆ ಗೃಹ ಸಾಲ ನೀಡುತ್ತೇವೆ. ಯಾವುದೇ ಪರಿಸ್ಥಿತಿಯಲ್ಲಿಯೂ ಸಾಲದ ಅವಧಿ ನಿವೃತ್ತಿ ವಯಸ್ಸು ಅಥವಾ 65 ವರ್ಷ ಪೂರ್ಣಗೊಳ್ಳುವುದು ಇವುಗಳಲ್ಲಿ ಯಾವುದೋ ಬೇಗವೋ ಅದನ್ನು ಮೀರಬಾರದು' ಎಂದು ಬ್ಯಾಂಕ್ ಆಫ್ ಬರೋಡಾ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ. ಕನಿಷ್ಠ 21ವರ್ಷ ಹಾಗೂ ಗರಿಷ್ಠ70 ವರ್ಷದ ವ್ಯಕ್ತಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ 70 ವರ್ಷದ ವ್ಯಕ್ತಿಯ ಜೊತೆಗೆ ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಸಹ ಅರ್ಜಿದಾರರ ವಯಸ್ಸು ಮಾತ್ರ 18 ವರ್ಷವಾಗಿರಬೇಕು.