ಆಂಧ್ರಪ್ರದೇಶದ ರಾಯಲಸೀಮೆಯನ್ನು ಹಣ್ಣುಗಳ ಕಣಜವನ್ನಾಗಿ ಪರಿವರ್ತಿಸುವ 1 ಲಕ್ಷ ಕೋಟಿ ರೂ. ವೆಚ್ಚದ 'ಗ್ಲೋಬಲ್ ಹಾರ್ಟಿಕಲ್ಚರ್ ಹಬ್' ಯೋಜನೆಗೆ ಮದನಪಲ್ಲಿಯಲ್ಲಿ ಚಾಲನೆ ನೀಡಲಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ರಿಲಾಯನ್ಸ್ ಸಹಯೋಗದಲ್ಲಿ 'ಇಂಡಿಯನ್ ಸ್ಕೂಲ್ ಆಫ್ ಅಗ್ರಿಕಲ್ಚರ್' ಕೂಡ ಸ್ಥಾಪನೆಯಾಗುತ್ತಿದೆ.

ಮದನಪಲ್ಲಿ(ಅ.3): ಕರ್ನಾಟಕ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ರಾಯಲಸೀಮೆ ಪ್ರದೇಶವನ್ನು ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ 'ಹಣ್ಣುಗಳ ಕಣಜ'ವನ್ನಾಗಿ (Fruit Bowl of the World) ಪರಿವರ್ತಿಸುವ ಬೃಹತ್ ಕನಸಿನ ಯೋಜನೆಗೆ ಆಂಧ್ರಪ್ರದೇಶ ಸರ್ಕಾರ ಅಧಿಕೃತ ಚಾಲನೆ ನೀಡಿದೆ. "ಗ್ಲೋಬಲ್ ಹಾರ್ಟಿಕಲ್ಚರ್ ಹಬ್ - ರಾಯಲಸೀಮಾ ರೈಸಿಂಗ್" (Global Horticulture Hub - Rayalaseema Rising) ಹಾಗೂ 'ಇಂಡಿಯನ್ ಸ್ಕೂಲ್ ಆಫ್ ಅಗ್ರಿಕಲ್ಚರ್' (ISA) ಸಂಸ್ಥೆಗಳ ಶಂಕುಸ್ಥಾಪನೆ ಕಾರ್ಯಕ್ರಮವು ಶುಕ್ರವಾರ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯಲ್ಲಿ ನೆರವೇರಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಜಂಟಿಯಾಗಿ ಈ ಯೋಜನೆಗೆ ಅಡಿಪಾಯ ಹಾಕಿದರು.

ದಕ್ಷಿಣ ಭಾರತದ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅತಿ ದೊಡ್ಡ ಪರಿವರ್ತನಾ ಯೋಜನೆಗಳಲ್ಲಿ ಒಂದೆಂದು ಬಣ್ಣಿಸಲಾಗಿರುವ ಈ ಯೋಜನೆಯನ್ನು 'ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ' (IHDP) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಒಟ್ಟು 1 ಲಕ್ಷ ಕೋಟಿ ರೂಪಾಯಿಗಳ ಬೃಹತ್ ವೆಚ್ಚದ ಈ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಯೋಗದಲ್ಲಿ 2026ರ ಆಗಸ್ಟ್‌ನಿಂದ 2029ರ ಜುಲೈ ನಡುವಿನ ಅವಧಿಯಲ್ಲಿ ಮೂರು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ.

ಹಣಕಾಸು ಹೊಂದಾಣಿಕೆ ಹಾಗೂ ಯೋಜನೆಯ ವ್ಯಾಪ್ತಿ

ಕೇಂದ್ರ ಸರ್ಕಾರದ 2024ರ ವಾರ್ಷಿಕ ಬಜೆಟ್‌ನಲ್ಲಿ ಘೋಷಿಸಲಾದ "ಪೂರ್ವೋದಯ" (Purvoday) ಯೋಜನೆಯಡಿ ಸಾರ್ವಜನಿಕ ಮೂಲಸೌಕರ್ಯಗಳಿಗಾಗಿ ಆಂಧ್ರ ಸರ್ಕಾರ 40,352 ಕೋಟಿ ರೂಪಾಯಿಗಳನ್ನು ಕ್ರೋಢಿಕರಿಸುತ್ತಿದೆ. ಉಳಿದ 60,000 ಕೋಟಿ ರೂಪಾಯಿಗಳನ್ನು ಕೊಯ್ಲಿನ ನಂತರದ ಸಂಸ್ಕರಣೆ, ಕೋಲ್ಡ್ ಚೈನ್ ಪೂರೈಕೆ ಜಾಲ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಖಾಸಗಿ ಹೂಡಿಕೆದಾರರಿಂದ ಸಂಗ್ರಹಿಸಲು ಸರ್ಕಾರ ಸಜ್ಜಾಗಿದೆ.

ಈ ಯೋಜನೆಯು ಹಳೆಯ ನಾಲ್ಕು ರಾಯಲಸೀಮೆ ಜಿಲ್ಲೆಗಳು ಹಾಗೂ ನೆರೆಹೊರೆಯ ಪ್ರಕಾಶಂ ಮತ್ತು ಮಾರ್ಕಾಪುರ ಜಿಲ್ಲೆಗಳ 303 ಮಂಡಲಗಳು, 5,869 ಹಳ್ಳಿಗಳ ವ್ಯಾಪ್ತಿಯಲ್ಲಿರುವ 201 ನಿಗದಿತ ಕೃಷಿ ಕ್ಲಸ್ಟರ್‌ಗಳಲ್ಲಿ ವಿಸ್ತರಿಸಲಿದೆ.

ಕೃಷಿ ಉತ್ಪಾದನೆ ದ್ವಿಗುಣ; 9.6 ಲಕ್ಷ ರೈತ ಕುಟುಂಬಗಳಿಗೆ ನೆರವು

'ರಾಯಲಸೀಮಾ ರೈಸಿಂಗ್' ಯೋಜನೆಯಡಿ ಈ ಭಾಗದ ತೋಟಗಾರಿಕಾ ಪ್ರದೇಶವನ್ನು ಪ್ರಸ್ತುತ ಇರುವ 8.41 ಲಕ್ಷ ಹೆಕ್ಟೇರ್‌ನಿಂದ 14.41 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಇದರಿಂದಾಗಿ ವಾರ್ಷಿಕ ಉತ್ಪಾದನೆಯು 222 ಲಕ್ಷ ಮೆಟ್ರಿಕ್ ಟನ್‌ನಿಂದ ಬರೋಬ್ಬರಿ 435 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಲಿದೆ.

ಈ ಯೋಜನೆಯಿಂದ ಈ ಭಾಗದ 9.6 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ ಸಿಗಲಿದ್ದು, ಮೂರನೇ ವರ್ಷದಿಂದ ವಾರ್ಷಿಕವಾಗಿ 81,000 ಕೋಟಿ ರೂಪಾಯಿಗಳ ಹೆಚ್ಚುವರಿ 'ಒಟ್ಟು ಮೌಲ್ಯವರ್ಧನೆ' (GVA) ರಾಜ್ಯದ ಬೊಕ್ಕಸಕ್ಕೆ ಸೇರ್ಪಡೆಯಾಗಲಿದೆ.

ಸೇಬು, ಸ್ಟ್ರಾಬೆರಿ, ಬಾಳೆಹಣ್ಣು, ಆವಕಾಡೊ, ಕಿವಿ ಹಾಗೂ ಖರ್ಜೂರ ಸೇರಿದಂತೆ ವಿವಿಧ ರೀತಿಯ ಹೈಟೆಕ್ ತೋಟಗಾರಿಕಾ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಆಹಾರ ಸಂಸ್ಕರಣೆ ಹಾಗೂ ರಫ್ತು ವ್ಯವಸ್ಥೆಯಿಂದಾಗಿ ರೈತರಿಗೆ ಸ್ಥಿರ ಆದಾಯ ಸಿಗಲಿದ್ದು, ಬೆಳೆ ಇಳುವರಿ ಹಾಗೂ ಬೆಲೆ ವ್ಯತ್ಯಾಸಗಳಲ್ಲಿ ಸ್ಥಿರತೆ ಬರಲಿದೆ. "ಇಲ್ಲಿ ಬೆಳೆಯುವ ಹಣ್ಣುಗಳು ವಿದೇಶಗಳಿಗೆ ರಫ್ತಾದಾಗ ಮಾತ್ರ ರೈತರಿಗೆ ನಿಜವಾದ ಲಾಭ ಸಿಗುತ್ತದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದೇ ಈ ತೋಟಗಾರಿಕಾ ಹಬ್‌ನ ಮುಖ್ಯ ಉದ್ದೇಶ" ಎಂದು ಚಂದ್ರಬಾಬು ನಾಯ್ಡು ಅವರು ಸಮಾವೇಶದಲ್ಲಿ ಹೇಳಿದರು.

ರಿಲಾಯನ್ಸ್ ಸಹಯೋಗದಲ್ಲಿ 'ಇಂಡಿಯನ್ ಸ್ಕೂಲ್ ಆಫ್ ಅಗ್ರಿಕಲ್ಚರ್' ಸ್ಥಾಪನೆ

ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಉತ್ತೇಜಿಸಲು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸಹಯೋಗದೊಂದಿಗೆ 'ಇಂಡಿಯನ್ ಸ್ಕೂಲ್ ಆಫ್ ಅಗ್ರಿಕಲ್ಚರ್' (ISA) ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಇದು ಆಧುನಿಕ ಕೃಷಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಉತ್ತಮ ಇಳುವರಿಯ ಬಿತ್ತನೆ ಬೀಜಗಳು, ಕೋಲ್ಡ್ ಸ್ಟೋರೇಜ್, ಪ್ಯಾಕೇಜಿಂಗ್, ಯಾಂತ್ರೀಕರಣ ಹಾಗೂ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ (Zero-Budget Natural Farming) ಕುರಿತು ಸಂಶೋಧನೆ ನಡೆಸಲಿದೆ.

"ನನ್ನನ್ನು ಆಂಧ್ರದ ಮಗನೆಂದು ಭಾವಿಸಿ": ಅನಂತ್ ಅಂಬಾನಿ ಭಾವುಕ ಮಾತು

ಕಾರ್ಯಕ್ರಮದಲ್ಲಿ ಮಾತನಾಡಿದ ರಿಲಾಯನ್ಸ್ ಸಮೂಹದ ಅನಂತ್ ಅಂಬಾನಿ, "ಈ ಕೃಷಿ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆಯು (AI) ಭಾರತದ ಶ್ರಮಜೀವಿ ರೈತರ ಪಾರಂಪರಿಕ ಜ್ಞಾನದೊಂದಿಗೆ ಕೈಜೋಡಿಸಲಿದೆ" ಎಂದು ಹೇಳಿದರು.

"ಕೀಟಬಾಧೆ ಹರಡುವ ಮುಂಚಿತವಾಗಿಯೇ ರೈತರನ್ನು ಎಚ್ಚರಿಸುವ ಬುದ್ಧಿವಂತ ತಂತ್ರಜ್ಞಾನವನ್ನು ಈ ಶಾಲೆಯ ಯುವ ವಿಜ್ಞಾನಿಗಳು ಅಭಿವೃದ್ಧಿಪಡಿಸುವುದನ್ನು ಕಲ್ಪಿಸಿಕೊಳ್ಳಿ. ಬೆಳೆಗಳ ಆರೋಗ್ಯವನ್ನು ಮ್ಯಾಪ್ ಮಾಡುವ ಡ್ರೋನ್‌ಗಳು, ಕಠಿಣ ಶ್ರಮವನ್ನು ಸರಳಗೊಳಿಸುವ ರೊಬೊಟಿಕ್ಸ್ ಹಾಗೂ ಪ್ರತಿಯೊಂದು ಹನಿ ನೀರಿಗೆ ಹೆಚ್ಚಿನ ಬೆಳೆ (Per Drop More Crop) ಪಡೆಯಲು ಸಹಾಯ ಮಾಡುವ ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನಗಳು ರೈತರ ಕೈಸೇರಲಿವೆ. ಮದನಪಲ್ಲಿಯ ಟೊಮೆಟೊ ಬೆಳೆಗಾರನಿಗೆ ತನ್ನ ಬೆಳೆಯನ್ನು ಯಾವಾಗ ಮತ್ತು ಎಲ್ಲಿ ಮಾರಾಟ ಮಾಡಬೇಕೆಂದು ತಿಳಿಸುವ ಬೆಲೆ ಬುದ್ಧಿವಂತಿಕೆ ವ್ಯವಸ್ಥೆಯು (Price Intelligence) ಲಭ್ಯವಾಗಲಿದೆ" ಎಂದು ಅಂಬಾನಿ ವಿವರಣೆ ನೀಡಿದರು.

ವೇದಿಕೆಯಲ್ಲಿದ್ದ ಚಂದ್ರಬಾಬು ನಾಯ್ಡು ಅವರಿಗೆ ತೆಲುಗಿನಲ್ಲಿ "ನನ್ನನ್ನು ಆಂಧ್ರ ಬಿಡ್ಡಗ ಭಾವಿಂಚಂಡಿ" (ನನ್ನನ್ನು ಆಂಧ್ರದ ಮಗನೆಂದೇ ಭಾವಿಸಿ) ಎಂದು ಅನಂತ್ ಅಂಬಾನಿ ಭಾವುಕರಾಗಿ ವಿನಂತಿಸಿಕೊಂಡರು. "ಈ ಐತಿಹಾಸಿಕ ಪ್ರಯತ್ನದಲ್ಲಿ ರಿಲಾಯನ್ಸ್ ಮೇಲೆ ನಂಬಿಕೆ ಇಟ್ಟು ನಮ್ಮನ್ನು ಆಂಧ್ರಪ್ರದೇಶ ಸರ್ಕಾರದೊಂದಿಗೆ ಪಾಲುದಾರರನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು. ಇಂದು ನಾವು ಕೇವಲ ಶಂಕುಸ್ಥಾಪನೆ ಮಾಡುತ್ತಿಲ್ಲ, ಬದಲಿಗೆ ಗ್ರಾಮೀಣ ಉದ್ಯಮಶೀಲತೆ, ಬಲವಾದ ಹಳ್ಳಿಗಳು ಹಾಗೂ ಸುಸ್ಥಿರ ಭಾರತದ ಭವಿಷ್ಯಕ್ಕೆ ಭದ್ರ ಬಾದಾದಿ ಹಾಕುತ್ತಿದ್ದೇವೆ" ಎಂದು ಅವರು ಹರ್ಷ ವ್ಯಕ್ತಪಡಿಸಿದರು.