ಬೆಂಗಳೂರಿನಲ್ಲಿ ಚಿಕನ್ ಮತ್ತು ಮೊಟ್ಟೆ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಕೋಳಿಗಳ ಬೆಳವಣಿಗೆ ಕುಂಠಿತ ಮತ್ತು ಬೇರೆ ರಾಜ್ಯಗಳಿಗೆ ರಫ್ತು ಹೆಚ್ಚಾಗಿದ್ದರಿಂದ ಪೂರೈಕೆ ಕಡಿಮೆಯಾಗಿ, ಬೆಲೆ ಗಗನಕ್ಕೇರಿದ್ದು, ಇದು ಗ್ರಾಹಕರು ಮತ್ತು ವ್ಯಾಪಾರಿಗಳ ಮೇಲೆ ಪರಿಣಾಮ ಬೀರಿದೆ.

ಬೆಂಗಳೂರು: ಚಿಕನ್ ಮತ್ತು ಮೊಟ್ಟೆ ಪ್ರಿಯರ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ ಆಗಿದೆ. ಕಳೆದ ಒಂದು ವಾರದಿಂದ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಭಾರೀ ಏರಿಕೆ ಕಂಡುಬರುತ್ತಿದ್ದು, ಬೆಲೆಯು ಸಾರ್ವಕಾಲಿಕ ದಾಖಲೆ ಬರೆದಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋಳಿ ಮಾಂಸ ಮತ್ತು ಮೊಟ್ಟೆಯ ಬೆಲೆ ಈ ಮಟ್ಟಕ್ಕೆ ಗಗನಕ್ಕೇರಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಗಗನಕ್ಕೇರಿದ ಕೋಳಿ ಮಾಂಸದ ದರ

ಬೆಂಗಳೂರು ನಗರದಲ್ಲಿ ಚಿಕನ್ ದರ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು, ಗ್ರಾಹಕರು ಅಂಗಡಿಗೆ ಹೋಗಲು ಯೋಚಿಸುವಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಚಿಕನ್ ದರ ಸ್ಕಿನ್‌ಲೆಸ್ ಚಿಕನ್ (ವಿಥ್ ಔಟ್ ಸ್ಕಿನ್) ಪ್ರತಿ ಕೆಜಿಗೆ ಭರ್ಜರಿ 350 ರಿಂದ 360 ರೂಪಾಯಿ ತಲುಪಿದೆ. (ಈ ಹಿಂದೆ ಇದು 300 ರೂಪಾಯಿ ಆಸುಪಾಸಿನಲ್ಲಿತ್ತು). ಲೈವ್/ವಿಥ್ ಸ್ಕಿನ್ ಚಿಕನ್ ಪ್ರತಿ ಕೆಜಿಗೆ 330 ರಿಂದ 340 ರೂಪಾಯಿ ತನಕ ಮಾರಾಟವಾಗುತ್ತಿದೆ.

ಮೊಟ್ಟೆ ಬೆಲೆಯಲ್ಲೂ ಭಾರೀ ಜಂಪ್!

ಕಳೆದ ಮೂರು ದಿನಗಳ ಹಿಂದಷ್ಟೇ 7 ರಿಂದ 7.50 ರೂಪಾಯಿ ಇದ್ದ ಒಂದು ಮೊಟ್ಟೆಯ ಬೆಲೆ ಈಗ ದಿಢೀರನೆ ಏರಿಕೆಯಾಗಿದೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 8 ರೂಪಾಯಿ ದರವಿದೆ. ರಿಟೇಲ್ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಒಂದು ಮೊಟ್ಟೆ ಬರೋಬ್ಬರಿ 8.30 ರೂ. ನಿಂದ 9 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.

ಬೆಲೆ ಏರಿಕೆಗೆ ಅಸಲಿ ಕಾರಣವೇನು?

ಕೋಳಿ ಮತ್ತು ಮೊಟ್ಟೆ ದರ ಹಠಾತ್ ಹೆಚ್ಚಾಗಲು ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಲಾಗಿದೆ. ಕೋಳಿಗಳ ಬೆಳವಣಿಗೆ ಕುಂಠಿತ ಈ ಬಾರಿ ಹವಾಮಾನ ವೈಪರೀತ್ಯ ಅಥವಾ ಇನ್ನಿತರ ಕಾರಣಗಳಿಂದಾಗಿ ಕೋಳಿಗಳು ಸರಿಯಾಗಿ ತೂಕ ಬಂದು ಬೆಳವಣಿಗೆಯಾಗಿಲ್ಲ. ಇದರಿಂದಾಗಿ ಮಾರುಕಟ್ಟೆಗೆ ಕೋಳಿಗಳ ಪೂರೈಕೆ ಗಣನೀಯವಾಗಿ ಕುಸಿದಿದೆ.

ಸ್ಥಳೀಯವಾಗಿ ಉತ್ಪಾದನೆಯಾಗುತ್ತಿರುವ ಚಿಕನ್ ಮತ್ತು ಮೊಟ್ಟೆಗಳು ಬೇರೆ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿರುವುದರಿಂದ, ಬೆಂಗಳೂರು ನಗರಕ್ಕೆ ಬರುತ್ತಿರುವ ಸಪ್ಲೈ ಪ್ರಮಾಣ ತೀರ ಕಡಿಮೆಯಾಗಿದೆ. ಪೂರೈಕೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ದಿನದಿಂದ ದಿನಕ್ಕೆ ದರ ಗಗನಕ್ಕೇರುತ್ತಿದೆ.

ಮಾರುಕಟ್ಟೆಯಲ್ಲಿ ಗ್ರಾಹಕರು ಹಾಗೂ ವ್ಯಾಪಾರಿಗಳ ಪರದಾಟ

ಬೆಲೆ ಏರಿಕೆಯ ಬಿಸಿಯಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಸಂಪೂರ್ಣ ಡಲ್ಲಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ದರ ಹೆಚ್ಚಾಗಿರುವ ಕಾರಣ ಗ್ರಾಹಕರು ಚಿಕನ್ ಖರೀದಿಸಲು ಹಿಂಜರಿಯುತ್ತಿದ್ದಾರೆ. ಅಂಗಡಿಗಳತ್ತ ಜನ ಸುಳಿಯುತ್ತಿಲ್ಲ.

ಇನ್ನು ಚಿಕನ್ ಪ್ರಿಯರು ಅನಿವಾರ್ಯವಾಗಿ ಖರೀದಿಸುತ್ತಿದ್ದರೂ, ತಮ್ಮ ಬಜೆಟ್‌ಗೆ ತಕ್ಕಂತೆ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಕೆಜಿ ಚಿಕನ್ ಖರೀದಿಸುತ್ತಿದ್ದ ಗ್ರಾಹಕರು, ಈಗ ಕೇವಲ 750 ಗ್ರಾಂ ಅಥವಾ ಅರ್ಧ ಕೆಜಿ ಖರೀದಿಸಿ ಮನೆಗೆ ಮರಳುತ್ತಿದ್ದಾರೆ.

ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಏರಿಕೆ ಸಾಧ್ಯತೆ

ಚಿಕನ್ ಮತ್ತು ಮೊಟ್ಟೆ ದರ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಚಿಕನ್ ಬಿರಿಯಾನಿ, ಕಬಾಬ್ ಹಾಗೂ ಮೊಟ್ಟೆಯ ವಿವಿಧ ಖಾದ್ಯಗಳ (ಎಗ್ ರೈಸ್, ಆಮ್ಲೆಟ್ ಇತ್ಯಾದಿ) ಬೆಲೆ ಕೂಡ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದು ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಹೊರೆಯಾಗಲಿದೆ.