Asianet Suvarna News Asianet Suvarna News

ಜಿಯೋದಲ್ಲಿ ಅಮರಿಕದ ಮತ್ತೊಂದು ಕಂಪನಿಯಿಂದ 11367 ಕೋಟಿ ಹೂಡಿಕೆ..!

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್ 11,367 ಕೋಟಿ ರೂ. ಹೂಡಿಕೆ|  ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಫೇಸ್‌ಬುಕ್ ನಂತರದ ಅತಿದೊಡ್ಡ ಹೂಡಿಕೆದಾರನ ಸ್ಥಾನವನ್ನು ವಿಸ್ಟಾ ಪಡೆದುಕೊಂಡಿದೆ|

America based firm invests Rs 11367 crores in Reliances Jio Platforms
Author
Bengaluru, First Published May 8, 2020, 1:23 PM IST

ಮುಂಬಯಿ(ಮೇ.08): ಡಿಜಿಟಲ್ ಇಂಡಿಯಾವನ್ನು ಸಕ್ರಿಯಗೊಳಿಸುವ ಜಿಯೋ ಉದ್ದೇಶದಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನೊಡನೆ ಪ್ರಮುಖ ತಂತ್ರಾಂಶ ಮತ್ತು ತಂತ್ರಜ್ಞಾನ ಹೂಡಿಕೆದಾರ ಸಂಸ್ಥೆ ವಿಸ್ಟಾ ಇಕ್ವಿಟ್ಟಿ ಪಾರ್ಟ್‌ನರ್ಸ್‌ ಕೂಡ ಕೈಜೋಡಿಸಿದೆ. 

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್ (ವಿಸ್ಟಾ) 11,367 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಇಂದು(ಶುಕ್ರವಾರ) ಘೋಷಿಸಿವೆ. 

ಜಿಯೋದಲ್ಲಿ ಹೂಡಿಕೆ ಮಾಡಿದ ಅಮೆರಿಕದ ಎರಡನೇ ಕಂಪನಿ ವಿಸ್ಟಾ

ಜಿಯೋದಲ್ಲಿ ಫೇಸ್‌ಬುಕ್‌ 43000 ಕೋಟಿ ರು. ಹೂಡಿಕೆ: ಏನಿದರ ಒಳಮರ್ಮ?

ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸಸ್‌ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ವಿಸ್ಟಾ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇ. 2.32 ರಷ್ಟು ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದ್ದು, ಈ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಫೇಸ್‌ಬುಕ್ ನಂತರದ ಅತಿದೊಡ್ಡ ಹೂಡಿಕೆದಾರನ ಸ್ಥಾನವನ್ನು ವಿಸ್ಟಾ ಪಡೆದುಕೊಂಡಿದೆ. ಈ ಹೂಡಿಕೆಯೊಂದಿಗೆ, ಮೂರು ವಾರಕ್ಕೂ ಕಡಿಮೆ ಅವಧಿಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ 60,596.37 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.    

388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರನ್ನು ಹೊಂದಿದ ಜಿಯೋ 

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಜಿಯೋದ ಮುಂಚೂಣಿ ಡಿಜಿಟಲ್ ಆಪ್‌ಗಳು, ಡಿಜಿಟಲ್ ಇಕೋಸಿಸ್ಟಮ್‌ಗಳು ಹಾಗೂ ಭಾರತದ ನಂ.1 ಅತಿವೇಗದ ಸಂಪರ್ಕ ವೇದಿಕೆಯನ್ನು ಒಂದೇ ಛಾವಣಿಯಡಿ ತರುವ ಮೂಲಕ ಭಾರತಕ್ಕಾಗಿ ಡಿಜಿಟಲ್ ಸಮಾಜವನ್ನು ರೂಪಿಸುತ್ತಿರುವ ಮುಂದಿನ ಪೀಳಿಗೆಯ ತಂತ್ರಜ್ಞಾನ ಸಂಸ್ಥೆಯಾಗಿದೆ. 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿಗೆ ಸಂಪರ್ಕ ವೇದಿಕೆಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಜಿಯೋ ಪ್ಲಾಟ್‌ಫಾರ್ಮ್‌ಗಳ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರಲಿದೆ.

ಜೂಮ್ ಬಿಟ್ಟು ಮೀಟ್ ಆಗೋಣ ಬನ್ನಿ ಎಂದ ರಿಲಾಯನ್ಸ್!

1.3 ಶತಕೋಟಿ ಭಾರತೀಯರು ಹಾಗೂ ಭಾರತೀಯ ಉದ್ಯಮಗಳಿಗೆ, ಅದರಲ್ಲೂ ವಿಶೇಷವಾಗಿ ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರಿಗೆ, ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ. ಭಾರತೀಯ ಡಿಜಿಟಲ್ ಸೇವೆಗಳ ಕ್ಷೇತ್ರವನ್ನು ಪರಿವರ್ತಿಸುವ ಬದಲಾವಣೆಗಳನ್ನು ಜಿಯೋ ತಂದಿದೆ ಹಾಗೂ ವಿಶ್ವದ ಪ್ರಮುಖ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿ ಜಾಗತಿಕ ತಂತ್ರಜ್ಞಾನ ನಾಯಕತ್ವದ ಸ್ಥಾನ ಪಡೆಯುವತ್ತ ಭಾರತವನ್ನು ಮುನ್ನಡೆಸಿದೆ.

ವಿಸ್ಟಾ ಒಂದು ಪ್ರಮುಖ ಜಾಗತಿಕ ಹೂಡಿಕೆ ಸಂಸ್ಥೆ 

ವಿಸ್ಟಾ ಒಂದು ಪ್ರಮುಖ ಜಾಗತಿಕ ಹೂಡಿಕೆ ಸಂಸ್ಥೆಯಾಗಿದ್ದು, ಉದ್ಯಮಗಳನ್ನು ಮರುಶೋಧಿಸುತ್ತಿರುವ ಹಾಗೂ ಬದಲಾವಣೆಯ ವೇಗವರ್ಧಿಸುತ್ತಿರುವ ಎಂಟರ್‌ಪ್ರೈಸ್ ತಂತ್ರಾಂಶ, ಡೇಟಾ ಮತ್ತು ತಂತ್ರಜ್ಞಾನ ಸಶಕ್ತ ಸಂಸ್ಥೆಗಳ ಸಬಲೀಕರಣ ಹಾಗೂ ಬೆಳವಣಿಗೆಯತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ. 

ವಿಸ್ಟಾ 57 ಶತಕೋಟಿ ಡಾಲರುಗಳಿಗಿಂತ ಹೆಚ್ಚಿನ ಸಂಚಿತ ಬಂಡವಾಳ ಬದ್ಧತೆಗಳನ್ನು ಹೊಂದಿದೆ ಮತ್ತು ಅದರ ಜಾಗತಿಕ ಸಂಸ್ಥೆಗಳ ಜಾಲವು ಒಟ್ಟಾರೆಯಾಗಿ ವಿಶ್ವದ 5ನೇ ಅತಿದೊಡ್ಡ ಎಂಟರ್‌ಪ್ರೈಸಸ್‌ ತಂತ್ರಾಂಶ ಸಂಸ್ಥೆಯನ್ನು ಪ್ರತಿನಿಧಿಸುತ್ತದೆ. ಎಂಟರ್‌ಪ್ರೈಸಸ್‌ ತಂತ್ರಾಂಶವೊಂದರಲ್ಲೇ 20 ವರ್ಷಗಳ ಹೂಡಿಕೆ ಅನುಭವ ಹೊಂದಿರುವ ವಿಸ್ಟಾ, ತಂತ್ರಜ್ಞಾನದ ಪರಿವರ್ತಕ ಶಕ್ತಿಯು ಆರೋಗ್ಯಕರ ಚುರುಕಾದ ಆರ್ಥಿಕತೆ, ವೈವಿಧ್ಯಮಯ ಮತ್ತು ಎಲ್ಲರನ್ನೂ ಒಳಗೊಂಡ ಸಮುದಾಯ ಮತ್ತು ಸಮೃದ್ಧಿಯತ್ತ ವಿಶಾಲ ಮಾರ್ಗವಿರುವ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಿದೆ ಎಂದು ನಂಬುತ್ತದೆ. ಪ್ರಸ್ತುತ, ವಿಸ್ಟಾ ಪೋರ್ಟ್‌ಫೋಲಿಯೋ ಸಂಸ್ಥೆಗಳು ಭಾರತದಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿವೆ.ಎಂಟರ್‌ಪ್ರೈಸ್ ತಂತ್ರಾಂಶ, ಡೇಟಾ ಮತ್ತು ತಂತ್ರಜ್ಞಾನ ಸಶಕ್ತ ಸಂಸ್ಥೆಗಳತ್ತ ತನ್ನ ಗಮನ ಕೇಂದ್ರೀಕರಿಸುವ ವಿಸ್ಟಾದ ಈ ಹೂಡಿಕೆಯು, ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿ ಜಿಯೋ ರೂಪಿಸಿರುವ ವಿಶ್ವದರ್ಜೆಯ ಡಿಜಿಟಲ್ ವೇದಿಕೆಯ ಸಾಮರ್ಥ್ಯಕ್ಕೆ ಇನ್ನಷ್ಟು ಸಾಕ್ಷಿ ಒದಗಿಸುತ್ತಿದೆ.

ವಿಸ್ಟಾ ಜೊತೆ ಕೈಜೋಡಿಸಿದ್ದು ಸಂತಸ ತಂದಿದೆ: ಮುಖೇಶ್ ಅಂಬಾನಿ

ವಿಸ್ಟಾ ಜೊತೆಗಿನ ವಹಿವಾಟಿನ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ವಿಶ್ವದ ಮುಂಚೂಣಿ ಟೆಕ್ ಹೂಡಿಕೆದಾರ ಸಂಸ್ಥೆ ವಿಸ್ಟಾವನ್ನು ಜಾಗತಿಕವಾಗಿ ಮೌಲ್ಯಯುತ ಪಾಲುದಾರರಾಗಿ ಸ್ವಾಗತಿಸಲು ನನಗೆ ಸಂತೋಷವಾಗಿದೆ. ನಮ್ಮ ಇತರ ಪಾಲುದಾರರಂತೆ, ಎಲ್ಲ ಭಾರತೀಯರ ಅನುಕೂಲಕ್ಕಾಗಿ ಭಾರತದ ಡಿಜಿಟಲ್ ಇಕೋಸಿಸ್ಟಮ್‌ ಅನ್ನು ಬೆಳೆಸುವ ಹಾಗೂ ಪರಿವರ್ತಿಸುವುದನ್ನು ಮುಂದುವರೆಸುವ ದೃಷ್ಟಿಯನ್ನು ವಿಸ್ಟಾ ಕೂಡ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಅಂಬಾನಿಯನ್ನೇ ಬೆದರಿಸಿದ ಕೊರೋನಾ, ಜಿಯೋ ಇಲ್ಲದಿದ್ದರೆ ಕತೆ ಬೇರೆ ಆಗ್ತಿತ್ತು!

ಪ್ರತಿಯೊಬ್ಬರಿಗೂ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಬಲ್ಲ ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಅವರು ನಂಬುತ್ತಾರೆ. ಗುಜರಾತ್ ಮೂಲದ ಕುಟುಂಬದಿಂದ ಬಂದಿರುವ ರಾಬರ್ಟ್ ಮತ್ತು ಬ್ರಿಯಾನ್ ಅವರಲ್ಲಿ, ಭಾರತವನ್ನು ಮತ್ತು ಡಿಜಿಟಲ್ ಭಾರತೀಯ ಸಮಾಜದ ಪರಿವರ್ತಕ ಸಾಮರ್ಥ್ಯವನ್ನು ನಂಬುವ ಇಬ್ಬರು ಅತ್ಯುತ್ತಮ ಜಾಗತಿಕ ತಂತ್ರಜ್ಞಾನ ನಾಯಕರನ್ನು ನಾನು ಕಂಡಿದ್ದೇನೆ. ಜಾಗತಿಕವಾಗಿ ತನ್ನ ಹೂಡಿಕೆಗಳಿಗೆ ವಿಸ್ಟಾ ನೀಡುತ್ತಿರುವ ವೃತ್ತಿಪರ ಪರಿಣತಿ ಮತ್ತು ಬಹು-ಹಂತದ ಬೆಂಬಲದ ಪ್ರಯೋಜನವನ್ನು ಜಿಯೋಗಾಗಿಯೂ ಪಡೆಯಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.

ಜಿಯೋ ಜೊತೆ ಸೇರಲು ರೋಮಾಂಚನ 

ಹೂಡಿಕೆಯ ಬಗ್ಗೆ ಮಾತನಾಡಿದ ವಿಸ್ಟಾದ ಸಂಸ್ಥಾಪಕ, ಅಧ್ಯಕ್ಷ ಮತ್ತು ಸಿಇಓ ರಾಬರ್ಟ್ ಎಫ್. ಸ್ಮಿತ್, ಭಾರತಕ್ಕಾಗಿ ಜಿಯೋ ನಿರ್ಮಿಸುತ್ತಿರುವ ಡಿಜಿಟಲ್ ಸಮಾಜದ ಸಾಧ್ಯತೆಗಳನ್ನು ನಾವು ನಂಬುತ್ತೇವೆ. ಜಿಯೋದ ವಿಶ್ವ ದರ್ಜೆಯ ನಾಯಕತ್ವದ ತಂಡದೊಂದಿಗೆ ಜಾಗತಿಕ ಪ್ರವರ್ತಕನಾಗಿ ಮುಖೇಶ್ ಅವರ ದೃಷ್ಟಿಕೋನವು, ಜಿಯೋ ಪ್ರಾರಂಭಿಸಿದ ಡೇಟಾ ಕ್ರಾಂತಿಯನ್ನು ಬೆಳೆಸಲು ಮತ್ತು ಮುನ್ನಡೆಸಲು ಒಂದು ವೇದಿಕೆಯನ್ನು ನಿರ್ಮಿಸಿದೆ. ಭಾರತದಾದ್ಯಂತ ಸಂಪರ್ಕದಲ್ಲಿ ತ್ವರಿತ ಬೆಳವಣಿಗೆಯನ್ನು ನೀಡಲು,  ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಗಳಲ್ಲೊಂದರ ಭವಿಷ್ಯವನ್ನು ಉತ್ತೇಜಿಸುವುದಕ್ಕಾಗಿ ಆಧುನಿಕ ಗ್ರಾಹಕ, ಸಣ್ಣ ವ್ಯಾಪಾರ ಮತ್ತು ಉದ್ಯಮಗಳಿಗೆ ತಂತ್ರಾಂಶವನ್ನು ಒದಗಿಸಲು ಜಿಯೋ ಪ್ಲಾಟ್‌ಫಾರ್ಮ್ಸ್ ಜೊತೆ ಸೇರಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಹೇಳಿದ್ದಾರೆ.

ಈ ವಹಿವಾಟು, ನಿಯಂತ್ರಕರ ಹಾಗೂ ಮತ್ತಿತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್‌ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್‌ಬಿ ಆಂಡ್ ಪಾರ್ಟ್‌ನರ್ಸ್ ಹಾಗೂ ಡೇವಿಸ್ ಪೋಲ್ಕ್ ಆಂಡ್ ವಾರ್ಡ್‌ವೆಲ್ ಈ ವಹಿವಾಟಿಗೆ ಸಲಹೆ ನೀಡಿದ್ದಾರೆ. ಕರ್ಕ್‌ಲ್ಯಾಂಡ್ ಆಂಡ್ ಎಲ್ಲಿಸ್ ಎಲ್ಎಲ್‌ಪಿ ಹಾಗೂ ಶಾರ್ದೂಲ್ ಅಮರ್‌ಚಂದ್ ಮಂಗಲ್‌ದಾಸ್ ಆಂಡ್ ಕೋ. ವಿಸ್ಟಾ ಸಂಸ್ಥೆಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
 

Follow Us:
Download App:
  • android
  • ios