*  ತುಮಕೂರು ರಸ್ತೆಯ ಹುಣ್ಣಿಗೆರೆಯಲ್ಲಿ 31 ಎಕರೆಯಲ್ಲಿ 4, 3 ಬಿಎಚ್‌ಕೆ ವಿಲ್ಲಾಗಳ ನಿರ್ಮಾಣ*  ಅಂದಾಜು 271 ಕೋಟಿ ಮೊತ್ತದ ಯೋಜನೆ*  ಮುಂದಿನ ವರ್ಷದ ಮಾರ್ಚ್‌ನೊಳಗೆ ಕಾಮಗಾರಿ ಪೂರ್ಣ  

ಸಂಪತ್‌ ತರೀಕೆರೆ

ಬೆಂಗಳೂರು(ಮಾ.30): ಆಲೂರಿನಲ್ಲಿ ಎರಡು ಬಿಎಚ್‌ಕೆ ಮತ್ತು ಮೂರು ಬಿಎಚ್‌ಕೆ ವಿಲ್ಲಾ(Villa) ನಿರ್ಮಾಣ ಯೋಜನೆಯಲ್ಲಿ ಯಶಸ್ವಿಯಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ವಿನೂತನ ವಿನ್ಯಾಸದಲ್ಲಿ ಹುಣ್ಣಿಗೆರೆಯಲ್ಲೂ ವಿಲ್ಲಾ ನಿರ್ಮಾಣ ಕಾರ್ಯ ಆರಂಭಿಸಿದ್ದು, 2023ರ ಮಾಚ್‌ರ್‍ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.

ತುಮಕೂರು ರಸ್ತೆಯ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾ ಯೋಜನೆಗೆಂದು 31 ಎಕರೆ ಜಾಗವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 170 ನಾಲ್ಕು ಬಿಎಚ್‌ಕೆ ವಿಲ್ಲಾ(35*50 ಅಳತೆ), 31 ಮೂರು ಬಿಎಚ್‌ಕೆ ವಿಲ್ಲಾ(35*50 ಅಳತೆ) ಮತ್ತು 121 ಮೂರು ಬಿಎಚ್‌ಕೆ ವಿಲ್ಲಾಗಳು(30*40 ಅಳತೆ) ಹಾಗೂ 320 ಒಂದು ಬಿಎಚ್‌ಕೆ(ಆರ್ಥಿಕವಾಗಿ ಹಿಂದುಳಿದವರಿಗಾಗಿ-ಇಡಬ್ಲ್ಯೂಎಸ್‌) ಪ್ಲಾಟ್‌ಗಳಿರುವ ಮೂರು ಅಂತಸ್ತಿನ ಅಪಾರ್ಚ್‌ಮೆಂಟ್‌(Apartment) ನಿರ್ಮಾಣ ಮಾಡಲಾಗುತ್ತಿದೆ.

Bengaluru: ಐಷಾರಾಮಿ ಫ್ಲ್ಯಾಟ್‌ ನಿರ್ಮಿಸಿದ ಬಿಡಿಎ: ಬೆಲೆ ಎಷ್ಟು?

ಸುಮಾರು 271.46 ಕೋಟಿ ರು. ವೆಚ್ಚದಲ್ಲಿ ಯೋಜನೆಯನ್ನು(Project) ಕೈಗೆತ್ತಿಕೊಂಡಿದ್ದು, 2018ರ ಸೆ.25ರಂದು ಹೊಂಬಾಳೆ ಕನ್‌ಸ್ಟ್ರಕ್ಷನ್ಸ್‌ ಆ್ಯಂಡ್‌ ಎಸ್ಟೆಟ್‌ ಪ್ರೈ.ಲಿ. ಕಂಪನಿಗೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಲಾಗಿದೆ. ಈ ಯೋಜನೆಯು 2023ರ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆ ಪಡೆದಿರುವ ಕಂಪನಿಯು ನೀಡಿದೆ. ಎಸಿಎಸ್‌ ಡಿಸೈನ್‌ ಕನ್ಸಲ್ಟೆಂಟ್ಸ್‌ ಕಂಪನಿಯು ಕಟ್ಟಡಗಳ ವಿನ್ಯಾಸ ಮಾಡಿದ್ದು ಡಿಸೈನ್‌ ಪಾಯಿಂಟ್‌ ಕನ್ಸಲ್ಟೆಂಟ್ಸ್‌ ಯೋಜನೆಯ ನಿರ್ವಹಣೆ ಮಾಡುತ್ತಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭದ್ರತೆಗೆ ಆದ್ಯತೆ; ನೀರಿನ ಸೌಲಭ್ಯಕ್ಕೆ ಒತ್ತು:

ವಿಲ್ಲಾ ನಿರ್ಮಾಣಗೊಳ್ಳುತ್ತಿರುವ ಪ್ರದೇಶದಲ್ಲಿ ಸುತ್ತ 2.1 ಮೀಟರ್‌ ಎತ್ತರದ ಕಾಂಪೌಂಡ್‌, 0.6 ಮೀಟರ್‌ ಮುಳ್ಳು ತಂತಿ ಬೇಲಿ ಅಳವಡಿಸಲಾಗುತ್ತಿದೆ. 6 ಮೀಟರ್‌ ಅಗಲದ ರಸ್ತೆ, 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಭೂದೃಶ್ಯ, ಬಾಸ್ಕೆಟ್‌ಬಾಲ್‌, ಕ್ರಿಕೆಟ್‌ ಮತ್ತು ಮಕ್ಕಳ ಆಟದ ಮೈದಾನ, 600 ಕೆಎಲ್‌ಡಿಯ ಎಸ್‌ಟಿಪಿ ಘಟಕ, 1.5 ಲಕ್ಷ ಲೀಟರ್‌ ಕುಡಿಯುವ ನೀರಿನ ಓವರ್‌ಹೆಡ್‌ ಟ್ಯಾಂಕ್‌(ಒಎಚ್‌ಟಿ), 1.5 ಲಕ್ಷ ಲೀಟರ್‌ ಸಾಮರ್ಥ್ಯದ ಸಂಪ್‌, 10 ಕೊಳವೆ ಬಾವಿಗಳು ಇರಲಿದ್ದು ಸಾಮರ್ಥ್ಯಕ್ಕೆ ಅನುಗುಣವಾಗಿ ಪಂಪ್‌ಗಳು, ಪೈಪ್‌ ಸಂಪರ್ಕ ಇತ್ಯಾದಿಗಳನ್ನು ಅಳವಡಿಸಲಾಗುತ್ತಿದೆ. ಈ 10 ಕೊಳವೆಬಾವಿಗಳು ಮಳೆ ನೀರಿನಿಂದ ಪುನಶ್ಚೇತನಗೊಳ್ಳುವಂತೆ ಮಳೆನೀರು ಕೊಯ್ಲು ಮಾದರಿಯಲ್ಲಿ ಪೈಪ್‌ಲೈನ್‌ ಸಂಪರ್ಕವನ್ನು ಕೊಡಲು ಯೋಜಿಸಲಾಗಿದೆ.

Bengaluru: ಬಿಡಿಎ ಸೈಟ್‌ ಧೋಖಾ: ಮತ್ತೆ 6 ಆರೋಪಿಗಳ ಬಂಧನ

ಅಲ್ಲದೇ ಇಲ್ಲಿನ ನಿವಾಸಿಗಳ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ವಿವಿಧ ಮಾದರಿಯ ಪಾರ್ಕಿಂಗ್‌ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಒಪನ್‌ ಪಾರ್ಕಿಂಗ್‌ಗಾಗಿ 2640 ಚದರ ಮೀಟರ್‌ ಮತ್ತು ಆವರಿಸಿದ ಪಾರ್ಕಿಂಗ್‌ ವ್ಯವಸ್ಥೆಗೆ 5827.75 ಚದರ ಮೀಟರ್‌ ಪ್ರದೇಶವನ್ನು ಮೀಸಲು ಇಡಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.

ಆಲೂರಿನ ವಿಲ್ಲಾಗಳು ಸೋಲ್ಡೌಟ್‌

ಆಲೂರಿನ ಮೊದಲ ವಿಲ್ಲಾ ಯೋಜನೆಯಲ್ಲಿ ಶೇ.100ರಷ್ಟು ವಿಲ್ಲಾಗಳು ಮಾರಾಟವಾಗಿವೆ. 452 ವಿಲ್ಲಾಗಳಲ್ಲಿ 3 ಬಿಎಚ್‌ಕೆಯ 140 ಹಾಗೂ 2 ಬಿಎಚ್‌ಕೆಯ(ಸಿಂಪ್ಲೆಕ್ಸ್‌) 96 ವಿಲ್ಲಾಗಳು ಮತ್ತು 2 ಬಿಎಚ್‌ಕೆ(ಡುಪ್ಲೆಕ್ಸ್‌) ಮಾದರಿಯ 252 ವಿಲ್ಲಾಗಳು ಮಾರಾಟವಾಗಿವೆ. ನಗರದಲ್ಲಿ ವಿಲ್ಲಾಗಳಿಗೆ ಬಹಳಷ್ಟು ಬೇಡಿಕೆ ಇದೆ. ಕಾರ್ಪೊರೇಟ್‌ ಹಾಗೂ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಸುಸಜ್ಜಿತ ಸೌಲಭ್ಯಗಳುಳ್ಳ ವಿಲ್ಲಾ ಹೌಸ್‌ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದರ ಲಾಭ ಪಡೆಯಲು ಬಿಡಿಎ ಮೊದಲ ಯತ್ನದಲ್ಲೇ ಸಫಲವಾಗಿದ್ದು, ಇದೀಗ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಕೈಹಾಕಿದೆ.

ಯೋಜನೆ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷವಿದ್ದು, ಈಗಾಗಲೇ 60ರಿಂದ 65ರಷ್ಟುಕಾಮಗಾರಿ ಪೂರ್ಣಗೊಂಡಿದೆ. ನಿಗದಿತ ಅವಧಿಯಲ್ಲಿ ಯೋಜನೆ ಮುಕ್ತಾಯವಾಗಲಿದ್ದು, ಆ ನಂತರ ವಿಲ್ಲಾಗಳ ದರ ನಿಗದಿ ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಅಂತ ಬಿಡಿಎ ಅಭಿಯಂತರ ಸದಸ್ಯ ಶಾಂತರಾಜಣ್ಣ ತಿಳಿಸಿದ್ದಾರೆ.