ಬಾಗಲಕೋಟೆ: ಕೋಟೆ ನಾಡಿಗೆ ಮತ್ತೆ ನಿರಾಶಾದಾಯಕ ಬಜೆಟ್..!
50 ಹಾಸಿಗೆಯ ಆರೈಕೆ ಕೇಂದ್ರವನ್ನು ಆರಂಭಿಸುವ ಪ್ರಸ್ತಾಪ ಬಿಟ್ಟರೆ ಜಿಲ್ಲೆಗೆ ಘೋಷಣೆಯಾಗದ ಮಹತ್ವದ ಯಾವ ಯೋಜನೆಗಳು
ಈಶ್ವರ ಶೆಟ್ಟರ
ಬಾಗಲಕೋಟೆ(ಫೆ.18): ಬಿಜೆಪಿ ಸರ್ಕಾರದ ಪ್ರಸಕ್ತ ಅವಧಿಯ ಕೊನೆಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜ್ಯ ಬಜೆಟ್‌ನಲ್ಲಿ ಬಾಗಲಕೋಟೆ ಜಿಲ್ಲೆಗೆ ಮಹತ್ವದ ಯಾವ ಯೋಜನೆಗಳು ಘೋಷಣೆಯಾಗಿಲ್ಲ. ಬದಲಾಗಿ ಕಳೆದ ವರ್ಷ ಘೋಷಿಸಿದ ಕೆಲವು ಏತ ನೀರಾವರಿಗಳನ್ನು ಪೂರ್ಣಗೊಳಿಸುವುದು, ಕುಡಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಹಣ ಕಾಯ್ದಿರಿಸಿದ್ದು, ಜೊತೆಗೆ ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಗೆ ಪ್ರಧಾನ ಮಂತ್ರಿಗಳ ಯೋಜನೆಯಲ್ಲಿ 50 ಹಾಸಿಗೆಯ ಆರೈಕೆ ಕೇಂದ್ರವನ್ನು ಆರಂಭಿಸುವ ಪ್ರಸ್ತಾಪ ಬಿಟ್ಟರೆ ಇಡಿ ಬಜೆಟ್ ಜಿಲ್ಲೆಯ ಬೆಳವಣಿಗೆಯ ದೃಷ್ಟಿಯಿಂದ ನಿರಾಶಾದಾಯಕ ಬಜೆಟ್ ಆಗಿದೆ.
ಕಳೆದ ಬಜೆಟ್ ಘೋಷಣೆಗಳೆ ಅನುಷ್ಠಾನಗೊಂಡಿಲ್ಲ:
ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷ ಘೋಷಣೆಯಾದ ಯಾವ ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿಲ್ಲ ಎಂಬುವುದು ಸಾರ್ವತ್ರಿಕವಾಗಿದೆ. ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರ ಒತ್ತಾಯದಿಂದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಗುಳೆದಗುಡ್ಡದ ಜವಳಿ ಪಾರ್ಕ್, ಇಳಕಲ್ಲ ನಗರದಲ್ಲಿ ಸೀರೆಯ ಮೈಕ್ರೊಕ್ಲಸ್ಟರ್ ಉದ್ಯಮಗಳು ಆರಂಭಗೊಂಡಿದ್ದರೇ ಸಾವಿರಾರು ನೇಕಾರ ಕುಟುಂಬಗಳಿಗೆ ಆಸರೆಯಾಗುತ್ತಿತ್ತು. ಈ ಯೋಜನೆಗಳ ವಿಳಂಬದಿಂದ ನೇಕಾರಿಕೆ ಮೇಲೆ ಅವಲಂಬಿತವಾದ ಕುಟುಂಬಗಳು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿವೆ. ಪ್ರವಾಸಿ ತಾಣಗಳ ಹಾಗೂ ಪಾರಂಪರಿಕ ತಾಣಗಳ ಅಭಿವೃದ್ಧಿಯ ವಿಷಯಗಳು ಪ್ರತಿ ಬಜೆಟ್‌ನಲ್ಲಿ ಪ್ರಸ್ತಾಪವಾಗುತ್ತವೆ. ಆದರೆ, ಅನುಷ್ಠಾನಗಳು ಮಾತ್ರ ಆಗುವುದೇ ಇಲ್ಲ. ಪಟ್ಟಕಲ್ಲು, ಬಾದಾಮಿ, ಐಹೊಳೆ, ಬಸವಣ್ಣನ ಐಕ್ಯ ಸ್ಥಳ, ಕೂಡಲಸಂಗಮದ ಸಮಗ್ರ ಅಭಿವೃದ್ಧಿಗೆ ಹಾಕಿಕೊಂಡ ಕಾರ್ಯಕ್ರಮಗಳು ಇನ್ನು ಪೂರ್ಣಗೊಳ್ಳದೇ ಇರುವುದು ಸರ್ಕಾರದ ಘೋಷಿತ ಕಾರ್ಯಕ್ರಮಗಳ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ.
Karnataka Budget 2023: ಬೀದರ್‌ಗೆ ಬರೀ ಮುಂಗಡ ಮಾತು!
ವೈದ್ಯಕೀಯ ಕಾಲೇಜು ಇಲ್ಲ, ವಿಮಾನ ನಿಲ್ದಾಣದ ಸುಳಿವೂ ಇಲ್ಲ:
2014ರಲ್ಲಿ ಬಜೆಟ್‌ನಲ್ಲಿ ಘೋಷಿಸಿದ್ದ ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭದ ವಿಷಯ ಇಂದಿಗೆ 9 ವರ್ಷಗಳು ಗತಿಸಿವೆ. ಈ ಕುರಿತು ಹಲವು ಹೋರಾಟಗಳು ನಡೆಯುತ್ತಿವೆ. ಬಾಗಲಕೋಟೆ ಶಾಸಕರಾದ ವೀರಣ್ಣ ಚರಂತಿಮಠ ಸಹ ಸದನದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. ಈ ಬಾರಿ ಬಜೆಟ್‌ನಲ್ಲಾದರೂ ವೈದ್ಯಕೀಯ ಕಾಲೇಜಿಗೆ ಅನುದಾನ ದೊರೆಯಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.
ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವರು ಬಾಗಲಕೋಟೆ ಜಿಲ್ಲೆಯವರು. ಅವರು ಸಚಿವರಾದ 3 ವರ್ಷಗಳಲ್ಲಿ ಪ್ರತಿ ಬಾರಿ ಜಿಲ್ಲೆಗೆ ಬೃಹತ್ ಕೈಗಾರಿಕೆಗಳ ಸ್ಥಾಪನೆ ಜೊತೆಗೆ ವಿಮಾನ ನಿಲ್ದಾಣದ ಪ್ರಸ್ತಾಪವನ್ನು ಮಾಡುತ್ತಲೆ ಇದ್ದಾರೆ. ಆದರೆ, ಈ ಬಜೆಟ್‌ನಲ್ಲೂ ಸಹ ಬಾಗಲಕೋಟೆ ಜಿಲ್ಲೆಯಲ್ಲಿ ಆರಂಭಗೊಳ್ಳುವ ಕೈಗಾರಿಕೆಗಳ ಬಗ್ಗೆಯಾಗಲಿ, ವಿಮಾನ ನಿಲ್ದಾಣದ ಕುರಿತು ಎಲ್ಲಿಯೂ ವಿಷಯವೇ ಪ್ರಸ್ತಾಪವಾಗಿಲ್ಲ. ಇದರಿಂದ ನಿರೀಕ್ಷಿತ ಕಾರ್ಯಕ್ರಮಗಳೇ ಜಿಲ್ಲೆಗೆ ಬರುತ್ತಿಲ್ಲ ಎಂಬ ನೋವು ಜನರಲ್ಲಿ ಕಾಡುತ್ತಿದೆ.
ಸಿಮೆಂಟ್, ಸಕ್ಕರೆ, ತೋಟಗಾರಿಕೆ ಬೆಳೆಗಳ ಸಮೃದ್ಧ ಜಿಲ್ಲೆಯಾಗಿರುವ ಬಾಗಲಕೋಟೆಗೆ ಮುಳುಗಡೆಯ ಸಂತ್ರಸ್ತರ ಹಲವು ಸಮಸ್ಯೆಗಳಿಗೆ ಬೃಹತ್ ಕೈಗಾರಿಕೆಗಳು ಬಂದರೆ ಔದ್ಯೋಗಿಕವಾಗಿ ಬೆಳೆಯಬಹುದು ಎಂಬ ಆಶಾಭಾವನೆ ಸಹ ಈ ಬಜೆಟ್‌ನಿಂದ ಕಮರಿಹೋಗಿದೆ.
ಈ ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದು, ಇಷ್ಟು:
ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ ಮೂರರಲ್ಲಿ ಅಗತ್ಯವಾಗಿರುವ ಹಾಗೂ ನೆನೆಗುದಿಗೆ ಬಿದ್ದಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರ ಧನಕ್ಕೆ .5 ಸಾವಿರ ಕೋಟಿ ಅನುದಾನ ಘೋಷಿಸಿದ್ದಾರೆ.
ಪಿಎಂ ಅಭಿಮ್ ಅಡಿಯಲ್ಲಿ ತೃತೀಯ ಹಂತದ ಆರೈಕೆಯನ್ನು ಒದಗಿಸಲು ರಾಜ್ಯದ 8 ಜಿಲ್ಲೆಗೆ ಘೋಷಿಸಿದಂತೆ ಬಾಗಲಕೋಟೆಗೂ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ತೆಗೆಯುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಕಳೆದ ವರ್ಷ ಘೋಷಿಸಿದ್ದ ಜಿಲ್ಲೆಯ ಸಸಾಲಟ್ಟಿಶಿವಲಿಂಗೇಶ್ವರ, ಮಂಟೂರು ಮಹಾಲಕ್ಷ್ಮೇ ಮತ್ತು ವೆಂಕಟೇಶ್ವರ ಏತನೀರಾವರಿ ಯೋಜನೆಗಳನ್ನು ಈ ವರ್ಷವೇ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರದ ರೈಲ್ವೆ ಸಚಿವಾಲಯದ ಜೊತೆಗಿನ 50-50ರ ವೆಚ್ಚ ಹಂಚಿಕೆ ಆಧಾರದಲ್ಲಿ ಬಾಗಲಕೋಟೆ ಕುಡಚಿ ರೈಲ್ವೆ ಮಾರ್ಗಕ್ಕೆ .210 ಕೋಟಿಗಳನ್ನು ರಾಜ್ಯದ ವತಿಯಿಂದ ನೀಡಲು ಬಜೆಟ್‌ನಲ್ಲಿ ಹಣ ಕಾಯ್ದಿರಿಸಿದ್ದನ್ನು ಬಿಟ್ಟರೆ, ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಯಾವ ಘೋಷಣೆಗಳು ಆಗಿಲ್ಲ ಎಂಬುವುದು ಸ್ಪಷ್ಟಚಿತ್ರಣ ಜನತೆ ಮುಂದೆ ಇದೆ.
Karnataka Budget 2023: ಬೆಳಗಾವಿ ಜಿಲ್ಲೆಗೆ ಬೆರಳೆಣಿಕೆ ಯೋಜನೆ: ಜನರ ನಿರೀಕ್ಷೆ ಹುಸಿ!
ಸಿಎಂ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಜನ ಸಾಮಾನ್ಯರ, ರೈತರ, ಕಾರ್ಮಿಕರ ನಿರೀಕ್ಷೆಯನ್ನು ಹುಸಿಯಾಗಿದೆ. ಯಾವುದೇ ಬದ್ಧತೆ ಇಲ್ಲದ ಕೇವಲ ಚುನಾವಣೆ ದೃಷ್ಟಿಯಿಂದ ಮಂಡಿಸಲಾದ ಬಜೆಟ್ ಇದಾಗಿದೆ. ವಾಸ್ತವದಲ್ಲಿ ಹಿಂದಿನ ಅನೇಕ ಬಜೆಟ್ ಘೋಷÜಣೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಬಾಗಲಕೋಟೆ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಅನ್ಯಾಯವಾಗಿದೆ. ಇಂತಹ ಪೊಳ್ಳು ಬಜೆಟ್‌ನ್ನು ಜನ ನಂಬುವದಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸರಿಯಾದ ಅನುದಾನ ನಿಗದಿ ಮಾಡದಿರುವುದು ಬೇಸರ ಮೂಡಿಸಿದೆ ಅಂತ ಬಾಗಲಕೋಟೆ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ತಿಳಿಸಿದ್ದಾರೆ.
ಜಿಲ್ಲೆಯ ಜನತೆ ಇಟ್ಟುಕೊಂಡಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ .500 ಕೋಟಿ ಕೊಡುವ ಭರವಸೆ ನೀಡಿರುವ ಈ ಬಜೆಟ್‌ನಲ್ಲಿ ಬಾಗಲಕೋಟೆಗೆ ಘೋಷಿತವಾಗಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ನೀಡದೆ ಮಲತಾಯಿ ಧೋರಣೆ ತಾಳಿರುವ ಸರ್ಕಾರದ ನಡೆಗೆ ವಿರೋಧವಿದೆ ಅಂತ ಬಾಗಲಕೋಟೆ ಆಮ್ ಆದ್ಮಿ ಪಕ್ಷದ ಮುಖಂಡ ರಮೇಶ ಬದ್ನೂರ ಹೇಳಿದ್ದಾರೆ.