ಕರ್ನಾಟಕವನ್ನು ಸೆಮಿಕಂಡಕ್ಟರ್ ಹಬ್ ಆಗಿ ರೂಪಿಸಲು, ರಾಜ್ಯ ಸರ್ಕಾರವು ಅಮೆರಿಕದ 'ಅಪ್ಲೈಡ್ ಮೆಟೀರಿಯಲ್ಸ್ ಇಂಕ್' ಕಂಪನಿಗೆ ಬೆಂಗಳೂರಿನಲ್ಲಿ 140 ಎಕರೆ ಜಮೀನು ಹಂಚಿಕೆ ಮಾಡಲು ಅನುಮೋದನೆ ನೀಡಿದೆ. 

ಬೆಂಗಳೂರು (ಮೇ.1): ಕರ್ನಾಟಕವನ್ನು ಸೆಮಿಕಂಡಕ್ಟರ್ ಮತ್ತು ಹೈಟೆಕ್ ತಂತ್ರಜ್ಞಾನದ ಜಾಗತಿಕ ಹಬ್ ಆಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಅಮೆರಿಕ ಮೂಲದ ಪ್ರಸಿದ್ಧ ಸೆಮಿಕಂಡಕ್ಟರ್ ಉಪಕರಣ ತಯಾರಿಕಾ ಸಂಸ್ಥೆ 'ಅಪ್ಲೈಡ್ ಮೆಟೀರಿಯಲ್ಸ್ ಇಂಕ್' (Applied Materials Inc) ಗೆ ಬೆಂಗಳೂರಿನಲ್ಲಿ 140 ಎಕರೆ ಜಮೀನು ಹಂಚಿಕೆ ಮಾಡಲು ರಾಜ್ಯ ಸಚಿವ ಸಂಪುಟವು ಏಪ್ರಿಲ್ 30ರಂದು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಸುಮಾರು 407 ಎಕರೆ ವಿಸ್ತೀರ್ಣದ 'ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್' (BSBP) ನಲ್ಲಿ ಈ ಜಮೀನನ್ನು ಹಂಚಿಕೆ ಮಾಡಲಾಗಿದೆ. ಪ್ರತಿ ಚದರ ಅಡಿಗೆ 1,288 ರೂ. ನಂತೆ ನಿಗದಿಪಡಿಸಲಾಗಿದ್ದು, ಒಟ್ಟು 780 ಕೋಟಿ ರೂ. ಮೊತ್ತದಲ್ಲಿ ಈ ಭೂಮಿಯನ್ನು ನೀಡಲು ತೀರ್ಮಾನಿಸಲಾಗಿದೆ.

ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಸಂಪುಟ ಸಭೆಯ ವಿವರಗಳನ್ನು ಹಂಚಿಕೊಂಡಿದ್ದು, ಈ 140 ಎಕರೆ ಜಮೀನನ್ನು 'ಲೀಸ್-ಕಮ್-ಸೇಲ್' (ಗುತ್ತಿಗೆ ಮತ್ತು ಮಾರಾಟ) ಆಧಾರದ ಮೇಲೆ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿ ಬೆಲೆಗೆ ಅನುಗುಣವಾಗಿ ಭೂಮಿಯ ಮೌಲ್ಯವನ್ನು ನಿರ್ಧರಿಸಲಾಗಿದೆ. ಈ ನಿರ್ಧಾರವು ಶಾಸನಬದ್ಧ ಅನುಮೋದನೆಗಳು ಮತ್ತು ಅಂತಿಮ ಬೆಲೆ ನಿಗದಿ ಪ್ರಕ್ರಿಯೆಗಳಿಗೆ ಒಳಪಟ್ಟಿರುತ್ತದೆ ಎಂದಿದ್ದಾರೆ.

ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್‌ನ ಉಳಿದ 267 ಎಕರೆ ಜಮೀನಿನ ವಿಲೇವಾರಿಗಾಗಿ ಹಳೆಯ ಲೀಸ್ ಮತ್ತು ಪಿಪಿಪಿ (PPP) ಮಾದರಿಗಳನ್ನು ಸರ್ಕಾರ ಮರುಪರಿಶೀಲಿಸಲಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಉಳಿದ ಜಮೀನನ್ನು ಹಂಚಿಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ.

ಸೆಮಿಕಂಡಕ್ಟರ್ ವಲಯಕ್ಕೆ ಬೂಸ್ಟ್

ರಾಜ್ಯ ಸರ್ಕಾರವು ಸೆಮಿಕಂಡಕ್ಟರ್ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (GCC) ಹೆಚ್ಚಿನ ಆದ್ಯತೆ ನೀಡುತ್ತಿದೆ. ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು, ರಾಜ್ಯವು ಚಿಪ್ ತಯಾರಿಕೆಗೆ ಸಂಬಂಧಿಸಿದ ದೊಡ್ಡ ಯೋಜನೆಯೊಂದಕ್ಕೆ ಅನುಮೋದನೆ ನೀಡಿದೆ ಎಂದು ಸುಳಿವು ನೀಡಿದ್ದರು. ಸದ್ಯ ಅಪ್ಲೈಡ್ ಮೆಟೀರಿಯಲ್ಸ್ ಕಂಪನಿಯ ಹೂಡಿಕೆಯ ಗಾತ್ರ ಮತ್ತು ಇತರ ತಾಂತ್ರಿಕ ವಿವರಗಳನ್ನು ಕೈಗಾರಿಕಾ ಇಲಾಖೆ ಇನ್ನಷ್ಟೇ ಹಂಚಿಕೊಳ್ಳಬೇಕಿದೆ.

ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ಯೋಜನೆಯನ್ನು ಮೊದಲು 2008 ರಲ್ಲಿ ಪ್ರಸ್ತಾಪಿಸಲಾಗಿತ್ತು. ಈಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಇದು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಬೃಹತ್ ಕಂಪನಿಗಳ ಆಗಮನದಿಂದ ಬೆಂಗಳೂರಿನ ಆರ್ಥಿಕತೆಗೆ ಮತ್ತಷ್ಟು ಬಲ ಸಿಗಲಿದೆ.