ಬಹುತೇಕ ಆಭರಣ ಮಳಿಗೆಗಳು ರಿಯಾಯಿತಿ, ಉಡುಗೊರೆಗಳನ್ನು ನೀಡುವ ಮೂಲಕ ಚಿನ್ನ, ಬೆಳ್ಳಿ ಆಭರಣಗಳನ್ನು ಖರೀದಿಸುವ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ. ಕೆಲವೆಡೆ ಚಿನ್ನ ಖರೀದಿಸುವವರಿಗೆ ಪ್ರತಿ ಗ್ರಾಂಗೆ 100 ರೂ. ರಿಯಾಯಿತಿ ಕೊಟ್ಟಿದ್ದರೆ, ಮತ್ತೆ ಕೆಲವೆಡೆ ಪ್ರತಿ ಗ್ರಾಂಗೆ ಶೇ.2 ರಿಂದ 4 ರಷ್ಟು ರಿಯಾಯಿತಿ ಘೋಷಿಸಿದ್ದಾರೆ.
ಬೆಂಗಳೂರು (ಏಪ್ರಿಲ್ 22, 2023): ಬಸವ ಜಯಂತಿ ಈ ಬಾರಿ ಭಾನುವಾರ (ಏಪ್ರಿಲ್ 23) ಬಂದಿದೆ. ಆದರೆ, ಪಂಚಾಂಗದ ಪ್ರಕಾರ ಅಕ್ಷಯ ತೃತೀಯ ಶನಿವಾರ (ಏಪ್ರಿಲ್ 22) ಇದೆ. ಹೀಗಾಗಿ ಈ ಎರಡು ದಿನವೂ ಅಕ್ಷಯ ತೃತೀಯವನ್ನು ಆಚರಿಸುವ ಮೂಲಕ ಚಿನ್ನಾಭರಣ ಮಾರಾಟಕ್ಕೆ ಆಭರಣ ಮಾರಾಟಗಾರರು ನಿರ್ಧಾರ ಕೈಗೊಂಡಿದ್ದಾರೆ.
ಅಕ್ಷಯ ತೃತೀಯ (Akshaya Tritiya) ದಿನದಂದು ಚಿನ್ನ (Gold) ಖರೀದಿಯಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನದಂದು ಚಿನ್ನ ಖರೀದಿ ಮಾಡುವ ಉದ್ದೇಶದಿಂದ ತಿಂಗಳಾನುಗಟ್ಟಲೇ ಹಣ ಕೂಡಿಡುವವರೂ ಇದ್ದಾರೆ. ಅನೇಕರು ಈ ದಿನ ಕಡಿಮೆ ಪ್ರಮಾಣದ ಚಿನ್ನವನ್ನಾದರೂ ಖರೀದಿಸಿ ಅಕ್ಷಯ ತೃತೀಯ ಆಚರಿಸುತ್ತಾರೆ.
ಇದನ್ನು ಓದಿ: Akshaya Tritiya 2023ಯು ನಿಮ್ಮ ರಾಶಿಗೆ ಏನೆಲ್ಲ ಫಲ ತರಲಿದೆ ನೋಡಿದ್ರಾ?
ಈ ಬಾರಿ ಚಿನ್ನದ ದರ (ಶುಕ್ರವಾರದ ದರ) ಪ್ರತಿ ಗ್ರಾಂಗೆ 5,650 ರು. ಇದೆ. ಇದಕ್ಕೆ ಜಿಎಸ್‌ಟಿ (GST), ಮೇಕಿಂಗ್ ಚಾರ್ಜ್ (Making Charge) ಕೂಡ ಸೇರ್ಪಡೆಯಾಗಲಿದ್ದು ದರ ದುಬಾರಿಯಾಗಲಿದೆ. ಆದರೂ ಗ್ರಾಹಕರು ಖರೀದಿಸಲು ಬಂದೇ ಬರುತ್ತಾರೆ. ಹೀಗಾಗಿ ಈ ಬಾರಿಯೂ ಚಿನ್ನ ಭರ್ಜರಿ ಮಾರಾಟದ ನಿರೀಕ್ಷೆಯನ್ನು ಆಭರಣ (Jewellery) ಮಳಿಗೆಗಳ ಮಾಲೀಕರು ಹೊಂದಿದ್ದಾರೆ. ಪ್ರಸ್ತುತ ಚುನಾವಣೆ (Election) ಹಿನ್ನೆಲೆಯಲ್ಲಿ ಹಲವರಲ್ಲಿ ಹಣ ಚಲಾವಣೆಯಾಗಲಿದ್ದು ಹೆಚ್ಚಿನವರು ಚಿನ್ನ, ಬೆಳ್ಳಿಯ (Silver) ಆಭರಣಗಳನ್ನು ಖರೀದಿಸಲಿದ್ದಾರೆ ಎನ್ನುತ್ತಾರೆ ಚಿನ್ನದ ವ್ಯಾಪಾರಿ ಶ್ರೀನಿವಾಸಾಚಾರ್.
ರಿಯಾಯಿತಿ ಉಡುಗೊರೆ:
ಬಹುತೇಕ ಆಭರಣ ಮಳಿಗೆಗಳು ರಿಯಾಯಿತಿ, ಉಡುಗೊರೆಗಳನ್ನು ನೀಡುವ ಮೂಲಕ ಚಿನ್ನ, ಬೆಳ್ಳಿ ಆಭರಣಗಳನ್ನು ಖರೀದಿಸುವ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ. ಕೆಲವೆಡೆ ಚಿನ್ನ ಖರೀದಿಸುವವರಿಗೆ ಪ್ರತಿ ಗ್ರಾಂಗೆ 100 ರೂ. ರಿಯಾಯಿತಿ ಕೊಟ್ಟಿದ್ದರೆ, ಮತ್ತೆ ಕೆಲವೆಡೆ ಪ್ರತಿ ಗ್ರಾಂಗೆ ಶೇ.2 ರಿಂದ 4 ರಷ್ಟು ರಿಯಾಯಿತಿ ಘೋಷಿಸಿದ್ದಾರೆ. 10 ಗ್ರಾಮ್‌ಗಿಂತ ಹೆಚ್ಚು ಚಿನ್ನ ಖರೀದಿಸುವವರಿಗೆ ಬೆಳ್ಳಿಯ ನಾಣ್ಯದ ಉಡುಗೊರೆ ಕೂಡ ಕೆಲ ಆಭರಣ ಮಳಿಗೆಗಳಲ್ಲಿ ಸಿಗಲಿದೆ. ಇನ್ನು ಹಲವೆಡೆ ಮೇಕಿಂಗ್ ಚಾರ್ಜ್‌ನಲ್ಲಿಯೂ ಡಿಸ್ಕೌಂಟ್ ಸಿಗಲಿದೆ. ಆದರೆ, ಗ್ರಾಹಕರು ಉಡುಗೊರೆಗಿಂತ ಗುಣಮಟ್ಟದ ಚಿನ್ನಾಭರಣ ಖರೀದಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಚಿನ್ನಾಭರಣ ಮಾಡುವ ಕೆ.ಎಲ್.ಆಚಾರ್ಯ ಮಾಹಿತಿ ನೀಡಿದ್ದಾರೆ.
ಚಿನ್ನದ ನಾಣ್ಯಗಳ ಖರೀದಿ:
ಪ್ರತಿ ಬಾರಿಯಂತೆ ಈ ವರ್ಷವೂ ಹಲವು ಮಳಿಗೆಗಳಲ್ಲಿ ಅಕ್ಷಯ ತೃತೀಯಕ್ಕೆಂದೇ ವಿಶೇಷವಾಗಿ ಒಂದು ಗ್ರಾಂನ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ದಿನ ಏನಾದರೂ ಖರೀದಿಸಲೇಬೇಕು ಎಂಬ ನಂಬಿಕೆಯುಳ್ಳವರು ಈ ನಾಣ್ಯಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಹೂಡಿಕೆ ಮಾಡುವವರು 10-20 ಗ್ರಾಂ ಹೀಗೆ ಕಚ್ಚಾ ಚಿನ್ನ (ಬುಲಿಯನ್) (Bullion) ಖರೀದಿಸುವರು. ಮದುವೆ (Marriage) ಮತ್ತಿತರ ಸಮಾರಂಭಗಳ ಹಿನ್ನೆಲೆಯಲ್ಲಿ ಓಲೆ, ನೆಕ್ಲೇಸ್, ಸರ, ಕಾಸಿನ ಸರ, ಬಳೆ ಹೀಗೆ ಬೇಕಾದ ಮುಖ್ಯ ಆಭರಣಗಳನ್ನು ಖರೀದಿಸಲಿದ್ದಾರೆ. ಇದಕ್ಕಾಗಿ ಹಲವು ಮಳಿಗೆಗಳಲ್ಲಿ ಮುಂಗಡ ನೋಂದಣಿ ಮಾಡಿಸಿದ್ದಾರೆ ಎಂದು ಚಿನ್ನಾಭರಣ ಮಾರಾಟಗಾರರು ಮಾಹಿತಿ ನೀಡಿದ್ದಾರೆ.
