ಮುಂಬೈ[ಆ.30]: 2018-19ನೇ ಸಾಲಿನಲ್ಲಿ ದೇಶದ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಒಟ್ಟಾರೆ 71,543 ಕೋಟಿ ರು. ವಂಚನೆಯಾಗಿದೆ ಎಂಬ ಕಳವಳಕಾರಿ ವಿಚಾರ ಭಾರತೀಯ ರಿಸವ್‌ರ್‍ ಬ್ಯಾಂಕ್‌ನ ವಾರ್ಷಿಕ ವರದಿಯಿಂದ ಬಹಿರಂಗವಾಗಿದೆ. ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ.15ರಷ್ಟುಹೆಚ್ಚಳವಾಗಿದ್ದರೆ, ವಂಚನೆಯಾದ ಮೊತ್ತದಲ್ಲಿ ಶೇ.73.8ರಷ್ಟುಏರಿಕೆ ಕಂಡುಬಂದಿದೆ.

2017-18ನೇ ಸಾಲಿನಲ್ಲಿ ಒಟ್ಟಾರೆ 5916 ಹಣಕಾಸು ವಂಚನೆ ಪ್ರಕರಣಗಳಿಂದ ಬ್ಯಾಂಕಿಂಗ್‌ ವಲಯಕ್ಕೆ ಒಟ್ಟಾರೆ 41,167.04 ಕೋಟಿ ರು. ಪೆಟ್ಟು ಬಿದ್ದಿತ್ತು. ಆದರೆ, 2018-19ನೇ ಸಾಲಿನಲ್ಲಿ ವಂಚನೆ ಪ್ರಕರಣ ಸಂಖ್ಯೆ 6801ಕ್ಕೆ ಹೆಚ್ಚಾಗಿದ್ದು, ವಂಚನೆಯ ಮೌಲ್ಯ 71,543 ಕೋಟಿ ರು. ಆಗಿದೆ. ಈ ಪೈಕಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಅತಿಹೆಚ್ಚು ವಂಚನೆ ಮಾಡಲಾಗಿದೆ. ಆ ನಂತರದ ಸ್ಥಾನಗಳಲ್ಲಿ ಖಾಸಗಿ ವಲಯ ಮತ್ತು ವಿದೇಶಿ ಬ್ಯಾಂಕ್‌ಗಳಿವೆ ಎಂದು ಹೇಳಲಾಗಿದೆ.

ನಕಲಿ ಪತ್ರದಿಂದಲೇ ಹೆಚ್ಚು ಮೋಸ:

ಕುತೂಹಲಕಾರಿ ಸಂಗತಿಯೆಂದರೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳು/ ಇಂಟರ್ನೆಟ್‌ ಬ್ಯಾಂಕಿಂಗ್‌ ಹಾಗೂ ಠೇವಣಿ ಮೂಲಕ ಕೇವಲ ಶೇ.0.3ರಷ್ಟುಮಾತ್ರವೇ ಬ್ಯಾಂಕಿಂಗ್‌ ವಂಚನೆಗಳು ನಡೆದಿವೆ. ಆದರೆ, ಮೋಸ ಹಾಗೂ ನಕಲಿ ಪತ್ರದ ಮೂಲಕವೇ ಹೆಚ್ಚು ಬ್ಯಾಂಕಿಂಗ್‌ ವಂಚನೆಗಳು ದಾಖಲಾಗಿವೆ. ಸುಳ್ಳು ಲೆಕ್ಕಪತ್ರ ಹಾಗೂ ವಿಶ್ವಾಸದ್ರೋಹದಿಂದಲೂ ಬ್ಯಾಂಕ್‌ಗಳಿಗೆ ವಂಚಿಸಲಾಗಿದೆ. ಅಲ್ಲದೆ, 1 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಹಣಕಾಸು ವಂಚನೆ ಪ್ರಕರಣಗಳು ಕೇವಲ ಶೇ.0.1ರಷ್ಟುದಾಖಲಾಗಿವೆ.

ವಂಚನೆ ಬ್ರೇಕ್‌ಗೆ ಕಠಿಣ ಕ್ರಮ:

ಬ್ಯಾಂಕ್‌ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಆರ್‌ಬಿಐ ಮುಂದಾಗಿದ್ದು, ಇದಕ್ಕಾಗಿ ಕಾರ್ಪೊರೇಟ್‌ ವ್ಯವಹಾರ ಸಚಿವಾಲಯ ಸೇರಿದಂತೆ ಇನ್ನಿತರ ಇಲಾಖೆಗಳ ನಡುವೆ ಮಾಹಿತಿಗಳ ಸುಲಭ ವಿನಿಮಯಕ್ಕೆ ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ. ಅಲ್ಲದೆ, ಬ್ಯಾಂಕ್‌ಗಳಿಗೆ ವಂಚನೆ ನಿರ್ವಹಣೆಗಾಗಿ ಚೌಕಟ್ಟಿನ ವೃದ್ಧಿ, ಬ್ಯಾಂಕ್‌ ವಂಚನೆಗಳ ಬಗ್ಗೆ ಬ್ಯಾಂಕಿಂಗ್‌ ವಲಯದ ಸಿಬ್ಬಂದಿಗೆ ನೂತನ ನಿರ್ದೇಶನಗಳು, ವಂಚನೆ ತಡೆಗೆ ಕ್ರಮದ ಬಗ್ಗೆ ಬ್ಯಾಂಕ್‌ ಸಿಬ್ಬಂದಿಯಲ್ಲಿ ಅರಿವು ಮೂಡಿಸಲು ನಿರ್ಧರಿಸಲಾಗಿದೆ ಎಂದಿದೆ ಆರ್‌ಬಿಐ. ಅಲ್ಲದೆ, ವಂಚನೆ ನೋಂದಣಿಯನ್ನು ಬಳಕೆದಾರರ ಸ್ನೇಹಿಯನ್ನಾಗಿಸಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.