ನವದೆಹಲಿ (ಫೆ. 20):  ಸ್ಟಾರ್ಟಪ್‌ ಕಂಪನಿಗಳನ್ನು ಸ್ಥಾಪಿಸುವ ಉದಯೋನ್ಮುಖ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ ನೀಡಿದ್ದು, ಸ್ಟಾರ್ಟಪ್‌ಗಳಲ್ಲಿ ತೊಡಗಿಸುವ 25 ಕೋಟಿ ರು. ವರೆಗಿನ ಬಂಡವಾಳಕ್ಕೆ ತೆರಿಗೆ ವಿಧಿಸುವುದಿಲ್ಲ ಎಂದು ಘೋಷಿಸಿದೆ. ಅದರೊಂದಿಗೆ ಏಂಜಲ್‌ ಟ್ಯಾಕ್ಸ್‌ ಬಗ್ಗೆ ದೂರುತ್ತಿದ್ದ ಸ್ಟಾರ್ಟಪ್‌ಗಳ ಸಂಕಷ್ಟ ದೂರವಾದಂತಾಗಿದೆ.

ಇಲ್ಲಿಯವರೆಗೆ ಸ್ಟಾರ್ಟಪ್‌ ಕಂಪನಿಗಳಲ್ಲಿ ಬೇರೆಯವರು ಮಾಡುವ ಬಂಡವಾಳ ಹೂಡಿಕೆ (ಏಂಜಲ್‌ ಇನ್ವೆಸ್ಟ್‌ಮೆಂಟ್‌) 10 ಕೋಟಿ ರು. ಮೀರಿದರೆ ಬಂಡವಾಳ ಹೂಡಿಕೆ ಮಾಡುವವರಿಗೆ ತೆರಿಗೆ ವಿಧಿಸಲಾಗುತ್ತಿತ್ತು. ಅದಕ್ಕೆ ಏಂಜಲ್‌ ಟ್ಯಾಕ್ಸ್‌ ಎಂದು ಕರೆಯಲಾಗುತ್ತದೆ.

ಈ ಮಿತಿಯನ್ನು ಈಗ 25 ಕೋಟಿ ರು.ಗೆ ಏರಿಸಲಾಗಿದೆ ಎಂದು ವಾಣಿಜ್ಯ ಮತ್ತು ಉದ್ದಿಮೆಗಳ ಸಚಿವ ಸುರೇಶ್‌ ಪ್ರಭು ತಿಳಿಸಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರವು ‘ಸ್ಟಾರ್ಟಪ್‌’ ಎಂಬುದರ ವ್ಯಾಖ್ಯೆಯನ್ನೇ ಬದಲಿಸಿದ್ದು, ‘ಯಾವುದೇ ಹಣಕಾಸು ವರ್ಷದಲ್ಲಿ 100 ಕೋಟಿ ರು.ಗಿಂತ ಹೆಚ್ಚು ವಹಿವಾಟು ನಡೆಸದ ಕಂಪನಿಯನ್ನು ಸ್ಟಾರ್ಟಪ್‌ ಎನ್ನಬಹುದು’ ಎಂದು ತಿದ್ದುಪಡಿ ಮಾಡಿದೆ. ಸದ್ಯ ಇದು 25 ಕೋಟಿ ರು. ಇತ್ತು.

ಇನ್ನು, ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡುವ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾದ ಕಂಪನಿಯ ಆಸ್ತಿ 100 ಕೋಟಿ ರು. ದಾಟದಿದ್ದರೆ ಹಾಗೂ ವಹಿವಾಟು 250 ಕೋಟಿ ರು. ದಾಟದಿದ್ದರೆ ಅಂತಹ ಕಂಪನಿಗಳು ಸ್ಟಾರ್ಟಪ್‌ಗಳಲ್ಲಿ 25 ಕೋಟಿ ರು.ಗಿಂತ ಹೆಚ್ಚು ಹೂಡಿಕೆ ಮಾಡಿದರೂ ತೆರಿಗೆ ವಿಧಿಸುವುದಿಲ್ಲ ಎಂದು ಪ್ರಭು ಹೇಳಿದ್ದಾರೆ.